varthabharthi

ಸುಗ್ಗಿ

ಬೆಳ್ಳಿತೆರೆಯ ಚಿರಬೆಳಕು ‘ಕೆ.ಬಾಲಚಂದರ್’

ವಾರ್ತಾ ಭಾರತಿ : 20 Jul, 2019
ರಾಜು

ಚಲನ ಚಿತ್ರಗಳೇ ಅಲ್ಲದೆ ಕಿರುತೆರೆಯಲ್ಲಿ ಕೂಡ ತಮ್ಮನ್ನು ತೊಡಗಿಸಿಕೊಂಡಿದ್ದ ಬಾಲಚಂದರ್ ಅವರು, ಸನ್‌ಟಿವಿ, ರಾಜ್‌ಟಿವಿ, ಮೂನ್‌ಟಿವಿ ಹಾಗೂ ಜಯಾ ಟಿವಿಗಳಲ್ಲಿ ಇವರ ನಿರ್ದೇಶನ, ನಿರ್ಮಾಣದ ಧಾರಾವಾಹಿಗಳು ಅವರು ಬದುಕಿರುವವರೆಗೂ ನಿರಂತರವಾಗಿ ಪ್ರಸಾರಗೊಂಡು ಅವರಿಗೆ ಖ್ಯಾತಿ ತಂದುಕೊಟ್ಟಿದೆಯಲ್ಲದೆ ಅಪಾರ ಜನಮನ್ನಣೆ ಗಳಿಸಿದ್ದು ಇಂದಿಗೂ ಕಿರುತೆರೆ ವೀಕ್ಷಕರು ನೆನಪಿಸಿಕೊಳ್ಳುತ್ತಾರೆ.

ಎಪ್ಪತ್ತರ ದಶಕದಲ್ಲಿ ಇಡೀ ಭಾರತೀಯ ಸಿನೆಮಾ ಲೋಕದಲ್ಲೇ ಬಿರುಗಾಳಿಯಂತೆ ಸಂಚಲನವನ್ನುಂಟು ಮಾಡಿದ್ದ ಕಮಲಹಾಸನ್ ಮತ್ತು ರತಿ ಅಗ್ನಿಹೋತ್ರಿ ಪ್ರಮುಖ ಪಾತ್ರದಲ್ಲಿದ್ದ ‘ಏಕ್‌ದುಜೆ ಕೇ ಲಿಯೆ’ ಹಿಂದಿ ಚಿತ್ರ ಯಾರಿಗೆ ತಾನೆ ಗೊತ್ತಿಲ್ಲ? ಹಾಗೆಯೇ ಶಿವಾಜಿರಾವ್ ಗಾಯಕ್‌ವಾಡ್ ಎಂಬ ಸಾಮಾನ್ಯ ಹುಡುಗನನ್ನು ಅಸಾಮಾನ್ಯ ಸೂಪರ್‌ಸ್ಟಾರ್ ಮಾಡಿದ ಅಪೂರ್ವ ರಾಗಂಗಳ್ ತಮಿಳು ಚಿತ್ರವನ್ನು ಯಾರು ಮರೆತಾರು? ಅಂತೆಯೇ ಸಾಮಾಜಿಕ ಸಮಸ್ಯೆಗಳ ಮೇಲೆ ಕ್ಷ-ಕಿರಣ ಬೀರಿ ಸಿನೆಮಾ ಭಾಷೆಯನ್ನೇ ಬದಲಾಯಿಸಿದ ರಮೇಶ್ ಅರವಿಂದ್ ಹಾಗೂ ತಾರಾ ಅಭಿನಯದ ಸುಂದರ ಸ್ವಪ್ನಗಳು ಮತ್ತು ಕಮಲಹಾಸನ್ ಹಾಗೂ ಸುಹಾಸಿನಿಯಂಥಹ ದೈತ್ಯ ಪ್ರತಿಭೆಗಳ ಮೂಲಕ ಶೋಷಿತ ಹೆಣ್ಣೊಂದರ ಅಂತರಾಳವನ್ನು ಬಿಚ್ಚಿಟ್ಟ ‘ಬೆಂಕಿಯಲ್ಲಿ ಅರಳಿದ ಹೂವು’ ಗಳಂತಹ ಕನ್ನಡ ಚಿತ್ರಗಳನ್ನು ನೋಡಿ ಮೆಚ್ಚದವರುಂಟೆ? ಹಾಗೆಯೇ ಚಿತ್ರ ಪ್ರಪಂಚದಲ್ಲೊಂದು ಹೊಸ ಅಲೆಯನ್ನು ಹುಟ್ಟುಹಾಕಿದ ತೆಲುಗು ಚಿತ್ರ ರುದ್ರವೀಣೆಯ ಝೇಂಕಾರಕ್ಕೆ ಮನಸೋಲದವರು ಯಾರು? ಇಂಥ ಹತ್ತು ಹಲವು ಅಭೂತಪೂರ್ವ ಚಿತ್ರಗಳನ್ನು ಸೃಷ್ಟಿಸಿರುವ ಬಹುಭಾಷಾ ಚಲನಚಿತ್ರ ನಿರ್ದೇಶಕ ಕೆ. ಬಾಲಚಂದರ್ ಅವರು ಎಂಥಾ ಪ್ರಶಸ್ತಿಗಳಿಗೂ ಅರ್ಹರು. ಅಂಥ ಅದ್ಭುತ ಪ್ರತಿಭೆ ಅವರದು.

ಚಲನಚಿತ್ರ ನಿರ್ದೇಶನ, ನಿರ್ಮಾಣ, ಸಾಹಿತ್ಯ ರಚನೆ.... ಹೀಗೆ ಸಿನೆಮಾದ ಎಲ್ಲಾ ವಿಭಾಗಗಳಲ್ಲೂ ಪರಿಣಿತಿ ಪಡೆದಿದ್ದ ಪ್ರತಿಭೆಯ ಗಣಿ ಕೆ. ಬಾಲಚಂದರ್ ಅವರದು ಚಿತ್ರರಂಗದಲ್ಲಿ ನಾಲ್ಕೂವರೆ ದಶಕಗಳ ಪಯಣ. ಅವರು ಬದುಕಿದ್ದ ಈ ಸುದೀರ್ಘ ಅವಧಿಯಲ್ಲಿ ಅವರು ಕನ್ನಡ, ತಮಿಳು, ತೆಲುಗು, ಹಿಂದಿ ಚಿತ್ರಗಳು ಸೇರಿದಂತೆ ನೂರಕ್ಕೂ ಅಧಿಕ ಚಿತ್ರಗಳನ್ನು ಭಾರತೀಯ ಚಿತ್ರರಂಗಕ್ಕೆ ತಮ್ಮ ಕೊಡುಗೆಯಾಗಿ ನೀಡಿ ಹೋಗಿದ್ದಾರೆ. ಭಾಷೆಗಿಂತ ಭಾವನೆಯನ್ನು ಅರ್ಥ ಮಾಡಿಕೊಳ್ಳುತ್ತಿದ್ದ ಬಹು ಅಪರೂಪದ ಬಹುಭಾಷಾ ಚಿತ್ರ ನಿರ್ದೇಶಕರಾಗಿದ್ದ ಬಾಲಚಂದರ್ ಅವರು ಭಾಷೆ ಅರಿಯದೆ ಚಿತ್ರ ನಿರ್ದೇಶಿಸಲು ಆಗದೆನ್ನುವ ಮಾತಿಗೆ ಅಪವಾದವಾಗಿದ್ದರು. ಏಕೆಂದರೆ ಅವರು ಭಾಷೆಯನ್ನು ಅರ್ಥಮಾಡಿಕೊಂಡಿದ್ದಕ್ಕಿಂತ ಭಾವನೆಗಳನ್ನು, ಸಂವೇದನೆಗಳನ್ನು ಅರ್ಥಮಾಡಿ ಕೊಂಡಿದ್ದೇ ಹೆಚ್ಚು. ಇದು ಅವರ ಯಶಸ್ವಿಯೂ ಹೌದು. ಇದಕ್ಕೆ ಪ್ರತ್ಯಕ್ಷ ನಿದರ್ಶನ ಅವರು ಯಾವುದೇ ಭಾಷೆಯಲ್ಲಿ ಚಿತ್ರ ನಿರ್ದೇಶಿಸಿದ್ದರೂ ಅವೆಲ್ಲವೂ ಆಯಾ ಭಾಷೆಯ ಜನರ ಭಾವನೆಗಳಿಗೆ, ಸಂವೇದನೆಗಳಿಗೆ ಸ್ಪಂದಿಸುವಂತೆಯೇ ಇದ್ದು ಎಲ್ಲಾ ಕಡೆಯೂ ಅವರು ದಿಗ್ವಿಜಯಿಯೇ ಆಗಿದ್ದುದು.

ವಿಶೇಷತಃ ಸಾಮಾಜಿಕ ಕಳಕಳಿ ಹೊಂದಿದ್ದ ಬಾಲಚಂದರ್ ಅವರು ಅಂತಹ ಪರಿಣಾಮಕಾರಿ ಚಿತ್ರಗಳನ್ನು ಕೊಟ್ಟವರು. ಅಂದಾಕ್ಷಣ ಒಂದೇ ತರಹದ ಚಿತ್ರಗಳನ್ನು ಕೊಟ್ಟವರೆಂದಲ್ಲ. ಸೆಂಟಿಮೆಂಟ್, ಥ್ರಿಲ್, ಕಾಮಿಡಿ... ಹೀಗೆ ಎಲ್ಲಾ ರೀತಿಯ ಚಿತ್ರಗಳನ್ನೂ ನಿರ್ದೇಶಿಸಿದವರಿವರು. ವೈವಿಧ್ಯತೆಯೇ ಇವರ ವೈಶಿಷ್ಟ. ಆದರೆ, ಅವರ ಪ್ರತಿಯೊಂದು ಚಿತ್ರಗಳಲ್ಲೂ ಒಂದು ಮೆಸೇಜ್ ಇದ್ದೇ ಇರುತ್ತದೆ. ಅದೇ ಬಾಲಚಂದರ್ ವಿಶೇಷ!. ಅಷ್ಟೇ ಅಲ್ಲ ಹೊಸ ಹೊಸ ಪ್ರತಿಭೆಗಳನ್ನು ಹುಡುಕಿ ತಂದು ಕಲಾ ಜಗತ್ತಿನಲ್ಲಿ ಕಡೆದು ನಿಲ್ಲಿಸುವುದರಲ್ಲಿ ಸಿದ್ಧಹಸ್ತರವರು. ತಮಿಳು ನಾಡಿನ ಆರಾಧ್ಯ ದೈವವಾಗಿರುವ ಸೂಪರ್‌ಸ್ಟಾರ್ ರಜನಿಕಾಂತ್, ಕಮಲಹಾಸನ್, ವಿವೇಕ್, ಪ್ರಕಾಶ್‌ರಾಜ್, ರಮೇಶ್ ಅರವಿಂದ್, ಸರಿತಾ, ಸುಜಾತಾ, ಜಯಪ್ರದಾ, ತಾರಾ ಮುಂತಾದ ಕಲಾಕುಸುಮಗಳು ಅವರ ಅನ್ವೇಷಣೆಯ ದೈತ್ಯ ಪ್ರತಿಭೆಗಳು. ಇವರನ್ನೆಲ್ಲಾ ತಮಿಳು ಚಿತ್ರರಂಗಕ್ಕೇ ಪರಿಚಯಿಸಿ ಬೆಳೆಸಿದ್ದೇ ಬಾಲಚಂದರ್. ತಾವು ಪರಿಚಯಿಸುವ ಕಲಾವಿದರಿಗೆ ಹೆಸರಿಡುವುದರಲ್ಲೂ ಅವರು ಪರಿಣಿತರು. ಶಿವಾಜಿರಾವ್ ಗಾಯಕ್‌ವಾಡ್ ರಜನಿಕಾಂತ್ ಆದದ್ದು. ಪ್ರಕಾಶ್‌ರೈ ಪ್ರಕಾಶ್‌ರಾಜ್ ಆದದ್ದು, ರಮೇಶ್ ಹೋಗಿ ರಮೇಶ್ ಅರವಿಂದ್ ಆದದ್ದು, ಬಾಲಚಂದರ್ ಅವರಿಂದಲೇ ಎಂಬುದು ಎಲ್ಲರಿಗೂ ತಿಳಿದಿದ್ದೇ. ಎಂಜಿಆರ್, ಜೆಮಿನಿ ಗಣೇಶನ್, ಶಿವಾಜಿಗಣೇಶನ್, ಬಿ. ಸರೋಜಾದೇವಿ, ಸಾಹುಕಾರ್ ಜಾನಕಿ, ಜಯಂತಿ, ಕಾಂಚನ ಮುಂತಾದ ಹಿರಿಯ ಪ್ರತಿಭೆಗಳೊಡನೆಯೂ ಕೆಲಸ ಮಾಡಿದ್ದ ಹಿರಿಮೆ ಬಾಲಚಂದರದ್ದು.

ಚಿತ್ರರಂಗದ ಇಂಥ ಮಹಾನ್ ಸಾಧಕ ಕೆ. ಬಾಲಚಂದರ್ ಹುಟ್ಟಿದ್ದು 1930ರ ಜುಲೈ 9ರಂದು ತಮಿಳುನಾಡಿನ ತಂಜಾವೂರು ಜಿಲ್ಲೆಯ ನಾನ್ನಿಲಮ್ ಎಂಬ ಗ್ರಾಮದಲ್ಲಿ. ತಂದೆ ತಮಿಳು ಬ್ರಾಹ್ಮಣ ಕುಟುಂಬದ ದಂಡಪಾಣಿ, ತಾಯಿ ಶ್ರೀಮತಿ ಸರಸ್ವತಮ್ಮ, ಬಾಲ್ಯದಿಂದಲೂ ಚುರುಕುಬುದ್ದಿಯವರಾದ ಬಾಲಚಂದರ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ತಮ್ಮ ಹುಟ್ಟೂರು ಹಾಗೂ ಸುತ್ತಮುತ್ತಲಿನ ಊರು ಗಳಲ್ಲೇ ಮುಗಿಸಿ ಅಣ್ಣಾಮಲೈ ವಿಶ್ವವಿದ್ಯಾನಿಲಯದಲ್ಲಿ ಪ್ರಾಣಿಶಾಸ್ತ್ರ ವಿಷಯದಲ್ಲಿ ಬಿ.ಎಸ್ಸಿ. ಪದವಿ ಪಡೆದವರು. 1950ರಲ್ಲಿ ಅಕೌಂಟೆಂಟ್ ಜನರಲ್ಸ್ ಕಚೇರಿಯಲ್ಲಿ ಸೂಪರಿಂಟೆಂಡೆಂಟ್ ಆಗಿ ಸೇವೆ ಆರಂಭಿಸಿದ್ದ ಬಾಲಚಂದರ್ ಯುನೈಟೆಡ್ ಅಮೆಚ್ಯೂರ್ ಆರ್ಟಿಸ್ಟ್ ಎಂಬ ನಾಟಕ ಕಂಪೆನಿಗೂ ಸೇರಿದ್ದರು. ಇದರ ಜೊತೆಯಲ್ಲೇ ಸಿನೆಮಾ ಗೀಳನ್ನು ಹಚ್ಚಿಕೊಂಡು ಬಿಡುವಿನ ವೇಳೆಯಲ್ಲೆಲ್ಲಾ ಚಿತ್ರಕಥೆಗಳನ್ನು ಬರೆಯತೊಡಗಿದ್ದರು. ತಮ್ಮ ಆಕರ್ಷಕ ಸಿನೆಮಾ ಸಾಹಿತ್ಯ ಬರವಣಿಗೆಯಿಂದ ಬಹುಬೇಗನೆ ಎಲ್ಲರ ಕಣ್ಣಿಗೂ ಬಿದ್ದ ಅವರು ಅಷ್ಟೇ ವೇಗವಾಗಿ ಅಂದಿನ ಸೂಪರ್‌ಸ್ಟಾರ್ ಎಂಜಿಆರ್ ಅವರ ಗಮನವನ್ನೂ ಸೆಳೆದಿದ್ದರು. ಹಾಗಾಗಿ ಸ್ವತಃ ಎಂಜಿಆರ್ ಅವರೇ ಇವರನ್ನು ಬರಹೇಳಿ ತಮ್ಮ ಚಿತ್ರದಲ್ಲಿ ಬಾಲಚಂದರ್‌ಗೊಂದು ಅವಕಾಶ ನೀಡಿದ್ದರು.

ಹೀಗೆ ತಮ್ಮ ಸ್ವಪ್ರತಿಭೆಯಿಂದಲೇ ಗುರುತಿಸಿ ಕೊಂಡ ಬಾಲಚಂದರ್ ಮೊತ್ತಮೊದಲಿಗೆ 1965ರಲ್ಲಿ ಮಹಾನ್ ನಟ ಎಂಜಿಆರ್ ಅವರ ದೈವತಾಯ್ ಚಿತ್ರಕ್ಕೆ ಸಂಭಾಷಣೆ ಬರೆಯುವುದರ ಮೂಲಕ ಚಿತ್ರರಂಗ ಪ್ರವೇಶಿಸಿದರು. ಈ ರೀತಿ ಆರಂಭವಾದ ಇವರ ಸಿನೆಮಾಯಾನ ನಂತರದ ದಿನಗಳಲ್ಲಿ ನೂತನವಾಗಿ ರಜನಿಕಾಂತ್‌ರನ್ನು ಪರಿಚಯಿಸಿ ತಮಿಳಿನಲ್ಲಿ ಅಪೂರ್ವ ರಾಗಂಗಳ್ (1975), ತೆಲುಗಿನಲ್ಲಿ ಅಂತುಲೇನಿಕಥಾ ಮತ್ತು ಮರೋಚರಿತ್ರ ಚಿತ್ರಗಳನ್ನು ನಿರ್ದೇಶಿಸಿದರು. ಆಗಿನ ಕಾಲಕ್ಕೆ ಮರೋಚರಿತ್ರ ಸೂಪರ್‌ಹಿಟ್ ಚಿತ್ರವಾಗಿ ಇವರಿಗೆ ಸೂಪರ್ ಡೈರೆಕ್ಟರ್ ಪಟ್ಟವನ್ನು ತಂದುಕೊಟ್ಟಿತ್ತು. ಅದರ ಹಿಂದಿ ಅವತರಣಿಕೆ ಕೂಡ ‘ಏಕ್ ದುಜೇ ಕೇ ಲಿಯೇ’ ಆಗಿ ಬಾಲಿವುಡ್‌ನಲ್ಲಿ ಒಂದು ಹೊಸ ಟ್ರೆಂಡನ್ನು ಸೃಷ್ಟಿಸಿತ್ತು. ತಮ್ಮ ವಿಶಿಷ್ಟ ಶೈಲಿಯಿಂದ ಸಿನೆಮಾ ಭಾಷೆಗೊಂದು ನವನವೀನ ಸ್ಪರ್ಶ ನೀಡಿದ ಇವರು ಬಹುಬೇಗನೆ ಪ್ರಸಿದ್ಧಿಗೆ ಬಂದಿದ್ದರು. ಬಾಲಚಂದರ್ ಅವರ ಸಾಹಿತ್ಯ ರಚನೆ, ಸಂಭಾಷಣೆಯ ಕೌಶಲ್ಯ, ನಿರ್ದೇಶನದ ಮಹತ್ವ ಗೊತ್ತಾಗಬೇಕಾದರೆ ಅವರ ಡೈನಾಮಿಕ್ ಚಿತ್ರಗಳಾದ ಮೇಜರ್ ಚಂದ್ರಕಾಂತ್, ಸರ್ವರ್ ಸುಂದರಂ, ನೀರ್‌ಕುಮಿಳಿ, ಮನ್ಮಥ ಲೀಲೆ, ನಾನಾಲ್ ಹಾಗೂ ನವಗ್ರಹಂ ಚಿತ್ರಗಳನ್ನು ನೋಡಬೇಕು.

ತಮ್ಮ ಇಡೀ ಬದುಕನ್ನು ಚಲನ ಚಿತ್ರರಂಗಕ್ಕೆ ಸಮರ್ಪಿಸಿಕೊಂಡು ಊರ್ಧ್ವ ಮುಖಿಯಾಗಿ ಯಶಸ್ವೀ ಚಿತ್ರಗಳನ್ನು ನೀಡುತ್ತಾ, ತನ್ಮೂಲಕ ಭಾರತೀಯ ಚಿತ್ರರಂಗಕ್ಕೆ ತಮ್ಮ ಅನುಪಮ ಕಾಣಿಕೆ ಸಲ್ಲಿಸುತ್ತಾ ಬಂದಿದ್ದ ಕೆ. ಬಾಲಚಂದರ್ ಅವರ ಸಾಧನೆಗೆ ಅವರೇ ಸಾಟಿ. ವಯಸ್ಸಾಯಿತೆಂದು ಹಿಂದೆ ಸರಿದು ಕೂರುತ್ತಿದ್ದ ಜಾಯಮಾನವೂ ಇವರದ್ದಲ್ಲ. ವೃದ್ಧಾಪ್ಯವೆನ್ನುವುದು ದೇಹಕ್ಕೇ ಹೊರತು ಮನಸ್ಸಿಗಲ್ಲವೆಂಬ ಭಾವ ಇವರದ್ದು. ಈ ಮನೋಭಾವವೇ ಇಳಿ ವಯಸ್ಸಿನಲ್ಲೂ ಅವರಿಗೆ ಡ್ಯುಯೆಟ್‌ನಂಥ ಚಿತ್ರ ನಿರ್ದೇಶಿಸುವುದಕ್ಕೆ ಮತ್ತು ಪೊಯ್‌ನಂಥ ಚಿತ್ರ ತೆಗೆಯುವುದಕ್ಕೆ ಸಾಧ್ಯವಾದದ್ದು. ಇವರ ಸಾಧನೆಗೆ ಪತ್ನಿ ರಾಜಮ್ಮ ಅವರ ಸಹಕಾರ ಅಪಾರ. ಪತ್ನಿ ರಾಜಮ್ಮ, ಪುತ್ರ ರಾದ ಕೈಲಾಸಂ, ಪ್ರಸನ್ನ ಹಾಗೂ ಪುತ್ರಿ ಪುಷ್ಪಕಂದಸ್ವಾಮಿ ಅವರುಗಳೊಡನೆ ವಾಸಿಸುತ್ತಿದ್ದ ಇಂಥ ಮಹಾನ್ ಚಿತ್ರಕರ್ಮಿ ಕೆ. ಬಾಲಚಂದರ್ 2014 ಡಿಸೆಂಬರ್ 23 ರಂದು ಇಹಲೋಕಕ್ಕೆ ವಿದಾಯ ಹೇಳಿದರು.

ಬಾಲಚಂದರ್‌ರ ಪ್ರಮುಖ ಚಿತ್ರಗಳು:

ಅವರ್ಗಳ್, ವರುಮಾಯನ್ ನಿರುಮ್ ಸಿಗಪ್ಪು, 47 ನಾಟ್ಕಲ್, ಸಿಂಧು ಭೈರವಿ, ಇರು ಕೋಡಗಲ್, ತಣ್ಣೀರ್ ತಣ್ಣೀರ್, ಅಚ್ಛಮಿಲೈ ಮಿಲೈ, ಅವಳ್ ಒರು ಕೊಡರ್ ಕತೈ, ಪಾರ್ಥಾಲೆ ಪರವಶಂ, ಡುಯೆಟ್, ತಿಲ್ಲು ಮಲ್ಲು, ಅಳಗನ್, ಶಿವ, ಉನ್ನಾಲೆ ಮುಡಿಯಮ ತಂಬಿ, ಮನದಿಲ್ ವಿರುದಿವೇಂಡಂ, ನಿನ್ನ ತಾಲೈ ಇನಿಕುಂ, ಪುನ್ನಗೈಮನ್ನನ್, ಅಗ್ನಿಸಾಕ್ಷಿ, ಪೊಯ್‌ಕಾಲ್ ಕುದಿರೈ, ನಂಡ್ರಿ ಮೀಂಡು ವರುಗ, ನಾನ್ ಅವನ್ ಇಲೈ, ಕವಿಯೆ ತಲೈವಿ (ತಮಿಳು ಚಿತ್ರಗಳು), ಮರೋಚರಿತ್ರ, ರುದ್ರವೀಣಾ, ಅಕಲಿರಾಜ್ಯಂ (ತೆಲುಗು ಚಿತ್ರಗಳು), ಏಕ್‌ದೂಜೆ ಕೇ ಲಿಯೇ, ಝರಾಸಿ ಜಿಂದಗಿ, ಊಂಚೆಲೋಕ್, ಐನಾ, ಏಕ್‌ನಯಿ ಪಹೆಲಿ, ದಿಲೋ ಕರೀಪ್ತಾ (ಹಿಂದಿ ಚಿತ್ರಗಳು), ತಪ್ಪಿದ ತಾಳ, ಮುಗಿಲಮಲ್ಲಿಗೆ, ಬೆಂಕಿಯಲ್ಲಿ ಅರಳಿದ ಹೂ, ಎರಡು ರೇಖೆಗಳು, ಸುಂದರ ಸ್ವಪ್ನಗಳು (ಕನ್ನಡ ಚಿತ್ರಗಳು) ಮುಂತಾದವು ಬಾಲಚಂದರ್ ನಿರ್ದೇಶನದ ಪ್ರಮುಖ ಚಿತ್ರಗಳು.

ಸಂದ ಪ್ರಮುಖ ಪ್ರಶಸ್ತಿಗಳು

  • 1969ರಲ್ಲಿ ಇರು ಕೋಡುಗಳ್ ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ.
  • 1973ರಲ್ಲಿ ಜೀವಮಾನದ ಸಾಧನೆಗಾಗಿ ತಮಿಳುನಾಡು ಸರಕಾರದಿಂದ ಕಲೈ ಮಾಣಿ ಪ್ರಶಸ್ತಿ.
  • 1975ರಲ್ಲಿ ಅಪೂರ್ವ ರಾಗಂಗಳ್, 1981ರಲ್ಲಿ ತಣ್ಣೀರ್ ತಣ್ಣೀರ್ ಹಾಗೂ 1984ರಲ್ಲಿ ಅಚ್ಚಮಿಲೈ ಅಚ್ಚಮಿಲೈ ಚಿತ್ರಗಳಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ.
  • 1987ರಲ್ಲಿ ಜೀವಮಾನ ಸಾಧನೆಗೆ ಕೇಂದ್ರ ಸರಕಾರದಿಂದ ಪದ್ಮಶ್ರೀ ಪ್ರಶಸ್ತಿ.
  • 1988ರಲ್ಲಿ ರುದ್ರವೀಣಾ ತೆಲುಗು ಚಿತ್ರಕ್ಕೆ ನರ್ಗೀಸ್‌ದತ್ ಪ್ರಶಸ್ತಿ ಹಾಗೂ ಒರುವೀಡು ಇರುವಾಸಲ್ ಚಿತ್ರಕ್ಕೆ ಅತ್ಯುತ್ತಮ ಸಾಮಾಜಿಕ ರಾಷ್ಟ್ರೀಯ ಪ್ರಶಸ್ತಿ.
  • 2010ನೇ ಸಾಲಿನ ಕೇಂದ್ರ ಸರಕಾರದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)