varthabharthi

ನಿಮ್ಮ ಅಂಕಣ

ಕೃಷಿಗೆ ಸರಕಾರದ ಪ್ರೋತ್ಸಾಹ ಧನವೆಲ್ಲಿ?

ವಾರ್ತಾ ಭಾರತಿ : 18 Jul, 2019
-ಬೆನೆಡಿಕ್ಟ್ ನೊರೊನ್ಹ, ಶಾಂತಿನಗರ, ಉಡುಪಿ

ಮಾನ್ಯರೇ,

ಕೃಷಿಗೆ ಉತ್ತೇಜನ ನೀಡುವುದು ಮತ್ತು ರೈತರ ಅನುದಾನವನ್ನು ದ್ವಿಗುಣಗೊಳಿಸುವುದು ಬರೀ ಭಾಷಣಗಳು ಮತ್ತು ಸ್ವಹಿತಾಸಕ್ತಿಯ ಪತ್ರಿಕೆಗಳಲ್ಲಿ ದಪ್ಪಕ್ಷರದ ಮಾತುಗಳಾಗಿ ಚರಿತ್ರೆಯ ಪುಟಗಳಲ್ಲಿ ಸೇರಿವೆ. ಇದನ್ನು ಮೀರಿ ಯಾವುದೇ ಒಂದು ಯೋಜನೆಯು ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಗುರಿ ಮುಟ್ಟಿದ್ದಿಲ್ಲ. ಜನರನ್ನು ಮರುಳು ಮಾಡುವಲ್ಲಿ ತಮ್ಮ ರಾಜಕಾರಣಿಗಳು ಚತುರರೆಂದು ನಮಗೆ ತಿಳಿದಿದೆ. ಆದರೆ ಪ್ರಧಾನಿಯವರು ಕೃಷಿಗೆ ಒತ್ತು ಕೊಟ್ಟಿರುವುದು ಮತ್ತು ಅರಣ್ಯ ಬೆಳೆಸುವುದಕ್ಕೂ ಪ್ರೋತ್ಸಾಹಧನವನ್ನು ನೀಡುವ ಯೋಚನೆ ಮಾಡಿರುವುದರಿಂದ ಸಾಮಾನ್ಯವಾಗಿ ಕೃಷಿಕರನ್ನು ಉತ್ತೇಜಿಸುವ ಒಂದು ಅರ್ಥಪೂರ್ಣ ಯೋಜನೆ ಎಂದು ತಿಳಿದು ನಿವೃತ್ತನಾದ ನಾನೂ ಇಪ್ಪತ್ತೇಳು ವರ್ಷಗಳಿಂದ ಹಡಿಲು ಬಿದ್ದ ನಮ್ಮ ಹಿರಿಯರ ಕೃಷಿ ಭೂಮಿಯನ್ನು ಭತ್ತ ಕೃಷಿಗೆ ಒಳಪಡಿಸಲು ಪ್ರಯತ್ನ ಮಾಡಿದೆ. ನಾನು ನಿವೃತ್ತಿ ಹೊಂದಿದ ಹಿರಿಯ ನಾಗರಿಕನಾದರೂ ಸುಮಾರು ಎರಡು ಹೆಕ್ಟೇರ್ ಭೂಮಿಯನ್ನು ಸಾಗುವಳಿ ಮಾಡಿ ಕೈ ಸುಟ್ಟು ಕೊಂಡಿರುತ್ತೇನೆ. ನನಗೆ ಸರಕಾರದ ಸುತ್ತೋಲೆ ಪ್ರಕಾರ ಪ್ರೋತ್ಸಾಹ ಹಣ ಸ್ವೀಕರಿಸುವ ಅರ್ಹತೆ ಇಲ್ಲದಿದ್ದರೂ ಕೃಷಿಗೆ ಮಾಡಿದ ಖರ್ಚು ನನ್ನ ನಿವೃತ್ತಿ ವೇತನದಿಂದ ಹೋಗುವುದರಿಂದ ನನಗೂ ನಷ್ಟ ಹಾಗೂ ಸಂಕಟವಾಗುವುದು ಸರಿ ತಾನೇ?

ಭತ್ತದ ಕೃಷಿಗೆ ಹುಲ್ಲನ್ನು ಉಂಡೆ ಕಟ್ಟಲು ಎಕರೆಗೆ ರೂಪಾಯಿ 600ರಂತೆ ಕೊಡುವುದಾಗಿ ಯೋಜನೆ ಇದ್ದರೂ ಉಡುಪಿ ಜಿಲ್ಲೆಯಲ್ಲಿ ವಿತರಣೆ ಆಗಿಲ್ಲ. ಕೃಷಿ ಆಯುಕ್ತರು ಏನು ಕ್ರಮ ಕೈಗೊಂಡಿದ್ದಾರೆ? ಹಾಗೆಯೇ ತೋಟಗಾರಿಕೆಗೆ ಲಭಿಸುವ ಪ್ರೋತ್ಸಾಹ ಧನವೂ ಸರಿಯಾಗಿ ವಿತರಿಸಿಲ್ಲ. ಅರಣ್ಯ ಇಲಾಖೆಯವರು 2018-19ರಲ್ಲಿ ಅವರಿಂದಲೇ ಖರೀದಿಸಿ ನೆಟ್ಟು ಆರೈಕೆ ಮಾಡಿದ ಅರಣ್ಯ ಸಸಿಗಳಿಗೆ ಪ್ರಥಮ ಮತ್ತು ಎರಡನೇ ವರ್ಷ ರೂಪಾಯಿ 30ರಂತೆಯೂ ಮತ್ತು ಮೂರನೆಯ ವರ್ಷ ರೂಪಾಯಿ 40ರಂತೆಯೂ ಸಹಾಯಧನ ಕೊಡುವ ಯೋಜನೆಯಿದೆ. ಆದರೆ ಈ ವರ್ಷ ಇದುವರೆಗೆ ಸಸಿಗಳನ್ನು ನೋಡಲು ಬರಲೇ ಇಲ್ಲ, ಹಾಗಿರುವಾಗ ಈ ಸಹಾಯಧನವನ್ನು ಸಂಬಂಧಪಟ್ಟ ಅಧಿಕಾರಿಗಳು ಹೇಗೆ ವ್ಯಯಿಸಿದ್ದಾರೆ? ಈ ಯೋಜನೆಯನ್ನು ಮೌನವಾಗಿ ಮುಗಿಸಲಾಯಿತೇ? ವಾರ್ಷಿಕ ರೂ. 6,000 ಮೂರು ಕಂತುಗಳಲ್ಲಿ ಕೊಡುವುದರಲ್ಲಿ ಇದೂ ಅಡಗಿಕೊಂಡಿದೆಯೇ? ಅಥವಾ ಹೊಸ ಯೋಜನೆಗಳನ್ನು ಪ್ರಚಾರಮಾಡುವಾಗ ಹಳೆಯವುಗಳನ್ನು ಆಯವ್ಯಯದಲ್ಲಿ ಸೇರಿಸಿದರೂ ವಿತರಿಸದೆ ವ್ಯಯಿಸಲಾಯಿತೇ? ಈ ಕುರಿತು ಸ್ಪಷ್ಟವಾದ ಮಾಹಿತಿಯನ್ನು ಸಂಬಂಧಪಟ್ಟವರು ಕೊಡಬಹುದೇ ಅಥವಾ ಎಲ್ಲವೂ ನುಂಗಪ್ಪನ ಖಾತೆಗೆ ಸೇರಿದೆಯೇ?

ಕೃಷಿ ಕಾರ್ಡ್ ಕೊಡುವ ಯೋಜನೆಯಿದೆಯೆಂದು ಕೃಷಿಕರನ್ನು ನೋಂದಾಯಿಸಿ, ನೋಂದಣಿ ಸಂಖ್ಯೆಯನ್ನು ಕೊಟ್ಟು ತಿಂಗಳುಗಳು ಕಳೆದಿದ್ದರೂ ಈಗ ಸುದ್ದಿಯಿಲ್ಲದೆ ಮರೆತುಹೋಗಿದೆ ನಮ್ಮ ಉಡುಪಿ ಜಿಲ್ಲೆಯಲ್ಲಿ. ನಮ್ಮ ಜಿಲ್ಲೆಯ ಕೃಷಿ ಉಪನಿರ್ದೇಶಕರು ನಿದ್ದೆಯಲ್ಲಿದ್ದಾರೆಂದು ತಿಳಿಯೋಣವೇ? ಜಿಲ್ಲಾ ಪಂಚಾಯತ್ ನಂತಹ ಮುಖ್ಯ ಅಧಿಕಾರಿಗಳಿಗೆ ವಿಚಾರ ತಿಳಿದಿಲ್ಲವೇ? ತ್ರೈಮಾಸಿಕ ಪ್ರಗತಿಪರಿಶೀಲನಾ ಸಭೆಯಲ್ಲಿ ಏನು ಪರಿಶೀಲನೆ ನಡೆಯುತ್ತಿದೆ? ರೈತರಿಗೆ ಕೊಡಮಾಡಿದ ಸಹಾಯಧನವನ್ನು ಬೇಸಾಯ ಸಾಗುವಳಿ ಮಾಡಿದ ಎಲ್ಲರಿಗೂ ವಿತರಿಸಬೇಕಾದುದು ಧರ್ಮ. ಇಲ್ಲವಾದರೆ ಕೃಷಿಗಾಗಿ ಆಗುವ ಖರ್ಚು ಎಲ್ಲರಿಗೂ ಸಮಾನ ಮತ್ತು ನಷ್ಟವೂ ಎಲ್ಲರಿಗೂ ಅದೇ ಪ್ರಮಾಣದಲ್ಲಿ ಇರುತ್ತದೆ. ಆದುದರಿಂದ ಯೋಜನೆಯು ಎಲ್ಲರಿಗೂ ಅನ್ವಯವಾಗುವಂತಿರಬೇಕು. ಇಲ್ಲವಾದರೆ ಅದು ಬರೀ ಪ್ರಚಾರಕ್ಕೆ ಮಾತ್ರವಾಗಿ ನಿಷ್ಪ್ರಯೋಜಕವಾಗುವುದೆಂದು ನನ್ನ ಅನಿಸಿಕೆ. ಸಂಬಂಧಪಟ್ಟವರು ಸ್ಪಂದಿಸುವಿರೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)