varthabharthi

ಅಂತಾರಾಷ್ಟ್ರೀಯ

ರೊಹಿಂಗ್ಯಾ ಹತ್ಯಾಕಾಂಡ: ಮ್ಯಾನ್ಮಾರ್ ಸೇನಾಧಿಕಾರಿಗಳ ಮೇಲೆ ಅಮೆರಿಕ ದಿಗ್ಬಂಧನ

ವಾರ್ತಾ ಭಾರತಿ : 17 Jul, 2019

ವಾಶಿಂಗ್ಟನ್, ಜು. 17: ರೊಹಿಂಗ್ಯಾ ಮುಸ್ಲಿಮ್ ಅಲ್ಪಸಂಖ್ಯಾತರ ‘ಜನಾಂಗೀಯ ನಿರ್ಮೂಲನೆಯಲ್ಲಿ ವಹಿಸಿದ ಪಾತ್ರಕ್ಕಾಗಿ’ ಮ್ಯಾನ್ಮಾರ್ ಸೇನೆಯ ಪ್ರಧಾನ ದಂಡನಾಯಕ ಮಿನ್ ಆಂಗ್ ಹ್ಲೈಂಗ್ ಮತ್ತು ಇತರ ಮೂವರು ಸೇನಾಧಿಕಾರಿಗಳ ವಿರುದ್ಧ ಅಮೆರಿಕ ದಿಗ್ಬಂಧನಗಳನ್ನು ವಿಧಿಸಿದೆ.

ಎರಡು ವರ್ಷಗಳ ಹಿಂದೆ ನಡೆದ ಹಿಂಸಾಚಾರದಲ್ಲಿ ಅವರು ಶಾಮೀಲಾಗಿರುವ ಬಗ್ಗೆ ವಿಶ್ವಾಸಾರ್ಹ ಪುರಾವೆಗಳು ಪತ್ತೆಯಾದ ಬಳಿಕ ತಾನು ಈ ಕ್ರಮ ತೆಗೆದುಕೊಂಡಿರುವುದಾಗಿ ಅಮೆರಿಕದ ವಿದೇಶಾಂಗ ಇಲಾಖೆ ಮಂಗಳವಾರ ತಿಳಿಸಿದೆ.

2017ರ ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಲ್ಲಿ ಮ್ಯಾನ್ಮಾರ್ ಸೇನೆಯು ರೊಹಿಂಗ್ಯಾ ಮುಸ್ಲಿಮರ ವಿರುದ್ಧ ನಡೆಸಿದ ದಮನ ಕಾರ್ಯಾಚರಣೆಯಲ್ಲಿ ನೂರಾರು ಮಂದಿ ಮೃತಪಟ್ಟಿದ್ದಾರೆ ಹಾಗೂ ಸುಮಾರು 7,40,000 ರೊಹಿಂಗ್ಯಾ ಮುಸ್ಲಿಮರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

‘‘ಬರ್ಮ ಸೇನೆಯ ಅತ್ಯುನ್ನತ ನಾಯಕತ್ವದ ವಿರುದ್ಧ ಬಹಿರಂಗವಾಗಿ ಕ್ರಮ ತೆಗೆದುಕೊಂಡ ಪ್ರಥಮ ದೇಶ ಅಮೆರಿಕವಾಗಿದೆ’’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

‘‘ಮಾನವಹಕ್ಕು ಉಲ್ಲಂಘನೆ ಮತ್ತು ದೌರ್ಜನ್ಯಗಳನ್ನು ನಡೆಸಿದವರನ್ನು ಉತ್ತರದಾಯಿಯನ್ನಾಗಿಸಲು ಬರ್ಮ ಸರಕಾರ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲದಿರುವುದು ನಮ್ಮ ಕಳವಳಕ್ಕೆ ಕಾರಣವಾಗಿದೆ. ಅದೇ ವೇಳೆ, ಬರ್ಮ ಸೇನೆಯು ದೇಶಾದ್ಯಂತ ಮಾನವಹಕ್ಕು ಉಲ್ಲಂಘನೆಗಳು ಮತ್ತು ದೌರ್ಜನ್ಯಗಳನ್ನು ನಡೆಸುವುದನ್ನು ಮುಂದುವರಿಸುತ್ತಿದೆ ಎಂಬ ವರದಿಗಳಿವೆ’’ ಎಂದು ಅವರು ಹೇಳಿದ್ದಾರೆ.

ಅಮೆರಿಕದ ದಿಗ್ಬಂಧನಗಳಿಗೆ ಒಳಗಾದ ಇತರ ಸೇನಾಧಿಕಾರಿಗಳೆಂದರೆ- ಉಪ ಸೇನಾ ಮುಖ್ಯಸ್ಥ ಸೋ ವಿನ್, ಬ್ರಿಗೇಡಿಯರ್ ಜನರಲ್ ತಾನ್ ಓ ಮತ್ತು ಬ್ರಿಗೇಡಿಯರ್ ಜನರಲ್ ಆಂಗ್ ಆಂಗ್ ಹಾಗೂ ಈ ಎಲ್ಲ ನಾಲ್ವರು ಸೇನಾಧಿಕಾರಿಗಳ ಕುಟುಂಬ ಸದಸ್ಯರು.

ಅಮೆರಿಕ ಪ್ರವಾಸ ಸಾಧ್ಯವಿಲ್ಲ:

ಅಮೆರಿಕದ ದಿಗ್ಬಂಧನಕ್ಕೊಳಗಾದವರು ಇನ್ನು ಮುಂದೆ ಅಮೆರಿಕ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಅಮೆರಿಕದ ನಿರ್ಬಂಧಗಳು ಈ ಸೇನಾಧಿಕಾರಿಗಳ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲವಾದರೂ, ಅವರ ಕುಟುಂಬ ಸದಸ್ಯರ ಮೇಲೆ ಪರಿಣಾಮ ಬೀರಬಹುದಾಗಿದೆ.

ಅಂದರೆ, ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಪ್ರವಾಸಿಗಳಾಗಿ ಅಥವಾ ವಿದ್ಯಾರ್ಥಿಗಳಾಗಿ ಅಮೆರಿಕಕ್ಕೆ ಹೋಗಲು ಸಾಧ್ಯವಾಗುವುದಿಲ್ಲ.

ಜನಾಂಗೀಯ ಹತ್ಯೆ ಆರೋಪಿ ಸೈನಿಕರ ಬಿಡುಗಡೆಗೆ ಆಕ್ರೋಶ:

ಮ್ಯಾನ್ಮಾರ್‌ನಲ್ಲಿ ನಡೆದ ಹತ್ಯಾಕಾಂಡವು ‘ಜನಾಂಗೀಯ ನಿರ್ಮೂಲನೆ’ಗೆ ಸಮವಾಗಿದೆ ಎಂಬುದಾಗಿ ಅಮೆರಿಕದ ಹಿಂದಿನ ವಿದೇಶ ಕಾರ್ಯದರ್ಶಿ ರೆಕ್ಸ್ ಟಿಲರ್‌ಸನ್ ತನ್ನ 2017ರ ವರದಿಯಲ್ಲಿ ಹೇಳಿದ್ದರು. ಈಗಿನ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಕೂಡ ಈ ವರದಿಯನ್ನು ಎತ್ತಿಹಿಡಿದಿದ್ದಾರೆ.

ರೊಹಿಂಗ್ಯಾ ಗ್ರಾಮಸ್ಥರನ್ನು ಹತ್ಯೆಗೈದ ಪ್ರಕರಣದಲ್ಲಿ ದೋಷಿಗಳಾಗಿದ್ದ ಏಳು ಸೈನಿಕರನ್ನು ಮ್ಯಾನ್ಮಾರ್ ಸರಕಾರವು ಈ ವರ್ಷದ ಮೇ ತಿಂಗಳಲ್ಲಿ ಬಿಡುಗಡೆ ಮಾಡಿರುವ ಬಗ್ಗೆ ಪಾಂಪಿಯೊ ಮುಖ್ಯವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸೈನಿಕರು, ಈ ಹತ್ಯಾಕಾಂಡವನ್ನು ಬಹಿರಂಗಪಡಿಸಿದ ಇಬ್ಬರು ‘ರಾಯ್ಟರ್ಸ್’ ಪತ್ರಕರ್ತರಿಗಿಂತಲೂ ಕಡಿಮೆ ಅವಧಿಯನ್ನು ಜೈಲಿನಲ್ಲಿ ಕಳೆದಿದ್ದರು. ಪತ್ರಕರ್ತರು 500ಕ್ಕಿಂತಲೂ ಅಧಿಕ ದಿನಗಳ ಕಾಲ ಜೈಲಿನಲ್ಲಿದ್ದರು.

‘‘ಇದು ಮ್ಯಾನ್ಮಾರ್ ಸೇನೆ ಮತ್ತು ಅದರ ಹಿರಿಯ ನಾಯಕತ್ವದ ಉತ್ತರದಾಯಿತ್ವದ ನಿರಂತರ ಕೊರತೆಗೆ ಅತ್ಯುತ್ತಮ ಉದಾಹರಣೆಯಾಗಿದೆ’’ ಎಂಬುದಾಗಿ ಪಾಂಪಿಯೊ ಬಣ್ಣಿಸಿದ್ದಾರೆ.

‘‘ರೊಹಿಂಗ್ಯಾ ಮುಸ್ಲಿಮರ ಹತ್ಯೆಯಲ್ಲಿ ಭಾಗಿಗಳಾದ ಸೈನಿಕರನ್ನು ತಿಂಗಳುಗಳ ಅವಧಿಯ ಜೈಲು ವಾಸದ ಬಳಿಕ ಸೇನಾ ಮುಖ್ಯಸ್ಥರು ಬಿಡುಗಡೆಗೊಳಿಸಿದ್ದಾರೆ. ಆದರೆ, ಈ ಹತ್ಯೆಗಳ ಬಗ್ಗೆ ಜಗತ್ತಿಗೆ ಮಾಹಿತಿ ನೀಡಿದ ಪತ್ರಕರ್ತರನ್ನು 500ಕ್ಕೂ ಹೆಚ್ಚು ದಿನಗಳ ಕಾಲ ಜೈಲಿನಲ್ಲಿ ಇರಿಸಲಾಗಿತ್ತು’’ ಎಂದು ಅವರು ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)