varthabharthi

ಕ್ರೀಡೆ

ಅಸ್ಸಾಂ ಪ್ರವಾಹ ಪರಿಹಾರ ನಿಧಿಗೆ ಅರ್ಧ ವೇತನ ನೀಡಿದ ಹಿಮಾ ದಾಸ್

ವಾರ್ತಾ ಭಾರತಿ : 16 Jul, 2019

 ಹೊಸದಿಲ್ಲಿ, ಜು.16: ಇತ್ತೀಚೆಗಿನ ದಿನಗಳಲ್ಲಿ ಅತ್ಯಂತ ಭೀಕರ ಜಲ ಪ್ರವಾಹಕ್ಕೆ ಒಳಗಾಗಿರುವ ತನ್ನ ತವರು ರಾಜ್ಯ ಅಸ್ಸಾಂನ ಪರಿಹಾರ ನಿಧಿಗೆ ಭಾರತದ ಓಟಗಾರ್ತಿ ಹಿಮಾ ದಾಸ್ ತನ್ನ ತಿಂಗಳ ವೇತನದ ಅರ್ಧಭಾಗ ದಾನ ನೀಡಲು ನಿರ್ಧರಿಸಿದ್ದಾರೆ. ರಾಜ್ಯಕ್ಕೆ ಸಹಾಯ ಮಾಡುವಂತೆಯೂ ಎಲ್ಲರಿಗೂ ಮನವಿ ಮಾಡಿದ್ದಾರೆ.

ಸ್ಟಾರ್ ಓಟಗಾರ್ತಿ ಹಿಮಾ ದಾಸ್ ಪ್ರಸ್ತುತ ಯುರೋಪ್‌ನಲ್ಲಿದ್ದು ಟ್ರೈನಿಂಗ್ ಕ್ಯಾಂಪ್ ಹಾಗೂ ಸ್ಪರ್ಧಾತ್ಮಕ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹಿಮಾ ಅಸ್ಸಾಂ ಮುಖ್ಯಮಂತ್ರಿ ಪರಿಹಾರ ನಿಧಿಗೆ ಮಂಗಳವಾರ ಹಣ ಜಮೆ ಮಾಡಿದ್ದಾರೆ.

ಹಿಮಾ ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನಲ್ಲಿ ಎಚ್ ಆರ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕಂಪೆನಿಯಲ್ಲಿ ಲಭಿಸುವ ತಿಂಗಳ ವೇತನದ ಅರ್ಧಭಾಗ ಪರಿಹಾರ ನಿಧಿಗೆ ನೀಡಿದ್ದಾರೆ.

ಕಾಪೋರೇಟ್‌ಗಳು ಹಾಗೂ ಶ್ರೀಮಂತರು ರಾಜ್ಯದ ನೆರವಿಗೆ ಮುಂದಾಗುವಂತೆ ಹಿಮಾ ವಿನಂತಿಸಿದ್ದಾರೆ.

 ‘‘ನಮ್ಮ ರಾಜ್ಯ ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. 33 ಜಿಲ್ಲೆಗಳಲ್ಲಿ 30 ಜಿಲ್ಲೆಗಳು ಇದರಿಂದ ಬಾಧಿತವಾಗಿವೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಮುಂದೆ ಬಂದು ಸಹಾಯ ಮಾಡುವಂತೆ ದೊಡ್ಡ ಕಾರ್ಪೊರೇಟ್‌ಗಳು ಹಾಗೂ ಶ್ರೀಮಂತರಲ್ಲಿ ವಿನಂತಿಸಿಕೊಳ್ಳುವೆ’’ ಎಂದು ಹಿಮಾ ಹೇಳಿದ್ದಾರೆ.

ಅಸ್ಸಾಂನಲ್ಲಿ ಸಂಭವಿಸಿರುವ ಜಲ ಪ್ರವಾಹಕ್ಕೆ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದು, ಲಕ್ಷಾಂತರ ಜನರನ್ನು ಸ್ಥಳಾಂತರಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)