varthabharthi

ರಾಷ್ಟ್ರೀಯ

ಬಾಬರಿ ಮಸೀದಿ ಧ್ವಂಸ ಪ್ರಕರಣ

9 ತಿಂಗಳಲ್ಲಿ ತೀರ್ಪು ನೀಡಿ: ಸಿಬಿಐ ನ್ಯಾಯಾಧೀಶರಿಗೆ ಸುಪ್ರೀಂ ಕೋರ್ಟ್ ನಿರ್ದೇಶ

ವಾರ್ತಾ ಭಾರತಿ : 19 Jul, 2019

ಹೊಸದಿಲ್ಲಿ, ಜು. 19: ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಷಿ ಹಾಗೂ ಇತರರು ಆರೋಪಿಗಳಾಗಿರುವ ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪನ್ನು 9 ತಿಂಗಳ ಒಳಗೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಸಿಬಿಐ ನ್ಯಾಯಾಲಯಕ್ಕೆ ಸೂಚಿಸಿದೆ.

ಈ ಪ್ರಕರಣದ ಸಾಕ್ಷಿಗಳ ಹೇಳಿಕೆ ದಾಖಲಿಸುವುದನ್ನು 6 ತಿಂಗಳ ಒಳಗೆ ಪೂರ್ಣಗೊಳಿಸಬೇಕು ಎಂದು ನ್ಯಾಯಮೂರ್ತಿಗಳಾದ ಆರ್.ಎಫ್. ನಾರಿಮನ್ ಹಾಗೂ ಸೂರ್ಯಕಾಂತ್ ಅವರನ್ನು ಒಳಗೊಂಡ ಪೀಠ ಹೇಳಿದೆ. ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್ ಅವರು ಸೆಪ್ಟಂಬರ್ 30ರಂದು ನಿವೃತ್ತರಾಗುವುದರಿಂದ ಅವರ ಅಧಿಕಾರವಧಿ ವಿಸ್ತರಿಸಲು ಸೂಕ್ತ ಆಡಳಿತಾತ್ಮಕ ಆದೇಶ ಮುಂಜೂರು ಮಾಡುವಂತೆ ಉತ್ತರಪ್ರದೇಶ ಸರಕಾರಕ್ಕೆ ಸರ್ವೋಚ್ಚ ನ್ಯಾಯಾಲಯ ನಿರ್ದೇಶಿಸಿದೆ.

ಸೆಪ್ಟಂಬರ್ 30ರಂದು ತಾನು ನಿವೃತ್ತನಾಗುವುದರಿಂದ ಪ್ರಕರಣದ ವಿಚಾರಣೆ ಪೂರ್ಣಗೊಳಿಸಲು ಅಧಿಕಾರವಧಿಯನ್ನು 6 ತಿಂಗಳು ವಿಸ್ತರಿಸುವಂತೆ ಯಾದವ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ಮನವಿ ಸಲ್ಲಿಸಿದ್ದರು. ತೀರ್ಪು ನೀಡುವ ಉದ್ದೇಶಕ್ಕಾಗಿ ಮಾತ್ರ ನ್ಯಾಯಾಧೀಶರ ಅಧಿಕಾರವಧಿ ವಿಸ್ತರಿಸಲಾಗಿದೆ. ವಿಸ್ತರಿತ ಅಧಿಕಾರಾವಧಿಯಲ್ಲಿ ಯಾದವ್ ಅವರು ಅಲಹಾಬಾದ್ ಉಚ್ಚ ನ್ಯಾಯಾಲಯದ ಆಡಳಿತಾತ್ಮಕ ನಿಯಂತ್ರಣಕ್ಕೆ ಒಳಪಟ್ಟಿರುತ್ತಾರೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

2017 ಎಪ್ರಿಲ್ 19ರಂದು ಸರ್ವೋಚ್ಚ ನ್ಯಾಯಾಲಯ ಈ ಪ್ರಕರಣದ ದಿನನಿತ್ಯ ವಿಚಾರಣೆಗೆ ಆದೇಶಿಸಿತ್ತು. ಅಲ್ಲದೆ, ಈ ಪ್ರಕರಣದ ವಿಚಾರಣೆ 2 ವರ್ಷಗಳಲ್ಲಿ ಪೂರ್ಣಗೊಳ್ಳಬೇಕು ಎಂದು ಹೇಳಿತ್ತು. ಸರ್ವೋಚ್ಚ ನ್ಯಾಯಾಲಯ ಅಡ್ವಾಣಿ, ಜೋಷಿ ಅವರೊಂದಿಗೆ ವಿನಯ್ ಕಟಿಯಾರ್, ಸಾಧ್ವಿ ಋತುಂಬರಾ, ವಿಷ್ಣು ಹರಿ ದಾಲ್ಮಿಯಾ ವಿರುದ್ಧ ಕ್ರಿಮಿನಲ್ ಪಿತೂರಿಯನ್ನು ಮರು ಸ್ಥಾಪಿಸಿತ್ತು. ಈ ಪ್ರಕರಣದಲ್ಲಿ ಖುಲಾಸೆಯಾಗಿರುವ ಸಂಘಪರಿವಾರದ ಇತರ ಹಲವು ನಾಯಕರ ವಿರುದ್ಧ ಆರೋಪವನ್ನು ಮರು ಸ್ಥಾಪಿಸಿತ್ತು.

ವಿಚಾರಣೆ ವೇಳೆ ಗಿರಿರಾಜ್ ಕಿಶೋರ್, ವಿಶ್ವಹಿಂದೂ ಪರಿಷತ್ ನಾಯಕ ಅಶೋಕ್ ಸಿಂಘಾಲ್, ವಿಷ್ಣು ಹರಿ ದಾಲ್ಮಿಯಾ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧದ ವಿಚಾರಣೆಯನ್ನು ಅಂತ್ಯಗೊಳಿಸಲಾಗಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)