varthabharthi

ಸುಗ್ಗಿ

ಅಧ್ಯಯನ ಮತ್ತು ಅರಿವು

ಎಡ ಬಲದ ಬಲಾಬಲ

ವಾರ್ತಾ ಭಾರತಿ : 13 Jul, 2019
ಬೆಳೆಯುವ ಪೈರು, ಯೋಗೇಶ್ ಮಾಸ್ಟರ್

ಕಲಿಕೆಯೆಂಬ ಪ್ರಕ್ರಿಯೆ: ಬಾಗ 28

ಎಡದ ಬಲ

ತಂದೆ ಅಥವಾ ತಾಯಿಯ ಜೊತೆಗೆ ಇರುವ ಮಗುವನ್ನು ನಾನು ಅನೇಕ ಬಾರಿ ಮಾತಾಡಿಸುವಾಗ ಮಗುವು ಷೇಕ್ ಹ್ಯಾಂಡ್ ಮಾಡಲು ಎಡಗೈ ಚಾಚಿದರೆ, ಅಥವಾ ತನ್ನ ಬಳಿ ಇರುವ ಯಾವುದಾದರೂ ವಸ್ತುವನ್ನು ಎಡಗೈಯಿಂದ ನೀಡಲು ಹೋದರೆ, ಅಥವಾ ನನ್ನಿಂದ ಏನಾದರೂ ಪಡೆದುಕೊಳ್ಳಲು ಎಡಗೈ ಚಾಚಿದರೆ, ಕೊನೆಗೆ ಟಾಟಾ ಮಾಡಲು ಎಡಗೈ ಬಳಸಿದರೆ; ಕೂಡಲೇ ಪೋಷಕರು ಆ ಕೈಯಲ್ಲಿ ಕೊಡು, ಆ ಕೈಯಲ್ಲಿ ಇಸ್ಕೋ, ಆ ಕೈಯಲ್ಲಿ ಮಾಡು ಎಂದು ಬಲಗೈ ಬಳಸಲು ಹೇಳುತ್ತಾರೆ, ಈಗಲೂ. ನನಗೆ ಅರ್ಥವೇ ಆಗದಿರುವ ವಿಷಯವದು. ಬಲಗೈ ಏಕೆ ಅಥವಾ ಹೇಗೆ ಶ್ರೇಷ್ಟ? ಅಥವಾ ಅದರಲ್ಲೇ ಏಕೆ ಮಾಡಬೇಕು? ನಾನು ಇದುವರೆಗೂ ಸಾವಿರಾರು ಪೋಷಕರು ಆ ರೀತಿಯಲ್ಲಿ ಮಗುವನ್ನು ತಿದ್ದಿದ್ದಾರೆ. ಆದರೆ ಒಬ್ಬರೇ ಒಬ್ಬ ತಂದೆ ಅಥವಾ ತಾಯಿ ಎಡಗೈ ಏಕೆ ಬೇಡ ಮತ್ತು ಬಲಗೈಯನ್ನೇ ಏಕೆ ಬಳಸಬೇಕು ಎಂದು ಹೇಳಿಯೇ ಇಲ್ಲ. ಎಡ ಅಥವಾ ಬಲ; ಯಾವುದಾದರೇನಂತೆ? ನಿಜವಾಗಿ ಹೇಳುವುದಾದರೆ ವೈಜ್ಞಾನಿಕವಾಗಿ ಅಥವಾ ವೈಚಾರಿಕವಾಗಿ ಯಾವ ಕಾರಣವಂತೂ ಇಲ್ಲ. ಬಲಗೈಯಲ್ಲಿ ಊಟ ಮಾಡುತ್ತೇವೆ ಮತ್ತು ಎಡಗೈಯಲ್ಲಿ ಗುದ ತೊಳೆದುಕೊಳ್ಳುತ್ತೇವೆ ಎಂಬ ಮೂರ್ಖವಾದವನ್ನು ಕೆಲವರು ಮುಂದಿಡುತ್ತಾರೆ. ಆದರೆ, ಅದೇ ಆಗಿದ್ದರೆ, ಎರಡೂ ಕೈ ಉಪಯೋಗಿಸಿ ಮಾಡುವ ಕೆಲಸಗಳಲ್ಲಿ ಎಡದ ಕೈಯನ್ನು ಉಪಯೋಗಿಸಬಾರದು ಎಂದು ಛೇಡಿಸುತ್ತೇನೆ.

ಎಡಗೈಯಲ್ಲಿ ಕೊಟ್ಟರೆ ಮರೆತು ಹೋಗುತ್ತೆ, ಅಥವಾ ಎಡಗೈಯಲ್ಲಿ ಕೊಟ್ಟ ವಸ್ತು ಕಳೆದು ಹೋಗುತ್ತೆ ಇತ್ಯಾದಿಗಳನ್ನೂ ಹೇಳುತ್ತಾರೆ. ಆದರೆ ಅವೆಲ್ಲವೂ ವೌಢ್ಯದ ಒಂದು ಭಾಗವೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಎಡವು ಅವುಗಳ, ಶ್ರೇಯಸ್ಕರವಲ್ಲ ಎಂಬ ಸಾಂಪ್ರದಾಯಕ ನಂಬುಗೆಗಳಿವೆ. ಕೆಲವು ಧಾರ್ಮಿಕ ಆಚರಣೆಗಳಲ್ಲಿ ಎಡ ಬಲದ ಕೈಗಳ ಗಮನೀಯವಾದ ಗುರುತುಗಳಿದ್ದರೂ, ತಂದೆ ತಾಯಿ ಅಥವಾ ಹಿರಿಯರು ಮಕ್ಕಳಿಗೆ ಎಡದ ಬದಲು ಬಲಗೈಯಲ್ಲಿ ಮಾಡು, ಪಡಿ ಎಂದೆಲ್ಲಾ ಹೇಳುವುದು ಬರಿದೇ ಕುರುಡು ರೂಢಿಯಷ್ಟೇ ಅದಾಗಿದೆ. ಕೆಲವು ಮಕ್ಕಳಿಗೆ ಸಹಜವಾಗಿಯೇ ಎಡಗೈಯ ಅಭ್ಯಾಸವಾಗಿರುತ್ತದೆ. ಅಂತಹ ಮಕ್ಕಳನ್ನು ಬಲವಂತ ದಿಂದ ಬಲಗೈ ಚಟುವಟಿಕೆಗಳ ಕಡೆಗೆ ತಳ್ಳಬಾರದು.

ಎಡಕ್ಕೂ ಸಮಬಲ

ಎಡವೋ ಬಲವೋ ಯಾವ ಕೈಯಿಂದ ಕೆಲಸ ಮಾಡುವುದಾದರೂ ಅವರ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ವಿಷಯಗಳಲ್ಲಿ ಯಾವ ವ್ಯತ್ಯಾಸವೂ ಇರುವುದಿಲ್ಲ. ಆದರೆ ಬಲಗೈ ಬಳಕೆಯೇ ಅತಿ ಹೆಚ್ಚು ವ್ಯಾಪಕವಾಗಿದ್ದು, ಸುಮಾರು ಶೇ.10ರಷ್ಟು ಮಾತ್ರ ಎಡಚರು ಇದ್ದಾರೆನ್ನುತ್ತಾರೆ. ಸಂಶೋಧನೆಗಳ ಪ್ರಕಾರ ಮಗುವು ಗರ್ಭದಲ್ಲಿದ್ದಾಗಲೇ ಅದರ ದೇಹದಲ್ಲಿ ಟೆಸ್ಟೋಸ್ಟೆರೋನ್ ಹಾರ್ಮೋನಿನ ಪ್ರಮಾಣ ಏರುಪೇರಾದರೆ ಮೆದುಳು ಬಲಬದಿಯ ಬದಲು ಎಡಬದಿಯ ಅಂಗಗಳ ಬಳಕೆಗೆ ಪ್ರೇರೇಪಣೆ ಕೊಡುತ್ತದೆ ಎಂದು ಒಂದು ಮಂಡನೆ ಇದೆ. ಆದರೆ, ಇದಿನ್ನೂ ಚರ್ಚಾವಸ್ಥೆಯಲ್ಲಿಯೇ ಇದೆ. ಮಗುವು ಗರ್ಭದಲ್ಲಿದ್ದಾಗ ಅಲ್ಟ್ರಾಸೌಂಡ್ ವೇವ್ಸ್‌ಗಳಿಂದ ಹೆಚ್ಚು ಪರಿಶೀಲನೆಗೆ ಒಳಪಡಿಸಿದರೆ ಮಗುವು ಎಡಚ ಆಗುವ ಸಾಧ್ಯತೆಗಳಿವೆ ಎಂದು ಹೇಳುತ್ತಾರೆ. ಆದರೆ ಅಲ್ಟ್ರಾಸೌಂಡ್ ಪರೀಕ್ಷೆಗಳಿಗೆ ಒಳಪಡಿಸುವ ಮುನ್ನಾ ದಿನಗಳಲ್ಲೂ ಕೂಡಾ ಎಡಚ ಮಕ್ಕಳನ್ನು ಕಾಣುತ್ತಿದ್ದೆವು. ಒಟ್ಟಾರೆ ಮಕ್ಕಳು ಎಡಚರಾಗುವ ಕಾರಣ ಅಷ್ಟು ಸ್ಪಷ್ಟವಾಗಿಲ್ಲ. ಆದರೆ ವೌಢ್ಯದ ಮತ್ತು ಅಂಧ ಶ್ರದ್ಧೆಗಳ ಮಾಪನ ಬಿಟ್ಟರೆ ಇನ್ನಾವ ರೀತಿಯಲ್ಲಿಯೂ ಎಡದ ಕೈಯಿಂದ ಪ್ರಧಾನವಾಗಿ ಕೆಲಸ ಮಾಡುವುದು ಸಮಸ್ಯೆ ಆಗಲಾರದು. ಒಟ್ಟಾರೆ ಎಡಚರಾಗಿರುವುದು ಯಾವುದೇ ನ್ಯೂನತೆ ಅಲ್ಲ. ಆದರೆ ಕತ್ತರಿಯೇ ಮೊದಲಾದ ವಸ್ತುಗಳು ಬಲಗೈಯವರಿಗೆಂದೇ ವಿಶೇಷವಾಗಿ ತಯಾರಾಗಿದ್ದು ಎಡಚರಿಗೆ ಕೆಲವೊಮ್ಮೆ ಸಮಸ್ಯೆ ಯಾಗುತ್ತದೆ. ಆದರೆ, ಈಗೀಗ ಬರುತ್ತಿರುವ, ಅದರಲ್ಲೂ ಮಕ್ಕಳಿಗೆ ಬರುತ್ತಿರುವ ವಿಶೇಷ ಕತ್ತರಿಗಳಲ್ಲಿ ಅಲಗುಗಳು ಸಮವಾಗಿದ್ದು, ಹಿಡಿಯ ಭಾಗಗಳಲ್ಲೂ ಕೂಡಾ ಸಮನಾಗಿ ಹಿಡಿಯುವ ಅವಕಾಶವನ್ನು ಕಲ್ಪಿಸಲಾಗಿದೆ. ಈಗೀಗೆ ಎಡಚರನ್ನು ಹೀಗಳೆಯುವ ಪ್ರವೃತ್ತಿಯಂತೂ ವಿಶ್ವದ ಮಟ್ಟದಲ್ಲಿ ಕಡಿಮೆಯಾಗಿದ್ದು, ಅವರನ್ನು ಉತ್ತೇಜಿಸಲು ಅವರು ವಿಶೇಷವಾದಂತಹ ಚತುರರಾಗಿರುತ್ತಾರೆ, ವಿಶೇಷವಾದಂತಹ ಬೌದ್ಧಿಕ ಮಟ್ಟವಿರುತ್ತದೆ, ವಿಶ್ವದ ಎಡಚರಲ್ಲಿ ಹೆಚ್ಚಿನವರು ಅತಿ ಪ್ರತಿಭಾವಂತರೂ, ಅಪ್ರತಿಮ ಕ್ರೀಡಾಪಟುಗಳೂ, ಶ್ರೀಮಂತರೂ ಆಗಿರುತ್ತಾರೆಂದು ಹೇಳುತ್ತಿರುತ್ತಾರೆ. ಆದರೆ ವಾಸ್ತವವಾಗಿ ಅದೇನೂ ನಿಜವಲ್ಲ. ಪ್ರತಿಭಾವಂತರಲ್ಲಿಯೂ, ಶ್ರೀಮಂತರಲ್ಲಿಯೂ ಎಡಚರಿದ್ದಾರೆ ಎಂಬುದಷ್ಟೇ ಸತ್ಯ. ಅವರು ಎಡಚರಾಗಿರುವ ಕಾರಣದಿಂದ ಏನೋ ಸಾಧಿಸಿದ್ದಾರೆಂತೇನಿಲ್ಲ.

ಎಡದ ಬಗ್ಗೆ ಸುಳ್ಳುಗಳು

ಎಡಚರರ ಬಗ್ಗೆ ಹಲವಾರು ಮಿಥ್‌ಗಳಿವೆ.

1.ಗರ್ಭಿಣಿ ತಾಯಂದಿರು ಒತ್ತಡಕ್ಕೆ ಸಿಲುಕಿದರೆ ಮಕ್ಕಳು ಎಡಚರಾಗಿ ಹುಟ್ಟುತ್ತಾರೆ.

2.ಸಾಮಾನ್ಯವಾಗಿ ಅವಳಿ ಮಕ್ಕಳು ಎಡಚರಾಗುತ್ತಾರೆ.

3.ಎಡಚರು ಅಂತರ್ಮುಖಿಗಳಾಗಿರುತ್ತಾರೆ.

4.ಎಡಚರು ಸೃಜನಶೀಲರಾಗಿದ್ದು ಕ್ರೀಡೆ ಮತ್ತು ಕುಶಲ ಕಲೆಗಳಲ್ಲಿ ಪರಿಣಿತರಾಗುತ್ತಾರೆ.

5.ಎಡಚರು ಉತ್ತಮ ನಾಯಕರಾಗುತ್ತಾರೆ.

6.ಎಡಚರು ಬಲಭಾಗದ ಮೆದುಳನ್ನೇ ಹೆಚ್ಚು ಬಳಸುತ್ತಾರೆ.

7.ಎಡಚರು ಆಗಾಗ್ಗೆ ಹುಷಾರು ತಪ್ಪುತ್ತಿರುತ್ತಾರೆ. ಬೇಗ ಸಾಯುತ್ತಾರೆ.

8.ಎಡಚರು ವಿಭಿನ್ನವಾಗಿ ಮತ್ತು ವಿಶೇಷವಾಗಿ ಚಿಂತಿಸಬಲ್ಲರು.

9.ಶಾಲೆಯ ಅಥವಾ ಕಲಿಕೆಯ ಚಟುವಟಿಕೆಗಳಲ್ಲಿ ತೊಂದರೆಯಾಗುತ್ತದೆ.

ಈ ಎಲ್ಲವೂ ಸುಳ್ಳು. ಇವಕ್ಕೆ ಯಾವುದೇ ವೈಜ್ಞಾನಿಕ ಆಧಾರವೂ ಇಲ್ಲ. ಕೆಲವೊಮ್ಮೆ ಎಡಚರು ಬರುಬರುತ್ತಾ ಕ್ರೀಡೆ ಮತ್ತು ಇತರ ಚಟುವಟಿಕೆಗಳಲ್ಲಿ ಎರಡೂ ಕೈಗಳನ್ನು ಚೆನ್ನಾಗಿ ಮತ್ತು ಒಳ್ಳೆಯ ನಿಯಂತ್ರಣದಲ್ಲಿ ಬಳಸುವ ರೂಢಿಯಾಗುತ್ತದೆ. ಒಂದು ಮಾತಲ್ಲಿ ಹೇಳುವುದಾದರೆ ಎಡವಾಗಲಿ, ಬಲವಾಗಲಿ ಯಾವುದೂ ಸಾಮಾನ್ಯ ಜೀವನದಲ್ಲಿ ನಿಜವಾಗಿ ವಿಷಯವೇ ಅಲ್ಲ. ಎಡ ಬಲ ಸಮಬಲ

ಎಡವಾಗಲಿ ಅಥವಾ ಬಲವಾಗಲಿ ಪ್ರಧಾನವಾಗಿ ಉಪಯೋಗಿಸುವವರು ತಾವು ಪ್ರಧಾನವಾಗಿ ಬಳಸದ ಮತ್ತೊಂದು ಕೈಯಿಂದ ಬರೆಯುವ, ಚಿತ್ರ ಬಿಡಿಸುವ, ಗೆರೆಗಳನ್ನು ಹಾಕುವ, ವರ್ತುಲಗಳನ್ನು ಸುತ್ತುವುದನ್ನು ಮಾಡುವುದು ಮೆದುಳಿಗೆ ಕಸರತ್ತು ಎಂಬುದಂತೂ ನಿಜ. ಬಲಗೈಯಲ್ಲಿ ಸದಾ ಕೆಲಸ ಮಾಡುವವರು ಎಡದ ಕೈಯಲ್ಲಿಯೂ ಅಭ್ಯಾಸಗಳನ್ನು ಮಾಡುವುದರಿಂದ, ರೂಢಿಗೆ ತಳ್ಳಲ್ಪಟ್ಟಿರುವ ವರ್ತುಲ ದಿಂದ ಹೊರಬಂದು ಮೆದುಳಿಗೆ ಕೆಲಸ ಮಾಡಲು ಪ್ರೇರೇಪಣೆ ಸಿಗುತ್ತದೆ ಎಂಬುದಂತೂ ನಿಜ. ಆ ಬಗ್ಗೆ ಕೆಲವು ಒಳನೋಟಗಳನ್ನೂ ಮತ್ತು ಅಭ್ಯಾಸಗಳನ್ನೂ ಮಾಡುವುದರ ಬಗ್ಗೆ ಮುಂದೆ ನೋಡೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)