varthabharthi

ಕರಾವಳಿ

ಲಿಂಗಾನುಪಾತ ಇಳಿಮುಖ ದೇಶಕ್ಕೆ ಮಾರಕ: ಉಸ್ಮಾನ್

ವಾರ್ತಾ ಭಾರತಿ : 18 Jul, 2019

ಮಂಗಳೂರು, ಜು.18: ವರ್ಷದಿಂದ ವರ್ಷಕ್ಕೆ ಲಿಂಗಾನುಪಾತ ಇಳಿಮುಖವಾಗುತ್ತಿದ್ದು, ಇದು ಸಾಮಾಜಿಕ ಅಭಿವೃದ್ಧಿ ದೃಷ್ಟಿಯಿಂದ ಮಾರಕವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಧಿಕಾರಿ ಉಸ್ಮಾನ್.ಎ ಹೇಳಿದರು.

ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ‘ಹೆಣ್ಣು ಮಗುವನ್ನು ರಕ್ಷಿಸಿ ಹೆಣ್ಣು ಮಗುವನ್ನು ಓದಿಸಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬದಲಾವಣೆ ಎಂಬುದು ನಮ್ಮ ಕುಟುಂಬದಿಂದಲೇ ಆಗಬೇಕು. ಹೆಣ್ಣು ಭ್ರೂಣಹತ್ಯೆ ನಿಯಂತ್ರಣ ಎಲ್ಲರ ಜವಾಬ್ದಾರಿಯಾಗಿದೆ. ಕುಸಿಯುತ್ತಿರುವ ಮಕ್ಕಳ ಲಿಂಗಾನುಪಾತವನ್ನು ಕಡಿಮೆ ಮಾಡುವುದು, ಹೆಣ್ಣು ಮಕ್ಕಳನ್ನು ಸಬಲೀಕರಣಗೊಳಿಸುವುದು, ಲಿಂಗ ಪಕ್ಷಪಾತ ಮತ್ತು ಲಿಂಗ ಆಯ್ಕೆ ಮಾಡುವುದನ್ನು ತಡೆಗಟ್ಟಬೇಕು ಎಂದರು.

ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಮಾಜ ಸೇವಾ ವಿಭಾಗದ ಪ್ರಾಧ್ಯಾಪಕ ಡಾ.ಶೆರ್ಲಿ ಟಿ. ಬಾಬು ಮಾತನಾಡಿ, ಜಿಲ್ಲೆಯಲ್ಲಿ 2001ರಲ್ಲಿ 1,022 ಇದ್ದ ಲಿಂಗಾನುಪಾತ 2011ರಲ್ಲಿ 1020ಕ್ಕೆ ಕುಸಿದಿದೆ ಹಾಗೂ 2001ರಲ್ಲಿ 952 ಇದ್ದ ಆರು ವರ್ಷದೊಳಗಿನ ಮಕ್ಕಳ ಲಿಂಗಾನುಪಾತ 2011ರಲ್ಲಿ 947ಕ್ಕೆ ಕುಸಿದಿದೆ. ಅಂದರೆ ಪ್ರತಿ ಸಾವಿರ ಗಂಡು ಮಕ್ಕಳಿಗೆ 947 ಹೆಣ್ಣು ಮಕ್ಕಳು ಮಾತ್ರ ಇರುವುದು ಕಂಡುಬಂದಿದೆ ಎಂದರು.

2018-19ನೇ ಸಾಲಿನಲ್ಲಿ ರಾಜ್ಯದ ಐದು ಜಿಲ್ಲೆಗಳನ್ನು ‘ಹೆಣ್ಣು ಮಗುವನ್ನು ರಕ್ಷಿಸಿ ಹೆಣ್ಣು ಮಗುವನ್ನು ಓದಿಸಿ’ ಯೋಜನೆಗೆ ಆಯ್ಕೆ ಮಾಡಲಾಗಿದೆ. ಇದರಲ್ಲಿ ದ.ಕ. ಜಿಲ್ಲೆಯೂ ಒಂದಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸುಂದರ್ ಪೂಜಾರಿ, ಬಲ್ಮಠ ಸರಕಾರಿ ಪದವಿ ಪೂರ್ವ ಮಹಿಳಾ ಕಾಲೇಜಿನ ಪ್ರಾಂಶುಪಾಲ ಮ್ಯಾರಿಟನ್ ಜೆ. ಮಸ್ಕರೇನಸ್, ಸಾಮಾಜಿಕ ಕಾರ್ಯಕರ್ತೆ ಡಾ.ರೀಟಾ ನೊರಾನ್ಹ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)