varthabharthi

ಸುಗ್ಗಿ

ಬಾಲ್ಯದ ಗಾಯಗಳು

ಶುರುವಾಯಿತು ಲೈಂಗಿಕ ದೌರ್ಜನ್ಯ

ವಾರ್ತಾ ಭಾರತಿ : 20 Jul, 2019
ನಿರೂಪಣೆ: ಸೌಮ್ಯಶ್ರೀ ಗೋಣೀಬೀಡು

►► ಭಾಗ-5

ಅವರ ಮನೆಗೆ ಕಳುಹಿಸಲು ತಾತ ತಕರಾರು ಮಾಡುತ್ತಿದ್ದರು. ಅವರ ಇಬ್ಬರು ಗಂಡು ಮಕ್ಕಳಲ್ಲಿ ಯಾರಾದರೂ ನನ್ನ ಬಳಿ ಅನುಚಿತವಾಗಿ ವರ್ತಿಸಬಹುದು ಎಂದು ಅವರ ಸಂಶಯ. ಅವರ ಈ ಮಾತನ್ನು ನನ್ನ ಅಪ್ಪ, ಅಮ್ಮ, ಬಹುವಾಗಿ ಖಂಡಿಸಿದರು. ತಾತನ ಯೋಚನೆಯನ್ನು ಸಣ್ಣ ಬುದ್ಧಿ ಎಂದು ಹೀಗಳೆದರು. ಅವರ್ಯಾರಿಗೂ, ಆ ಗಂಡುಮಕ್ಕಳ ತಂದೆಯೇ ನನ್ನೊಡನೆ ಅನುಚಿತವಾಗಿ ವರ್ತಿಸುತ್ತಿರಬಹುದು ಎಂಬ ಅನುಮಾನವೇ ಇರಲಿಲ್ಲ.

ಒಂದು ಬೆಳ್ಳಂಬೆಳಗ್ಗೆ ಅಪ್ಪನನ್ನ ಎತ್ತಿಕೊಂಡಿದ್ದರು. ನನ್ನ ಸೋದರತ್ತೆಯ ಗಂಡ, ಮಾವ, ಅಂದು ಬೆಂಗಳೂರಿಗೆ ಹೊರಟಿದ್ದರು. ಅತ್ತೆ ಬೇಸಿಗೆ ರಜದಲ್ಲಿ ಊರಿಗೆ ಬಂದರೆ ಮಾವ ಯಾವಾಗಲಾದರೂ ಅವರಿಗೆ ರಜ ಇದ್ದಾಗ ಬರುತ್ತಿದ್ದರು. ಆ ಬೆಳಗ್ಗೆ ಹೊರಟಿದ್ದ ಅವರು ಹೊರಡುವ ಮುನ್ನ ನನ್ನನ್ನು ಎತ್ತಿ ಮುದ್ದಾಡಿ, ಮುತ್ತುಕೊಡಬೇಕೆಂದು ಅಪೇಕ್ಷೆ ಪಟ್ಟರು. ಬಾಕಿ ಸಮಯದಲ್ಲಿ ಸ್ವಲ್ಪಸುಲಭವಾಗಿ ಅವರ ಬಳಿಗೆ ಹೋಗುತ್ತಿದ್ದ ನಾನು, ಅಂದು ಬೆಳಗ್ಗೆ, ನನ್ನ ಅಪ್ಪನ ಸುರಕ್ಷಿತ ಬಾಹುಗಳಿಂದ ಇಳಿಯುವ ಮನಸಿಲ್ಲದೇ, ಒಲ್ಲೆ ಎಂದೆ. ಅವರು ಕರೆದಷ್ಟೂ ಹಟ ಮಾಡಿದೆ. ಕಡೆಗೆ ಅವರು ಬೇಜಾರಾಗಿ, ಬಸ್ಸಿಗೆ ಸಮಯವಾಯಿತೆಂದು ಹೊರಟು ಹೋದರು.

ಆ ಮುಂಜಾನೆ ನನ್ನ ಮಾವ ನನ್ನನ್ನು ಎತ್ತಿಕೊಳ್ಳುವುದು ಬೇಡ ಎಂದು ಹಠ ಮಾಡಿದಾಗ ನನ್ನ ಅಪ್ಪಒರಟಾಗಿ ‘‘ಅವರು ಊರಿಗೆ ಹೊರಟಿದ್ದಾರೆ, ಹೋಗು ಅವರ ಕೈಗೆ’’ ಎಂದರು. ಅವರು ಹೊರಟಾದ ಮೇಲೆ, ಒಂದು ಕ್ಷಣ ಅವರ ಕೈಗೆ ಹೋಗಿದ್ದರೆ ಏನಾಗುತ್ತಿತ್ತು, ಅವರ ಮನಸ್ಸಿಗೆ ಬೇಜಾರು ಮಾಡಿದೆ ಎಂದು ತಮ್ಮ ಅಸಮ್ಮತಿ ತೋರಿಸಿದರು. ಅಂದು ಅವರ ಕೈಗೆ ಹೋಗದಿದ್ದರೂ, ಮುಂದೆ ಯಾರು ಕರೆದರೂ ಹೋಗಬೇಕು, ಇಲ್ಲದಿದ್ದರೆ, ನನ್ನ ಅಪ್ಪನಿಗೆ ಬೇಜಾರಾಗುತ್ತದೆ ಎಂಬ ಪಾಠ ಕಲಿತೆ.

► ಆಸೆ

ಅಜ್ಜಿ ನನಗೆ ಹಂಚಿ ತಿನ್ನುವ ಗುಣ ಕಲಿಸಲು ಪಣ ತೊಟ್ಟಿದ್ದರು. ಅವರು ಅವರ ಕಡೇ ತಮ್ಮನ ಮಗಳ ಉದಾಹರಣೆ ಕೊಡುತ್ತಾ, ‘ನೋಡು, ಈ ಲಂಗ ಅವಳಿಗೇ ಅಂತ ತಂದಿದ್ದರು. ಅವಳು ನಾನು ಕೇಳಿದ ತಕ್ಷಣ ಕೊಟ್ಟು ಬಿಟ್ಟಳು. ಕೇಳಿದರೆ, ನನ್ನ ಹತ್ತಿರ ತುಂಬಾ ಇದೆ ಅತ್ತೇ ಎಂದಳು. ಎಷ್ಟು ಒಳ್ಳೆಯ ಗುಣ’’. ಅವಳಿಗೆ ಕೇಳಿದ್ದನ್ನು ಕೊಡಿಸುವ ಅಪ್ಪ, ಅಮ್ಮ ಇದ್ದರು, ನನಗೆ ಇಲ್ಲ ಎಂಬ ವ್ಯತ್ಯಾಸ ನನ್ನ ಅಜ್ಜಿಗೆ ಹೊಳೆಯುತ್ತಿರಲಿಲ್ಲವೇ? ನನ್ನ ಸೋದರತ್ತೆಯ ಗಂಡ ಒಮ್ಮೆ ನನ್ನನ್ನು ಒಂದು ಬಟ್ಟೆಯ ಅಂಗಡಿಗೆ ಕರೆದೊಯ್ದರು. ಬಿಳಿಯ ಘಾಗ್ರ ಕೊಂಡುಕೊಂಡರು. ನನಗೇನೋ ಅನ್ನಿಸಿತು. ಮನೆಗೆ ಹೋದಾಗ ಅವರು ಅದನ್ನು ಅವರ ಮಗಳಿಗೆ ಕೊಟ್ಟರು. ನನ್ನ ಅಪ್ಪ ನನಗೆ ಹಾಗೆ ಸುಮ್ಮನೆ ಬಟ್ಟೆ ತಂದಿದ್ದು ನೆನಪಿಲ್ಲ. ಯುಗಾದಿಗೆ ಮಾತ್ರ ಹೊಸಬಟ್ಟೆ ಕೊಡಿಸುತ್ತಿದ್ದುದು. ಆಸೆ ಆಗುತ್ತಿತ್ತು. ಮೂಡಿಗೆರೆಯಿಂದ ಅಪ್ಪನೋ, ತಾತನೋ, ಆಲೂಗೆಡ್ದೆಯ ಚಿಪ್ಸ್ ತರುತ್ತಿದ್ದರು. ಒಂದು ಪೊಟ್ಟಣದಲ್ಲಿ ನಾವೆಲ್ಲರೂ ಹಂಚಿ ತಿನ್ನುತ್ತಿದ್ದೆವು. ನನಗೆ ಜಾಸ್ತಿ ಬೇಕೆಂದು ನಾನು ಆಸೆ ಪಟ್ಟರೆ ಅಥವಾ, ನನಗಾಗಿಯೇ ಒಂದು ಪೊಟ್ಟಣ ಬೇಕೆಂದರೆ ಸಿಗುತ್ತಿರಲಿಲ್ಲ. ಮನೆಯಲ್ಲಿ ದುಡ್ದಿಗೇನೂ ಬಡತನವಿರಲಿಲ್ಲ. ಆದರೆ, ಏನೋ ಜಿಪುಣತನ. ಹಂಚಿ ತಿನ್ನಬೇಕು ಎಂದು ಅಜ್ಜಿಯ ನಿಲ್ಲದ ಪಾಠ. ಜೊತೆಗೆ ಮಿತಿಯ ಪಾಠವೂ ಇತ್ತು. ಚಾಕೊಲೇಟ್ ಅಥವಾ ಬಿಸ್ಕತ್ ತಂದರೆ ‘‘ಒಂದು ಮಾತ್ರ ತಿನ್ನಬೇಕು. ಆಸೆಯಾದಷ್ಟು ತಿನ್ನುವಂತಿಲ್ಲ. ಇಟ್ಟುಕೊಂಡು ತಿನ್ನು, ನಾಳೆಗೂ ಆಗುತ್ತೆ ಇಂದೇ ಎಲ್ಲ ಮುಗಿಸಬೇಡ’’. ನನಗೆ, ನನಗಾಗೇ ಪೂರ್ತಿ ಪೊಟ್ಟಣ ಚಿಪ್ಸ್ ಅಥವಾ ಚಾಕೊಲೇಟ್ ಎಂದರೆ ತುಂಬಾ ಆಸೆ ಆಗುತ್ತಿತ್ತು.

► ತೊಂದರೆ

ನನ್ನ ಮೊದಲನೇ ಚಿಕ್ಕಮ್ಮನ ಗಂಡ, ಅವರನ್ನು ಚಿಕ್ಕಪ್ಪ ಎನ್ನಲು ಕಷ್ಟವಾಗುತ್ತಿದೆ, ತೊಂದರೆ ವ್ಯಕ್ತಿ ಎನ್ನುತ್ತೇನೆ, ಚಿಕ್ಕಮ್ಮನ ಜೊತೆ ಊರಿಗೆ ಬರುತ್ತಿದ್ದುದಕ್ಕಿಂತ ಒಬ್ಬರೇ ಬರುತ್ತಿದ್ದುದು ಹೆಚ್ಚು. ಹಾಗೆ ಬಂದಾಗ ನನಗಾಗಿ ಚಾಕೊಲೇಟ್ ತರುತ್ತಿದ್ದರು. ಅದನ್ನು ಎಲ್ಲರ ಎದುರಿಗೆ ಕೊಡುತ್ತಿರಲಿಲ್ಲ. ನನ್ನನ್ನು ನಮ್ಮ ಮನೆಯ ಮಹಡಿ / ಅಟ್ಟದ ಮೇಲೆ ಕರೆದೊಯ್ದು ಕೊಡುತ್ತಿದ್ದರು. ಹಗಲೆಲ್ಲಾ ಅಟ್ಟದ ಮೇಲೆ ಯಾರೂ ಬರುತ್ತಿರಲಿಲ್ಲ, ಏಕಾಂತ ಇರುತ್ತಿತ್ತು. ಚಾಕೊಲೇಟ್ ಕೈಗೆ ಕೊಟ್ಟು, ನನಗೊಂದು ಮುತ್ತು ಕೊಡು ಎಂದು ಕೇಳುತ್ತಿದ್ದರು, ಕೇಳಿ ಕೇಳಿ ಬಲವಂತ ಮಾಡುತ್ತಿದ್ದರು. ತುಂಬ ಚಿಕ್ಕವಳಿದ್ದಾಗ ಹಲವು ಸಲ ನಾನೂ ಕೊಡುತ್ತಿದ್ದೆ. ಆದರೆ, ಸ್ವಲ್ಪದೊಡ್ದವಳಾದ ಮೇಲೆ ನನಗೆ ಅದ್ಯಾಕೋ ಸರಿಹೋಗುತ್ತಿರಲಿಲ್ಲ. ಮೆತ್ತಗೆ ಅವರ ಕೆನ್ನೆಗೆ ತುಟಿ ತಾಗಿಸಿ ಮುತ್ತು ಕೊಟ್ಟರೆ, ಅದು ಸಾಲುತ್ತಿರಲಿಲ್ಲ. ಗಟ್ಟಿಯಾಗಿ ಕೊಡು ಎಂದು ನನ್ನನ್ನು ಗಟ್ಟಿಯಾಗಿ ಅವರ ಕೆನ್ನೆಗೆ ಒತ್ತಿಕೊಳ್ಳುತ್ತಿದ್ದರು. ಹಲವು ಬಾರಿ ಅವರ ಕುರುಚಲು ಗಡ್ಡ ನನ್ನ ತುಟಿ, ಕೆನ್ನೆ, ಗಲ್ಲಕ್ಕೆ ಒತ್ತುತ್ತಿತ್ತು. ಕೊಡಲ್ಲ ಎಂದರೆ ತೀರ ಬಲವಂತ ಮಾಡದೇ, ಸರಿ, ನನ್ನ ಕೆನ್ನೆಗಾದರೂ ಹೊಡಿ ಎನ್ನುತ್ತಿದ್ದರು. ದೊಡ್ಡವರಿಗೆ ಹೊಡೆಯ ಬಾರದು ಎಂದು ಪಾಠ ಕಲಿತಿದ್ದ ನನಗೆ ಅದು ಕೂಡ ಕಷ್ಟವೇ. ಮೆತ್ತಗೆ ಹೊಡೆದರೆ, ‘ಉಹೂಂ, ಇದು ಸಾಲದು, ಜೋರಾಗಿ ಹೊಡಿ’ ಎನ್ನುತ್ತಿದ್ದರು. ಹೊಡೆಯದಿದ್ದರೆ, ಅವರೇ ನನ್ನ ಕೈ ಹಿಡಿದು ಜೋರಾಗಿ ಹೊಡೆಸಿಕೊಳ್ಳುತ್ತಿದ್ದರು. ಚಾಕೊಲೇಟ್ ಕೊಟ್ಟ ಮೇಲೆ ಸುಮ್ಮನೆ ತಿನ್ನಲು ಬಿಡುತ್ತಿರಲಿಲ್ಲ. ಒಂದನ್ನು ನನ್ನ ಬಳಿ ಎಂಜಲು ಮಾಡಿಸಿ, ನೀನು ಸಿಹಿ ಮಾಡಿ ಇದು ಮತ್ತೂ ಸಿಹಿಯಾಗಿದೆ ಎಂದು ಅವರು ತಿನ್ನುತ್ತಿದ್ದರು. ನನಗೆ ತಿನ್ನಲು ಒಂದು ಚಾಕೊಲೇಟ್ ನೀಡುತ್ತಿದ್ದರು. ದೊಡ್ಡವರಿಗೆ ಎಂಜಲು ಕೊಡಬಾರದು ಎಂದೂ ನಾನು ಪಾಠ ಕಲಿತಿದ್ದೆ. ಆದರೆ ಈ ವ್ಯಕ್ತಿಗೆ ಅದ್ಯಾವ ಲೆಕ್ಕವೂ ಇರಲಿಲ್ಲ. ನನ್ನ ಕೆಳತುಟಿಯನ್ನು ಎಳೆದು, ಹಿಂಡಿ, ಮುದ್ದುಮಾಡುತ್ತಿದ್ದರು. ಅವರ ತೊಡೆಯ ಮೇಲೆ ಕೂರಿಸಿಕೊಳ್ಳುತ್ತಿದ್ದರು. ಅವರು ಪ್ರತಿ ಸಲ ಊರಿಗ ಬಂದಾಗಲೂ ಇದು ನಡೆಯು ತ್ತಿತ್ತು. ಚಾಕೊಲೇಟ್‌ನ ಆಸೆಗೆ, ಹೋಗದಿದ್ದರೆ ಅವರಿಗೆಲ್ಲಿ ಬೇಜಾರು ಮಾಡುತ್ತೇನೋ ಎಂಬ ಭಯಕ್ಕೆ, ನಾನು ಅವರು ಕರೆದಾಗ ಮಹಡಿಯ ಮೇಲೆ ಹೋಗುತ್ತಿದ್ದೆ.

► ಮುಂದುವರಿದ ತೊಂದರೆ

ಹನ್ನೆರಡು, ಹದಿಮೂರನೇ ವಯಸ್ಸಿಗೆ, ನಾನು, ಆ ತೊಂದರೆ ವ್ಯಕ್ತಿಯನ್ನು ಫೋನಿನಲ್ಲಿ ಹೆಸರಿಟ್ಟು ಕರೆಯಲು ಶುರುಮಾಡಿದ್ದೆ. ದೊಡ್ದವರಿಗೆ ಹಾಗೆ ಕರೆಯಬಾರದು ಎಂದು ಗೊತ್ತಿದ್ದರೂ, ಏನೋ ಸಲಿಗೆ. ಅವರೂ ಅದನ್ನು ಬಹಳ ಖುಷಿಯಿಂದಲೇ ಒಪ್ಪಿಕೊಂಡಿದ್ದರು. ನಾನು ಕೆಲವೊಮ್ಮೆ ಅವರನ್ನು ಅವರ ಹೆಸರಿಟ್ಟು ಕರೆಯದಿದ್ದರೆ, ‘ಏ ಚಿನ್ನಾ, ಹಾಗೆ ಕರೆಯೋ’ ಎಂದು ಪೂಸಿ ಹೊಡೆದು ಕರೆಸಿಕೊಳ್ಳುತ್ತಿದ್ದರು. ಅವರು ಆಫೀಸಿನಿಂದ ನನಗೆ ನಮ್ಮ ಮನೆಯ ಲ್ಯಾಂಡ್ ಲೈನ್ ನಂಬರ್‌ಗೆ ಫೋನ್ ಮಾಡುತ್ತಿದ್ದರು. ಬಹಳ ಹೊತ್ತು ಮಾತಾಡುತ್ತಿದ್ದರು. ಏನು ಮಾತಾಡುತ್ತಿದ್ದೆವೂ ಈಗ ನೆನಪಿಲ್ಲ. ಮಾತು ಮಾತ್ರ ನಡೆಯುತ್ತಿತ್ತು.

ನನ್ನ ಸೀಮಿತ ಬುದ್ಧಿಗೇ ಆಗ ಅವರಿಗೂ, ನನ್ನ ಚಿಕ್ಕಮ್ಮನಿಗೂ ಮಧ್ಯ ಏನೋ ಸರಿಯಿಲ್ಲವೇನೋ ಎಂಬ ಅನುಮಾನ ಬಂದಿತ್ತು. ನನ್ನ ಚಿಕ್ಕಮ್ಮ ನನ್ನ ಸ್ಪರ್ಧಿ ಎಂಬ ಭಾವನೆಯೂ ಇತ್ತು. ಇದ್ಯಾಕೆ ಹೀಗೆ, ಗೊತ್ತಿರಲಿಲ್ಲ. ನಾನು ಹೀಗೆ ಅವರನ್ನು ಹೆಸರಿಟ್ಟು ಕರೆಯುವುದನ್ನು ಗಮನಿಸಿದ ನನ್ನ ಅಪ್ಪ, ಅಮ್ಮ, ಈ ಚಿಕ್ಕಪ್ಪ, ಮಗಳ ನಡುವೆ ಸಲಿಗೆ ಜಾಸ್ತಿ ಎಂದು ಸುಮ್ಮನಾದರು. ಅವರಿಗೆ ಮತ್ಯಾವ ಅನುಮಾನವೂ ಬರಲಿಲ್ಲ. ಅವರ ಮನೆಗೆ ಕಳುಹಿಸಲು ತಾತ ತಕರಾರು ಮಾಡುತ್ತಿದ್ದರು. ಅವರ ಇಬ್ಬರು ಗಂಡು ಮಕ್ಕಳಲ್ಲಿ ಯಾರಾದರೂ ನನ್ನ ಬಳಿ ಅನುಚಿತವಾಗಿ ವರ್ತಿಸಬಹುದು ಎಂದು ಅವರ ಸಂಶಯ. ಅವರ ಈ ಮಾತನ್ನು ನನ್ನ ಅಪ್ಪ, ಅಮ್ಮ, ಬಹುವಾಗಿ ಖಂಡಿಸಿದರು. ತಾತನ ಯೋಚನೆಯನ್ನು ಸಣ್ಣ ಬುದ್ದಿ ಎಂದು ಹೀಗಳೆದರು. ಅವರ್ಯಾರಿಗೂ, ಆ ಗಂಡುಮಕ್ಕಳ ತಂದೆಯೇ ನನ್ನೊಡನೆ ಅನುಚಿತವಾಗಿ ವರ್ತಿಸುತ್ತಿರಬಹುದು ಎಂಬ ಅನುಮಾನವೇ ಇರಲಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)