varthabharthi

ಸುಗ್ಗಿ

ಇತಿಹಾಸ

ಶಿವಾಜಿಯವರ ಸಮಾಧಿ ಪತ್ತೆ ಹಚ್ಚಿದ್ದ ಫುಲೆ

ವಾರ್ತಾ ಭಾರತಿ : 20 Jul, 2019
ಡಾ. ಎನ್. ಚಿನ್ನಸ್ವಾಮಿ ಸೋಸಲೆ

ಅನೇಕ ದಿವಸಗಳಿಂದ ಛತ್ರಪತಿ ಶಿವಾಜಿಯ ರಾಜಧಾನಿಯಾಗಿದ್ದ ರಾಯಗಢಕ್ಕೆ ಹೋಗಬೇಕೆಂಬ ಹಂಬಲ ಜ್ಯೋತಿ ಬಾರವರದಾಗಿತ್ತು. ಕಾರಣಾಂತರದಿಂದ ಅವರಿಗೆ ಅಲ್ಲಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಆ ಕಾಲದಲ್ಲಿ ಇಂದಿನಂತೆ ವಾಹನ ಸೌಕರ್ಯವೂ ಇರಲಿಲ್ಲ. ಕಾಲ್ನಡಿಗೆಯಾಗಲಿ, ಕುದುರೆ ಸವಾರಿ ಮಾಡಿಯಾಗಲಿ, ಹೋಗಬೇಕಿತ್ತು. 1869ರಲ್ಲಿ ಅವರು ಶಿವಾಜಿಯನ್ನು ಕುರಿತು ಒಂದು ‘ಪವಾಡ’ ಬರೆದಿದ್ದರು. ಅದು ಅವರಿಗೆ ತೃಪ್ತಿ ನೀಡಲಿಲ್ಲ. ಕೊನೆಗೆ ರಾಯಗಢಕ್ಕೆ ಹೋಗುವ ಅವಕಾಶ ದೊರೆಯಿತು.

ಅಲ್ಲಿ ಹೋದಾಗ ಅವರಿಗೆ ಸುತ್ತಲೂ ಗಿಡಗಂಟೆಗಳಿಂದ ತುಂಬಿದ ಒಂದು ಕಾಡೆಂಬಂತೆ ಅದು ಕಾಣಿಸಿತು. ಅಲ್ಲಿ ರಸ್ತೆಯೂ ಇರಲಿಲ್ಲ. ಯಾವುದೇ ವಸತಿಯೂ ಇರಲಿಲ್ಲ. ಶಿವಾಜಿ ಸಮಾಧಿಗೆ ಪೂಜೆ ಮಾಡಲು 8-10 ದಿನಗಳ ಅವಧಿಯಲ್ಲಿ ಒಮ್ಮೆ ಪೂಜಾರಿ ಬರುತ್ತಾನೆಂಬ ಸುದ್ದಿ ಮಾತ್ರ ಅವರಿಗೆ ಗೊತ್ತಿತ್ತು. ಆದರೆ ಅವನು ಎಲ್ಲಿಂದ ಹೇಗೆ ಬರುತ್ತಾನೆಂಬ ಕಲ್ಪನೆಯಾಗಲಿಲ್ಲ. ಸುತ್ತಮುತ್ತಲಿನ ವಾತಾವರಣವನ್ನು ಸೂಕ್ಷ್ಮ ದೃಷ್ಟಿಯಿಂದ ನೋಡಿದಾಗ ಅಲ್ಲಿ ಸರಿಸುಮಾರು ದಿನಗಳಿಂದ ಯಾರೂ ಬಂದಿರಲಾರರೆಂದು ತೋರಿತು. ಆಗ ಅವರು ಇಡೀ ದಿಬ್ಬವನ್ನು ಸುತ್ತಾಡಿ ನೋಡಲು ಮನಸ್ಸು ಮಾಡಿದರು. ದ್ವಾರದೊಳಗೆ ಕಾಲಿಟ್ಟ ಕೂಡಲೇ ಗಂಗಾಸಾಗರ ಕೆರೆ, ವಿಚಾರ ವಿನಿಮಯದ ಸ್ಥಳ (ಖಲ್ಬತ್ ಖಾನಾ), ಭಗ್ನವಾದ ಅರಮನೆ, ರಾಣಿಯವರ ಅರಮನೆ, ಸಚಿವಾಲಯ, ಪೇಟೆ-ಬೀದಿ ಮೊದಲಾದವನ್ನು ಗುರುತಿಸಲು ಯತ್ನಿಸಿದರು. ಆದರೆ ಯಾವ ಸುಳಿವೂ ಸಿಗಲಿಲ್ಲ. ಸುತ್ತಲೂ ಅಲೆದಾಡಿ ಆಯಾಸಗೊಂಡು ಹಿಂದಿರುಗುವ ವಿಚಾರ ಮಾಡಿದಾಗ ಅವರಿಗೆ ದೂರದಲ್ಲಿ ಪೂರ್ವಕ್ಕೆ ಸ್ವಲ್ಪ ಅಚ್ಚುಕಟ್ಟಾಗಿ ಪೇರಿಸಲ್ಪಟ್ಟ ಕಲ್ಲುಗಳು ಕಂಡುಬಂದವು. ಜ್ಯೋತಿ ಬಾ ಓಡಿ ಅತ್ತ ಹೋದರು. ಅದೇ ಶಿವಾಜಿಯವರ ಸಮಾಧಿ ಎಂಬುದು ತಿಳಿಯಿತು. ಅದರ ದುಃಸ್ಥಿತಿಯನ್ನು ನೋಡಿದಾಗ ಅವರಿಗೆ ಸಂತಾಪವಾಯಿತು. ಹಿಂದೂ ಸ್ವರಾಜ್ಯದ ಅಡಿಪಾಯವನ್ನು ಹಾಕಿದ ವೀರ ಪುರುಷನ ಸಮಾಧಿಯ ಶೋಚನೀಯ ಸ್ಥಿತಿ ನೋಡಿ ಯಾರಿಗೆ ತಾನೇ ದುಃಖವಾಗುವುದಿಲ್ಲ. ಶಿವಾಜಿಯವರನ್ನು ನೆನೆದು ಅವರು ಚೆಲ್ಲಾಪಿಲ್ಲಿಯಾಗಿ ಸಮಾಧಿಯ ಮೇಲೆ ಹರಡಿದ್ದ ಕಲ್ಲುಗಳನ್ನು ಶೇಖರಿಸಿ ಹತ್ತಿರದಿಂದ ನೀರು ತಂದು ಅದನ್ನು ತೊಳೆದರು. ಕೋಟೆಯಲ್ಲಿ ಅರಳಿದ್ದ ಕಾಡು ಹೂವುಗಳಿಂದಲೇ ಸಮಾಧಿಗೆ ಪೂಜೆ ಸಲ್ಲಿಸಿದರು.

ಆ ವೇಳೆಗೆ ಸರಿಯಾಗಿ ಪೂಜಾರಿಯೂ ಅಲ್ಲಿಗೆ ಬಂದ. ಹತ್ತಿರದ ಹಳ್ಳಿಯೊಂದರಲ್ಲಿ ಅವನ ವಾಸ. ಸಮಾಧಿಯ ಬಳಿ ಹೋಗಿ ಅವನು ಸಮಾಧಿಯ ಸ್ವರೂಪದಲ್ಲಿ ಬದಲಾವಣೆಯಾಗಿರುವುದನ್ನು ಅಲ್ಲಿಯೇ ಹತ್ತಿರ ನಾಲ್ಕಾರು ಜನರು ಕೂತಿರುವುದನ್ನು ಗಮನಿಸಿದ. ‘ಈ ಜನರು ನಮ್ಮ ಸಮಾಜದಂತೆ ಕಾಣುವುದಿಲ್ಲ. ಅಂದ ಮೇಲೆ ಸಮಾಧಿಗೆ ಪೂಜೆ ಮಾಡಿದರಾದರೂ ಹೇಗೆ?’ ಎಂದು ವಿಚಾರ ಮಾಡಿದ. ಅವನ ಮನಸ್ಸಿನಲ್ಲಡಗಿದ್ದ ಪಾಪಾತ್ಮ ಎಚ್ಚರಗೊಂಡ. ನೇರ ಸಮಾಧಿಯ ಬಳಿ ಹೋಗಿ ಅವನು ಸಮಾಧಿಯ ಮೇಲಿಡಲಾಗಿದ್ದ ಹೂಗಳನ್ನು ಕಾಲಿನಿಂದ ಸರಿಸಿದ. ಅಲ್ಲಿ ಕುಳಿತಿದ್ದವರಿಗೂ ಉಗುಳು ಸೇವೆ ಮಾಡಿದ. ಇದರಿಂದ ಜ್ಯೋತಿ ಬಾ ಮಿತಿಮೀರಿ ಸಿಟ್ಟಾದರು. ಮರುಕ್ಷಣದಲ್ಲಿಯೇ ಸಂಯಮ ತಾಳಿ ಅವರು ಆ ಪೂಜಾರಿಯ ಜನ್ಮ ಜಾಲಾಡಿದರು. ಆಗ ಅವನಿಗೆ ಸ್ವಲ್ಪಎಚ್ಚರವಾಯಿತು. ಪುಣೆಗೆ ಹಿಂದಿರುಗಿ ಅವರು ಎಲ್ಲರಿಗೂ ಸಮಾಧಿಯ ದುಃಸ್ಥಿತಿಯನ್ನು ಕುರಿತು ವಿವರಿಸಿದರು. ಆಗ ಎಲ್ಲರಿಗೂ ತಮ್ಮ ಅಸಡ್ಡೆಯ ಅರಿವಾಯಿತು. ಇಂದು ರಾಯಗಢ ಹೊಸ ರೂಪ ತಾಳಿರುವುದಕ್ಕೆ ಜ್ಯೋತಿ ಬಾರವರ ಪ್ರವಾಸವೇ ಮೂಲ ಕಾರಣವೆಂದರೆ ತಪ್ಪಾಗಲಾರದು.

ಕೃಪೆ: ಕರ್ನಾಟಕದ ಸಮಗ್ರ ದಲಿತ ಚರಿತ್ರೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)