varthabharthi


ವೈವಿಧ್ಯ

ಶಾಲೆಗಳಲ್ಲಿ ಸಿಸಿಟಿವಿ: ಅಗತ್ಯವೇ?

ವಾರ್ತಾ ಭಾರತಿ : 20 Jul, 2019
ಡಾ. ಜಗನ್ನಾಥ ಕೆ. ಡಾಂಗೆ, ಸಿದ್ದರಾಜು

ವಿದ್ಯಾರ್ಥಿಗಳಲ್ಲಿರುವ ಬುದ್ಧ್ದಿವಂತಿಕೆ, ಕೌಶಲ, ಸಾಮರ್ಥ್ಯ, ಅಭಿರುಚಿ, ಆಕಾಂಕ್ಷೆಗಳನ್ನು ಗುರುತಿಸಿ, ಪೋಷಿಸುವ ಬದಲು ತರಗತಿಯಲ್ಲಿ ಸಿಸಿಟಿವಿ ಅಳವಡಿಸುವುದರಿಂದ ವಿದ್ಯಾರ್ಥಿಗಳ ಪ್ರತಿಭೆಯನ್ನು ಮೊಗ್ಗಿನಲ್ಲೇ ಚಿವುಟಿ ಹಾಕಿದಂತಾಗುತ್ತದೆ.

ಶಿಕ್ಷಣ ಸ್ವಾತಂತ್ರವನ್ನು ಕಲಿಸುವ ಮಾರ್ಗ; ಸ್ವಾತಂತ್ರ, ಸಮಾನತೆ ಮತ್ತು ಭ್ರಾತೃತ್ವ ನಮ್ಮ ಸಂವಿಧಾನದ ಮೂಲಭೂತ ಆಶಯ. ಶಾಲೆಗಳಲ್ಲಿ ಮಕ್ಕಳಿಗೆ ಸ್ವಾತಂತ್ರವನ್ನು ನೀಡಿ ಅದೇ ಸ್ವಾತಂತ್ರವನ್ನು ಜೀವನುದ್ದಕ್ಕೂ ಆದರ್ಶ ನಾಗರಿಕರಾಗಿ ಬಳಸಿಕೊಳ್ಳುವ ಕೌಶಲವನ್ನು ಅಭಿವೃದ್ಧ್ದಿಪಡಿಸುವುದೇ ನಿಜವಾದ ಶಿಕ್ಷಣದ ಗುರಿ. ಆದರೆ, ಇತ್ತೀಚೆಗೆ ದಿಲ್ಲಿ ಸರಕಾರದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರವರು ಎಲ್ಲಾ ಸರಕಾರಿ ಶಾಲೆಗಳ ತರಗತಿಗಳಿಗೆ ಸಿಸಿಟಿವಿ ಅಳವಡಿಸಬೇಕೆನ್ನುವ ನಿರ್ಧಾರ ತೆಗೆದುಕೊಂಡಿದ್ದು, ಶೈಕ್ಷಣಿಕ ಮತ್ತು ಮನೋವೈಜ್ಞಾನಿಕ ತತ್ವ ಸಿದ್ಧಾಂತಗಳ ಆಧಾರದ ಮೇಲೆ ಅವಲೋಕಿಸುವುದಾದರೆ, ಇದರ ಪರಿಣಾಮವಾಗಿ ಅನೇಕ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಸ್ವಾತಂತ್ರ್ಯವನ್ನು ಕಿತ್ತುಕೊಂಡಂತಾಗಿದೆ. ವಿದ್ಯಾರ್ಥಿಗಳಿಗೆ ಕಲಿಯಲು, ಮಾತನಾಡಲು, ತಮ್ಮ ಕಲ್ಪನೆಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳಲು ಸ್ವಾತಂತ್ರ್ಯವನ್ನು ನೀಡಿದಾಗ ಮಾತ್ರ ಅವರಲ್ಲಿರುವ ಪ್ರತಿಭೆ ಹೊರಸೂಸಬಹುದು.
ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ ವಿದ್ಯಾರ್ಥಿಗಳಲ್ಲಿರುವ ಬುದ್ಧ್ದಿವಂತಿಕೆ, ಕೌಶಲ, ಸಾಮರ್ಥ್ಯ, ಅಭಿರುಚಿ, ಆಕಾಂಕ್ಷೆಗಳನ್ನು ಗುರುತಿಸಿ, ಪೋಷಿಸುವ ಬದಲು ತರಗತಿಯಲ್ಲಿ ಸಿಸಿಟಿವಿ ಅಳವಡಿಸುವುದರಿಂದ ವಿದ್ಯಾರ್ಥಿಗಳ ಪ್ರತಿಭೆಯನ್ನು ಮೊಗ್ಗಿನಲ್ಲೇ ಚಿವುಟಿ ಹಾಕಿದಂತಾಗುತ್ತದೆ. ಅವರ ಕಲಿಕೆಗೆ ಹಿನ್ನಡೆಯುಂಟಾಗಿ, ನೈಜ ಕಲಿಕೆಯು ಸಾಧ್ಯವಾಗದೆ, ಸ್ವಂತಿಕೆಯನ್ನು ಬೆಳೆಸಲಾಗದೆ, ಅವರಲ್ಲಿರುವ ವಿಶೇಷ ಆಸಕ್ತಿ, ಭಾವನೆಗಳನ್ನು ಗುರುತಿಸಲಾಗದೆ, ಓದಿನಲ್ಲಿ ನಿರಾಸಕ್ತಿಯನ್ನು ಹೊಂದಿ, ಯಾವುದೇ ತರಹದ ಉನ್ನತಮಟ್ಟದ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ.


ವಿದ್ಯಾರ್ಥಿಗಳಿಗೆ ಮುಕ್ತ ವಾತಾವರಣ ನೀಡಿ ಬೇರೆ ಬೇರೆ ತರಗತಿಗಳ ವಿದ್ಯಾರ್ಥಿಗಳೊಂದಿಗೆ ಬೆರೆಯುವ, ವಿಚಾರ-ವಿನಿಮಯ ಮಾಡಿಕೊಳ್ಳುವ ಜೊತೆಗೆ, ಬೇರೆ ವರ್ಗದ ತರಗತಿಗಳಿಗೆ ತೆರಳಿ ಕಲಿಯುವುದು ಸಾಕಷ್ಟಿದೆ. ಅದರ ಬದಲು ವಿದ್ಯಾರ್ಥಿಗಳನ್ನು ನಿಗ್ರಹಿಸುವುದು ಆಘಾತಕಾರಿ ಸಂಗತಿಯಾಗಿದೆ. ಯಾವುದೇ ತತ್ವ ಸಿದ್ದಾಂತಗಳು, ಕಲಿಕೆಯ ನಿಯಮಗಳು ಕೂಡ ವಿದ್ಯಾರ್ಥಿಗಳನ್ನು ಬಂಧಿಸಿ ಕಲಿಸಿ ಎನ್ನುವ ಸೂಚನೆ ಕೊಟ್ಟಿಲ್ಲ. ಶಿಕ್ಷಣದ ಗುರಿ ಉದ್ದೇಶಗಳನ್ನೇ ಮರೆತಂತಿರುವ ಸರಕಾರವು, ವಿದ್ಯಾರ್ಥಿಗಳಿಗೆ ಒತ್ತಡವನ್ನುಂಟು ಮಾಡಿ ಭಯದ ವಾತಾವರಣವನ್ನು ಸೃಷ್ಟಿ ಮಾಡಿ, ಕಲಿತಿದ್ದನ್ನು ಮರೆಯುವ ಸ್ಥಿತಿಗೆ ವಿದ್ಯಾರ್ಥಿ ಸಮುದಾಯವನ್ನು ದೂಡುತ್ತಿರುವುದು ಸರಕಾರದ ಸೂಕ್ತ ನಿರ್ಧಾರವಾಗದು ಎಂದೇ ಹೇಳಬಹುದು.
ಶಿಕ್ಷಕರಿಗೂ ಕೂಡ ಈ ನಿರ್ಧಾರದಿಂದ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚಾಗುವಂತಿದ್ದು ಶಿಕ್ಷಕರನ್ನು ಕೂಡ ಹಿಡಿದಿಟ್ಟುಕೊಂಡಂತಾಗಿದ್ದು, ಅವರ ಪೂರ್ಣ ಸ್ವಾತಂತ್ರ್ಯ ಕಿತ್ತುಕೊಂಡಂತಾಗಿದೆ. ವಿದ್ಯಾರ್ಥಿಗಳ ವರ್ತನೆ, ಚಲನವಲನಗಳ ಮೇಲೆ ನಿಗಾ ಇಡಲು ಸಿಸಿಟಿವಿಯೇ ಪರಿಹಾರವಲ್ಲ ಅಥವಾ ಅಂತಿಮವಲ್ಲ, ಇನ್ನೂ ಅನೇಕ ಪರ್ಯಾಯ ಮಾರ್ಗಗಳಿದ್ದವು.
ಸರಕಾರಿ ಶಾಲೆಗಳಿಗೆ ಸಿಸಿಟಿವಿ ಅಳವಡಿಸುವ ಮುನ್ನ ಈ ಕೆಳಕಂಡ ಅಂಶಗಳನ್ನು ಸರಕಾರವು ಗಮನಿಸಬೇಕಾಗುತ್ತದೆ.
♦ ಶಿಕ್ಷಣದ ಉದ್ದೇಶ ಬರೀ ಭೌತಿಕ ಶಿಸ್ತನ್ನು ಕಲಿಸುವುದಲ್ಲ, ಮಕ್ಕಳ ಸರ್ವತೋಮುಖ ಅಭಿವೃದ್ಧ್ದಿಯೊಂದಿಗೆ ಉತ್ತಮ ಮಾರ್ಗದಲ್ಲಿ ನಡೆಯುವಂತೆ ಮಾಡುವುದಾಗಿದೆ.
♦ ತರಗತಿಯೆಂದರೆ ಅದೊಂದು ಸಾರ್ವಜನಿಕ ಸ್ಥಳವಲ್ಲ, ಅದು ವ್ಯಕ್ತಿತ್ವ ವಿಕಸನಗೊಳಿಸುವ ವೇದಿಕೆ ಹಾಗಾಗಿ ಅದನ್ನು ಬಂಧಿಸುವುದು ಸೂಕ್ತವಲ್ಲ.
♦ ಯಾವುದಾದರೂ ಸಂಶೋಧನೆಗಳು ಸಿಸಿಟಿವಿ ಅಳವಡಿಸುವುದರಿಂದ ಸಕಾರಾತ್ಮಕವಾದ ಪರಿಣಾಮ ಉಂಟಾಗಿದೆ ಎಂದು ತಿಳಿಸಿವೆಯೇ ಎಂದು ಪರಿಶೀಲಿಸುವುದು.
ಇಡೀ ದಿನ ಸಿಸಿಟಿವಿಯನ್ನು ವೀಕ್ಷಿಸುವುದಕ್ಕೆ ಸಾಧ್ಯವಾಗುವುದೇ ಎಂಬ ನಿಟ್ಟಿನಲ್ಲಿಯೂ ಕೂಡ ಸರಕಾರ ಯೋಚಿಸಬೇಕಾಗುತ್ತದೆ.
♦ ಹಳ್ಳಿಯ, ಬೆಟ್ಟಗುಡ್ಡ, ಅರಣ್ಯಪ್ರದೇಶಗಳ ಮತ್ತು ನೆಟ್‌ವರ್ಕ್ ಸಿಗದಿರುವ ಪ್ರದೇಶಗಳಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಸವಾಲಿನ ಕೆಲಸವಲ್ಲವೇ?
 ಇದರ ಬದಲು ಸರಕಾರಿ ಒಡೆತನದ ಸಂಸ್ಥೆಗಳಿಗೆ, ಆಡಳಿತ ನಡೆಸುವಂತಹ ಸರಕಾರಿ ಅಧಿಕಾರಿಗಳ ಕಚೇರಿಗಳಿಗೆ, ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತ್ ಕಚೇರಿಗಳಿಗೆ ಮತ್ತು ಜನನಾಯಕರ ಕಚೇರಿಗಳಿಗೆ, ವಿಧಾನಸೌಧ ಇನ್ನೂ ಮುಂತಾದ ಸರಕಾರಿ ಕಚೇರಿಗಳಿಗೆ ಈ ಪ್ರಕ್ರಿಯೆಯನ್ನು ಅಳವಡಿಸಿದ್ದಿದ್ದರೆ ಸಾರ್ವಜನಿಕರಿಗೆ, ಬಡವರಿಗೆ, ಎಲ್ಲಾ ವರ್ಗದ ಜನರಿಗೂ ಎಷ್ಟೋ ಅನುಕೂಲವಾಗುತ್ತಿತ್ತು ಮತ್ತು ರಾಜ್ಯದಲ್ಲಿನ ಆಡಳಿತ ಯಂತ್ರವನ್ನು ಸಹ ಸುಧಾರಿಸಬಹುದಿತ್ತು.
ಇತ್ತೀಚಿನ ದಿನಗಳಲ್ಲಿ ಸರಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಸಿಕೊಳ್ಳಲು ಹರಸಾಹಸ ಪಡಬೇಕಾಗಿದ್ದು, ಎಷ್ಟೋ ನೌಕರರು ಕೆಲಸ ಮಾಡುವುದರಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದು, ಇದರ ಮೂಲಕ ಭ್ರಷ್ಟಾಚಾರವು ಹುಟ್ಟಿಕೊಂಡಂತಾಗಿದ್ದು, ದೊಡ್ಡ ಮಟ್ಟದಲ್ಲಿ ಬೇರೂರಿದ್ದು, ಇದನ್ನು ನಿಯಂತ್ರಿಸಲು ಸದಾವಕಾಶ ಸಿಕ್ಕಿದಂತಾಗುತ್ತಿತ್ತು. ಮತ್ತು ಸರಕಾರಿ ನೌಕರರ ಕೆಲಸದಲ್ಲಿನ ತಲ್ಲೀನತೆ, ಕಾಳಜಿ, ಆಸಕ್ತಿ ಮತ್ತು ಪರಿಣಾಮವನ್ನು ಪರೀಕ್ಷಿಸುವುದರ ಜೊತೆಗೆ ಉತ್ತಮವಾಗಿ ಕೆಲಸಮಾಡುವ ನೌಕರರನ್ನು ಗುರುತಿಸಿ, ಅವರಿಗೆ ಪ್ರಶಸ್ತಿಗಳನ್ನು ನೀಡಿ ಪೋಷಿಸಿದಂತಾಗುತ್ತಿತ್ತು.
ಸರಕಾರಿ ಕಚೇರಿ, ಇಲಾಖೆಗಳಲ್ಲಿ ಕಡತಗಳನ್ನು ವಿಲೇವಾರಿ ಹಾಗೂ ಸಾರ್ವಜನಿಕರಿಗೆ ಸ್ಪಂದಿಸುವುದರ ಜೊತೆಗೆ ಪ್ರತಿ ತಾಲೂಕು, ಜಿಲ್ಲಾ ಕಚೇರಿಗಳಲ್ಲಿ ಸಾರ್ವಜನಿಕರು ಸಾಲು ಸಾಲಾಗಿ ನಿಂತಿರುವುದನ್ನು ತಪ್ಪಿಸಿ, ಅವರಿಗೆ ಸೂಕ್ತ ಸಮಯದಲ್ಲಿ ಕೆಲಸ ನಿರ್ವಹಿಸುವುದರ ಮೂಲಕ, ಜನರ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸಬಹುದಿತ್ತು ಮತ್ತು ಸರಕಾರದ ಕೆಲಸದಲ್ಲಿ ಪಾರದರ್ಶಕತೆಯನ್ನು ತರುವುದರ ಮೂಲಕ ಉತ್ತಮ ಆಡಳಿತವನ್ನು ನೀಡಲು ಸಹಕಾರಿಯಾಗುತ್ತಿತ್ತು. ಇದು ಇಂದಿನ ವಿದ್ಯಾರ್ಥಿಗಳಿಗೂ ಮಾದರಿಯಾಗುತ್ತಿತ್ತು. ರೋಗಿಯನ್ನು ಪರೀಕ್ಷಿಸುವ ಆಸ್ಪತ್ರೆಗಳಲ್ಲಿ ಸಿಸಿಟಿವಿಯ ಅವಶ್ಯಕತೆ ಹೇಗಿಲ್ಲವೋ ಹಾಗೆಯೆ ಶಾಲೆಗಳಲ್ಲಿ ಈ ಪ್ರಕ್ರಿಯೆಯನ್ನು ಅಳವಡಿಸುವುದು ಇಡೀ ಮನುಕುಲದ ಗೌಪ್ಯತೆಯ ಹಕ್ಕಿಗೆ ಪೆಟ್ಟು ನೀಡಿದಂತಾಗಿದ್ದು, ಸರಕಾರದ ಹಣ ಪೋಲಾಗುತ್ತಿರುವುದನ್ನು ಗಮನಿಸಬಹುದು.
ಸಂಪೂರ್ಣ ಸ್ವಾತಂತ್ರ್ಯವನ್ನು ವಿದ್ಯಾರ್ಥಿ-ಶಿಕ್ಷಕ ಸಮುದಾಯಕ್ಕೆ ನೀಡಬೇಕಾಗಿರುವುದು ಎಲ್ಲಾ ಸರಕಾರಗಳ ಆದ್ಯ ಕರ್ತವ್ಯವಾಗಬೇಕೇ ಹೊರತು ಬಂಧಿಸುವ ಕೆಲಸವಾಗಬಾರದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)