varthabharthi


ವೈವಿಧ್ಯ

ಹೆಣ್ಣಿನ ಮೇಲೆ ಏಕೀ ದೌರ್ಜನ್ಯ?

ವಾರ್ತಾ ಭಾರತಿ : 19 Jul, 2019
ದೀಪ್ತಿ, ಮಂಗಳೂರು

ಪ್ರೀತಿ, ವಾತ್ಸಲ್ಯ, ಮಮತೆ, ಸಹನೆ, ತ್ಯಾಗಕ್ಕೆ ಇನ್ನೊಂದು ಹೆಸರೇ ಹೆಣ್ಣು. ಈಕೆ ಮಮತಾಮಯಿಯೂ ಹೌದು. ಆದರೆ ಇತ್ತೀಚೆಗೆ ನಡೆಯುತ್ತಿರುವ ದೌರ್ಜನ್ಯದಿಂದ ಬೇಸತ್ತ ಹೆಣ್ಣಿನ ಆತ್ಮವಿಶ್ವಾಸ ಕುಂದುತ್ತಿದೆ.
ನಮ್ಮ ಭಾರತೀಯತೆ, ಸಂಸ್ಕೃತಿ, ಪರಂಪರೆ, ಇತಿಹಾಸ ಇವೆಲ್ಲವೂ ಸಾಟಿಯಿಲ್ಲದ್ದು ಎಂದು ಹೆಮ್ಮೆ ಪಡುವ ಪುರುಷ ಪ್ರಧಾನ ಸಮಾಜ ಹೆಣ್ಣಿಗೂ ಬದುಕಲು ಅವಕಾಶ ಕೊಡಬಾರದೇ? ಈ ಪುರುಷ ಪ್ರಧಾನ ಸಮಾಜ ರಾಕ್ಷಸ ವರ್ತನೆ ಪ್ರದರ್ಶಿಸಿದರೆ ಹೆಣ್ಣಿಗೆಲ್ಲಿದೆ ಉಳಿಗಾಲ?

ನಮ್ಮ ಸಂಸ್ಕೃತಿ ಸ್ತ್ರೀಯರನ್ನು ಗೌರವಾದರಗಳಿಂದ ಕಂಡಿದೆ ನಿಜ, ಆದರೆ ಈಗ? ಪ್ರಶ್ನೆ ಗಂಭೀರ ಹಾಗೂ ಉತ್ತರ ಗೊಂದಲಮಯ. ಸಮಾಜದೊಳಗೆ ಮಹಿಳೆ ಸಮಾನತೆಗಾಗಿ ಧ್ವನಿಯೆತ್ತುತ್ತಿದ್ದಾಳೆ. ಸಮಾನತೆ ಎಂದರೆ ತಾನು ವಂಚಿತಳಾಗುತ್ತಿರುವ ಸೌಲಭ್ಯಗಳಲ್ಲಿ ಸಮಾನತೆ, ಎದುರಾಗುತ್ತಿರುವ ತಾರತಮ್ಯ ನಿವಾರಣೆ. ಗಂಡಿಗೆ ಈ ಸಮಾಜದಲ್ಲಿ ಇರುವಷ್ಟೇ ಸ್ವಾತಂತ್ರ್ಯ ಸ್ತ್ರೀಸಮಾಜಕ್ಕೂ ಬೇಕೆಂದು ಮಹಿಳೆಯರು ಧ್ವನಿಯೆತ್ತುತ್ತಿದ್ದಾರೆ. ಇದು ಸ್ವಾಗತಾರ್ಹವೂ ಹೌದು. ವಿಪರ್ಯಾಸವೆಂದರೆ, ಗಂಡಿನ ಜೀವನಕ್ಕೆ ಆಧಾರ ಹೆಣ್ಣು. ಇಬ್ಬರೂ ಸೇರಿದರಷ್ಟೇ ಸಂಬಂಧಗಳಿಗೊಂದು ಅರ್ಥ. ಆದರೆ ದಾಂಪತ್ಯ ಜೀವನದಲ್ಲೇ ಗಂಡನಿಂದ ಶೋಷಣೆಗೊಳಗಾಗುತ್ತಿರುವ ಸ್ತ್ರೀ ಪುರುಷನನ್ನು ಸಹಿಸಿಕೊಂಡು ಹೋಗುತ್ತಾಳೆ. ಹೆಜ್ಜೆಹೆಜ್ಜೆಗೂ ನಡೆಯುವ ಶೋಷಣೆ ಆಕೆ ಕಾಣುವ ಕನಸುಗಳನ್ನೂ ಭಗ್ನಗೊಳಿಸುತ್ತಿದೆ. ‘‘ಯತ್ರ ನಾರ್ಯಸ್ತು ಪೂಜ್ಯಂತೇ ತತ್ರ ರಮಂತೇ ದೇವತಾಃ’’ ಎನ್ನುವ ನಾಡಿನಲ್ಲಿ ‘‘ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿತು’’ ಎಂದು ತಾತ್ಸಾರ ಪಡುವವರೇ ಹೆಚ್ಚು. ಅದರಲ್ಲೂ ಆಧುನಿಕತೆ, ವಿಜ್ಞಾನದಿಂದಾಗಿ ಭ್ರೂಣವನ್ನೇ ಪರೀಕ್ಷೆಗೊಡ್ಡಿ ಹೆಣ್ಣೆಂದು ತಿಳಿದು ಕೂಡಲೇ ಭೂಮಿಗೆ ಬರುವ ಮುನ್ನವೇ ಅದರ ಕೊಲೆಯಾಗುತ್ತದೆ. ಪುರುಷ ಪ್ರಧಾನ ಸಮಾಜ ಸೃಷ್ಟಿಸಿದ ವ್ಯವಸ್ಥೆಯೊಳಗೆ ಸ್ತ್ರೀ ‘‘ನೀನು ಹೆಣ್ಣು, ನೀನು ಅಶಕ್ತೆ, ನೀನು ಅಬಲೆ’’ ಎಂದು ಕರೆಯಿಸಿಕೊಂಡು ಬದುಕುತ್ತಿರುವುದು ಕಹಿಸತ್ಯ.
ಈಗಿನ ಸಮಾಜದಲ್ಲಿ ಹೆಣ್ಣಿಗೆ ಸ್ಥಾನವಿದೆಯೇ ಇಲ್ಲವೇ ಎಂಬುದೇ ಗೊಂದಲಮಯ. ಏಕೆಂದರೆ ತಾನು ಹೊರಗೆ ಹೋದರೆ ಯಾವ ರೀತಿ ಹಿಂದಿರುಗಬಹುದು ಅಥವಾ ಹಿಂದಿರುಗದೇ ಇರಬಹುದು ಎಂಬ ಚಿಂತೆಯಲ್ಲೇ ಸ್ತ್ರೀಯರು ಜೀವಿಸಬೇಕಾಗಿದೆ. ಇದಕ್ಕೆ ಕಾರಣ, ಅತ್ಯಾಚಾರ, ಮಾನಸಿಕ ಹಿಂಸೆ, ವರದಕ್ಷಿಣೆ ಸಾವುಗಳು ತಾಂಡವವಾಡುತ್ತಿರುವುದು. ರಸ್ತೆಯಲ್ಲಿ ಮೈಸೋಂಕಿಕೊಂಡು ಹೋಗುವ ಸಾಮಾನ್ಯ ಕಿರುಕುಳದಿಂದ ಹಿಡಿದು, ಮಾರಾಟಕ್ಕೆ ಬಲಿಯಾಗುವ ಹೆಣ್ಣುಮಕ್ಕಳು, ಗಂಡಿನ ಸಂತಾನಾಕ್ಷೆಯ ಹುಚ್ಚು, ಅತ್ಯಾಚಾರವೆಂಬ ಭೀಕರ ಶೋಷಣೆಗಳಿಂದಾಗಿ ದುರ್ಬಲವಾಗುತ್ತಿದ್ದಾರೆ.
‘‘ಕಾಮತುರಾಣಾನಾಂ ನ, ಭಯಂ ನ ಲಜ್ಜಾ’’, ಎಂಬಂತೆ ಅತ್ಯಂತ ವಿಕಾರ, ಕರಾಳ ರೂಪವೇ ಅತ್ಯಾಚಾರ. ಅಸಹಾಯಕ ಮಹಿಳೆಯ ಮೇಲೆ ಪುರುಷ ಮೃಗ ಎಸಗುವ ಪಾಶವೀ ಕೃತ್ಯವಿದು. ಚಿಕ್ಕಮಗುವನ್ನೂ ಬಿಡದೇ ಅತ್ಯಾಚಾರದಂತಹ ಅಮಾನುಷ ಕೃತ್ಯವೆಸಗುವ ವಿಕೃತರಿಗೆ ಮರಣದಂಡನೆಯೇ ಸರಿಯಾದ ಶಿಕ್ಷೆ. ನಾಗರಿಕತೆಯ ಉಚ್ಛ್ರಾಯ ಸ್ಥಿತಿಯಲ್ಲಿರುವ ಪ್ರಸ್ತುತ ಸಮಾಜದಲ್ಲಿ ಹೆಚ್ಚುತ್ತಿರುವ ಈ ದುರಾಕ್ರಮಣ ನಿಜಕ್ಕೂ ವಿಪರ್ಯಾಸ. ಇಂತಹ ನೀಚರ ಸಂಸ್ಕೃತಿ ನಶಿಸಿದಾಗ ಮಾತ್ರ ಮಾನವೀಯ ಸಂಬಂಧಗಳು ಅರ್ಥಪೂರ್ಣವಾಗಬಹುದೇನೋ.
ಇನ್ನಾದರೂ ಮಹಿಳೆ ಎಚ್ಚೆತ್ತುಕೊಳ್ಳಬೇಕು. ಸಮಾಜಕ್ಕೆ ಹೆಣ್ಣು ಏನೆಂಬುದನ್ನು ಅರ್ಥಮಾಡಿಸಬೇಕು. ಪುರುಷ ಪ್ರಧಾನ ಸಮಾಜಕ್ಕೆ ಹೊಂದಿಕೊಳ್ಳುವುದು ಸಾಕು, ಇನ್ನಾದರೂ ಪಾಪಿಗಳಿಂದ ತನ್ನನ್ನು ರಕ್ಷಿಸಿಕೊಳ್ಳುವಂತಾಗಬೇಕು. ಯಾರ ಹಂಗಿಲ್ಲದೆ ಯಾರ ಮರುಳು ಮಾತಿಗೂ ಸೋಲದೆ ಮಹಿಳೆ ಮುಂದುವರಿಯಬೇಕು.
ಜೀವನ ಸವಾಲುಗಳ ಭಂಡಾರ. ದೃಢ ಸಂಕಲ್ಪ, ಸಾಹಸ, ಕಠಿಣ ಪರಿಶ್ರಮಗಳಿಂದ ಸವಾಲುಗಳನ್ನು ಎದುರಿಸಿದಾಗ ಬದುಕಿನ ಹೊಸ ಅಧ್ಯಾಯ ಆರಂಭವಾಗುತ್ತದೆ ಎಂಬುದನ್ನು ಮಹಿಳೆ ಮನಗಾಣಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)