ವೈರಲ್ ಆಗುತ್ತಿರುವುದು ಮಾರ್ಫಿಂಗ್ ಮಾಡಿದ ವಿಡಿಯೋ: ಅರವಿಂದ್ ಲಿಂಬಾವಳಿ
ತೇಜೋವಧೆಗೆ ಯತ್ನ ಎಂದ ಯುವಕ
ಬೆಂಗಳೂರು, ಜು.20: ಬಿಜೆಪಿ ನಾಯಕ ಅರವಿಂದ್ ಲಿಂಬಾವಳಿಯವರದ್ದು ಎನ್ನಲಾದ ಅಶ್ಲೀಲ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಸ್ವತಃ ಅರವಿಂದ್ ಲಿಂಬಾವಳಿ ಪ್ರತಿಕ್ರಿಯೆ ನೀಡಿದ್ದಾರೆ.
ಫೇಸ್ ಬುಕ್ ಪೇಜ್ ನಲ್ಲಿ ವಿಡಿಯೋದಲ್ಲಿ ಮಾತನಾಡಿರುವ ಅವರು, “ರಾಜ್ಯ ಸರಕಾರ ಅತಂತ್ರವಾಗಿದೆ. ಅದನ್ನು ಉಳಿಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ನಾಯಕರು ಹರಸಾಹಸ ಮಾಡುತ್ತಿದ್ದಾರೆ. ಆಡಳಿತ ಪಕ್ಷದ ಸದಸ್ಯರನ್ನು ಉಳಿಸಿಕೊಳ್ಳಲು ಆಸೆ ಆಮಿಷಗಳನ್ನು ಒಡ್ಡುವುದು ಒಂದೆಡೆಯಾದರೆ, ವಿರೋಧ ಪಕ್ಷಗಳ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ವೈಯಕ್ತಿಕ ಆರೋಪ ಮತ್ತು ಚಾರಿತ್ರ್ಯ ಹರಣದಲ್ಲಿ ತೊಡಗಿದ್ದಾರೆ. ಈ ಹಿಂದೆಯೂ ಈ ಪ್ರಯತ್ನ ಸರಕಾರ ಅಸ್ಥಿರಗೊಂಡಾಗ ನಡೆದಿತ್ತು. ಮುಖ್ಯಮಂತ್ರಿಗಳ ಕಾರ್ಯಾಲಯದಲ್ಲೇ ಈ ಪ್ರಯತ್ನ ನಡೆದಿತ್ತು. ಅದೇ ರೀತಿಯ ಪ್ರಯತ್ನ ಈಗಲೂ ಮುಂದುವರಿದಿದೆ. ನನ್ನ ಸಹಾಯಕ ಈ ಬಗ್ಗೆ ದೂರು ನೀಡಿದ್ದಾರೆ. ವಿಡಿಯೋ ಮಾರ್ಫಿಂಗ್ ಮಾಡುವ ಮೂಲಕ ಚಾರಿತ್ರ್ಯಹರಣಕ್ಕೆ ಈ ಪ್ರಯತ್ನ ನಡೆದಿದೆ. ಮುಖ್ಯಮಂತ್ರಿಗಳ ಕಾರ್ಯಾಲಯ ಮತ್ತು ಕಾಂಗ್ರೆಸ್ ನಾಯಕರು ಇದನ್ನು ಮಾಡುತ್ತಿದ್ದಾರೆ. ಯಾರಾದರೂ ಇದರ ಪ್ರಚಾರ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುತ್ತೇನೆ. ನ್ಯಾಯಾಲಯದ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದೇನೆ. ಯಾರಾದರೂ ಪ್ರಚಾರ ಮಾಡಿದರೆ ನ್ಯಾಯಾಲಯದಲ್ಲಿ ಹೋರಾಟವನ್ನು ಮುಂದುವರಿಸುತ್ತೇನೆ” ಎಂದಿದ್ದಾರೆ.
ಇನ್ನೊಂದು ವಿಡಿಯೋದಲ್ಲಿ ಚೇತನ್ ಎಂಬವರು ಮಾತನಾಡಿದ್ದು, “ಸಾಮಾಜಿಕ ಜಾಲತಾಣದಲ್ಲಿ ನನ್ನದು ಮತ್ತು ಶಾಸಕರಾದ ಅರವಿಂದ್ ಲಿಂಬಾವಳಿಯವರ ಅಶ್ಲೀಲ ವಿಡಿಯೋವನ್ನು ಮಾರ್ಫಿಂಗ್ ಮಾಡಿ ನಮ್ಮಿಬ್ಬರ ತೇಜೋವಧೆ ಮಾಡುತ್ತಿದ್ದಾರೆ. ಅರವಿಂದ್ ಲಿಂಬಾವಳಿಯವರ ರಾಜಕೀಯ ಮುಗಿಸಲು ಕಿಡಿಗೇಡಿಗಳು ವಿಡಿಯೋ ಬಿಟ್ಟಿದ್ದಾರೆ. ಈಗಾಗಲೇ ನಾನು ಪೊಲೀಸರಿಗೆ ದೂರು ನೀಡಿದ್ದೇನೆ” ಎಂದಿದ್ದಾರೆ.