varthabharthi


ನಿಮ್ಮ ಅಂಕಣ

ಈ ಬ್ಯಾಂಕ್‌ನ ಕರ್ನಾಟಕದ ಶಾಖೆಗಳು ಮಾತ್ರ ಏಕೆ ಮುಚ್ಚುತ್ತಿವೆ?

ವಾರ್ತಾ ಭಾರತಿ : 19 Jul, 2019

 ಮಾನ್ಯರೇ,

ಗುಜರಾತಿಗಳ ಬರೋಡಾ ಬ್ಯಾಂಕನ್ನು ಬಚಾವ್ ಮಾಡಲು ಕನ್ನಡಿಗರ ವಿಜಯ ಬ್ಯಾಂಕನ್ನು ಆಹುತಿ ಕೊಡಲಾಯಿತು. ಆದರೆ ಆಗ ಕನ್ನಡಿಗರು ಮೂಕ ಪ್ರೇಕ್ಷಕರಾಗಿದ್ದರು. ಈಗ ಮುಂಬೈ ಮೂಲದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಕರ್ನಾಟಕದಲ್ಲಿರುವ ಅರ್ಧಕ್ಕರ್ಧ ಶಾಖೆಗಳನ್ನು ಬಂದ್ ಮಾಡಿ ಕನ್ನಡಿಗ ಗ್ರಾಹಕರಿಗೆ ಹಾಗೂ ಕನ್ನಡಿಗ ಬ್ಯಾಂಕ್ ಸಿಬ್ಬಂದಿಗೆ ಅನ್ಯಾಯ ಮಾಡಲಾಗುತ್ತಿದೆ. ಇದೇ ಜುಲೈ 31ಕ್ಕೆ ಕರ್ನಾಟಕದಲ್ಲಿ ಇರುವ ಸೆಂಟ್ರಲ್ ಬ್ಯಾಂಕಿನ 120 ಶಾಖೆಗಳಲ್ಲಿ 67 ಶಾಖೆಗಳನ್ನು ಬಂದ್ ಮಾಡಿ ಹೆಸರಿಗೆ ಮಾತ್ರ ಅವುಗಳಲ್ಲಿ ಇರುವ ಗ್ರಾಹಕರ ಖಾತೆಗಳನ್ನು ಬೇರೊಂದು ದೂರದ ಶಾಖೆಗೆ ವರ್ಗಾವಣೆ ಮಾಡುವ ಪ್ರಹಸನ ನಡೆಯುತ್ತಿದೆ. ಹತ್ತಿರ ಹತ್ತಿರವಿರುವ ಶಾಖೆಗಳನ್ನು ವಿಲೀನಗೊಳಿಸಿದರೆ ಅದರಲ್ಲಿ ತಪ್ಪೇನೂ ಇಲ್ಲ. ಆದರೆ ಹತ್ತು ಕಿ.ಮೀ. ದೂರವಿರುವ ಶಾಖೆಗಳನ್ನು ವಿಲೀನಗೊಳಿಸುವುದು ನಿಜಕ್ಕೂ ಅವೈಜ್ಞಾನಿಕ ಹೆಜ್ಜೆ. ವೃದ್ಧ ಗ್ರಾಹಕರು ತಮ್ಮ ವೃದ್ಧಾಪ್ಯ ಪಿಂಚಣಿ ಪಡೆಯಲು ಅಥವಾ ಸಣ್ಣ ಮುದ್ರಾ ಲೋನ್‌ನ ಕಂತು ಕಟ್ಟಲು ಹತ್ತು ಕಿ.ಮೀ. ದೂರದ ಇನ್ನೊಂದು ಶಾಖೆಗೆ ಎರಡೆರಡು ಬಸ್ ಬದಲಿಸಿ ಅಥವಾ ಆಟೋಗೆ 150 ರೂಪಾಯಿ ತೆತ್ತು ಪ್ರತಿ ತಿಂಗಳು ಹೋಗಲು ಸಾಧ್ಯವೇ? ಮಂಗಳೂರು ನಗರದ ಹೊರ ವಲಯದಲ್ಲಿರುವ 40 ವರ್ಷ ಹಳೆಯ ಕೂಳೂರು ಶಾಖೆಯಲ್ಲಿ ಇರುವುದು ಹೆಚ್ಚಾಗಿ, ಸಣ್ಣ ರೈತರ, ಪುಟ್ಟ ವ್ಯಾಪಾರಿಗಳ, ಬಡ ಕಾರ್ಮಿಕರ ಮತ್ತು ಹಿರಿಯ ನಾಗರಿಕರ ಖಾತೆಗಳು. ಇವರು ಇನ್ನು ಮುಂದೆ ಆಗಾಗ ದೂರದ ಶಾಖೆಗೆ ಹೋಗಬೇಕಾಗುತ್ತದೆ. ಬಡವರಿಗೂ ಮನೆ ಬಾಗಿಲಿಗೇ ಬ್ಯಾಂಕಿಂಗ್ ಸೇವೆ ವಿಸ್ತರಣೆ ಎಂದು ಹೇಳುವ ಸರಕಾರವು ತಾನು ಹೇಳಿದ್ದರ ಉಲ್ಟಾ ಮಾಡುತ್ತಿದೆ. ಮುಖ್ಯವಾಗಿ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳ ಸೌಲಭ್ಯಕ್ಕಾಗಿ ನಲವತ್ತು ವರ್ಷಗಳಿಂದ ಇದ್ದ ಶಾಖೆಯನ್ನೂ ಬಂದ್ ಮಾಡಿ ಅಲ್ಲಿದ್ದ ಖಾತೆಗಳನ್ನೆಲ್ಲ ದೂರದ ಮುಖ್ಯ ಶಾಖೆಗೆ ವರ್ಗಾಯಿಸಿ ಕಾಲೇಜಿನ 600 ಶಿಕ್ಷಕವರ್ಗ ಮತ್ತು ಆಡಳಿತ ಸಿಬ್ಬಂದಿ ಹಾಗೂ ನಾಲ್ಕು ಸಾವಿರ ವಿದ್ಯಾರ್ಥಿಗಳು ದೂರದ ಮುಖ್ಯ ಶಾಖೆಗೆ ಹೋಗುವಂತೆ ಮಾಡಲಾಗುತ್ತಿದೆ. ಲಾಭದಲ್ಲಿರುವ ಶಾಖೆಗಳನ್ನೂ ಬಂದ್ ಮಾಡುತ್ತಿರುವುದು ಆಶ್ಚರ್ಯ. ರಿಸರ್ವ್ ಬ್ಯಾಂಕ್ ಇದಕ್ಕೆ ಹೇಗೆ ಒಪ್ಪಿಗೆ ನೀಡಿತು? ಈ ಸೆಂಟ್ರಲ್ ಬ್ಯಾಂಕ್ ಉಳಿದ ದಕ್ಷಿಣ ಭಾರತದ ರಾಜ್ಯಗಳಲ್ಲಿ ತನ್ನ ಶಾಖೆಗಳನ್ನು ಬಂದ್ ಮಾಡದೇ ಕೇವಲ ಕರ್ನಾಟಕದಲ್ಲಿ ಮಾತ್ರ ಇಷ್ಟೊಂದು ಶಾಖೆಗಳನ್ನು ಬಂದ್ ಮಾಡುವ ಕಾರಣ ಏನು? ಬ್ಯಾಂಕ್ ನೌಕರರ ಯೂನಿಯನ್‌ಗಳು ಈಗ ಸತ್ವ ಕಳೆದುಕೊಂಡು ಅಪ್ರಸ್ತುತವಾಗಿವೆ. ದೂರದ ದಿಲ್ಲಿ, ಮುಂಬೈಯಲ್ಲಿ ಕುಳಿತಿರುವ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಸಾಮಾನ್ಯ ಜನರ ಅಗತ್ಯಗಳನ್ನು ಗಮನಿಸದೆ ಕೇವಲ ದೊಡ್ಡ ದೊಡ್ಡ ಉದ್ಯಮಿಗಳನ್ನು ಮಾತ್ರ ಗಮನದಲ್ಲಿ ಇಟ್ಟುಕೊಂಡು ಬಡ ವರ್ಗದ ಗ್ರಾಹಕ ವಿರೋಧಿ ಹೆಜ್ಜೆಗಳನ್ನು ಇಡುತ್ತಿರುವುದು ನೋಡಿದರೆ ದೇಶ ಆಳುತ್ತಿರುವವರಿಗೆ ಜನಸಾಮಾನ್ಯರ ಅಗತ್ಯಗಳು ಹಾಗೂ ದೇಶದ ಆರ್ಥಿಕ ಸಮಸ್ಯೆಗಳ ನೈಜ ಜ್ಞಾನ ಇಲ್ಲವೆಂಬುದಕ್ಕೆ ಸಾಕ್ಷಿ. ಹಾಗಾದರೆ ಅತಿ ಪ್ರಚಾರದ ಜನಧನ್ ಉಳಿತಾಯ ಖಾತೆ ಮತ್ತು ವಿಮಾ ಯೋಜನೆ ಹಾಗೂ ಮುದ್ರಾ ಸಾಲ ಯೋಜನೆಗಳು ಕೇವಲ ವೋಟು ಪಡೆಯುವ ತಂತ್ರಗಾರಿಕೆ ಮಾತ್ರ ಆಗಿದ್ದವೇ? ರಿಸರ್ವ್ ಬ್ಯಾಂಕ್, ಸ್ಥಳೀಯ ಸಂಸದರು ಮತ್ತು ಕೇಂದ್ರ ವಿತ್ತ ಸಚಿವರು ಇದಕ್ಕೆ ಉತ್ತರಿಸಬೇಕು.

-ರಾಮಕೃಷ್ಣ ಕುಂದರ್, ಕೂಳೂರು, ಮಂಗಳೂರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)