varthabharthi

ಕರಾವಳಿ

​ಅಕ್ರಮ ಗೋ ಸಾಗಾಟ: ಉಡುಪಿಯ ನಾಲ್ವರು ಪೊಲೀಸರ ಅಮಾನತು

ವಾರ್ತಾ ಭಾರತಿ : 18 Jul, 2019

ಉಡುಪಿ, ಜು.18: ಹಣ ಪಡೆದು ಅಕ್ರಮವಾಗಿ ಗೋಸಾಗಾಟ ಹಾಗೂ ಗೋ ಕಳವಿಗೆ ಅನುವು ಮಾಡಿಕೊಡುತಿದ್ದ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಉಡುಪಿ ಪೊಲೀಸ್ ಇಲಾಖೆಯ ನಾಲ್ವರು ಪೊಲೀಸ್ ಸಿಬ್ಬಂದಿಗಳನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಅಮಾನತು ಗೊಳಿಸಿದ್ದಾರೆ.

ಕೋಟ ಪೊಲೀಸರು ಪತ್ತೆ ಹಚ್ಚಿದ ಅಕ್ರಮ ಜಾನುವಾರ ಸಾಗಾಟ ಜಾಲದಲ್ಲಿ ಒಟ್ಟು ಆರು ಮಂದಿ ಪೊಲೀಸ್ ಸಿಬ್ಬಂದಿಗಳು ಭಾಗಿಯಾಗಿರುವುದಾಗಿ ಬಂಧಿತ ಆರೋಪಿಗಳು ತಿಳಿಸಿದ್ದು, ಇದರಲ್ಲಿ ಇಬ್ಬರನ್ನು ಈಗಾಗಲೇ ಬಂಧಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಮಂಕಿ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಕುಮಟಾದ ವಿನೋದ್ (37) ಹಾಗೂ ಉಡುಪಿ ಜಿಲ್ಲಾ ಕರಾವಳಿ ಕಾವಲು ಪಡೆಯ ಹೆಡ್‌ ಕಾನ್‌ಸ್ಟೇಬಲ್ ಬ್ರಹ್ಮಾವರದ ಸಂತೋಷ್ ಶೆಟ್ಟಿ (37) ಬಂಧಿತ ಆರೋಪಿಗಳು.

ಈ ಪ್ರಕರಣದಲ್ಲಿ ಒಳಗೊಂಡಿರುವ, ಆದರೆ ಈಗ ತಲೆಮರೆಸಿಕೊಂಡಿರುವ ಆರೋಪಿಗಳಾದ ಕೋಟ ಪೊಲೀಸ್ ಠಾಣೆಯ ಹೆಡ್‌ ಕಾನ್‌ಸ್ಟೇಬಲ್ ರಾಘವೇಂದ್ರ, ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಹಾಯಕ ಉಪ ನಿರೀಕ್ಷಕ ಬಾಲಸುಬ್ರಹ್ಮಣ್ಯ, ಹೆಡ್‌ ಕಾನ್‌ಸ್ಟೇಬಲ್ ಪ್ರಶಾಂತ್, ಕಾನ್‌ಸ್ಟೇಬಲ್ ಚಂದ್ರಶೇಖರ್ ಉಡುಪಿ ಜಿಲ್ಲಾ ಪೊಲೀಸ್ ವ್ಯಾಪ್ತಿಗೆ ಸೇರಿದ್ದು, ಇವರನ್ನು ಅಮಾನತುಗೊಳಿಸಲಾಗಿದೆ ಎಂದು ನಿಶಾ ಜೇಮ್ಸ್ ತಿಳಿಸಿದ್ದಾರೆ.

ಸದ್ಯ ಇವರೆಲ್ಲ ತಲೆ ಮರೆಸಿಕೊಂಡಿದ್ದು, ಇನ್ನಷ್ಟೇ ಬಂಧಿಸಬೇಕಿದೆ ಎಂದು ಅವರು ಹೇಳಿದರು. ಜು.12ರಂದು ಕುಂದಾಪುರ ಕಡೆಯಿಂದ ಮಂಗಳೂರು ಕಡೆಗೆ ಲಾರಿಯಲ್ಲಿ ಅಕ್ರಮ ಜಾನುವಾರು ಸಾಗಾಟಕ್ಕೆ ಸಂಬಂಧಿಸಿದಂತೆ ದೊರೆತ ಖಚಿತ ಮಾಹಿತಿ ಯಂತೆ ಕೋಟ ಎಸ್‌ಐ ನಿತ್ಯಾನಂದ ಗೌಡ ನೇತೃತ್ವದಲ್ಲಿ ಪೊಲೀಸರು ಜು.12 ರಂದು ಸಾಸ್ತಾನ ಟೋಲ್ಗೇಟ್ ಬಳಿ ವಾಹನವನ್ನು ತಡೆದು ಅದರಲ್ಲಿದ್ದ ಶಿವಾನಂದ, ಮಾರುತಿ ನಾರಾಯಣ ನಾಯ್ಕ, ಸೈನುದ್ದೀನ್, ಗಣೇಶನ್, ಹಮೀದ್ ಸಿ.ಎಚ್., ಸಮೀರ್‌ರನ್ನು ಬಂಧಿಸಿ, 13 ಕೋಣ, ಆರು ಎಮ್ಮೆ ಮತ್ತು ಲಾರಿಯನ್ನು ವಶಪಡಿಸಿಕೊಂಡಿದ್ದರು.

ವಿಚಾರಣೆ ವೇಳೆ ಬಂಧಿತರು, ಈ ಎಲ್ಲ ಪೊಲೀಸ್ ಸಿಬ್ಬಂದಿ ಹಣ ಪಡೆದು ಅಕ್ರಮ ಜಾನುವಾರು ಸಾಗಾಟಕ್ಕೆ ಅನುವು ಮಾಡಿಕೊಡುತ್ತಿದ್ದರು ಎಂಬುದಾಗಿ ಮಾಹಿತಿ ನೀಡಿದ್ದರು. ಅದರ ಆಧಾರದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ನಾಲ್ವರಿಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಬಂಧಿತರ ವಿರುದ್ಧ ಕೋಟ ಠಾಣೆಯಲ್ಲಿ ಕಲಂ 109, 119,213 ಜೊತೆ 34 ಐಪಿಸಿ ಕಾಯ್ದೆಯಡಿ ಪ್ರಕರಮ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ಕಾನೂನು ರೀತಿ ಕ್ರಮ: ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಸ್ಪಿ ಅವರು ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಪ್ರಕರಣದಲ್ಲಿ ಪೊಲೀಸರೇ ಶಾಮೀಲಾಗಿರುವುದು ಬೇಸರದ ಸಂಗತಿ. ಆದರೆ ಈ ಪ್ರಕರಣ ಹೊರಬರಲು ಸಹ ಪೊಲೀಸ್ ಸಿಬ್ಬಂದಿಗಳ ಕಾರ್ಯತತ್ವರತೆ ಕಾರಣ ಎಂದಿದ್ದಾರೆ.

ಈ ಪ್ರಕರಣದಲ್ಲಿ ಭಾಗಿಯಾದ ಪ್ರತಿಯೊಬ್ಬರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳುವುದಾಗಿ ಸುದ್ದಿಗಾರರಿಗೆ ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)