varthabharthi


ವೈವಿಧ್ಯ

ನಗರ ಬಡವರಿಗೆ ವಿಷವಾಗುತ್ತಿರುವ ಸಕ್ಕರೆ!

ವಾರ್ತಾ ಭಾರತಿ : 15 Jul, 2019
ಆರೀಫಾ ಜೊಹಾರಿವಿಜೈತಾ ಲಾಲ್ವಾನಿ

ಜೂನ್ 23ರಂದು ದಿಲ್ಲಿಯ ಮೆಹ್ರೌಲಿಯ ಎರಡನೇ ವಾರ್ಡ್‌ನ ಅಗಲ ಕಿರಿದಾದ ಬೀದಿಗಳು ನಿರ್ಜನವಾಗಿದ್ದವು. ಹಿಂದಿನ ದಿನ ಅಲ್ಲಿಯ ನಿವಾಸಿಗಳು ಆಘಾತಕ್ಕೊಳಗಾಗಿದ್ದರು; ಅವರ ನೆರೆ ಕೆರೆಯ ಓರ್ವ ಶಿಕ್ಷಕ ಉಪೇಂದ್ರ ಶುಕ್ಲಾ ತನ್ನ ಪತ್ನಿ ಮತ್ತು ಎರಡು ತಿಂಗಳ ಒಂದು ಮಗು ಸೇರಿದಂತೆ ಮೂರು ಮಕ್ಕಳ ಕತ್ತು ಕೊಯ್ದು ಕೊಲೆಮಾಡಿದ್ದ. ಬಳಿಕ ತಾನು ಕೂಡ ಆತ್ಮ ಹತೈಗೆ ಪ್ರಯತ್ನಿಸಿದ್ದನಾದರೂ, ಬದುಕಿ ಉಳಿದಿದ್ದ.

ಕೊಲೆಗೈದಿರುವುದಾಗಿ ತಪ್ಪೊಪ್ಪಿಕೊಂಡ 33ರ ಹರೆಯದ ಶುಕ್ಲಾ ಖಿನ್ನತೆಯಿಂದ ಬಳಲುತ್ತಿದ್ದ. ತನ್ನ ಹಾಗೂ ಹತ್ನಿಯ ಹೆದಗೆಡುತ್ತಿರುವ ಆರೋಗ್ಯದಿಂದಾಗಿ ಹತಾಶನಾಗಿದ್ದ. ಆಕೆ ಡಯಾಬಿಟಿಸ್‌ನಿಂದ (ಸಕ್ಕರೆ ಕಾಯಿಲೆ) ರೋಗಿಯಾಗಿದ್ದರೆ, ಆತ ಹೈಪರ್ ಟೆನ್ಶನ್‌ನಿಂದ ಬಳಲುತ್ತಿದ್ದ. ಡಯಾಬಿಟಿಸ್ ಅಥವಾ ಅದಕ್ಕೆ ಸಂಬಂಧಿಸಿದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರು ಆತ್ಮಹತ್ಯೆ ಮಾಡಿಕೊಂಡ ಅಥವಾ ತಮ್ಮನ್ನು ಆಶ್ರಯಿಸಿದವರನ್ನು ಕೊಲೆಮಾಡಿದ ಇಂತಹ ಹಲವು ಘಟನೆಗಳು ದೇಶದ ಹಲವು ಭಾಗಗಳಿಂದ ವರದಿಯಾಗಿವೆ. ಉದಾಹರಣೆಗೆ 2018ರ ಡಿಸೆಂಬರ್‌ನಲ್ಲಿ ಬೆಂಗಳೂರಿನ ಓರ್ವ ಡಯಾಬಿಟಿಸ್ ಹಾಗೂ ಖಿನ್ನನಾದ ಗಾರ್ಮೆಂಟ್ ಫ್ಯಾಕ್ಟರಿಯ ಓರ್ವ ಸೂಪರ್ ವೈಸರ್ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಅವನ 7ರ ಹರೆಯದ ವಿಕಲಾಂಗ ಮಗನನ್ನು ಕೊಂದ. 2018ರ ನವೆಂಬರ್‌ನಲ್ಲಿ ಮುಂಬೈಯಲ್ಲಿ ಡಯಾಬಿಟಿಸ್ ಮತ್ತು ಹೈಪರ್ ಟೆನ್ಶನ್‌ನಿಂದ ಬಳಲುತ್ತಿದ್ದ ರೈಲ್ವೆ ನೌಕರನೊಬ್ಬನ ಪತ್ನಿ ಆಕೆ ವಾಸಿಸುತ್ತಿದ್ದ ಕಟ್ಟಡದ ಐದನೇ ಮಹಡಿಯಿಂದ ಕೆಳಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಳು. 2018ರ ಸೆಪ್ಟಂಬರ್‌ನಲ್ಲಿ ಬೆಂಗಳೂರಿನಲ್ಲಿ ಓರ್ವ ಟೈಲರ್ ಡಯಾಬಿಟಿಸ್‌ನಿಂದಾಗಿ ಸತ್ತ ಬಳಿಕ, ಆತನ ಪತ್ನಿ ಮತ್ತು ತಾಯಿ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಳು.
ಈ ಎಲ್ಲ ಪ್ರಕರಣಗಳು ಒಂದು ಕಾಲದಲ್ಲಿ ‘‘ಶ್ರೀಮಂತರ ಕಾಯಿಲೆ’’ ಎಂದು ಹೇಳಲಾಗುತ್ತಿದ್ದ ಡಯಾಬಿಟಿಸ್ ಕಡಿಮೆ ಆದಾಯ ವರ್ಗದವರನ್ನೂ ಈಗ ಕಾಡುತ್ತಿದೆ ಎಂಬುವುದನ್ನು ಸೂಚಿಸುತ್ತಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳೆರಡರಲ್ಲೂ ಅಗ್ಗದ, ಸಕ್ಕರೆ ಹಾಕಿದ ಜಂಕ್ ಫುಡ್‌ನಿಂದಾಗಿ ಹೆಚ್ಚು ಹೆಚ್ಚು ಜನ ಬೊಜ್ಜು, ವಿಪರೀತ ಸಕ್ಕರೆ ಕಾಯಿಲೆ, ರಕ್ತದೊತ್ತಡ ಮತ್ತಿತರ ಹೃದಯ ಸಂಬಂಧಿ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ.
 ಬದಲಾಗುತ್ತಿರುವ ಜೀವನ ಶೈಲಿಗಳು
ಡಯಾಬಿಟಿಸನ್ನು ‘ಜೀವನ ಶೈಲಿಯ ಒಂದು ಕಾಯಿಲೆ’ ಎಂದೂ ಕರೆಯಲಾಗುತ್ತದೆ. ಯಾಕೆಂದರೆ ಬಹಳ ಕಾಲದಿಂದ ಅದನ್ನು ಸಿರಿವಂತರ ಜೀವನಶೈಲಿಯೊಂದಿಗೆ ತಳಕುಹಾಕಲಾಗಿತ್ತು; ಕುಳಿತಲ್ಲೇ ಮಾಡುವ ಕೆಲಸ, ದೈಹಿಕ ವ್ಯಾಯಾಮದ ಕೊರತೆ ಮತ್ತು ಸಕ್ಕರೆ ಹಾಗೂ ಕೊಬ್ಬು ಇರುವ ಆಹಾರ ವಸ್ತುಗಳ ಸೇವನೆ.
ಆದರೆ ಕಳೆದ ದಶಕದಲ್ಲಿ ಶ್ರೀಮಂತರಲ್ಲದವರ ಜೀವನ ಶೈಲಿ, ಆಹಾರ ಶೈಲಿ ಬದಲಾಗುತ್ತಾ ಬಂದಿದೆ. 2017ರಲ್ಲಿ ಭಾರತೀಯ ವೈದ್ಯಕೀಯ ಮಂಡಳಿ ನಡೆಸಿದ ಡಯಾಬಿಟಿಸ್ ಅಧ್ಯಯನದ ವರದಿಯ ಪ್ರಕಾರ (ಐಸಿಎಂಆರ್ - ಇಂಡಿಯಾಬಿ) ಡಯಾಬಿಟಿಸ್ ನಗರ ಪ್ರದೇಶಗಳಲ್ಲಿ ಗ್ರಾಮೀಣ ಪ್ರದೇಶಗಳಿಗಿಂತ ಎರಡು ಪಟ್ಟು ಹೆಚ್ಚು ಇದೆ. ಇದಕ್ಕೆ ಜೀವನ ಶೈಲಿಯ ಬದಲಾವಣೆಗಳು ಕಾರಣ; ಸಾರಿಗೆ ಸೇವೆಯ ಹೆಚ್ಚಿದ ಬಳಕೆ, ದೈಹಿಕ ವ್ಯಾಯಾಮದ ಕೊರತೆ ಮತ್ತು ಜಂಕ್ ಫುಡ್ ಹಾಗೂ ಸಿಹಿಪಾನೀಯಗಳ ಸುಲಭ ಲಭ್ಯತೆ.
ಮುಂಬೈಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಡಯಾಬಿಟಿಸ್ ರೋಗಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ ಎನ್ನುತ್ತಾರೆ ಅಲ್ಲಿಯ ಡಾ.ಸ್ಮಿತಾ ಚವಾಣ್. ಈ ರೋಗಿಗಳೆಲ್ಲಾ ಕೊಳೆಗೇರಿಗಳಿಂದ ಬರುವವರು ಹಾಗೂ ಕಡಿಮೆ ಆದಾಯ ಪ್ರದೇಶಗಳಿಗೆ ಸೇರಿದವರು.


 ಡಯಾಬಿಟಿಸ್ ಮತ್ತು ಮಾನಸಿಕ ಆರೋಗ್ಯ
ಡಯಾಬಿಟಿಸ್ ರೋಗಿಗಳಿಗೆ ಹಾಗೂ ಅವರ ಕುಟುಂಬದವರಿಗೆ ಹಲವು ಮಟ್ಟಗಳಲ್ಲಿ ಸಮಸ್ಯೆಗಳನ್ನು ತಂದೊಡ್ಡುತ್ತದೆ; ಪ್ರತಿದಿನ ಔಷಧಿ ಮತ್ತು ಕಟ್ಟುನಿಟ್ಟಾದ ಆಹಾರ ಸೇವನೆ, ಇತರ ಕಾಯಿಲೆಗಳಿಗೆ ಕಡಿಮೆ ರೋಗ ನಿರೋಧಕತೆ ಇತ್ಯಾದಿ, ಪರಿಣಾಮವಾಗಿ ಹೆಚ್ಚಿನ ರಕ್ತದ ಒತ್ತಡ, ಹೃದಯ ಸ್ತಂಭನ, ಲಕ್ವ ಮತ್ತು ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ.
ರೊಮೇನಿಯಾದಲ್ಲಿ 2016ರಲ್ಲಿ ನಡೆಸಿದ ಒಂದು ಅಧ್ಯಯನದ ಪ್ರಕಾರ ಡಯಾಬಿಟಿಸ್‌ನಿಂದ ಬಳಲುತ್ತಿರುವವರು ಇತರರಿಗಿಂತ ಖಿನ್ನತೆಯಿಂದ ಬಳಲುವ ಸಾಧ್ಯತೆ ಎರಡರಿಂದ ಮೂರು ಪಟ್ಟು ಹೆಚ್ಚು. ಹಾಗೆಯೇ, ಫಿನ್ಲೆಂಡ್‌ನಲ್ಲಿ ಏಳು ವರ್ಷಗಳ ಅವಧಿಯಲ್ಲಿ ನಾಲ್ಕು ಲಕ್ಷಕ್ಕಿಂತಲು ಹೆಚ್ಚು ಮಂದಿಯ ವೈದ್ಯಕೀಯ ಸಮೀಕ್ಷೆ ನಡೆಸಿದಾಗ ಡಯಾಬಿಟಿಸ್ ರೋಗಿಗಳು ಇತರರಿಗಿಂತ ಆತ್ಮಹತ್ಯೆ ಮಾಡಿಕೊಂಡು ಸಾಯುವ, ಅಪಘಾತಗಳಿಂದ ಅಥವಾ ಮದ್ಯಪಾನ ಸಂಬಂಧಿ ಕಾರಣಗಳಿಂದ ಸಾಯುವ ಸಾಧ್ಯತೆ ತುಂಬ ಹೆಚ್ಚು ಎಂದು ತಿಳಿದುಬಂತು. ಹೆಚ್ಚು ಗಂಭೀರ ಸ್ವರೂಪದ ಹೃದಯ ಹಾಗೂ ಮೂತ್ರಪಿಂಡ ಸಮಸ್ಯೆಗಳಿಂದ ಬಳಲುವ ಸಾಧ್ಯತೆ ಕೂಡ ಹೆಚ್ಚು ಎಂದು ತಿಳಿದುಬಂತು. ಜೊತೆಗೆ ತಾನು ಈ ಸಮಸ್ಯೆಗಳಿಂದ ಬಳಲಬಹುದೆಂದು ಆತಂಕ ಸದಾ ತನ್ನ ದೇಹದ ಸಕ್ಕರೆ ( ಗ್ಲೋಕೋಸ್)ಮಟ್ಟವನ್ನು ಪರೀಕ್ಷಿಸುತ್ತಲೇ ಇರಬೇಕಾಗುವುದರಿಂದಾಗಿ ಉಂಟಾಗುವ ಮಾನಸಿಕ ಆಯಾಸ, ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳಬೇಕಾಗಿ ಬಂದಾಗ ಅದರಿಂದಾಗಿ ಉಂಟಾಗುವ ಮಾನಸಿಕ ಒತ್ತಡ, ತನಗೆ ಯಾವಾಗ ಗಂಭೀ ಸ್ವರೂಪದ ಕಿಡ್ನಿ ಅಥವಾ ಹೃದಯ ಸಂಬಂಧಿ ಸಮಸ್ಯೆಗಳು ಎದುರಾಗುತ್ತವೋ ಎಂಬ ಮಾನಸಿಕ ಬಿಗಿತ - ಇವೆಲ್ಲ ರೋಗಿಯ ಮಾನಸಿಕ ಆರೋಗ್ಯವನ್ನೇ ಹಾಳುಮಾಡಬಲ್ಲವು. ಬಡವರಿಗೆ ಇವುಗಳು ಹೆಚ್ಚುವರಿ ಆರ್ಥಿಕ/ಹಣಕಾಸಿನ ಹೊರೆಯನ್ನೂ ತಂದೊಡ್ಡುತ್ತವೆ.
ಸಾರ್ವಜನಿಕ ಸರಕಾರಿ ಆಸ್ಪತ್ರೆಗಳಲ್ಲಿ ಔಷಧಿ ಉಚಿತವಾಗಿ ದೊರೆಯಬಹುದು, ಆದರೆ ಇನ್ಸುಲಿನ್ ದೊರೆಯುವುದಿಲ್ಲ. ಇನ್ಸುಲಿನ್ ಒಂದಕ್ಕಾಗಿಯೇ ಡಯಾಬಿಟಿಸ್ ರೋಗಿ ಒಬ್ಬ ತಿಂಗಳಿಗೆ 2,000 ರೂಪಾಯಿ ತೆರಬೇಕಾಗಬಹುದು. ಈ ಎಲ್ಲ ಕಾರಣಗಳಿಂದಾಗಿ ಕಡಿಮೆ ಆದಾಯ ವರ್ಗದವರು, ಬಡವರು ಬಹಳ ಬೇಗನೆ ಖಿನ್ನತೆ, ಮಾನಸಿಕ ಅಸ್ವಸ್ಥಕ್ಕೆ ಗುರಿಯಾಗುತ್ತಾರೆ ಎನ್ನುತ್ತಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)