varthabharthi

ಸುಗ್ಗಿ

ಇತಿಹಾಸ

ಅಂಬೇಡ್ಕರ್ ಎದುರಿಸಿದ ತಾರತಮ್ಯ

ವಾರ್ತಾ ಭಾರತಿ : 13 Jul, 2019
ಡಾ.ಎಚ್.ಎಸ್. ಅನುಪಮಾ

ಅಂಬೇಡ್ಕರ್ ಭಾರತಕ್ಕೆ ವಾಪಸಾದ ಕಾಲದಲ್ಲಿ ಇಲ್ಲಿ ತೀವ್ರತರವಾದ ಸ್ವಾತಂತ್ರ ಹೋರಾಟ ನಡೆಯುತ್ತಿತ್ತು. ಹೋಂರೂಲ್‌ಗಾಗಿ ಉಗ್ರಗಾಮಿ ಹೋರಾಟ ಚುರುಕುಗೊಂಡಿತ್ತು. ಹೋರಾಟವನ್ನು ತಣ್ಣಗಾಗಿಸಲು ಮಾಂಟೆಗು ಆಡಳಿತಾತ್ಮಕ ಸುಧಾರಣೆ ಮಾಡುವ ಪ್ರಯತ್ನದಲ್ಲಿದ್ದರು. ಆದರೆ ಮದ್ರಾಸ್ ಅಸ್ಪಶ್ಯರ ಸಂಘ ಬ್ರಿಟಿಷರಿಗೆ, ‘ಭಾರತದಲ್ಲಿ ಯಾವುದೇ ರಾಜಕೀಯ ಬದಲಾವಣೆ ಮಾಡಬೇಡಿ. ಬ್ರಾಹ್ಮಣರ ದಮನದಿಂದ ನಮ್ಮನ್ನು ಕಾಪಾಡಿ’ ಎಂದು ಪತ್ರ ಬರೆಯಿತು. ಆರು ಲಕ್ಷ ಸದಸ್ಯ ಬಲವಿದ್ದ ಮದ್ರಾಸ್ ಆದಿ ದ್ರಾವಿಡ ಜನಸಂಘ, ಬಂಗಾಲದ ಅಸ್ಪಶ್ಯರೂ ಇದೇ ರೀತಿಯ ಅಭಿಪ್ರಾಯ ತಿಳಿಸಿದ್ದರು. ನಾರಾಯಣ ಗಣೇಶ ಚಂದಾವರ್ಕರ್ ನಿಮ್ನ ವರ್ಗಗಳ ಮಿಷನ್ ಪರವಾಗಿ ಇದೇ ಅಭಿಪ್ರಾಯದ ಗೊತ್ತುವಳಿ ಸ್ವೀಕರಿಸಿ ಕಳಿಸಿದ್ದರು.

ಇಂಥ ಹೊತ್ತಲ್ಲಿ 1917ರಲ್ಲಿ ಅಂಬೇಡ್ಕರ್ ಭಾರತಕ್ಕೆ ಬಂದರು. ಬಂದ ಕೂಡಲೇ ಅವರಿಗೆ ಸನ್ಮಾನಗಳೇರ್ಪಟ್ಟವು. ಬರೋಡಾದಲ್ಲಿ ರಕ್ಷಣಾ ಸಲಹಾಕಾರರಾಗಿ ನೇಮಕಗೊಂಡರು. ಆದರೆ ಬರೋಡಾಗೆ ಹೋಗಲು ಹಣ ಬೇಕಲ್ಲ? ಅದೇ ವೇಳೆಗೆ ಅವರ ಪುಸ್ತಕಗಳನ್ನು ಹೊತ್ತಿದ್ದ ಹಡಗು ಮುಳುಗಿತ್ತೆೆಂದು ಥಾಮಸ್ ಆ್ಯಂಡ್ ಕಂಪೆನಿ ಪರಿಹಾರ ಧನ ಕಳಿಸಿತು. ಆ ಹಣದಲ್ಲಿ ಅರ್ಧದಷ್ಟು ರಮಾ ಬಾಯಿಗೆ ಕೊಟ್ಟು, ಮಿಕ್ಕ ಹಣದಲ್ಲಿ ಬರೋಡಾಗೆ ಹೊರಟರು.

 ಸೆಪ್ಟಂಬರ್ ತಿಂಗಳಲ್ಲಿ ಬರೋಡಾಗೆ ಅಂಬೇಡ್ಕರ್ ಬಂದಿಳಿದಾಗ ರಾಜರ ಆದೇಶವಿದ್ದರೂ ಸ್ವಾಗತಿಸಲು ರೈಲು ನಿಲ್ದಾಣಕ್ಕೆ ಯಾರೂ ಬರಲಿಲ್ಲ. ಊರಿನಲ್ಲಿ ಅವರ ವಾಸಕ್ಕಾಗಿ ಒಂದೇ ಒಂದು ಬಾಡಿಗೆ ಮನೆ ಸಿಗಲಿಲ್ಲ. ಕೆಲಸ ಮಾಡುವ ಸ್ಥಳದಲ್ಲೂ ಯಾರೂ ಸಹಕಾರ ನೀಡಲಿಲ್ಲ. ಕಚೇರಿ ಕಾಗದ ಪತ್ರಗಳನ್ನು ದೂರದಿಂದಲೇ ಬಿಸಾಡುತ್ತಿದ್ದರು. ವಸತಿ ವ್ಯವಸ್ಥೆ ಮಾಡಿಕೊಳ್ಳಲು ಆಗುತ್ತಿಲ್ಲವೆಂದು ಅಧಿಕಾರಿಗಳ ಬಳಿ ಅಂಬೇಡ್ಕರ್ ಹೇಳಿದರು. ಮಹಾರಾಜರಿಗೂ ಪತ್ರ ಬರೆದರು. ಮಹಾರಾಜರು ಆ ಪತ್ರವನ್ನು ದಿವಾನರಿಗೆ ವರ್ಗಾಯಿಸಿದರು. ದಿವಾನರು ಈ ವಿಷಯದಲ್ಲಿ ತನಗೇನೂ ಮಾಡಲು ಸಾಧ್ಯವಿಲ್ಲವೆಂದುಬಿಟ್ಟರು. ಆಗ ಕೇಳುಸ್ಕರ್ ಮಾಸ್ತರರು ಮಹಾರಾಜರಿಗೆ ಪತ್ರ ಬರೆದು ವಿಷಯ ಅರಿಕೆ ಮಾಡಿದರಲ್ಲದೇ, ತಮ್ಮ ಗೆಳೆಯರಾಗಿದ್ದ ವಿಚಾರಶೀಲ ಯೋಚನೆಗಳಿದ್ದ ಒಬ್ಬ ಪ್ರೊಫೆಸರರ ಮನೆಗೆ ಹೋಗಲು ತಿಳಿಸಿದರು. ಆ ಪ್ರೊಫೆಸರರೇನೋ ಅಂಬೇಡ್ಕರರನ್ನು ಇರಿಸಿಕೊಳ್ಳಲು ಖುಷಿಯಿಂದ ಒಪ್ಪಿಕೊಂಡರು. ಆದರೆ ಅವರ ಹೆಂಡತಿ ಅಸ್ಪಶ್ಯ ಜಾತಿಯ ವ್ಯಕ್ತಿಯನ್ನು ತನ್ನ ಮನೆಯಲ್ಲಿಟ್ಟುಕೊಳ್ಳಲು ಸುತರಾಂ ಒಪ್ಪಲಿಲ್ಲ. ಒಬ್ಬ ಕ್ರೈಸ್ತ ಮಿತ್ರರ ಮನೆಯಲ್ಲಿಯೂ ಹೀಗೆ ಆಯಿತು. ಆಫೀಸಿನಲ್ಲಿ ಯಾರೂ ಆಪ್ತರಾಗಲಿಲ್ಲ. ಅವರಿಗೆ ಯಾವ ಸ್ಪಷ್ಟ ಕೆಲಸವನ್ನೂ ನಿಗದಿಗೊಳಿಸಿರಲಿಲ್ಲ. ಕೆಳಹಂತದ ಜವಾನರೂ ಮುಟ್ಟಿಸಿಕೊಳ್ಳಬಾರದೆಂದು ಪುಸ್ತಕಗಳನ್ನು, ಫೈಲುಗಳನ್ನು ಧೊಪ್ಪನೆ ಬಿಸಾಕುತ್ತಿದ್ದರು. ಅಧಿಕಾರಿಗಳ ಕ್ಲಬ್‌ಗೆ ಸೇರಲು ಯತ್ನಿಸಿದರೆ ಇದಕ್ಕಿಂತ ಭೀಕರ ಅವಮಾನವಾಯಿತು. ಅವರೊಡನೆ ಆಡಲು ಯಾರೂ ಸಿದ್ಧರಿರಲಿಲ್ಲ. ದೂರದ ಒಂದು ಮೂಲೆಯಲ್ಲಿ ಮಾತ್ರ ಕೂರುವಂತೆ ಅವರಿಗೆ ಆದೇಶಿಸಲಾಯಿತು.

ಕೊನೆಗೆ ಒಂದು ಪಾರ್ಸಿ ಸಮುದಾಯದವರು ನಡೆಸುತ್ತಿದ್ದ ಹಾಸ್ಟೆಲಿಗೆ ಹೋದರು. ಅವರಲ್ಲಿ ಜಾತಿಯ ಕುರಿತು ಏನೂ ಹೇಳದೇ ಹಿಂದೂ ಎಂದಷ್ಟೇ ಹೇಳಿದ್ದರು. ಸೂಟುಬೂಟು ತೊಟ್ಟು ಉನ್ನತ ಇಂಗ್ಲಿಷ್ ಮಾತನಾಡುತ್ತಿದ್ದ ವ್ಯಕ್ತಿಯನ್ನು ಅವರು ಮೇಲ್ಜಾತಿಯವರೆಂದೇ ಭಾವಿಸಿರಲು ಸಾಕು. ಆದರೆ ಯಾವಾಗ ಅಂಬೇಡ್ಕರ್‌ರು ಅಸ್ಪಶ್ಯ ಸಮುದಾಯದವರೆಂದು ಗೊತ್ತಾಯಿತೋ, ಆ ಕೂಡಲೇ ಅದರ ಮೇಲ್ವಿಚಾರಕ ಬಿಟ್ಟುಹೋಗಲು ತಿಳಿಸಿದ. ಮತ್ತೆಲ್ಲೂ ನೆಲೆಯೇ ಇಲ್ಲದ್ದರಿಂದ ಅಂಬೇಡ್ಕರ್ ಯಾರಿಗೂ ತಿಳಿಯದಂತೆ ತಾನಿರುವೆನೆಂದು ವಿನಂತಿಸಿದರು. ಅಟ್ಟದ ಮೇಲಿನ ಸಾಮಾನುಗಳ ರಾಶಿ, ಧೂಳಿನ ನಡುವೆ ಒಂದು ಮುರುಕು ಕುರ್ಚಿ, ಕಾಟಿನ ಮೇಲೆ ಯಾರಿಗೂ ಕಾಣದಂತೆ ಕಾಲ ಕಳೆಯತೊಡಗಿದರು. ಆದರೆ ಅವರಿರುವುದನ್ನು ಹೇಗೋ ಪಾರ್ಸಿ ಸಮುದಾಯದ ಒಂದಷ್ಟು ಜನ ಪತ್ತೆಹಚ್ಚಿ ಗುಂಪು ಕಟ್ಟಿಕೊಂಡು ಲಾಠಿ ಹಿಡಿದು ಬಂದರು. ನಿಂತ ಮೆಟ್ಟಿನಲ್ಲಿ ಹೊರಬೀಳಬೇಕೆಂದು ಧಮಕಿ ಹಾಕಿದರು. ಜೀವವುಳಿದರೆ ಸಾಕೆಂದು ಸಾಮಾನು ಸರಂಜಾಮುಗಳೊಂದಿಗೆ ಬೀದಿಗೆ ಬಂದು ನಿಂತ ಅಂಬೇಡ್ಕರ್, ನೆಲೆ ನಿಲ್ಲಲು ಒಂದು ಸೂರಿಲ್ಲದೇ; ಒಳಬಿಟ್ಟುಕೊಳ್ಳುವ ಗೆಳೆಯರ ಮನೆಯೂ ಇಲ್ಲದೇ ಅತ್ಯಂತ ಅವಮಾನ, ಅಸಹಾಯಕತೆ, ಆಕ್ರೋಶಗಳಿಂದ ಕುಗ್ಗಿಹೋದರು.

ವಿದೇಶದಲ್ಲಿ ಉನ್ನತ ವ್ಯಾಸಂಗ ನಡೆಸಿ ಪದವಿ ಪಡೆದರೂ ಭಾರತದಲ್ಲಿ ತಾನು ಹುಟ್ಟಿದ ಜಾತಿ ಮುಖ್ಯವೆಂದು ಪರಿಗಣಿಸಲ್ಪಡುವುದೇ ಹೊರತು ತನ್ನ ವಿದ್ಯೆ, ಪದವಿ, ಗುಣ, ಜ್ಞಾನ ಯಾವುದೂ ಮುಖ್ಯವಲ್ಲ ಎಂಬ ಕಹಿ ವಾಸ್ತವ ದುಃಖವಾಗಿ, ಕಣ್ಣೀರಾಗಿ ಹರಿಯಿತು. ಕೆಲಸಕ್ಕೆ ಸೇರಿ ಒಂದು ತಿಂಗಳಾಗುವುದರಲ್ಲಿ ಬರೋಡಾದಿಂದ ವಾಪಸಾಗುವಂತಾಯಿತು. ಜಾತಿ ಪದ್ಧತಿ ಎಂಬ ವಿಷಸರ್ಪದ ಎದುರು ಮಹಾರಾಜ ಕೂಡಾ ಎಷ್ಟು ಅಸಹಾಯಕ ಎಂದು ಅರಿವಾಯಿತು. ಆ ವೇಳೆಗೆ ಮಲತಾಯಿಯೂ ತೀರಿಕೊಂಡ ಸುದ್ದಿಬಂದು ಮನೆಗೆ ವಾಪಸಾದರು.

ಸುಮ್ಮನೆ ಕೂರುವಂತಿರಲಿಲ್ಲ. ಬೆಳೆಯುತ್ತಿರುವ ಸಂಸಾರಕ್ಕಾಗಿ ದುಡಿಮೆ ಮಾಡಲೇಬೇಕಾದ ಅನಿವಾರ್ಯತೆಯಿತ್ತು. ಯಾವ ಆದಾಯವೂ ಸಂಸಾರಕ್ಕಿರಲಿಲ್ಲ. ವಕೀಲಿಕೆ, ಖಾಸಗಿ ಬೋಧಕ ವೃತ್ತಿ, ಬಂಡವಾಳ ಹೂಡಿಕೆ ಸಂಸ್ಥೆಯ ಸಲಹಾಕಾರ, ಅಕೌಂಟೆಂಟ್ ವೃತ್ತಿ ಹೀಗೆ ಹಲವು ಉದ್ಯೋಗಗಳನ್ನು ಪ್ರಯತ್ನಿಸಿದರು. ಆದರೆ ಎಲ್ಲ ಕಡೆಯೂ ಅವರ ಜಾತಿ ತಿಳಿದಿದ್ದೇ ಗ್ರಾಹಕರು ದೂರವಾಗುತ್ತಿದ್ದರು. ಭಾರತೀಯ ಸಮಾಜ ಅಸ್ಪಶ್ಯತೆಯಿಂದ ವಿಮೋಚನೆ ಪಡೆಯಬೇಕೆಂದರೆ ಜಾತಿವಿನಾಶಕ್ಕಾಗಿ ಹೋರಾಟ ಕಟ್ಟಲೇಬೇಕು, ಅದರಲ್ಲೂ ಅಸ್ಪಶ್ಯರು ತಮ್ಮ ವಿಮೋಚನೆಗೆ ತಾವೇ ಹೋರಾಟ ಕಟ್ಟಬೇಕೆಂದು ಅನುಭವಗಳೇ ಹೇಳಿಕೊಟ್ಟವು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)