varthabharthi

ರಾಷ್ಟ್ರೀಯ

​ಮರೆಗುಳಿ ವೃದ್ಧರನ್ನು ಕುಟುಂಬದ ಜತೆ ಸೇರಿಸಿದ ಪೊಲೀಸರು

ವಾರ್ತಾ ಭಾರತಿ : 16 Jul, 2019

ಹೊಸದಿಲ್ಲಿ, ಜು.16: ಅದು ಅಪೂರ್ವ ಮಿಲನದ ಸಂದರ್ಭ. ಇದಕ್ಕೆ ಕಾರಣರಾದದ್ದು ದಿಲ್ಲಿ ಪೊಲೀಸರು. ಎಪ್ರಿಲ್ 27ರಂದು ಮುಂಜಾನೆ ವಾಯು ವಿಹಾರಕ್ಕಾಗಿ ತೆರಳಿದ್ದ ಮಿಥನ್‌ಲಾಲ್ (82) ನಿಗೂಢವಾಗಿ ನಾಪತ್ತೆಯಾಗಿದ್ದರು. ಮರೆಗುಳಿ ರೋಗದಿಂದ ಬಳಲುತ್ತಿದ್ದ ಅವರು ಮನೆಗೆ ವಾಪಸ್ಸಾಗಲೇ ಇಲ್ಲ. 75 ವರ್ಷ ವಯಸ್ಸಿನ ದ್ವಾರಕಾಪ್ರಸಾದ್ ಅವರದ್ದೂ ಇಂಥದ್ದೇ ಕಥೆ. ತೀವ್ರ ಖಿನ್ನತೆ ಮತ್ತು ಜ್ಞಾಪಕಶಕ್ತಿ ಮಂದವಾಗುತ್ತಿದ್ದ ಕಾಯಿಲೆಯಿಂದ ಬಳಲುತ್ತಿದ್ದ ಇವರು ಮನೆಗೆ ಬಂದಿಲ್ಲ ಎಂಬ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜವಾಗಿರಲಿಲ್ಲ. ಆದರೆ ಇದೀಗ ಪೊಲೀಸರ ನೆರವಿನಿಂದ ಕುಟುಂಬದ ಜತೆ ಪುನರ್ ಮಿಲನಕ್ಕೆ ಸಾಧ್ಯವಾಗಿದೆ.

ಈ ಎರಡು ಪ್ರಕರಣಗಳನ್ನು ಸವಾಲಾಗಿ ಹಾಗೂ ಸ್ವಯಂಪ್ರೇರಿತರಾಗಿ ತೆಗೆದುಕೊಂಡ ಮಾನವ ಕಳ್ಳಸಾಗಣೆ ನಿಗ್ರಹ ಪಡೆಯ ಪೊಲೀಸರು ಸುಮಾರು ಹದಿನೈದು ದಿನಗಳ ನಿರಂತರ ಪ್ರಯತ್ನದಿಂದ ದಿಲ್ಲಿಯ ಬೇರೆ ಬೇರೆ ಕಡೆಗಳಲ್ಲಿ ಇವರನ್ನು ಪತ್ತೆ ಮಾಡಿದ್ದಾರೆ. ಲಾಲ್ ಜುಲೈ 11ರಂದು ದೇವಸ್ಥಾನವೊಂದರಲ್ಲಿ ಪತ್ತೆಯಾಗಿದ್ದರೆ, ಪ್ರಸಾದ್ ಗುರುದ್ವಾರಾ ಬಾಂಗ್ಲಾಸಾಹಿಬ್‌ನಲ್ಲಿ ಇದ್ದರು.

ಲಾಲ್ ಅವರು ತಮ್ಮ ಕುಟುಂಬದ ಜತೆಗೆ ನೈರುತ್ಯ ದಿಲ್ಲಿಯ ಅಮನ್ ವಿಹಾರ್‌ನಲ್ಲಿದ್ದರು. ಅವರ ಸಂಬಂಧಿಕರು ಅವರನ್ನು ಪತ್ತೆ ಮಾಡಲು ಮಾಡಿದ ನಿರಂತರ ಪ್ರಯತ್ನ ವಿಫಲವಾಗಿತ್ತು. ಅಂತಿಮವಾಗಿ ಅವರು ಪೊಲೀಸರಿಗೆ ದೂರು ನೀಡಿದ್ದರು. ಭಾರತ್‌ ನಗರ ಪೊಲೀಸರು ಇವರ ವಿವರಗಳನ್ನು ಝಿಪ್‌ನೆಟ್ ಎಂಬ ವೆಬ್‌ಸೈಟ್‌ನಲ್ಲಿ ಹಾಕಿದ್ದರು. ಆದರೂ ಇವರ ಚಲನವಲನ ಬಗ್ಗೆ ಯಾವ ಸುಳಿವೂ ಸಿಗಲಿಲ್ಲ. ಆದರೆ ಪೊಲೀಸರು, ಕುಟುಂಬಸ್ಥರು ಪ್ರಯತ್ನ ಕೈಬಿಡಲಿಲ್ಲ. ಎಲ್ಲ ದೇವಸ್ಥಾನ, ಮಂದಿರಗಳು, ಆಟೊರಿಕ್ಷಾ, ಬಸ್ ನಿರ್ವಾಹಕರು, ವ್ಯಾಪಾರಿಗಳು, ಕಿಯಾಸ್ಕ್ ಹೀಗೆ ಸಾಧ್ಯವಿರುವ ಎಲ್ಲೆಡೆಯೂ ಈ ಇಬ್ಬರ ಭಾವಚಿತ್ರಗಳನ್ನು ತೋರಿಸಿ ಸುಳಿವು ಸಿಕ್ಕಿದರೆ ಮಾಹಿತಿ ನೀಡುವಂತೆ ಕೋರಿದರು. ಇದು ಕೊನೆಗೂ ಫಲ ನೀಡಿತು. ಲಾಲ್ ಮನೆಬಿಟ್ಟು ಎರಡೂವರೆ ತಿಂಗಳ ಬಳಿಕ ಅಗ್ರಸೇನ ಆಸ್ಪತ್ರೆ ಬಳಿಯ ಬಾಲಾಜಿ ಮಂದಿರದಲ್ಲಿ ಪತ್ತೆಯಾದರು. ನಿರಂತರ ನಡಿಗೆಯಿಂದ ಕಾಲುಗಳು ಊದಿಕೊಂಡಿದ್ದವು ಹಾಗೂ ಬಳಲಿಕೆ ಇತ್ತು. ಮನೆಗೆ ಮರಳಲು ಅವರಿಗೆ ದಾರಿ ಸಿಕ್ಕಿರಲಿಲ್ಲ.

ಅಂತೆಯೇ ಪ್ರಸಾದ್ ಗುರುದ್ವಾರಾ ಬಾಂಗ್ಲಾ ಸಾಹಿಬ್ ಬಳಿ ಪತ್ತೆಯಾದರು. ಅವರೂ ಅಸ್ವಸ್ಥರಾಗಿದ್ದು, ವೈದ್ಯಕೀಯ ಚಿಕಿತ್ಸೆ ಅಗತ್ಯವಿತ್ತು. ಪೊಲೀಸ್ ಸಾಹಸದಿಂದ ಇಬ್ಬರೂ ಇದೀಗ ಮರಳಿ ಮನೆ ಸೇರಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)