varthabharthi

ಕರಾವಳಿ

ಮಂಗಳೂರು: ಡೆಂಗ್‌ಗೆ ಶಾಲಾ ಬಾಲಕಿ ಬಲಿ

ವಾರ್ತಾ ಭಾರತಿ : 19 Jul, 2019

ಮಂಗಳೂರು, ಜು.19: ದ.ಕ. ಜಿಲ್ಲೆಯಲ್ಲಿ ಮಲೇರಿಯಾ, ಡೆಂಗ್ ಸಾಂಕ್ರಾಮಿಕ ರೋಗಗಳ ಹಾವಳಿ ತೀವ್ರಗೊಂಡಿದ್ದು, ಮಂಗಳೂರಿನಲ್ಲಿ ನಿನ್ನೆ 12ರ ಹರೆಯದ ಶಾಲಾ ಬಾಲಕಿಯು ಕೊನೆಯುಸಿರೆಳೆಯುವುದರೊಂದಿಗೆ 2ನೆ ಅಧಿಕೃತ ಬಲಿ ವರದಿಯಾಗಿದೆ.

ಜಪ್ಪು ಮಾರುಕಟ್ಟೆ ಸಮೀಪದ ಗುಜ್ಜರಕೆರೆ ಬಳಿಯ ಕಿಶೋರ್ ಶೆಟ್ಟಿ ಹಾಗೂ ಶಾರದಾ ಶೆಟ್ಟಿ ದಂಪತಿಯ ಪುತ್ರಿ ಶ್ರದ್ಧಾ ಕೆ. ಶೆಟ್ಟಿ ಡೆಂಗ್‌ಗೆ ನಿನ್ನೆ ಬಲಿಯಾಗಿದ್ದಾರೆ.

ನಗರದ ಜೆರೊಸಾ ಪ್ರಾಥಮಿಕ ಶಾಲೆಯ 7ನೆ ತರಗತಿಯ ವಿದ್ಯಾರ್ಥಿನಿ. ಮೃತ ಬಾಲಕಿಯ ಅಕ್ಕ ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದು, ಇಬ್ಬರಿಗೂ ಎರಡು ವಾರದ ಹಿಂದೆ ಜ್ವರ ಬಂದಿತ್ತು. ಕಳೆದ ಶುಕ್ರವಾರ ಇಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಕ್ಕ ಕಳೆದ ಮಂಗಳವಾರ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೆ, ತಂಗಿ ಶ್ರದ್ಧಾ ಮಂಗಳವಾರ ರಾತ್ರಿ ಕೋಮಾ ಹಂತಕ್ಕೆ ತಲುಪಿದ್ದರು. ಆಕೆಯನ್ನು ನಗರದ ಇನ್ನೊಂದು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಗುರುವಾರ ಸಂಜೆ 6.30ಕ್ಕೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

ವಿದ್ಯಾರ್ಥಿನಿ ಶ್ರದ್ಧಾ ಮೃತಪಟ್ಟ ಸಂಬಂಧ ಇಂದು ಆಕೆ ಕಲಿಯುತ್ತಿದ್ದ ಶಾಲೆಯಲ್ಲಿ ರಜೆ ಘೋಷಿಸುವ ಮೂಲಕ ಸಂತಾಪ ಸೂಚಿಸಲಾಗಿದ್ದು, ಇಂದು ನಡೆಯಬೇಕಾಗಿದ್ದ ಪರೀಕ್ಷೆಯನ್ನು ನಾಳೆಗೆ ಮುಂದೂಡಲಾಗಿದೆ.

ಮೃತ ವಿದ್ಯಾರ್ಥಿನಿಯ ಮನೆಗೆ ಇಂದು ಜಿಲ್ಲಾಧಿಕಾರಿ ಶಸಿಕಾಂತ್ ಸೆಂಥಿಲ್, ಮನಪಾ ಆಯುಕ್ತ ಮುಹಮ್ಮದ್ ನಝೀರ್ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಮಾತ್ರವಲ್ಲದೆ, ಆ ಪ್ರದೇಶದಲ್ಲಿ ಸೊಳ್ಳೆಗಳ ಹಾವಳಿ ಕುರಿತಂತೆ ಪರಿಶೀಲನೆ ನಡೆಸಿ, ಕಟ್ಟುನಿಟ್ಟಿನ ಕ್ರಮಕ್ಕೆ ಜಿಲ್ಲಾಧಿಕಾರಿ ಆದೇಶಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)