varthabharthi

ಆರೋಗ್ಯ

ಮಧುಮೇಹ ಮತ್ತು ಪಾರ್ಶ್ವವಾಯು ಅಪಾಯ ತಗ್ಗಿಸಲು ಐದು ಸುಲಭದ ಟಿಪ್ಸ್ ಇಲ್ಲಿವೆ

ವಾರ್ತಾ ಭಾರತಿ : 19 Jul, 2019

ಮಧುಮೇಹ ಮತ್ತು ಪಾರ್ಶ್ವವಾಯು ಅಪಾಯ ತಗ್ಗಿಸಲು ಐದು ಸುಲಭದ ಟಿಪ್ಸ್ ಇಲ್ಲಿವೆ

ಪ್ರಿಡಯಾಬಿಟಿಸ್ ಅಥವಾ ಪೂರ್ವ ಮಧುಮೇಹವನ್ನು ಮಧುಮೇಹಕ್ಕೆ ಮೊದಲಿನ ಹಂತವೆಂದು ಹೇಳಬಹುದು. ಅಂದರೆ ವ್ಯಕ್ತಿಯ ರಕ್ತದಲ್ಲಿ ಸಕ್ಕರೆಯ ಮಟ್ಟ ಸಹಜಕ್ಕಿಂತ ಹೆಚ್ಚಾಗಿರುತ್ತದೆ,ಆದರೆ ಮಧುಮೇಹ ರೋಗಿಯಷ್ಟು ಇರುವುದಿಲ್ಲ. ಸಾಮಾನ್ಯವಾಗಿ ಪ್ರಿಡಯಾಬಿಟಿಸ್ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ ಮತ್ತು ಸದ್ದಿಲ್ಲದೆ ನಮ್ಮ ಶರೀರದ ಮೇಲೆ ದಾಳಿ ಮಾಡುತ್ತದೆ. ಹೆಚ್ಚಿನ ಜನರಿಗೆ ತಮಗೆ ಪ್ರಿಡಯಾಬಿಟಿಸ್ ಇದೆ ಎನ್ನುವುದೇ ಗೊತ್ತಿರುವುದಿಲ್ಲ. ಸರಳ ರಕ್ತಪರೀಕ್ಷೆಯಿಂದ ಇದನ್ನು ಪತ್ತೆ ಹಚ್ಚಬಹುದಾಗಿದೆ.

ನೀವು ಅಗತ್ಯಕ್ಕಿಂತ ಹೆಚ್ಚಿನ ದೇಹತೂಕವನ್ನು ಹೊಂದಿದ್ದರೆ ಅಥವಾ ನಿಮ್ಮ ವಯಸ್ಸು 45 ವರ್ಷಗಳನ್ನು ದಾಟಿದ್ದರೆ ಮತ್ತು ನೀವು ವ್ಯಾಯಾಮವನ್ನೂ ಮಾಡುತ್ತಿಲ್ಲವಾದರೆ ನೀವು ಪ್ರಿಡಯಾಬಿಟಿಸ್‌ಗೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿದ್ದೀರಿ ಎಂದೇ ಅರ್ಥ. ಪ್ರಿಡಯಾಬಿಟಿಸ್‌ಗೆ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಟೈಪ್ 2 ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಗುರಿಯಾಗುವ ಅಪಾಯವಿದೆ. ಆದರೆ ಕೆಲವು ಸರಳ ಕ್ರಮಗಳಿಂದ ಈ ಸ್ಥಿತಿಯಿಂದ ಪಾರಾಗಬಹುದಾಗಿದೆ.

►ದೇಹತೂಕವನ್ನು ತಗ್ಗಿಸಿ

ದೇಹದ ತೂಕವನ್ನು ಇಳಿಸಿಕೊಳ್ಳುವುದು ಕಷ್ಟದ ಕೆಲಸ ಎಂದು ನೀವು ಭಾವಿಸಬಹುದು,ಆದರೆ ಅದು ನಿಜಕ್ಕೂ ಅಂತಹ ಕಷ್ಟವೇನಲ್ಲ. ನಿಮ್ಮ ಶರೀರದ ತೂಕವನ್ನು ಕೇವಲ ಶೇ.7ರಷ್ಟು ತಗ್ಗಿಸಿಕೊಂಡರೂ ಅದು ಭಾರೀ ಬದಲಾವಣೆಗೆ ಕಾರಣವಾಗಬಲ್ಲದು. ಆದರೂ,ಪ್ರತಿದಿನ ಆರೋಗ್ಯಕರವಾದ,ಕಡಿಮೆ ಕ್ಯಾಲರಿಗಳಿರುವ ಆಹಾರ ಸೇವನೆಯು ಮುಖ್ಯವಾಗಿದೆ. ಬಹುಶಃ ತೂಕ,ಆಹಾರ ಕ್ರಮ ಮತ್ತು ದೈಹಿಕ ಚಟುವಟಿಕೆಗಳತ್ತ ಗಮನ ನೀಡಲು ಇದು ಸಕಾಲವಾಗುತ್ತದೆ.

►ನಿಮ್ಮ ಊಟ ಆರೋಗ್ಯಕರವಾಗಿರಲಿ

ನಿಮ್ಮ ಊಟದ ಅರ್ಧಭಾಗವು ಪಿಷ್ಟರಹಿತ ತರಕಾರಿಗಳಿಂದ ತುಂಬಿದ್ದರೆ ಅದು ಆರೋಗ್ಯಕರ ಆಹಾರ ಸೇವನೆಯ ಉತ್ತಮ ಆರಂಭವಾಗುತ್ತದೆ. ಹಾಗೆಯೇ ಊಟದ ಕಾಲುಭಾಗವು ಪಿಷ್ಟವಿರುವ ಆಹಾರದಿಂದ ಕೂಡಿರಲಿ. ಇದರ ಜೊತೆಗೆ ಉಳಿದ ಕಾಲುಭಾಗದಲ್ಲಿ ಕೋಳಿಮಾಂಸ,ಮೀನು,ಬೀನ್ಸ್ ಇತ್ಯಾದಿಗಳನ್ನು ಸೇರಿಸಿಕೊಳ್ಳಬಹುದು. ಕರಿದ ಖಾದ್ಯಗಳು ಅಥವಾ ಪಾಸ್ತಾಗಳಂತಹ ಕಾರ್ಬೊಹೈಡ್ರೇಟ್ ಹೆಚ್ಚಿರುವ ಆಹಾರಗಳಿಂದ ದೂರವಿರಿ,ಏಕೆಂದರೆ ಇವು ರಕ್ತದಲ್ಲಿಯ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತವೆ.

►ವ್ಯಾಯಾಮ ನಿಮ್ಮ ದಿನಚರಿಯಾಗಲಿ

ಪ್ರತಿದಿನ ವ್ಯಾಯಾಮವನ್ನು ಮಾಡುವ ಮೂಲಕ ಕೆಲವು ಕ್ಯಾಲರಿಗಳನ್ನು ದಹಿಸುವುದರಿಂದ ತ್ವರಿತವಾಗಿ ತೂಕವನ್ನು ಇಳಿಸಿಕೊಳ್ಳಲು ನೆರವಾಗುತ್ತದೆ ಮತ್ತು ನಿಮ್ಮನ್ನು ಉಲ್ಲಸಿತಗೊಳಿಸುತ್ತದೆ. ನೀವೇನೂ ಮ್ಯಾರಥಾನ್ ಓಟಕ್ಕೆ ಸಿದ್ಧರಾಗಬೇಕಿಲ್ಲವಾದ್ದರಿಂದ ತಲೆ ಬಿಸಿ ಬೇಡ. ವಾರಕ್ಕೆ ಐದು ದಿನಗಳ ಕಾಲ,ಪ್ರತಿದಿನ 30 ನಿಮಿಷಗಳ ಬಿರುಸಿನ ನಡಿಗೆಯಿಂದ ನೀವು ದೇಹತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.ನೀವು ಜಿಮ್‌ಗೂ ಸೇರಿಕೊಂಡು ಬೆವರು ಹರಿಸಬಹುದು.

►ಚೆನ್ನಾಗಿ ನಿದ್ರೆ ಮಾಡಿ

ನಿಮ್ಮ ನಿದ್ರೆಯ ಅವಧಿಯು ನಿಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟದೊಂದಿಗೆ ನಂಟು ಹೊಂದಿದೆ. ನಿಮಗೆ ನಿದ್ರೆ ಬರುವುದು ಕಷ್ಟವಾಗಿದ್ದರೆ,ಬೆಳಿಗ್ಗೆ ಬೇಗನೇ ಎಚ್ಚರವಾಗುತ್ತಿದ್ದರೆ ಮತ್ತು ಐದು ಗಂಟೆಗೂ ಕಡಿಮೆ ನಿದ್ರೆ ಮಾಡುತ್ತಿದ್ದರೆ ನೀವು ಮಧುಮೇಹಕ್ಕೆ ತುತ್ತಾಗುವ ಹೆಚ್ಚಿನ ಸಾಧ್ಯತೆಯಿರುತ್ತದೆ. ರಾತ್ರಿ ಕಡ್ಡಾಯವಾಗಿ 7ರಿಂದ 8 ಗಂಟೆಗಳ ನಿದ್ರೆ ಉತ್ತಮ. ಅಂದ ಹಾಗೆ ರಾತ್ರಿ ಮಲಗುವ ಮುನ್ನ ಕಾಫಿ ಅಥವಾ ಮದ್ಯಸೇವನೆಯಿಂದ ದೂರವಿರುವುದು ಒಳ್ಳೆಯದು. ಉತ್ತಮ ನಿದ್ರೆಗಾಗಿ ವೇಳಾಪಟ್ಟಿಯೊಂದನ್ನು ನಿಗದಿ ಮಾಡಿಕೊಳ್ಳಿ ಮತ್ತು ಪ್ರತಿದಿನ ನಿಗದಿತ ಸಮಯಕ್ಕೆ ಹಾಸಿಗೆಗೆ ಶರಣಾಗಿ. ಇದರ ಜೊತೆಗೆ ನಿಮ್ಮ ಮಲಗುವ ಕೋಣೆಯಲ್ಲಿ ಶಾಂತಿಯುತ ವಾತಾವರಣವಿರುವಂತೆ ನೋಡಿಕೊಳ್ಳಿ.

►ಧೂಮ್ರಪಾನ ಮತ್ತು ಮದ್ಯಪಾನವನ್ನು ವರ್ಜಿಸಿ

ನೀವು ಧೂಮ್ರಪಾನ ಅಥವಾ ಮದ್ಯಪಾನದ ಚಟವನ್ನು ಹೊಂದಿದ್ದರೆ ಅದನ್ನು ವರ್ಜಿಸಲು ಇದು ಸಕಾಲವಾಗಿದೆ. ಧೂಮ್ರಪಾನಿಗಳು ಸಾಮಾನ್ಯವಾಗಿ ಟೈಪ್ 2 ಮಧುಮೇಹಕ್ಕೆ ಗುರಿಯಾಗುವ ಅಪಾಯವನ್ನು ಎದುರಿಸುತ್ತಿರುತ್ತಾರೆ ಮತ್ತು ಧೂಮ್ರಪಾನಿಗಳಲ್ಲದವರಿಗೆ ಹೋಲಿಸಿದರೆ ಈ ಅಪಾಯ ಶೇ.30ರಿಂದ ಶೇ.40ರಷ್ಟು ಹೆಚ್ಚಾಗಿರುತ್ತದೆ. ನೀವು ಮಧುಮೇಹಿಯಾಗಿದ್ದೂ ಧೂಮ್ರಪಾನ ಅಥವಾ ಮದ್ಯಪಾನವನ್ನು ಮಾಡುತ್ತಿದ್ದರೆ ಅದು ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ ಮತ್ತು ರಕ್ತದಲ್ಲಿಯ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿರುವುದಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)