varthabharthi

ಸುಗ್ಗಿ

ಕಥಾಸಂಗಮ

ಧ್ವನಿ

ವಾರ್ತಾ ಭಾರತಿ : 20 Jul, 2019
ವಿಶ್ವನಾಥ ಎನ್. ನೇರಳಕಟ್ಟೆ, ಪುತ್ತೂರು

ನವೀನ ಆಸ್ಪತ್ರೆಯಿಂದ ಹೊರಟು ರೂಮಿಗೆ ಬಂದವನೇ, ಕುರ್ಚಿಯ ಮೇಲೆ ಕುಳಿತುಕಾಲುಗಳನ್ನು ನೀಳವಾಗಿ ಚಾಚಿದ. ಹಿಂದಿನ ರಾತ್ರಿಯೆಲ್ಲಾ ಆಸ್ಪತ್ರೆಯಲ್ಲೇ ಕಳೆದ ಕಾರಣ ಆತನ ಮೈ- ಕೈಯೆಲ್ಲಾ ಪದ ಹಾಡಲಾರಂಭಿಸಿದ್ದವು. ನಿದ್ರೆಯಿಲ್ಲದ ಆತನ ಕಣ್ಣುಗಳು ಕೆಂಪಗಾ ಗಿದ್ದವು. ಆದಷ್ಟು ಬೇಗ ಆಸ್ಪತ್ರೆಗೆ ಮತ್ತೆ ಹೋಗಬೇಕು, ಮಹೇಶನಿಗೆ ಪ್ರಜ್ಞೆ ಬಂದಿರಲೂಬಹುದು ಎಂದುಕೊಂಡವನೇ ಸ್ನಾನ ಮುಗಿಸುವುದಕ್ಕೆ ಬಾತ್‌ರೂಮ್ ಕಡೆ ಹೊರಟ. ಅಷ್ಟರಲ್ಲಿ ಆತನ ಕಿಸೆಯಲ್ಲಿದ್ದ ಮಹೇಶನ ಮೊಬೈಲ್ ರಿಂಗಾಯಿತು. ಮಹೇಶನ ತಂದೆಯದ್ದೇ ಕರೆ ಎಂದು ಅರಿತ ಆತ, ಒಂದು ಸಲ ಕೆಮ್ಮಿ ತನ್ನ ಧ್ವನಿಯನ್ನು ಬದಲಾಯಿಸಿಕೊಂಡು ಬಳಿಕ ಮಾತನಾಡಲಾರಂಭಿಸಿದ.

‘‘ಹ್ಞಾ! ನಾನು ನಾಳೆಯಲ್ಲ, ನಾಡಿದ್ದು ಬೆಳಗ್ಗೆ ನಿನ್ನ ರೂಮಿಗೆ ಬರುತ್ತೇನೆ’’ ಫೋನಿಡುವುದಕ್ಕೆ ಮುಂಚೆ ಮಹೇಶನ ಅಪ್ಪಹೇಳಿದ ಈ ಮಾತುಗಳು ದಿಲ್ಲಿಯ ಕೊರೆಯುವ ಚಳಿಯಲ್ಲೂ ನವೀನನ ಕೆನ್ನೆಯ ಮೇಲೆ ಬೆವರಿನ ಹನಿಗಳನ್ನು ಮೂಡಿಸಿದವು. ಅಲ್ಲ, ಇನ್ನೆರಡು ದಿನಗಳಲ್ಲಿ ಇಲ್ಲಿಗೆ ಬರುವು ದಾಗಿ ಮಹೇಶನ ತಂದೆ ಹೇಳುತ್ತಿದ್ದಾರೆ. ತಾನು ಮುಚ್ಚಿಟ್ಟ ವಿಚಾರ ಇಲ್ಲಿಗೆ ಬಂದ ಬಳಿಕ ಅವರಿಗೆ ಗೊತ್ತಾಗಲೇಬೇಕು. ಈ ವಿಚಾರ ಮುಚ್ಚಿಟ್ಟಿದ್ದೇಕೆಂದು ಅವರು ಪ್ರಶ್ನಿಸಿದರೆ ತಾನೇನು ಹೇಳಲಿ? ಅವರು ಕೇಳುವ ಪ್ರಶ್ನೆಗಳಿಗೆ ಉತ್ತರ ಹೇಳಲು ತಾನು ಅರ್ಹನೇ? ತಾನು ನೀಡಬಹುದಾದ ಉತ್ತರವಾದರೂ ಏನು? ನವೀನನ ಮನಸ್ಸು ಪ್ರಶ್ನೆಗಳ ಆಗರವಾಯಿತೇ ವಿನಃ ಉತ್ತರವೊಂದೂ ಹೊಳೆಯಲೇ ಇಲ್ಲ. ಹಿಂದಿನ ದಿನವಷ್ಟೇ ತನ್ನ ಗಂಟಲಿನಲ್ಲಿ ತಾನು ಮೂಡಿಸಿಕೊಂಡ ಹೊಸ ಧ್ವನಿ ತನ್ನ ಧ್ವನಿಯನ್ನೇ ಕಿತ್ತುಕೊಳ್ಳುವಂತಾಗಿದೆಯಲ್ಲಾ ಎಂದು ಅನಿಸಿತು ನವೀನನಿಗೆ. ಕಾಪಾಡಿಕೊಂಡು ಬಂದ ರಹಸ್ಯವನ್ನು ಉಳಿಸಿಕೊಳ್ಳುವ ಬಗೆ ಹೇಗೆ ಎನ್ನುವುದು ಆತನಿಗೆ ತಿಳಿಯಲೇ ಇಲ್ಲ.

 ನವೀನ ದಿಲ್ಲಿ ಸೇರಿಕೊಂಡದ್ದು ಮಿಮಿಕ್ರಿ ಕಲಾವಿದನಾಗಿ. ಚಿಕ್ಕಂದಿನಿಂದಲೂ ಅಷ್ಟೆ, ಮೇಸ್ಟ್ರು ಮಾಡುತ್ತಿದ್ದ ಪಾಠ ಅವನ ತಲೆಗೆ ಹೋಗುತ್ತಿತ್ತೋ ಇಲ್ಲವೋ, ಅವರ ಧ್ವನಿಯನ್ನು ಮಾತ್ರ ಚೆನ್ನಾಗಿಯೇ ಅನುಕರಣೆ ಮಾಡುತ್ತಿದ್ದ. ಮನೆಯವರೆದುರು, ಸ್ನೇಹಿತರೆದುರು ಮಿಮಿಕ್ರಿ ಮಾಡಿ ಬೆನ್ನು ತಟ್ಟಿಸಿಕೊಳ್ಳುತ್ತಿದ್ದ. 10ನೇ ತರಗತಿಗೇ ಓದಿಗೆ ವಿದಾಯ ಹೇಳಿದ ನವೀನನ ಕೈಹಿಡಿದದ್ದು ಆತನೊಳಗಿದ್ದ ಈ ಮಿಮಿಕ್ರಿ ಕಲೆಯೇ. ಮಂಗಳೂರಿನ ಕೆಲವು ಆರ್ಕೆಸ್ಟ್ರಾ ತಂಡಗಳಲ್ಲಿ ಬಿಡಿಗಾಸಿನ ಆಸೆಗೆ ಮಿಮಿಕ್ರಿ ಪ್ರದರ್ಶನ ನೀಡಲು ಶುರುಮಾಡಿದ ನವೀನ, ತನ್ನ ಚಿಕ್ಕಪ್ಪನ ಸಹಾಯದಿಂದ ದಿಲ್ಲಿಯ ಒಂದು ಪ್ರಖ್ಯಾತ ತಂಡದಲ್ಲಿ ಮಿಮಿಕ್ರಿ ಕಲಾವಿದನಾಗಿ ಸೇರಿಕೊಂಡಿದ್ದ. ತನ್ನಲ್ಲಿರುವ ಕಲೆಗೂ ಒಂದು ವೌಲ್ಯವಿದೆ ಎಂದು ನವೀನನಿಗೆ ತಿಳಿದದ್ದು ಆ ಬಳಿಕವೇ.

ದಿನಕ್ಕೊಂದರಂತೆ ತಿಂಗಳು ಪೂರ್ತಿ ಕಾರ್ಯಕ್ರಮ ಇದ್ದೇ ಇರುತ್ತಿತ್ತು. ನವೀನನಲ್ಲಿದ್ದ ಪ್ರತಿಭೆ ಗುರುತಿಸಿದ್ದ ತಂಡದ ಮಾಲಕ ಒಳ್ಳೆಯ ಸಂಭಾವನೆಯನ್ನೇ ನೀಡುತ್ತಿದ್ದ. ಅಷ್ಟು ಮಾತ್ರವಲ್ಲದೆ, ಜನರು ತನ್ನನ್ನು ಪ್ರತ್ಯೇಕವಾಗಿ ಗುರುತಿಸಿ, ಮೆಚ್ಚುಗೆಯ ಮಾತುಗಳನ್ನಾಡಿದಾಗಲೆಲ್ಲ ತಾನು ಕಲಾವಿದ ನಾಗಿದ್ದೂ ಸಾರ್ಥಕ ಎಂಬ ಭಾವನೆ ನವೀನನಲ್ಲಿ ಮೂಡುತ್ತಿತ್ತು. ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆಗಳನ್ನು ಮತ್ತೆ ಮತ್ತೆ ನೆನಪು ಮಾಡಿಕೊಂಡು ಖುಷಿಪಡುತ್ತಿದ್ದದ್ದೂ ಇತ್ತು.

 ನವೀನನಿಗೆ ಮಹೇಶನ ಪರಿಚಯವಾದದ್ದು ಈ ಆರ್ಕೆಸ್ಟ್ರಾ ತಂಡದಲ್ಲಿಯೇ. ಮಹೇಶ ಉತ್ತಮ ಗಾಯಕ ಎನ್ನುವುದನ್ನು ಆತನ ಮೊದಲ ಪ್ರದರ್ಶನದಲ್ಲಿಯೇ ನವೀನ ಗುರುತಿಸಿದ್ದ. ಮಹೇಶನೂ ಕೂಡಾ ಮಂಗಳೂರಿನವನೇ ಆಗಿದ್ದ ಕಾರಣ ಅವರಿಬ್ಬರ ನಡುವೆ ಒಡನಾಟ ಬೆಳೆಯುವುದಕ್ಕೆ ಹೆಚ್ಚು ದಿನ ಬೇಕಾಗಲಿಲ್ಲ. ಇಬ್ಬರೂ ಒಂದೇ ರೂಮಿನಲ್ಲಿ ಉಳಿದುಕೊಳ್ಳಲಾರಂಭಿಸಿದ ಬಳಿಕ ವಂತೂ ಅವರ ನಡುವಿನ ಅನ್ಯೋನ್ಯತೆ ಮತ್ತಷ್ಟು ಹೆಚ್ಚಾಗಿತ್ತು. ನವೀನನಿಗೆ ಹೋಲಿಸಿದರೆ ಮಹೇಶನಿಗೆ ಮಾತು ಸ್ವಲ್ಪಕಡಿಮೆಯೇ. ತಾನಾಯಿತು, ತನ್ನ ಕೆಲಸವಾಯಿತು ಎಂಬಂತೆ ಇರುತ್ತಿದ್ದ ಮಹೇಶ ವೇದಿಕೆ ಹತ್ತುತ್ತಿದ್ದಂತೆಯೇ ಉತ್ಸಾಹದ ಚಿಲುಮೆಯಾಗಿಬಿಡುತ್ತಿದ್ದ. ಅದ್ಯಾವುದೋ ಶಕ್ತಿ ಮೈಮೇಲೆ ಆವಾಹನೆಯಾದಂತೆ ಹಾಡುತ್ತಿದ್ದ.

‘ಟಕ್ ಟಕ್’ ಬಾಗಿಲು ಬಡಿದ ಸದ್ದು ಕೇಳಿದ ನವೀನನ ಮನಸ್ಸು ವಾಸ್ತವತೆಗೆ ಮರಳಿತು. ನೋಡಿ ದರೆ ಪಕ್ಕದ ಕೋಣೆಯ ಹುಡುಗ. ತನ್ನ ಊರಿಗೆ ಹೋಗುತ್ತಿರುವುದಾಗಿ ಹಿಂದಿಯಲ್ಲಿ ತಿಳಿಸಿದ ಆತ, ಕೋಣೆಯ ಬೀಗದ ಕೈಯನ್ನು ನವೀನನ ಕೈಯಲ್ಲಿಟ್ಟು, ಮಾಲಕನಿಗೆ ನೀಡಲು ತಿಳಿಸಿ ಹೊರಟುಬಿಟ್ಟ. ಅದೊಂದು ದಿನ ಮಹೇಶನೂ ಕೂಡಾ ಆತುರಾತುರವಾಗಿ ತನ್ನ ಊರಿಗೆ ಹೊರಟು ನಿಂತಿದ್ದ. ಆತನ ತಂದೆಗೆ ಹೃದಯಾಘಾತವಾಗಿರುವುದಾಗಿ ಕರೆ ಬಂದಿತ್ತು. ಮಹೇಶನ ಕುಟುಂಬದ ಹಿನ್ನೆಲೆ ನವೀನನಿಗೆ ಗೊತ್ತಾದದ್ದು ಆವಾಗಲೇ. ತಾಯಿ ಕಳೆದುಕೊಂಡಿದ್ದ ತನ್ನನ್ನು ಮತ್ತು ತಂಗಿಯನ್ನು ಸಾಕಲು ತಂದೆ ಪಟ್ಟಿರುವ ಕಷ್ಟವೆಲ್ಲವನ್ನೂ ಅಳುತ್ತಲೇ ಹೇಳಿದ್ದ ಮಹೇಶ. ಮಹೇಶನಿಗೆ ಹೋಲಿಸಿದರೆ ತಾನು ಪಟ್ಟಿರುವ ಕಷ್ಟ ಏನೂ ಅಲ್ಲ ಎಂದು ಅನಿಸಿಬಿಟ್ಟಿತ್ತು ನವೀನನಿಗೆ. ಇಷ್ಟು ಕಷ್ಟಗಳನ್ನು ಅನುಭವಿಸಿಯೂ ಪ್ರತಿಭಾವಂತನಾಗಿ ಬೆಳೆದಿದ್ದಾನಲ್ಲ ಎಂದು ಮಹೇಶನ ಕುರಿತು ಹೆಮ್ಮೆ ಮೂಡಿತ್ತು ನವೀನನಿಗೆ. ಮಹೇಶನಿಗೆ ಧೈರ್ಯ ಹೇಳಿ ಊರಿಗೆ ಕಳಿಸಿಕೊಟ್ಟಿದ್ದ.

ಮೂರು ದಿನ ಕಳೆದು ಒಂದಿಷ್ಟು ನಿರಾಳತೆ ತುಂಬಿದ ಮುಖ ಹೊತ್ತು ಮಹೇಶ ರೂಮಿಗೆ ಮರಳಿದ್ದ. ಮುಂದೇನಾದರೂ ಹೃದಯಾಘಾತವಾದರೆ ತನ್ನ ತಂದೆ ಬದುಕುಳಿಯುವುದು ಕಷ್ಟ ಎಂಬ ವೈದ್ಯರ ಮಾತು ಆತನ ಚಿಂತೆಗೂ ಕಾರಣವಾಗಿತ್ತು. ನಾನು ದೊಡ್ಡ ಗಾಯಕ ಆಗಬೇಕೂಂತ ತಂದೆ ಆಸೆ ಹೊತ್ತಿದ್ದಾರೆ ಮಾರಾಯ. ಹೇಗಾದರೂ ಮಾಡಿ ಅವರ ಆಸೆ ತೀರಿಸಲೇಬೇಕು, ಆಶಾವಾದದ ಭಾವ ಚೆಲ್ಲುತ್ತಾ ನುಡಿದಿದ್ದ ಮಹೇಶ. ನವೀನನ ಕೈ ಮಹೇಶನ ಭುಜವನ್ನು ಮೆಲುವಾಗಿ ಸ್ಪರ್ಶಿಸಿತು, ನಿನ್ನ ನಡಿಗೆಗೆ ನಾನೂ ಜೊತೆಯಾಗುತ್ತೇನೆ ಎಂಬ ಭರವಸೆಯಲ್ಲಿ. ಇದಾಗಿ ಎರಡು ತಿಂಗಳುಗಳು ಕಳೆದಿದ್ದವಷ್ಟೆ. ಮಹೇಶನ ವರ್ತನೆ ಸಹಜತೆಯನ್ನು ಕಳೆದುಕೊಳ್ಳುತ್ತಿದೆ ಎಂದು ನವೀನನಿಗೆ ಅನಿಸತೊಡಗಿತ್ತು. ಈತನ ಹಾಡನ್ನು ಅದ್ಯಾವುದೋ ಹುಡುಗಿ ಕೇಳಿ, ಮೆಚ್ಚಿಕೊಂಡಿದ್ದಳಂತೆ. ಅವಳೊಂದಿಗೆ ಅತಿಯಾಗಿ ಸಮಯ ಕಳೆಯಲು ಆರಂಭಿಸಿದ್ದ. ಬಿಡುವಿದ್ದಾಗಲೆಲ್ಲಾ ನವೀನನೊಂದಿಗೆ ಕಾಲ ಕಳೆಯುತ್ತಿದ್ದ ಮಹೇಶ ಈಗೀಗ ಮಾತಿಗೆ ಸಿಗುವುದೇ ಅಪರೂಪವಾಗತೊಡಗಿತ್ತು. ಮಹೇಶ ದಾರಿ ತಪ್ಪುತ್ತಿದ್ದಾನೆ ಎನ್ನುವುದು ನವೀನನಿಗೆ ಸ್ಪಷ್ಟವಾಗತೊಡಗಿತ್ತು. ಆತನಿಗೆ ಬುದ್ಧಿ ಹೇಳುವ ಪ್ರಯತ್ನವನ್ನೂ ಮಾಡಿದ್ದ. ‘‘ಅಲ್ಲ ಮಾರಾಯ, ಆ ಹುಡುಗಿಯನ್ನು ಲವ್ ಮಾಡುವುದು ತಪ್ಪು ಅಂತ ನಾನು ಹೇಳುವುದಿಲ್ಲ. ಆದ್ರೆ ಅವಳ ಬಗ್ಗೆ ಸರಿ ತಿಳ್ಕೊಳ್ಳದೆ ಲವ್ ಮಾಡುವುದು ಸರಿಯಲ್ಲ ಅಂತ ಕಾಣ್ತದೆ ಮಾರಾಯ’’.

ಅಕ್ಷರಶಃ ಮಂಗಳೂರು ಶೈಲಿಯ ಈ ಬುದ್ಧಿಮಾತಿಗೆ ಮಹೇಶನ ಪ್ರತಿಕ್ರಿಯೆ ತೀಕ್ಷ್ಣವಾಗಿಯೇ ಇತ್ತು. ‘‘ಅವ್ಳ ಬಗ್ಗೆ ಏನೂ ಗೊತ್ತಿಲ್ಲದೆ ನಾನು ಲವ್ ಮಾಡ್ತೇನಾ ಮಾರಾಯ? ಅವ್ಳ ತುಂಬಾ ಒಳ್ಳೆವ್ಳ. ನಿಂಗೆಂತ ಗೊತ್ತುಂಟು?’’ ಚಪ್ಪಲಿ ಕೊಟ್ಟು ಹೊಡೆಸಿಕೊಂಡ ಸ್ಥಿತಿ ನವೀನನದ್ದಾಗಿತ್ತು. ಆದರೂ ಸ್ನೇಹಿತನನ್ನು ಒಳ್ಳೆದಾರಿಗೆ ತರಬೇಕೆಂಬ ಮನೋಭಾವ ಆತನನ್ನು ಸುಮ್ಮನಿರಲು ಬಿಡಲಿಲ್ಲ.

‘‘ಮತ್ತೆ ಮೊನ್ನೆ ತಂದೆಯ ಆಸೆ, ತಂಗಿಯ ಮದುವೆ ಅಂತ ಹೇಳಿಕೊಂಡಿದ್ಯಲ್ಲ, ಅದೆಲ್ಲ ಈಗ ನಿನ್ಗೆ ನೆನಪೇ ಇಲ್ವಾ?’’ ಮಹೇಶ ಮರೆತೇಬಿಟ್ಟಂತಿದ್ದ ವಿಚಾರವನ್ನು ನವೀನ ನೆನಪಿಗೆ ತಂದಿದ್ದ.

ಬೇರೆಯವರ ಆಸೆಯನ್ನು ತೀರಿಸಿಕೊಂಡೇ ಇದ್ದುಬಿಟ್ಟರೆ ನಮ್ಮ ಆಸೆ ಆಸೆಯಾಗಿಯೇ ಉಳಿದುಬಿಡುತ್ತದೆ ಮಾರಾಯ, ನಿರ್ಭಾವುಕನಾಗಿ ನುಡಿದಿದ್ದ ಮಹೇಶ. ಅಷ್ಟು ಪ್ರೀತಿಸುತ್ತಿದ್ದ ತಂದೆಯನ್ನು ಬೇರೆಯವ ಎಂದು ಕರೆಯುವಷ್ಟರಮಟ್ಟಿಗೆ ಬದಲಾಗಿಬಿಟ್ಟನಲ್ಲಾ ನನ್ನ ಸ್ನೇಹಿತ ಎಂದು ಅಚ್ಚರಿಯಾಗಿತ್ತು ನವೀನನಿಗೆ.

ಪ್ರೀತಿ ಮಾಯೆ ಉಷಾರು....ಕಣ್ಣೀರ್ ಮಾರೊ ಬಜಾರು.... ಪಕ್ಕದ ಬಾಡಿಗೆಕೋಣೆಯಲ್ಲಿದ್ದ ಬೆಂಗಳೂರಿನ ವ್ಯಕ್ತಿಯೊಬ್ಬರ ಮೊಬೈಲ್‌ನಲ್ಲಿ ಮೂಡಿಬರುತ್ತಿದ್ದ ಹಾಡು, ನವೀನನ ಕಿವಿಗೆ ಸ್ಪಷ್ಟವಾಗಿ ಕೇಳಿಸಿತು. ಮೊಬೈಲ್ ಕಿವಿಗಿಟ್ಟುಕೊಂಡು ಮಾತಿನಲ್ಲೇ ಕಳೆದುಹೋಗಿದ್ದ ಮಹೇಶನ ಕಿವಿಗೆ ಕೇಳಿಸಲೇ ಇಲ್ಲ. ವಿಷಾದದ ನಗೆಯೊಂದು ನವೀನನ ಮುಖದಲ್ಲಿ ಮೂಡಿ ಮರೆಯಾಯಿತು. ಭಯ್ಯಿ ಭಯ್ಯಿ, ಮನೆ ಮಾಲಕನ ಮೊಮ್ಮಗನ ಕರೆ ನವೀನನ ಯೋಚನೆಗೆ ಭಂಗ ತಂದಿತು. ಕೈಯಲ್ಲಿ ಕೆಂಪು ಬಣ್ಣದ ಬಾಕ್ಸ್. ಒಳಗೆ ಅಚ್ಚುಕಟ್ಟಾಗಿ ಕತ್ತರಿಸಿಟ್ಟಿದ್ದ ಕೇಕ್ ತುಂಡುಗಳು. ಆಜ್ ಮೇರಾ ಬರ್ತ್‌ಡೇ. ಕೇಕ್ ಲೇಲೋ ಭಯ್ಯಿ. ಮುದ್ದಾಗಿ ತೊದಲುತ್ತಾ ನುಡಿದ ಆ ಹುಡುಗ ಕೇಕ್ ತುಂಬಿದ್ದ ಬಾಕ್ಸನ್ನು ನವೀನನ ಎದುರು ಹಿಡಿದ. ಯಾಂತ್ರಿಕವೆಂಬಂತೆ ಕೇಕ್ ತುಂಡನ್ನು ತೆಗೆದುಕೊಂಡ ನವೀನ ಶುಭಾಶಯವನ್ನೂ ಹೇಳಲಿಲ್ಲ. ಆತನ ತಲೆಯ ತುಂಬಾ ಮಹೇಶನ ಯೋಚನೆಯೇ ತುಂಬಿಕೊಂಡಿತ್ತು. ಶುಭಾಶಯದ ನಿರೀಕ್ಷೆಯಲ್ಲಿದ್ದ ಹುಡುಗ ಮುಖ ಪೆಚ್ಚು ಮಾಡಿಕೊಂಡು ಅಲ್ಲಿಂದ ತೆರಳಿದ. ಅದೊಂದು ದಿನ ಮಹೇಶನೂ ಕೂಡಾ ದುಬಾರಿಯೆಂದೇ ಹೇಳಬಹುದಾದ ಕೇಕ್‌ಗೆ ಆರ್ಡರ್ ಕೊಟ್ಟಿದ್ದ, ತಾನು ಪ್ರೀತಿಸುತ್ತಿದ್ದ ಹುಡುಗಿಯ ಹುಟ್ಟುಹಬ್ಬಕ್ಕಾಗಿ! ಅಲ್ಲದೆ, ವಜ್ರದುಂಗುರವನ್ನೂ ಕೂಡಾ. ಅಲ್ಲ ಮಾರಾಯ, ಉಂಗುರಕ್ಕೆ ಹಣ ಎಲ್ಲಿಂದ? ಸಂಬಳ ಎಲ್ಲ ಇದಕ್ಕೇ ಹಾಕಿದ್ಯಾ ಹೇಗೆ?, ಸಹಜ ಕುತೂಹಲದಿಂದ ಪ್ರಶ್ನಿಸಿದ್ದ ನವೀನ.

ನವೀನ ಪ್ರಶ್ನಿಸಿದ್ದೇ ದೊಡ್ಡ ತಪ್ಪು ಎಂಬಂತೆ ಹಾರಾಡಿದ್ದ ಮಹೇಶ. ‘‘ಹೌದು! ಎಂತಾಯ್ತೀಗ? ಅಷ್ಟು ಪ್ರೀತಿ ಮಾಡುವವ್ಳಿಗೆ ಎಂತ ಕೊಟ್ರೂ ಕಡಿಮೆಯೇ. ನಿಂಗೆಂತದ್ದಕ್ಕೆ ಹೊಟ್ಟೆ ಉರಿ? ಬೇಕಿದ್ರೆ ನೀನೂ ಯಾರನ್ನಾದ್ರೂ ಲವ್ ಮಾಡು. ಬಿಟ್ಟಿ ಅಡ್ವೈಸ್ ಕೊಡ್ಲಿಕೆ ಬರ್ಬೇಡ, ಗೊತ್ತಾಯ್ತಾ?’’ ನವೀನನ ಕಾಳಜಿಯನ್ನು ಮತ್ಸರವೆಂದೇ ಪರಿಭಾವಿಸಿದಂತಿತ್ತು ಮಹೇಶನ ಮಾತು.

ಇದಾದ ಮೇಲೆ ಮಹೇಶ- ನವೀನರ ನಡುವಿನ ಮಾತುಕತೆ ಅಷ್ಟಕ್ಕಷ್ಟೇ ಎಂಬಂತಾಗಿತ್ತು. ಒಂದೇ ರೂಮಿನಲ್ಲಿ ಇದ್ದಾರೆ ಎಂಬುವುದು ಬಿಟ್ಟರೆ ಬೇರೆಲ್ಲದರಲ್ಲಿಯೂ ಅಪರಿಚಿತರಂತೇ ಇದ್ದರು.

ಎರಡು ತಿಂಗಳು ಕಳೆದಿದ್ದವೇನೋ, ಪೆಚ್ಚುಮೋರೆ ಮಾಡಿಕೊಂಡು ಮಹೇಶ ರೂಮಿಗೆ ಬಂದಿದ್ದ. ಮಾತನಾಡಿಸಿ ಬೈಸಿಕೊಳ್ಳುವುದೇಕೆಂದು ನವೀನ ಮಾತನಾಡದೆ ಸುಮ್ಮನೆ ಕುಳಿತ.

ಈ ಪ್ರೀತಿ ಎಲ್ಲ ಬರೀ ಮೋಸ ಮಾರಾಯ. ಈ ಹುಡುಗಿಯರನ್ನಂತೂ ನಂಬ್ಲೇಬಾರ್ದು, ಅವನಾಗಿಯೇ ಬಡಬಡಿಸಲಾರಂಭಿಸಿದ. ಅತಿಯಾಗಿ ನಂಬಿದರೆ ಹುಡುಗಿಯೇನು, ಹುಡುಗನೇನು,ಯಾರು ಬೇಕಾದರೂ ಮೋಸ ಮಾಡಿಯೇ ಮಾಡುತ್ತಾರೆ ಎಂದು ಹೇಳಬೇಕೆನಿಸಿತು ನವೀನನಿಗೆ. ಆದರೂ ಅವುಡುಗಚ್ಚಿಕೊಂಡು ಕುಳಿತ.

ನವೀನನಿಂದ ಏನೂ ಪ್ರತಿಕ್ರಿಯೆ ಬಾರದಿರುವುದನ್ನು ಕಂಡು ಮಹೇಶನೇ ಮಾತು ಮುಂದು ವರಿಸಿದ. ಇಷ್ಟು ಟೈಮ್ ಲವ್ ಮಾಡಿದ್ದಾಳೆ. ಈಗ ನಾನು ಬೇಡಂತೆ. ಬೇರೆ ಯಾರನ್ನೋ ಮದ್ವೆ ಆಗ್ಲಿಕೆ ಹೊರ್ಟಿದ್ದಾಳೆ. ಕೋಪದ ತೀವ್ರತೆಗೆ ಮಹೇಶನ ಧ್ವನಿ ನಡುಗುತ್ತಿತ್ತು. ಕಣ್ಣಲ್ಲಿ ಹನಿ ನೀರು. ಬೇರೆಯವ ರಾಗಿದ್ದರೆ ಇದೇ ಪರಿಸ್ಥಿತಿಯನ್ನು ಚೆನ್ನಾಗಿ ಬಳಸಿಕೊಂಡು ಮಹೇಶನಿಂದ ಪಡೆದ ಬೈಗುಳದ ಸಾಲ ವನ್ನೆಲ್ಲ ಆ ಕ್ಷಣದಲ್ಲಿಯೇ ತೀರಿಸಿಬಿಡುತ್ತಿದ್ದರೇನೋ! ಆದರೆ ನವೀನ ಆ ಜಾಯ ಮಾನದವನಲ್ಲ. ಗಾಯಕ್ಕೆ ಉಪ್ಪುಸವರುವ ಕೆಲಸ ಮಾಡಲಿಲ್ಲ. ತನ್ನ ಕೈಲಾದಷ್ಟರಮಟ್ಟಿಗೆ ಸಮಾಧಾನದ ಮಾತುಗಳನ್ನೇ ಹೇಳಿದ. ಅದೆಷ್ಟೋ ಹೊತ್ತಿನವರೆಗೂ ಮಹೇಶ ಚಿರಿಪಿರಿಗುಟ್ಟುತ್ತಲೇ ಇದ್ದ.

ಮರುದಿನ ರಾತ್ರಿ, ಆರ್ಕೆಸ್ಟ್ರಾದಲ್ಲಿದ್ದ ನವೀನನ ಮೊಬೈಲ್ ರಿಂಗಣಿಸಿತ್ತು. ಮಹೇಶ ವಿಷ ಸೇವಿಸಿ ದ್ದಾನೆ, ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ- ವಿಷಯ ತಿಳಿದ ನವೀನ ಆತುರಾತುರವಾಗಿ ಹೊರಟು ಆಸ್ಪತ್ರೆಗೆ ಬಂದ. ಐಸಿಯುನಲ್ಲಿದ್ದ. ತನ್ನ ಸಮಾಧಾನದ ಮಾತುಗಳನ್ನೂ ಕಿವಿಗೆ ಹಾಕಿಕೊಳ್ಳದೆ ಪೊಳ್ಳು ಪ್ರೀತಿಯ ನೆಪ ಇಟ್ಟುಕೊಂಡು ಸಾಯಹೊರಟಿದ್ದಾನಲ್ಲ ಎಂದು ಅನಿಸದಿರಲಿಲ್ಲ ನವೀನನಿಗೆ.

ಆಸ್ಪತ್ರೆಯಲ್ಲೇ ರಾತ್ರಿ ಕಳೆದ ನವೀನನನ್ನು ಮೊಬೈಲ್ ರಿಂಗಣ ಎಚ್ಚರಿಸಿತು. ನೋಡಿದರೆ ಯಾವುದೋ ಅಪರಿಚಿತ ಸಂಖ್ಯೆ. ನಿರಾಸಕ್ತಿಯಿಂದಲೇ ನವೀನ ಕರೆ ಸ್ವೀಕರಿಸಿದ. ಹಲೋ ನವೀನ, ನಾನು ಮಹೇಶನ ಅಪ್ಪ. ಅವ ಫೋನ್ ತೆಗಿತಲೇ ಇಲ್ಲ. ಅದಕ್ಕೆ ನಿನ್ಗೆ ಕಾಲ್ ಮಾಡಿದ್ದು. ಅವ ನಿನ್ನೊಟ್ಟಿಗೇ ಇದ್ದಾನಾ? ನವೀನನಿಗೆ ಏನು ಹೇಳಬೇಕೆಂದೇ ತಿಳಿಯಲಿಲ್ಲ. ನಿಜ ವಿಚಾರ ತಿಳಿಸಹೊರಟ ಆತನನ್ನು ಮನಸ್ಸು ಒತ್ತಾಯಪೂರ್ವಕವಾಗಿ ತಡೆಯಿತು. ಇನ್ನೊಂದು ಬಾರಿ ಹೃದಯಾಘಾತವಾದರೆ ಬದುಕುಳಿಯದ ವ್ಯಕ್ತಿಗೆ ಈ ವಿಚಾರ ತಿಳಿಸುವುದಾದರೂ ಹೇಗೆ? ಆತನ ಮನಸ್ಸು ಸರಿಯಾಗಿಯೇ ನಿರ್ಧರಿಸಿತ್ತು.

ಅ...ವನು.. ಸ್ನಾ..ನ ಮಾ..ಡ್ಲಿಕೆ ಹೋಗಿ...ದ್ದಾನೆ. ಹಾಗೆ.. ಪೋ..ನು ತೆಕ್ಕೊ..ಳ್ಳಿಲ್ಲ, ತಡವರಿಸುತ್ತಲೇ ನವೀನನ ನಾಲಗೆ ಸುಳ್ಳಾಡಿತ್ತು. ಮತ್ತೆ ಕರೆ ಮಾಡುವುದಾಗಿ ತಿಳಿಸಿದ ಅವರು ಫೋನಿರಿಸಿದ್ದರು. ಈ ಹೊತ್ತಿಗೆ ಸುಳ್ಳು ಹೇಳಿ ಪರಿಸ್ಥಿತಿಯನ್ನು ಹೇಗೋ ನಿಭಾಯಿಸಿದ್ದೇನೆ. ಮತ್ತೆ ಕರೆ ಬಂದರೆ ಏನು ಮಾಡುವುದಪ್ಪಾ? ಎಂಬ ಚಿಂತೆ ನವೀನನನ್ನು ಕಾಡಲಾರಂಭಿಸಿತು. ಐಸಿಯು ಕೊಠಡಿಗೆ ತೆರಳಿ ಮಹೇಶನ ಕಿಸೆಯಲ್ಲಿದ್ದ ಮೊಬೈಲ್ ತೆಗೆದುಕೊಂಡು ತನ್ನ ಬಳಿಯೇ ಇರಿಸಿಕೊಂಡ.

ನವೀನನ ಚಿಂತೆ ಹತ್ತೇ ನಿಮಿಷದಲ್ಲಿ ನಿಜವಾಗಿತ್ತೂ ಕೂಡ. ಮತ್ತೆ ಕರೆ ಬಂದಿತ್ತು, ಮಹೇಶನದೇ ಮೊಬೈಲ್‌ಗೆ. ತಕ್ಷಣಕ್ಕೆ ನವೀನನಿಗೆ ಹೊಳೆದ ಉಪಾಯ ಒಂದೇ, ಮಹೇಶನ ಧ್ವನಿಯನ್ನು ಅನುಕರಿಸಿ ಮಾತನಾಡುವುದು. ಹೇಗೂ ಇನ್ನೆರಡು ದಿನಗಳಲ್ಲಿ ಮಹೇಶ ಗುಣಮುಖನಾದಾನು. ಎರಡು ದಿನ ಪರಿಸ್ಥಿತಿ ನಿಭಾಯಿಸಿದರೆ ಸಾಕು ಎಂದುಕೊಂಡವನೇ ಕರೆ ಸ್ವೀಕರಿಸಿ, ಮಹೇಶನಂತೆಯೇ ಮಾತನಾಡತೊಡಗಿದ. ಪ್ರಯತ್ನ ಫಲಿಸಿತ್ತು. ಮಹೇಶನ ತಂದೆ ಸಂಪೂರ್ಣ ನಂಬಿಬಿಟ್ಟಿದ್ದರು. ತನ್ನಲ್ಲಿರುವ ಈ ವಿಶಿಷ್ಟ ಪ್ರತಿಭೆಯ ಬಗೆಗೆ ಆ ಕ್ಷಣಕ್ಕೆ ಅತ್ಯಂತ ಹೆಮ್ಮೆ ಮೂಡಿತ್ತು ನವೀನನಿಗೆ. ಮಹೇಶನ ಪರಿಚಯ ಉಂಟಾದಂದಿನಿಂದ ಹಿಡಿದು ಹಿಂದಿನ ದಿನದವರೆಗೂ ನಡೆದ ಘಟನೆಗಳೆಲ್ಲವೂ ನವೀನನ ಮನಸ್ಸಿನಲ್ಲಿ ಮೂಡಿನಿಂತಿತ್ತು. ನೆನಪಿನ ಲೋಕದಿಂದ ವಾಸ್ತವ ಜಗತ್ತಿಗೆ ಮರಳಿದ ನವೀನನ ತಲೆತುಂಬಾ ಚಿಂತೆ ಗೂಡು ಕಟ್ಟಿಕೊಂಡಿತ್ತು. ಅಲ್ಲ, ಇನ್ನೆರಡು ದಿನಗಳಲ್ಲಿ ಮಹೇಶನ ತಂದೆ ರೂಮಿಗೆ ಬರುವುದಾಗಿ ಹೇಳಿದ್ದಾರೆ. ಅಷ್ಟರಲ್ಲಿ ಮಹೇಶ ಗುಣಮುಖನಾದರೆ ಸರಿ. ಇಲ್ಲವಾದರೆ? ತಾನು ಬೈಗುಳ ತಿನ್ನಬೇಕಾದೀತು. ಭಯ ಕಾಡಲಾರಂಭಿಸಿತು ನವೀನನಿಗೆ. ಸ್ನಾನ ಮುಗಿಸಿದ ಆತ, ಆತುರಾತುರವಾಗಿ ಹೊರಟು ಆಸ್ಪತ್ರೆಗೆ ಬಂದ. ಇನ್ನೂ ಪ್ರಜ್ಞೆ ಬಂದಿಲ್ಲ. ಈಗಲೇ ಏನೂ ಹೇಳಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ವೈದ್ಯರು. ತಾನು ಮುಚ್ಚಿಟ್ಟ ಸತ್ಯ ಮಹೇಶನ ತಂದೆಗೆ ತಿಳಿದುಬಿಡುತ್ತದೆ ಎಂಬ ಭಯ ನವೀನನಲ್ಲಿ ದ್ವಿಗುಣಗೊಳ್ಳಲಾರಂಭಿಸಿತು. ಆ ರಾತ್ರಿ ಹಾಗೆಯೇ ಕಳೆದುಹೋಯಿತು.

ಬೆಳಗ್ಗೆ ಎದ್ದವನೇ ನವೀನ ಮಾಡಿದ ಮೊದಲ ಕೆಲಸ ಮಹೇಶನಿಗೆ ಪ್ರಜ್ಞೆ ಬಂದಿದೆಯೇ ಎಂದು ನೋಡಿದ್ದು. ಮಧ್ಯಾಹ್ನದವರೆಗೂ ಕಾದದ್ದೇ ಬಂತು. ಪ್ರಜ್ಞೆ ಬರಲಿಲ್ಲ. ಊಟ ಮುಗಿಸಿ ಬರೋಣವೆಂದು ನವೀನ ರೂಮಿನ ಕಡೆಗೆ ಹೊರಟ. ಅರ್ಧ ದಾರಿ ತಲುಪಿದ್ದನಷ್ಟೆ, ಮಹೇಶ ಇನ್ನಿಲ್ಲ ಎಂಬ ಸುದ್ದಿ ಆತನ ಕಿವಿ ಸೀಳಿತು. ಮಗ ಆಸ್ಪತ್ರೆಯಲ್ಲಿದ್ದ ವಿಚಾರ ಮುಚ್ಚಿಟ್ಟಿದ್ದೇಕೆಂದು ಮಹೇಶನ ತಂದೆ ನನ್ನ ಕೊರಳಪಟ್ಟಿ ಹಿಡಿದುಕೇಳದೆ ಇರುತ್ತಾರೆಯೇ? ನಾನೇ ಕೊಲೆಗಾರ, ಅದಕ್ಕಾಗಿಯೇ ವಿಚಾರ ಮುಚ್ಚಿಟ್ಟಿದ್ದೇನೆ ಎಂಬ ಆರೋಪ ವನ್ನೂ ಎದುರಿಸಬೇಕಾದೀತು. ದುಃಖ ತಡೆಯಲಾರದೆ ಆ ಬಡಪಾಯಿ ತಂದೆಯ ಎದೆಬಡಿತವೇ ನಿಂತುಹೋದೀತು. ನನ್ನ ಒಳ್ಳೆತನವನ್ನು ಸಾರಿ ಹೇಳುವ ಒಂದೇ ಒಂದು ಧ್ವನಿಯಾದರೂ ಇಲ್ಲಿದೆಯೇ? ಈ ಎಲ್ಲಾ ಅನರ್ಥಗಳಿಗೆ ಕಾರಣ? ನಾನು. ಅಲ್ಲಲ್ಲ, ನನ್ನ ಧ್ವನಿ.

ಮರುದಿನ ಬೆಳಗ್ಗೆ, ಮಹೇಶನ ತಂದೆ ರೂಮು ತಲುಪಿದ್ದರು. ಒಳಗೆ ಬಂದು ನೋಡಿದರೆ, ಫ್ಯಾನಿಗೆ ನೇತುಬಿಟ್ಟಿದ್ದ ಪಂಚೆ ನವೀನನ ಕುತ್ತಿಗೆಯನ್ನು ಬಲವಾಗಿ ಒತ್ತಿಹಿಡಿದಿತ್ತು. ಮಹೇಶನ ನೆನಪನ್ನು ಹೊತ್ತುಕೊಂಡಿದ್ದ ಕೊನೆಯ ಧ್ವನಿಯೂ ಇನ್ನಿಲ್ಲದಂತಾಗಿ ಹೋಗಿತ್ತು....

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)