varthabharthi

ರಾಷ್ಟ್ರೀಯ

ದಬ್ಬಾಳಿಕೆಯ ಹಿಂದೆ ಬಿಜೆಪಿಯ ಸಂಸದನ ಕೈವಾಡ: ಆರೋಪ

ನಿರಂತರ ಕಿರುಕುಳ, ದಾಳಿ: ಪ.ಬಂಗಾಳದ ಕಂಕಿನಾರದಲ್ಲೀಗ ಮುಸ್ಲಿಮರೇ ಇಲ್ಲ!

ವಾರ್ತಾ ಭಾರತಿ : 20 Jul, 2019

Photo: sabrangindia.in

ಕೊಲ್ಕತ್ತಾ, ಜು.20: ಪಶ್ಚಿಮ ಬಂಗಾಳದ 24 ಉತ್ತರ ಪರಗಣಾದ ಕಂಕಿನಾರ ಎಂಬಲ್ಲಿಗೆ ಇತ್ತೀಚೆಗೆ ಖ್ಯಾತ ಅಂಕಣಕಾರ ಮುದರ್ ಪಥೆರ್ಯ ಭೇಟಿ ನೀಡಿದಾಗ ಹಲವಾರು ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ.

ಡಂಡಂನಿಂದ ಕೇವಲ 35 ಕಿಮೀ ದೂರವಿರುವ ಕಂಕಿನಾರ ಎಂಬಲ್ಲಿ ಮೇ 20, 2019ರಂದು ನಡೆದ ಹಲವಾರು ಕಚ್ಛಾ ಬಾಂಬ್ ದಾಳಿಗಳಲ್ಲಿ ಇಬ್ಬರು ಬಲಿಯಾಗಿ ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಪಥೆರ್ಯ ಅವರು ವಾಯ್ಸ್ ನೋಟ್ ಒಂದನ್ನು ಬಿಡುಗಡೆಗೊಳಿಸಿದ್ದು, ಅದರಲ್ಲಿ ಬಹುಸಂಖ್ಯಾತ ಮುಸ್ಲಿಂ ಜನಸಂಖ್ಯೆಯಿರುವ ಕಂಕಿನಾರ ಪ್ರದೇಶದ ಈಗಿನ ಕಳವಳಕಾರಿ ಸ್ಥಿತಿಗತಿಗಳನ್ನು ವಿವರಿಸಿದ್ದಾರೆ. ಇಲ್ಲಿನ ನಿವಾಸಿಗಳು ಅದೆಷ್ಟು ಬೆದರಿಕೆಯೆದುರಿಸುತ್ತಿದ್ದಾರೆ ಹಾಗೂ ಅದೆಷ್ಟು ಭಯಭೀತರಾಗಿದ್ದಾರೆಂದರೆ ತಮ್ಮದೇ ಪ್ರದೇಶದಲ್ಲಿ ತಮ್ಮ ಸುರಕ್ಷತೆಯ ಬಗ್ಗೆ ಅವರಿಗೆ ಖಾತರಿಯಿಲ್ಲದಂತಾಗಿದೆ.

ಇಲ್ಲಿನ ಕಂಕಿನಾರ ಜೂಟ್ ಮಿಲ್ ಸಮೀಪವಿರುವ ಡರ್ಮ ಲೈನ್ಸ್ ಎಂಬ ಮುಸ್ಲಿಂ ಕಾಲನಿಯಲ್ಲಿ ಹಿಂಸಾಚಾರದ ಸಂದರ್ಭ ಬಹಳಷ್ಟು ದಾಂಧಲೆ ನಡೆದಿತ್ತಲ್ಲದೆ, ಪ್ರತಿಯೊಂದು ಕುಟುಂಬವನ್ನು ಬಲವಂತವಾಗಿ ಹೊರಗಟ್ಟಲಾಗಿದೆ. ಪೊಲೀಸ್ ಆಯುಕ್ತರು ಅವರಿಗೆ ಭದ್ರತೆಯ ಆಶ್ವಾಸನೆ ನೀಡಿದ್ದರೂ ತಮ್ಮ ಬಹುಕಾಲದ ಹಿಂದೂ ನೆರೆಹೊರೆಯವರೇ ತಮ್ಮ ವಿರುದ್ಧ ತಿರುಗಿಬಿದ್ದ ನಂತರ ನಡೆದ ಘಟನಾವಳಿಗಳಿಂದ ಭಯಗೊಂಡಿರುವ ಇಲ್ಲಿನ ನಿವಾಸಿಗಳು ವಾಪಸ್ ಬರಲು ಸಿದ್ಧರಿಲ್ಲ.

ಆದರೆ ತಮ್ಮ ಮಕ್ಕಳು ಮತ್ತೆ ಶಾಲೆಗೆ ಹೋಗುವಂತಾಗಬೇಕೆಂಬುದು ಈ  ಜನರ ಏಕೈಕ ಆಶಯವಾಗಿದೆ. ಇದೀಗ ಪಥೆರ್ಯ ಮತ್ತವರ ಸ್ನೇಹಿತರು ಈ ನಿರಾಶ್ರಿತ  ಕುಟುಂಬಗಳ ಮಕ್ಕಳಿಗೆ ಶಿಕ್ಷಣ, ಅಗತ್ಯ ಪುಸ್ತಕ, ಬರೆಯುವ ಸಾಮಗ್ರಿಗಳು ಹಾಗೂ ಸಮವಸ್ತ್ರ ಒದಗಿಸಲು ಹಣವನ್ನು ಸಂಗ್ರಹಿಸುತ್ತಿದ್ದಾರೆ.

ಮುಸ್ಲಿಮರಾಗಿದ್ದಾರೆಂಬ ಒಂದೇ ಕಾರಣಕ್ಕಾಗಿ ಇಲ್ಲಿನ ಜನರು ತಮ್ಮ ಮನೆಗಳು ಹಾಗೂ ಕೆಲಸಗಳನ್ನು ಕಳೆದುಕೊಂಡು ಪಡುತ್ತಿರುವ ಬವಣೆಯನ್ನು ಅರಿಯಲು ನಗರ ಪ್ರದೇಶಗಳ ನಾಗರಿಕರು ಇಲ್ಲಿಗೆ ಭೇಟಿ ನೀಡಬೇಕೆಂದು ಪಥೆರ್ಯ ಕಳಕಳಿಯ ಮನವಿಯನ್ನೂ ಮಾಡಿದ್ದಾರಲ್ಲದೆ ಜನರಲ್ಲಿ ಜಾಗೃತಿ ಮೂಡಿಸದೇ ಇದ್ದಲ್ಲಿ ಮುಂದಿನ ಐದರಿಂದ ಹತ್ತು ವರ್ಷಗಳಲ್ಲಿ ದೇಶವ್ಯಾಪಿ ಇಂತಹ ಘಟನೆಗಳು ನಡೆಯಬಹುದೆಂದೂ ಎಚ್ಚರಿಸಿದ್ದಾರೆ.

ಕಂಕಿನಾರ ಪ್ರದೇಶದ ಈಗಿನ ಸಂಸದ ಬಿಜೆಪಿಯ ಅರ್ಜುನ್ ಸಿಂಗ್. ಅವರು ಈ ಹಿಂದೆ ಟಿಎಂಸಿಯ ಶಾಸಕರಾಗಿದ್ದು, ನಂತರ ಬಿಜೆಪಿ ಸೇರಿ ಲೋಕಸಭಾ ಚುನಾವಣೆ ಸ್ಪರ್ಧಿಸಿದ್ದರು. ತಮ್ಮ ಕ್ಷೇತ್ರದ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯ ಹಿಂದೆ ಅವರ ಪಾತ್ರವಿದೆಯೆಂಬ ಆರೋಪಗಳೂ ಕೇಳಿ ಬರುತ್ತಿವೆ.

ಕೃಪೆ: sabrangindia.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)