varthabharthi

ಕ್ರೀಡೆ

ಇಂಡೋನೇಶ್ಯಾ ಓಪನ್

ಸಿಂಧು, ಶ್ರೀಕಾಂತ್ ಗೆಲುವಿನ ಆರಂಭ

ವಾರ್ತಾ ಭಾರತಿ : 18 Jul, 2019

ಜಕಾರ್ತ, ಜು.17: ಭಾರತದ ಅಗ್ರಮಾನ್ಯ ಶಟ್ಲರ್‌ಗಳಾದ ಪಿ.ವಿ.ಸಿಂಧು ಹಾಗೂ ಕಿಡಂಬಿ ಶ್ರೀಕಾಂತ್ ಬಿಡಬ್ಲುಎಫ್ ವರ್ಲ್ಡ್ ಟೂರ್ ಸೂಪರ್-1000 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಗೆಲುವಿನ ಆರಂಭ ಪಡೆದಿದ್ದಾರೆ.

ಇಲ್ಲಿ ಬುಧವಾರ ನಡೆದ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಸಿಂಧು ಹಾಗೂ ಶ್ರೀಕಾಂತ್ ಎರಡನೇ ಸುತ್ತಿಗೆ ತೇರ್ಗಡೆಯಾದರು.

ಬಿಡಬ್ಲುಎಫ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಒಂದು ತಿಂಗಳ ಕಾಲ ವಿಶ್ರಾಂತಿ ಪಡೆದಿರುವ ಸಿಂಧು ಹಾಗೂ ಶ್ರೀಕಾಂತ್ ಜಪಾನ್ ಶಟ್ಲರ್‌ಗಳಾದ ಆಯಾ ಒಹೊರಿ ಹಾಗೂ ಕೆಂಟಾ ನಿಶಿಮೊಟೊ ವಿರುದ್ಧ ಜಯ ಸಾಧಿಸಿದರು.

 ಈ ಋತುವಿನಲ್ಲಿ ಮೊದಲ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಐದನೇ ಶ್ರೇಯಾಂಕದ ಸಿಂಧು, ಒಹೊರಿ ಅವರನ್ನು 11-21, 21-15, 21-15 ಗೇಮ್‌ಗಳ ಅಂತರದಿಂದ ಮಣಿಸಿದರು. ಈ ವರ್ಷದ ಇಂಡಿಯಾ ಓಪನ್‌ನಲ್ಲಿ ಫೈನಲ್‌ಗೆ ತಲುಪಿದ್ದ 8ನೇ ಶ್ರೇಯಾಂಕದ ಶ್ರೀಕಾಂತ್ 38 ನಿಮಿಷಗಳ ಹೋರಾಟದಲ್ಲಿ ನಿಶಿಮೊಟೊ ವಿರುದ್ಧ 21-14, 21-13 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದರು.

  ಸಿಂಧು ಅವರು ಒಹೊರಿ ವಿರುದ್ಧ ಸತತ 7ನೇ ಗೆಲುವು ಸಾಧಿಸುವುದರೊಂದಿಗೆ ತನ್ನ ಪ್ರಾಬಲ್ಯ ಮುಂದುವರಿಸಿದರು. ಶ್ರೀಕಾಂತ್ ಅವರು ನಿಶಿಮೊಟೊ ವಿರುದ್ಧ 5ನೇ ಗೆಲುವು ದಾಖಲಿಸಿದರು. ಆರು ಮುಖಾಮುಖಿಯಲ್ಲಿ ಒಮ್ಮೆ ಮಾತ್ರ ನಿಶಿಮೊಟೊ ಜಯ ಸಾಧಿಸಿದ್ದರು. ವಿಶ್ವದ ನಂ.5ನೇ ಆಟಗಾರ್ತಿ ಸಿಂಧು ಮುಂದಿನ ಸುತ್ತಿನಲ್ಲಿ ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಡ್ ಅಥವಾ ಹಾಂಕಾಂಗ್‌ನ ಯಿಪ್ ಪುಯ್ ಯಿನ್‌ರನ್ನು ಎದುರಿಸಲಿದ್ದಾರೆ. ವಿಶ್ವದ ನಂ.9ನೇ ಆಟಗಾರ ಶ್ರೀಕಾಂತ್ ಮುಂದಿನ ಸುತ್ತಿನಲ್ಲಿ ಫ್ರಾನ್ಸ್‌ನ ಬ್ರೈಸ್ ಲೆವೆರ್‌ಡೆಝ್ ಅಥವಾ ಹಾಂಕಾಂಗ್‌ನ ಕಾ ಲಾಂಗ್ ಅಂಗುಸ್‌ರನ್ನು ಮುಖಾಮುಖಿಯಾಗಲಿದ್ದಾರೆ.

 ಕಳೆದ ವರ್ಷ ಸ್ವಿಸ್ ಓಪನ್ ಫೈನಲ್ ತಲುಪಿರುವ ಬಿ.ಸಾಯಿ ಪ್ರಣೀತ್ ಹಾಂಕಾಂಗ್‌ನ ವಾಂಗ್ ವಿಂಗ್ ಕಿ ವಿನ್ಸೆಂಟ್‌ಗೆ 15-21, 21-13,10-21 ಅಂತರದಿಂದ ಶರಣಾದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)