varthabharthi

ಸುಗ್ಗಿ

ಸಮಾಜಮುಖಿ ಸಾಹಿತಿ ‘ಡಾ.ನಾ. ಡಿಸೋಜ’

ವಾರ್ತಾ ಭಾರತಿ : 20 Jul, 2019
ಬನ್ನೂರು ಕೆ.ರಾಜು

ಡಿಸೋಜ ಅವರು ಓದುತ್ತಿದ್ದ ಸಾಗರದ ಹೈಸ್ಕೂಲಿನಲ್ಲಿ ಖ್ಯಾತ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರರ ತಮ್ಮ ಗೊರೂರು ನರಸಿಂಹಾಚಾರ್ಯರು ಮೇಷ್ಟ್ರಾಗಿದ್ದರು. ಅವರು ತರಗತಿಯಲ್ಲಿ ಹೇಳಿಕೊಡುತ್ತಿದ್ದ ಕಥೆಗಳ ಆಕರ್ಷಣೆ, ಜಾನಪದ ಗೀತೆಗಳ, ಕಥೆಗಳ ಪ್ರಭಾವ ಬಾಲ್ಯದಲ್ಲೇ ಡಿಸೋಜ ಅವರಿಗೆ ಸಾಹಿತ್ಯದ ವಾತಾವರಣ ಸೃಷ್ಟಿಸಿತ್ತು. ಕಾಲೇಜಿನಲ್ಲಿ ಖ್ಯಾತ ಕವಿ ಜಿ.ಎಸ್. ಶಿವರುದ್ರಪ್ಪ ಅವರಂಥ ಗುರುವರ್ಯರು ದೊರೆತಿದ್ದದ್ದು ಇವರೊಳಗಿನ ಸಾಹಿತ್ಯ ಮೊಳಕೆಯೊಡೆದು ಚಿಗುರಲು ನೀರೆರೆದಂತಾಗಿತ್ತು. ತಮ್ಮ ಸುತ್ತಲಿನ ಇಂತಹ ಸಾಹಿತ್ಯದ ವಾತಾವರಣವನ್ನು ಹೀರಿಕೊಂಡು ಮಲೆನಾಡಿನ ಫಲಭರಿತ ವೃಕ್ಷದಂತೆಯೇ ವಿದ್ಯಾರ್ಥಿ ದಿಸೆಯಲ್ಲೇ ಸಾಹಿತಿಯಾಗಿ ಡಿಸೋಜ ಅವರು ರೂಪುಗೊಂಡಿದ್ದರು.

ನಾ. ಡಿಸೋಜ ಎಂದರೆ ನಾಡು ಮೆಚ್ಚಿದ ಪ್ರಖ್ಯಾತ ಸಾಹಿತಿಯಷ್ಟೇ ಅಲ್ಲ. ಅಕ್ಷರಗಳಲ್ಲಿ ಸಾಹಿತ್ಯವನ್ನು ಮಾತ್ರ ನಿರ್ಮಿಸಿದವರಲ್ಲ. ಲೇಖನಿಯಿಂದ ಬರೀ ಪುಸ್ತಕಗಳ ಶಿಖರವನ್ನು ಕಟ್ಟಿದವರಲ್ಲ. ಅವರು ಪ್ರಖರವಾದ ವೈಚಾರಿಕ ಪ್ರಜ್ಞೆಯ ಚಿಂತಕ. ಸರ್ವ ಧರ್ಮ ಸಮಭಾವದ ಪ್ರತಿಪಾದಕ. ವಿಶ್ವ ಮಾನವತ್ವ ಮೇಳೈಸಿಕೊಂಡ ದಾರ್ಶನಿಕ. ಕ್ರೈಸ್ತ ದರ್ಶನವನ್ನು ತಿಳಿದಿರುವಷ್ಟೇ ಹಿಂದೂ ಮತ್ತು ಜೈನ ಹಾಗೂ ಇನ್ನಿತರೇ ಧರ್ಮ ದರ್ಶನಗಳನ್ನೂ ಅರಿತ ಅರಿವಿನ ಹರಿವಾಣ. ಎಡ ಪಂಥ-ಬಲ ಪಂಥಗಳೆನ್ನದೆ ಎಲ್ಲದರೊಳಗಿನ ಒಳಿತನ್ನು ತನ್ನೊಳಗಿರಿಸಿಕೊಂಡ ಒಳಿತನ ಹೊರಣ. ಎಡ-ಬಲಗಳೆಲ್ಲವನ್ನೂ ಮೀರಿದ ಸದ್ಭಾವನೆಯ ತೋರಣ .ಕಳೆದು ಹೋದ ಒಂದು ಕಾಲ ಮಾನದ ಸಾಕ್ಷಿ ಪ್ರಜ್ಞೆಯಾಗಿ ಹಲವು ಹತ್ತು ವಿಷಯಗಳಿಗೆ ಕನ್ನಡಿಯಾದ ಬಹುಮುಖಿ. ಪರಿಸರ ಪ್ರಜ್ಞೆಯ ಬೆಳಕು ಚೆಲ್ಲುವ ಸಾಮಾಜಿಕ ಕಳಕಳಿಯ ಸಮಾಜಮುಖಿ. ಅಪ್ರತಿಮ ಕನ್ನಡ ಪ್ರಜ್ಞೆಯ ‘ಸಾಗರ’ದ ಸರ್ವ ಮುಖಿ. ಪರಿಸರ ಸಂರಕ್ಷಿಸುವ ಪರಿಸರ ಪರ ಹೋರಾಟಗಾರ.ಕನ್ನಡಕ್ಕಾಗಿ ಕೈಯೆತ್ತುವ, ಕೊರಳೆತ್ತುವ ಕನ್ನಡ ಚಳವಳಿಗಾರ. ‘ಮುಳುಗಡೆ’ ಸಂತ್ರಸ್ತರ ಪರ ಲೇಖನಿ ಹಿಡಿದು ಆಳುವ ಸರಕಾರಕ್ಕೆ ಅರಿವಿನ ಹಣತೆ ಹಚ್ಚಿದ ಜನಪರ ಹೋರಾಟಗಾರ. ಇದೆಲ್ಲದರ ಒಟ್ಟು ಮೊತ್ತವೇ ನಾ.ಡಿಸೋಜ. ಇದೆಲ್ಲವನ್ನೂ ಅವರ ಬದುಕು-ಬರಹದಲ್ಲಿ ಅಕ್ಷರಶಃ ಕಾಣಬಹುದಾಗಿದೆ.

ಡಿಸೋಜ ಅವರದು ಬದುಕು ಬೇರೆಯಲ್ಲ, ಬರಹ ಬೇರೆಯಲ್ಲ. ಎರಡೂ ಒಂದೇ. ಬರೆದಂತೆ ಬದುಕಿದವರು, ಬದುಕಿದಂತೆ ಬರೆದವರು. ನಡೆಯೊಂದು ನುಡಿಯೊಂದು ಇಲ್ಲವೇ ಇಲ್ಲ. ಬಾಲ್ಯದಿಂದಲೂ ಅಷ್ಟೇ, ಇಂಥ ಬದ್ಧತೆ ರಕ್ತಗತ. ಇವರು ಬಾಲ್ಯ ದಲ್ಲಿ ಶಾಲೆಗೆ ಹೋಗುತ್ತಿದ್ದಾಗ ಆ ಶಾಲೆಯಲ್ಲಿ ಬುಧವಾರ ಬಸವಣ್ಣನ ಬಗ್ಗೆ, ಗುರುವಾರ ಭಗವದ್ಗೀತೆ, ಶುಕ್ರವಾರ ಕುರ್‌ಆನ್,ಶನಿವಾರ ಬೈಬಲ್ ಪಠಿಸಬೇಕಾಗಿತ್ತು. ಆಗೊಮ್ಮೆ ಚರ್ಚ್‌ನ ಪಾದ್ರಿಯೊಬ್ಬ ಬಾಲಕ ಡಿಸೋಜರನ್ನು ಕರೆದು, ‘‘ನೀನು ಕ್ರಿಶ್ಚಿಯನ್ ಹುಡಗ ಕಣಪ್ಪಾ, ನಿನ್ನ ಸ್ಕೂಲಿನಲ್ಲಿ ಬೇರೆ ಧರ್ಮಗಳ ಬಗ್ಗೆ ಪ್ರಾರ್ಥನೆ ಮಾಡುವಾಗ ನೀನು ದೂರ ಹೋಗಿ ನಿಂತು ಬೈಬಲ್ ಮಾತ್ರ ಓದಬೇಕು’’ ಎಂದು ಬುದ್ಧಿ ಹೇಳಿದ್ದರಂತೆ. ಆಗ ಬಾಲಕ ಡಿಸೋಜ ಪಾದ್ರಿಗೆ ತಿರುಗಿ ಬಿದ್ದಿದ್ದರಂತೆ. ಅಷ್ಟೇ ಅಲ್ಲದೆ ‘‘ಕ್ರಿಸ್ತನ ಬಗ್ಗೆ ನನಗೆ ಗೌರವವಿದೆ. ಕ್ರೈಸ್ತ ಧರ್ಮದ ಬಗ್ಗೆಯೂ ನನಗೆ ಅಪಾರ ಭಕ್ತಿ ಇದೆ. ಆದರೆ ಇದೊಂದೇ ನಿಜವಾದ ಧರ್ಮವಲ್ಲ’’ ಅಂದಿದ್ದರಂತೆ. ಇದರ ಪರಿಣಾಮ ಆ ಪಾದ್ರಿ ಇದ್ದ ಚರ್ಚ್ ಇವರನ್ನು ಸಂಕೀರ್ತನೆಗಳಿಂದ ಹೊರಗಿಟ್ಟು ದಿವ್ಯ ಪ್ರಸಾದವನ್ನು ಕೊಡುವುದನ್ನು ನಿಲ್ಲಿಸಿತ್ತಂತೆ. ವಿದ್ಯಾರ್ಥಿ ದಿಶೆಯಲ್ಲೇ ಈ ರೀತಿಯ ವಿವೇಕ ಹೊಂದಿದ್ದ ಇಂಥ ಸರ್ವ ಧರ್ಮ ಸಮನ್ವಯಕಾರ ಡಿಸೋಜ ನಮ್ಮ ಕನ್ನಡದ ಸಾಹಿತಿ ಎಂಬುದೇ ಒಂದು ಹೆಮ್ಮೆ!.

ವಿಪರ್ಯಾಸವೆಂದರೆ ನಾಡಿನ ಉದ್ದಗಲಕ್ಕೂ ಓದುಗ ವಲಯವನ್ನು ‘ಸಾಗರ’ದಂತೆ ಹೊಂದಿರುವ ಸತ್ವ ಮತ್ತು ಮಹತ್ವಗಳಲ್ಲಿ ಒಂದು ಕೈ ಮೇಲೇ ಇರುವ ಡಿಸೋಜ ಅವರ ಸಾಹಿತ್ಯಕ್ಕೆ ಅಕಾಡಮಿಕ್ ವಲಯದಲ್ಲಿ ಸಿಗಬೇಕಾದ ಪ್ರಾಮುಖ್ಯತೆ ಸಿಗಲೇ ಇಲ್ಲ. ಅಕಾಡಮಿಕ್ ಹಾಗೂ ನಾನ್ ಅಕಾಡಮಿಕ್ ತಾರತಮ್ಯತೆಯಿಂದಾಗಿ ಅಕಾಡಮಿಕ್ ವಲಯದ ಮಲತಾಯಿ ಧೋರಣೆಯ ದೃಷ್ಟಿ ದೋಷಕ್ಕೆ ಸಿಕ್ಕಿ ದಶದಿಕ್ಕುಗಳಲ್ಲೂ ಚರ್ಚೆಯಾಗಬೇಕಿದ್ದ ಡಿಸೋಜ ಅವರ ಸಾಹಿತ್ಯ ಆ ರೀತಿ ಆಗಲೇ ಇಲ್ಲ. ಆದರೆ ಇದಾವುದನ್ನೂ ಅಪೇಕ್ಷಿಸದೆ ಆನೆ ನಡೆದದ್ದೇ ಹಾದಿ ಎಂಬಂತೆ ಡಿಸೋಜ ಅವರು ತಮ್ಮ ಪಾಡಿಗೆ ತಾವು ನಿರ್ಲಿಪ್ತರಾಗಿ ಬರೆದೇ ಬರೆದರು. ಬರೆದು ಯಾರಿಗೂ ಜಗ್ಗದ, ಯಾವುದಕ್ಕೂ ಬಗ್ಗದ ಎಲ್ಲರಿಗೂ ಎಟುಕದ ಎತ್ತರೆತ್ತರಕೆ ಸಾಹಿತ್ಯದ ಹಿಮಾಲಯವಾಗಿ ಬೆಳೆದರು. ಅಂಥ ಗಟ್ಟಿ ಸಾಹಿತ್ಯ ಅವರದ್ದಾಗಿತ್ತು. ಅಕಾಡಮಿಕ್ ಸಾಹಿತಿಗಳು ಮಾತ್ರ ವಿದ್ವಾಂಸರೆಂದು ಕೊಚ್ಚಿಕೊಳ್ಳುವ ಮಂದಿ ಬಾಯ್ಮೇಲೆ ಬೆರಳಿಟ್ಟುಕೊಳ್ಳುವಂತೆ ವಿದ್ವತ್ ಪೂರ್ಣ ಸೃಜನಶೀಲ ಸಾಹಿತ್ಯ ಕೃತಿಗಳು ಡಿಸೋಜ ಅವರಿಂದ ವಿಸ್ಮಯ ದೋಪಾದಿಯಲ್ಲಿ ಬಂದಿದ್ದವು.

ಮಲೆನಾಡಿನ ಕಾಡು-ಕಣಿವೆ, ಬೆಟ್ಟ-ಗುಡ್ಡ, ತಿಟ್ಟು-ತೆಪ್ಪ, ಹಳ್ಳ-ಕೊಳ್ಳ, ಹೂವು- ಹಣ್ಣು, ಪ್ರಾಣಿ-ಪಕ್ಷಿ, ನದಿ-ನೆಲ, ಬುವಿ- ಬಾನು, ಬೇರು-ಬಳ್ಳೆ, ಒಕ್ಕಲು- ಮಕ್ಕಳು, ಜೀವಜಲ -ಜೀವಜಾಲ, ರುಧ್ರತೆ- ಛಿದ್ರತೆ, ಮುಗ್ಧತೆ- ಮಾನವೀಯತೆ, ರೋಗ- ರುಜಿನ, ಕ್ರೌರ್ಯ-ಶೌರ್ಯ, ನಂಬಿಕೆ-ಸಂಕಟ, ಊರು-ಕೇರಿ, ಧಾರ್ಮಿಕತೆ - ಡಾಂಭಿಕತೆ, ಶೋಷಣೆ-ವೌಢ್ಯಾಚರಣೆ, ಸಂಸ್ಕೃತಿ-ಸಂಕಟ, ಕುದಿ- ಬೇಗುದಿ, ಯೋಜನೆ -ಯಾಚನೆ, ಬೆಂಕಿ-ಬೆಳಕು, ಮುಳುಗಡೆ- ಮುದುಡಿದೆದೆ, ಸಂತ್ರಸ್ತ- ನಿರಾಶ್ರಿತ, ವೇದನೆ- ಯಾತನೆ... ಇವುಗಳೆಲ್ಲಕ್ಕೂ ಡಿಸೋಜ ಅವರು ಕಣ್ಣು, ಕಿವಿ, ಬಾಯಿ ಆದವರು. ಎಲ್ಲಕ್ಕಿಂತ ಮಿಗಿಲಾಗಿ ಹೃದಯವಾಗಿ ಮಿಡಿದವರು. ಮಲೆನಾಡೆಂಬೋ ಬೃಹತ್ ಕ್ಯಾನ್ವಾಸಿನಲ್ಲಿ ತಾನು ಕಂಡದ್ದನ್ನೆಲ್ಲಾ ಸೃಜನಾತ್ಮಕವಾಗಿ ಚಿತ್ರಿಸಿ ಕೃತಿಗಳನ್ನು ಕಟ್ಟಿಕೊಟ್ಟವರಿವರು. ಮಲೆನಾಡು, ಮುಳುಗಡೆ, ಮಕ್ಕಳು, ಇವರ ಸಾಹಿತ್ಯದ ಜೀವದ್ರವ್ಯ. ಅಂದ ಹಾಗೆ ನಾಡಿನಾದ್ಯಂತ ಹಾಗೂ ನಾಡಿನಾಚೆಗೂ ಖ್ಯಾತಿ ತಂದಿತ್ತ ಇವರ ಪ್ರಸಿದ್ಧ ಕಾದಂಬರಿ ‘ಮುಳುಗಡೆ’ ಡಿಸೋಜ ಅವರ ಸಮಗ್ರ ಸಾಹಿತ್ಯದ ರೂಪಕದಂತಿದೆ. ಹಾಗೆಯೇ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರಕ್ಕೆ ಭಾಜನವಾಗಿರುವ ‘ಮುಳುಗಡೆ’ಯ ಊರಿಗೆ ಬಂದವರು ಕೃತಿಯಂತೂ ಮಕ್ಕಳಿಗಾಗಿ ಇವರು ಬರೆದ ವಿಭಿನ್ನ ಆಶಯದ್ದಾಗಿದ್ದು ಇವತ್ತಿನ ಶಾಲಾ ಮಕ್ಕಳಿಗೆ ಅತ್ಯಗತ್ಯವಾಗಿ ಪಠ್ಯವಾಗ ಬೇಕಿದೆ. ಮುಳುಗಡೆಯ ಜನರ ದುರಂತ ಬದುಕನ್ನು, ಸಂಕಷ್ಟದ ಪರಾಕಾಷ್ಠೆಯನ್ನು ಆ ಜನರ ಎದೆಯೊಳಗಿನ ವೇದನೆಯನ್ನು ಡಿಸೋಜ ಅವರಷ್ಟು ಸಹಜವಾಗಿ ಕಟ್ಟಿಕೊಟ್ಟ ಮತ್ತೊಬ್ಬ ಸಾಹಿತಿ ನಮ್ಮಲ್ಲಿಲ್ಲ!.

ಮಲೆನಾಡಿನ ಮಗ

ನಾಡಿಗೆ ಇಬ್ಬರು ರಾಷ್ಟ್ರಕವಿಗಳನ್ನು ಕೊಟ್ಟ ಹಾಗೂ ಎರಡು ಜ್ಞಾನಪೀಠ ಪ್ರಶಸ್ತಿಗಳನ್ನು ತಂದಿತ್ತ ಮಲೆನಾಡು ಶಿವಮೊಗ್ಗ ಜಿಲ್ಲೆ ಕುವೆಂಪು, ಜಿ.ಎಸ್. ಶಿವರುದ್ರಪ್ಪ, ಯು.ಆರ್. ಅನಂತಮೂರ್ತಿ, ಹಾ.ಮಾ.ನಾಯಕ್, ಪೂರ್ಣಚಂದ್ರ ತೇಜಸ್ವಿ, ಲಂಕೇಶ್ ಅವರಂಥ ಸಾಹಿತ್ಯ ದಿಗ್ಗಜಗಳಿಗೆ ಜನ್ಮ ನೀಡಿದ ಪುಣ್ಯ ಭೂಮಿ. ಇಂಥ ನೆಲದಿಂದ ಬಂದ ಮತ್ತೊಂದು ಸಾಹಿತ್ಯ ದಿಗ್ಗಜ ನಾ.ಡಿಸೋಜ. ಕುವೆಂಪು, ಹಾಮಾನಾ, ಜೆಎಸ್ಸೆಸ್, ಅನಂತಮೂರ್ತಿ ನಂತರ ಶಿವಮೊಗ್ಗ ಜಿಲ್ಲೆಯವರು ಮತ್ತೊಮ್ಮೆ ಐದನೇ ಬಾರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಹೆಗ್ಗಳಿಕೆ ಇವರದ್ದು.ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಫಿಲಿಪ್ ಡಿಸೋಜ ಮತ್ತು ರೂಪೀನಾ ಡಿಸೋಜ ದಂಪತಿಯ ಸುಪುತ್ರರಾಗಿ 1937 ಜೂನ್ 6ರಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ಫಿಲಿಪ್ ಡಿಸೋಜರ ನಾಲ್ವರು ಮಕ್ಕಳಲ್ಲೊಬ್ಬರಾದ ಇವರ ಪೂರ್ಣ ಹೆಸರು ನಾರ್ಬಟ್ ಡಿಸೋಜ. ಸಾಹಿತ್ಯ ಪ್ರಪಂಚದಲ್ಲಿ ನಾ.ಡಿಸೋಜ ಎಂದೇ ಚಿರಪರಿಚಿತರು. ಆತ್ಮೀಯ ಒಡನಾಡಿಗಳ ವಲಯದಲ್ಲಿ ‘ನಾಡಿ’ ಆಗಿಯೇ ಪ್ರೀತಿಪಾತ್ರರು.

ಮಲೆನಾಡಿನ ಸೊಬಗಿನ ಸೌಂದರ್ಯ ಸಿರಿಯ ‘ಸಾಗರ’ದ ಅಂಗಳದಲ್ಲೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಕಲಿತ ನಾ. ಡಿಸೋಜ ಅವರು ಇಂಟರ್ ಮೀಡಿಯೆಟ್ ವರೆಗಿನ ಶಿಕ್ಷಣವನ್ನು ಶಿವಮೊಗ್ಗದ ಇಂಟರ್ ಮೀಡಿಯೆಟ್ ಕಾಲೇಜಿನಲ್ಲಿ (ಇಂದಿನ ಸಹ್ಯಾದ್ರಿ ಕಾಲೇಜು) ಪೂರೈಸಿದರು.ಇದರ ನಡುವೆಯೇ ಕಾಲೇಜು ಹಂತದಲ್ಲೇ ಶೀಘ್ರ ಲಿಪಿ ಮತ್ತು ಬೆರಳಚ್ಚು ಪರೀಕ್ಷೆಯನ್ನು ಪಾಸು ಮಾಡಿಕೊಂಡಿದ್ದರಿಂದ ಲೋಕೋಪಯೋಗಿ ಇಲಾಖೆಯಲ್ಲಿ ದ್ವಿತೀಯ ದರ್ಜೆ ಗುಮಾಸ್ತರ ಹುದ್ದೆ ಕೈ ಬೀಸಿ ಕರೆದಿತ್ತು.

 ಮೀನ-ಮೇಷ ಎಣಿಸದೆ 1959ರಲ್ಲಿ ಲೋಕೋಪಯೋಗಿ ಇಲಾಖೆ ಸೇರಿ ವೃತ್ತಿ ಆರಂಭಿಸಿದ ಡಿಸೋಜ ಅವರು ನಂತರದ ದಿನಗಳಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿ ಶರಾವತಿ ಯೋಜನೆ (ಕಾರ್ಗಲ್), ಮಾಸ್ತಿಕಟ್ಟೆ, ತೀರ್ಥಹಳ್ಳಿ, ಸಾಗರ ಮತ್ತಿತರೆಡೆ ಸುಮಾರು ಮೂರೂವರೆ ದಶಕಗಳಿಗೂ ಹೆಚ್ಚುಕಾಲ ಕಾರ್ಯನಿರ್ವಹಿಸಿ 1995ರಲ್ಲಿ ನಿವೃತ್ತಿ ಹೊಂದಿದರು. ಇಂಥ ವ್ಯಕ್ತಿ ಬದುಕಿನ ಜೊತೆ ಜೊತೆಯಲ್ಲೇ ಸಾಹಿತ್ಯ ಕೃಷಿಯನ್ನೂ ಒಂದು ವೃತ್ತಿಮಾಡಿಕೊಂಡು ವ್ರತದಂತೆ ಬರೆದುಕೊಂಡು ಬಂದಿರುವ ಡಿಸೋಜ ಅವರದು ಇವತ್ತು ಕನ್ನಡ ಸಾಹಿತ್ಯದಾಗಸದಲ್ಲಿ ಸೂರ್ಯ ಸದೃಶ ಹೆಸರು. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿರುವ ಇವರು ಸುಮಾರು ನೂರಕ್ಕೂ ಹೆಚ್ಚು ಕೃತಿಗಳ ಒಡೆಯರು. ಸಂಖ್ಯೆಯಲ್ಲಷ್ಟೇ ಅಲ್ಲ ಸತ್ವದಲ್ಲೂ ವೌಲಿಕ ಸಾಹಿತ್ಯದ ಸಾಮ್ರಾಟರು.

ಬಾಲ್ಯದಲ್ಲೇ ಸಾಹಿತ್ಯದ ಸೆಳೆತ

ಡಿಸೋಜ ಅವರ ತಂದೆ ಫಿಲಿಪ್ ಡಿಸೋಜ ಅವರು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದು ಕನ್ನಡ ಭಾಷೆ ಹಾಗೂ ಸಾಹಿತ್ಯದ ಬಗ್ಗೆ ಬಹಳ ಅಭಿಮಾನ ಮತ್ತು ಶ್ರದ್ಧೆಯುಳ್ಳವರಾಗಿದ್ದರು. ಹಾಗಾಗಿ ಶಾಲೆಯಲ್ಲಿ ಮಕ್ಕಳಿಗೆ ಹೇಳೋಕೆ ಅಂತ ಜಿ.ಪಿ. ರಾಜರತ್ನಂ, ಕುವೆಂಪು, ಬೇಂದ್ರೆ ಮುಂತಾದವರ ಪದ್ಯಗಳನ್ನು ಒಂದು ಪುಸ್ತಕದಲ್ಲಿ ಬರೆದಿಟ್ಟಿದ್ದರು. ಆ ಪುಸ್ತಕವನ್ನು ಓದಿ ಪ್ರಭಾವಿತರಾಗಿ ಕನ್ನಡ ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಂಡವರಿವರು. ತಮ್ಮ 6ನೇ ವಯಸ್ಸಿಗೆ ಓದಿದ ಮೊದಲ ಪುಸ್ತಕವದು. ಮನೆ ಭಾಷೆ ಕೊಂಕಣಿಯಾದರೂ ಯಾವಾಗಲು ಮನೆ ತುಂಬಾ ಕನ್ನಡ ಪುಸ್ತಕಗಳಿರುತ್ತಿದ್ದವು. ತಂದೆ, ತಾಯಿ, ಅಣ್ಣ, ಅಕ್ಕ ಎಲ್ಲರೂ ಕನ್ನಡ ಪುಸ್ತಕ ಪ್ರೇಮಿಗಳಾಗಿದ್ದರು. ಹೀಗೆ ಪುಸ್ತಕಗಳನ್ನು ನೋಡಿ ನೋಡಿಯೇ ಓದಿನ ಗೀಳಿನೊಡನೆ ಸಾಹಿತ್ಯದ ಅಭಿರುಚಿ ಅರಳಿತ್ತು.

ಮೊದಲ ಕಥೆ-ಮಾಧ್ಯಮಗಳ ನಂಟು

ಡಿಸೋಜ ಅವರು ಬಾಲ್ಯದಿಂದಲೂ ಬರೆಯುತ್ತಿದ್ದರೂ ಪ್ರಕಟಗೊಂಡ ಮೊದಲ ಕಥೆ ‘ಸಾಹೇಬರು ಕಲಿಸಿದ ಪಾಠ’ (1959) ಮೊದಲ ಕಾದಂಬರಿ ‘ಬಂಜೆಬೆಂಕಿ (1964), ಇದುವರೆಗೆ ಅವರು ಸುಮಾರು 75 ಕಾದಂಬರಿ, 6 ಚಾರಿತ್ರಿಕ ಕಾದಂಬರಿ, ಮಕ್ಕಳಿಗಾಗಿ 25 ಕಾದಂಬರಿ, 9 ಕಥಾ ಸಂಕಲನ, ಸಮಗ್ರ ಕಥೆಗಳ ಎರಡು ಸಂಪುಟಗಳು, 500ಕ್ಕೂ ಹೆಚ್ಚು ಕಥೆಗಳು, 10ಕ್ಕೂ ಹೆಚ್ಚು ನಾಟಕಗಳು, ಅಷ್ಟೇ ಸಂಖ್ಯೆಯ ರೇಡಿಯೋ ನಾಟಕಗಳು, ನಾಡಿನ ಪತ್ರಿಕೆಗಳಿಗೆ, ಇತರೇ ಪುರವಣಿ, ಸಂಚಿಕೆ, ಗ್ರಂಥಗಳಿಗೆ ಅಂತ ಸಾವಿರಾರು ಬಿಡಿ ಲೇಖನಗಳನ್ನು ಬರೆದಿದ್ದಾರೆ. ‘ಪ್ರಂಪಂಚ’ ಪತ್ರಿಕೆ ಮೂಲಕ ಮೊದಲಿಗೆ ಪತ್ರಿಕೆಯೊಂದಕ್ಕೆ ಬರೆಯಲು ಶುರುಮಾಡಿದ ಡಿಸೋಜ ಅಂದಿನಿಂದ ಇಂದಿನ ತನಕ ನಾಡಿನ ಬಹುತೇಕ ಎಲ್ಲಾ ಪತ್ರಿಕೆಗಳಿಗೂ ಬರೆದ, ಬರೆಯುತ್ತಿರುವ ವಿಶಿಷ್ಟ ಲೇಖಕರೆಂಬ ಹೆಗ್ಗಳಿಕೆ ಹೊಂದಿದವರು. ಇವರ ಬರಹ ಪ್ರಕಟಗೊಂಡಿರದ ಪತ್ರಿಕೆಯೇ ಇಲ್ಲವೆಂಬಷ್ಟರ ಮಟ್ಟಿಗೆ ಮಾಧ್ಯಮಗಳಲ್ಲಿ ಡಿಸೋಜ ಹೆಸರು ಜನಜನಿತ.

ಜಾಗೃತಿಯ ಬೆಳೆ-ಕ್ರಾಂತಿಯ ಹೊಳೆ

ಸಾಹಿತ್ಯದ ಬಹುತೇಕ ಎಲ್ಲಾ ಪ್ರಕಾರಗಳಲ್ಲೂ ಕೈಯಾಡಿಸಿ ಡಿಸೋಜ ಅವರು ಕನ್ನಡ ಡಿಂಡಿಮ ಬಾರಿಸಿದ್ದರೂ ಪ್ರಮುಖವಾಗಿ ಗುರುತಿಸಲ್ಪಟ್ಟಿದ್ದು ಸಾಮಾಜಿಕ ಬದ್ಧತೆಯುಳ್ಳ ಕಾದಂಬರಿಕಾರರಾಗಿ, ಪರಿಸರ ಕಾಳಜಿಯುಳ್ಳ ಕಥೆಗಾರರಾಗಿ, ಅವರ ಸಾಹಿತ್ಯ ಹೆಣೆದು ಕೊಂಡಿರುವುದೇ ಸಾಮಾಜಿಕ ಬದುಕು ಮತ್ತು ಅದರತ್ತಲಿನ ಜವಾಬ್ದಾರಿಯಲ್ಲಿ. ಒಂದು ರೀತಿ ಇವರು ಸಾಹಿತ್ಯದ ಮೂಲಕ ಕ್ರಾಂತಿ ದೀಪ ಬೆಳಗಿದವರು. ಇದಕ್ಕೆ ಒಂದೆರಡಲ್ಲ ಇವರ ಬೇಕಾದಷ್ಟು ಕೃತಿಗಳು ಸಾಕ್ಷಿಯಾಗಬಲ್ಲವು. ಮಲೆನಾಡಿನ ಹಸಿರನ್ನೇ ಶಾಯಿಯಾಗಿಸಿ ಪರಿಸರವನ್ನೆ ಕೇಂದ್ರವಾಗಿಟ್ಟುಕೊಂಡು ಅವರು ಬರೆದ ದ್ವೀಪ, ನಡುವೆ ನಿಂತಜನ, ಮುಳುಗಡೆ, ಕಾಡಿನ ಬೆಂಕಿ, ಒಂದು ಜಲಪಾತದ ಸುತ್ತ, ಮಂಜಿನಕಾನು, ಈ ನೆಲ ಈ ಜಲ ದಂತಹ ಕಾದಂಬರಿಗಳು ಸದ್ದಿಲ್ಲದೆಯೇ ಜಾಗೃತಿಯ ಬೆಳೆ ಬೆಳೆಯುತ್ತವೆ. ಕ್ರಾಂತಿಯ ಹೊಳೆ ಹರಿಸುತ್ತವೆ. ಕುವೆಂಪು, ತೇಜಸ್ವಿ ಬಿಟ್ಟರೆ ಮಲೆನಾಡಿನ ಪರಿಸರದೊಂದಿಗೆ ಇಷ್ಟೊಂದು ಕಾಳಜಿ ಇಟ್ಟುಕೊಂಡು ಬರೆದವರು ಇನ್ನೊಬ್ಬರಿಲ್ಲ. ಹಾಗೆಯೇ ಪಾದರಿಯಾದ ಹುಡುಗ, ನೆಲೆ, ತಿಂಗಳ ಪೂಜೆಗೆ ಒಂದ ಮಗ, ದೇವರ ಶಿಲುಬೆ ಮನೆಗೆ ಬಂದದ್ದು, ಸಮಾಧಿ, ಬಣ್ಣ, ಗೋಪುರದ ಗಂಟೆ ಮತ್ತು ನಾಲಿಗೆ, ಪಿಟೀಲು ಮುಂತಾದ ಕ್ರೈಸ್ತ ಹಿನ್ನೆಲೆಯ ಕಾದಂಬರಿಗಳನ್ನು ರಚಿಸಿ ಸಮುದಾಯದ ಅಂದ ಶ್ರದ್ಧೆಯನ್ನು ಹಾಗೂ ಅವು ಪಡೆದು ಕೊಳ್ಳಬಹುದಾದ ಚಲನ ಶೀಲತೆಯನ್ನು ಸಹ ಡಿಸೋಜ ಅವರು ಗುರುತಿಸಿದ್ದು ಈ ದಿಸೆಯಲ್ಲಿ ವೌಢ್ಯ ಮತ್ತು ಧಾರ್ಮಿಕ ನಂಬುಗೆಯ ಬಗ್ಗೆ ಹೊಸ ಬೆಳಕು ಚೆಲ್ಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)