varthabharthi

ಕರಾವಳಿ

ಪ್ರಿಯಾಂಕಾ ಗಾಂಧಿ ಬಂಧನದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ವಾರ್ತಾ ಭಾರತಿ : 20 Jul, 2019

ಮಂಗಳೂರು, ಜು. 20: ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯ ಘೋರ್‌ವಾಲ್ ಹಳ್ಳಿಯಲ್ಲಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನಡೆದ ಗಲಭೆಯಲ್ಲಿ ಸಾವನ್ನಪ್ಪಿದ 11 ಮಂದಿಯ ಕುಟುಂಬಗಳಿಗೆ ಸಾಂತ್ವನ ಹೇಳಲು ತೆರಳಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಉತ್ತರ ಪ್ರದೇಶ ಸರಕಾರ ಬಂಧಿಸಿರುವ ಕ್ರಮವನ್ನು ಖಂಡಿಸಿ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯು ಶನಿವಾರ ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿತು.

ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ಬಿ. ರಮಾನಾಥ ರೈ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿರುವುರು ಪ್ರಜಾಪ್ರಭುತ್ವದ ವಿರೋಧಿ ಕ್ರಮವಾಗಿದೆ. ದುರ್ಬಲ ವರ್ಗಗಳ ಜನರ ಮೇಲೆ ದೌರ್ಜನ್ಯ ನಡೆಸುವ ಭೂಮಾಲಕರಿಗೆ ರಕ್ಷಣೆ ಒದಗಿಸಲು ಮುಂದಾಗುವ ಮೂಲಕ ಉತ್ತರ ಪ್ರದೇಶದ ಬಿಜೆಪಿ ನೇತೃತ್ವದ ಸರಕಾರವು ಜಮಿನ್ದಾರಿ ಪದ್ಧತಿಯನ್ನು ಮರಳಿ ತರುವುದಕ್ಕೆ ಯತ್ನಿಸುತ್ತಿದೆ ಎಂದು ಆಪಾದಿಸಿದರು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಭೂ ಸುಧಾರಣಾ ಮಸೂದೆಯನ್ನು ಜಾರಿಗೊಳಿಸಿದಾಗ ಬಿಜೆಪಿ ವಿರೋಧಿಸಿತ್ತು. ಈಗಲೂ ಬಿಜೆಪಿ ಭೂ ಮಾಲಕರ ಪರವಾಗಿ ನಿಂತು ಬಡ ಜನರನ್ನು ಹೀನಾಯವಾಗಿ ಕಾಣುತ್ತಿದೆ. ಇದೆಲ್ಲದರ ಹಿಂದೆ ಕೇಂದ್ರ ಸಚಿವ ಅಮಿತ್ ಶಾ ಅವರಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಸದಾಶಿವ ಶೆಟ್ಟಿ, ಮುರಳೀಧರ್ ರೈ ವಿಟ್ಲ, ಸುದೀಪ್ ಕುಮಾರ್ ಶೆಟ್ಟಿ, ಜೆ.ಅಬ್ದುಲ್ ಸಲೀಂ, ಸದಾಶಿವ ಉಳ್ಳಾಲ್, ಬಿ.ಎಂ. ಭಾರತಿ, ನವೀನ್ ಆರ್ ಡಿಸೋಜ, ಅಪ್ಪಿ, ಪ್ರವೀಣ್ ಚಂದ್ರ ಆಳ್ವ, ವಿಶ್ವನಾಥ್ ರೈ, ಲೋಕೇಶ್ ಹೆಗ್ಡೆ, ಜಯಶೀಲಾ ಅಡ್ಯಂತಾಯ, ಸುರೇಖಾ, ನಮಿತಾ ಡಿ.ರಾವ್, ಪದ್ಮನಾಭ ಅಮೀನ್, ದೀಪಕ್ ಪೂಜಾರಿ, ಶುಭೋದಯ ಆಳ್ವ, ಬಿ.ಕೆ. ಇದಿನಬ್ಬ, ಟಿ.ಕೆ. ಸುಧೀರ್, ಸೌಹಾನ್ ಎಸ್.ಕೆ, ಬಾಷಾ ಗುರುಪುರ, ನೀರಜ್ ಪಾಲ್, ನಝೀರ್ ಬಜಾಲ್, ಭಾಸ್ಕರ್ ರಾವ್, ಶಬ್ಬೀರ್ ಸಿದ್ಧಕಟ್ಟೆ , ಕವಿತಾ ವಾಸು, ಸುರೇಖಾ, ದೇವಕಿ, ಮಲ್ಲಿಕಾ ಪಿ., ವಿಕ್ಟೋರಿಯಾ ಮಸ್ಕರೇನ್ಹಸ್ ಮತ್ತಿತರರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)