varthabharthi

ಕರ್ನಾಟಕ

ವಿಶ್ವಾಸಮತ ಯಾಚನೆಯಲ್ಲಿ ಅತೃಪ್ತ ಶಾಸಕರು ಭಾಗವಹಿಸುವುದಿಲ್ಲ: ಎಚ್.ವಿಶ್ವನಾಥ್

ವಾರ್ತಾ ಭಾರತಿ : 17 Jul, 2019

ಮುಂಬೈ, ಜು.17: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆ ಕಲಾಪದಲ್ಲಿ ಮಂಡಿಸಲಿರುವ ವಿಶ್ವಾಸಮತ ಯಾಚನೆಗೆ ಯಾವ ಅತೃಪ್ತ ಶಾಸಕರು ಭಾಗವಹಿಸುವುದಿಲ್ಲವೆಂದು ಅತೃಪ್ತ ಜೆಡಿಎಸ್ ಶಾಸಕ ಎಚ್.ವಿಶ್ವನಾಥ್ ಹೇಳಿದ್ದಾರೆ.

ಬುಧವಾರ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ತೀರ್ಪಿನಿಂದ ಸಂವಿಧಾನದ ಆಶಯ ಎತ್ತಿ ಹಿಡಿದಂತಾಗಿದೆ. ಇದು ಮಧ್ಯಂತರ ತೀರ್ಪು ಆಗಿರುವುದರಿಂದ ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ಪುನರ್ ವ್ಯಾಖ್ಯಾನ ಆಗಬೇಕಿದೆ ಎಂದರು.

13-14 ತಿಂಗಳಿನಿಂದ ರಾಜ್ಯದಲ್ಲಿ ಸರಕಾರವೇ ಇಲ್ಲವೇನೋ ಎಂಬ ಸ್ಥಿತಿ ಇತ್ತು. ಕರ್ನಾಟಕ ರಾಜ್ಯದ ಜನರ ಅವಕೃಪೆಗೆ ಒಳಗಾಗಿರುವ ಸಮ್ಮಿಶ್ರ ಸರಕಾರ ಎಷ್ಟು ಬೇಗ ಹೋಗುತ್ತೋ ಅಷ್ಟು ಒಳ್ಳೆಯದು ಅನ್ನುವುದು ಜನರ ಅಭಿಪ್ರಾಯವಾಗಿದೆ. ಮತದಾರರ ಕ್ಷಮೆ ಕೇಳಿ ನಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇವೆ ಎಂದು ಅವರು ಸಮರ್ಥಿಸಿಕೊಂಡರು.

ಬೆಂಗಳೂರಿಗೆ ಶುಕ್ರವಾರ ಹಿಂದಿರುಗುವ ಸಾಧ್ಯತೆ ಇದೆ. ನಾವು ದುಡ್ಡಿಗಾಗಿ ರಾಜೀನಾಮೆ ನೀಡಿಲ್ಲ. ಬಂದದ್ದೆಲ್ಲಾ ಬರಲಿ, ಕರ್ನಾಟಕ ಜನರ ಆಶೀರ್ವಾದ ನಮಗಿದೆ ಎಂದು ಅವರು ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)