varthabharthi

ಕರ್ನಾಟಕ

ದೇವೇಗೌಡರ ಸೋಲಿಗೆ ಸೇಡಾಗಿ ಡಿಸಿಸಿ ಬ್ಯಾಂಕ್ ಸೂಪರ್ ಸೀಡ್: ಕೆ.ಎನ್.ರಾಜಣ್ಣ ಆರೋಪ

ವಾರ್ತಾ ಭಾರತಿ : 21 Jul, 2019

ತುಮಕೂರು,ಜು.21: ದೇವೇಗೌಡರು ತಮ್ಮ ರಾಜಕೀಯ ಸೇಡು ತೀರಿಸಿಕೊಳ್ಳಲು ನಾನು ಅಧ್ಯಕ್ಷನಾಗಿದ್ದ ತುಮಕೂರು ಡಿಸಿಸಿ ಬ್ಯಾಂಕನ್ನು ಸೂಪರ್ ಸೀಡ್ ಮಾಡಿಸಿದ್ದು, ಇದನ್ನು ರಾಜಕೀಯವಾಗಿಯೇ ಎದುರಿಸಿ, ಮುಂದಿನ ಒಂದು ವಾರದೊಳಗೆ ಡಿಸಿಸಿ ಬ್ಯಾಂಕ್ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದಾಗಿ ಮಾಜಿ ಶಾಸಕ  ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.

ಖಾಸಗಿ ಹೊಟೇಲ್‍ನಲ್ಲಿ ಡಿಸಿಸಿ ಬ್ಯಾಂಕ್ ಪದಾಧಿಕಾರಿಗಳೊಂದಿಗೆ ಸುದ್ದಿಗೋಷ್ಠಿ ನಡೆಸಿದ ಅವರು, ಡಿಸಿಸಿ ಬ್ಯಾಂಕಿನಲ್ಲಿ ನಾನೇನು ಅವ್ಯವಹಾರ ನಡೆಸಿಲ್ಲ. ರೈತರಿಗೆ, ಬಡವರಿಗೆ, ಸ್ವಸಹಾಯ ಸಂಘಗಳಿಗೆ, ವಿ.ಎಸ್.ಎಸ್.ಎನ್.ಗಳಿಗೆ ಸಹಾಯ ಮಾಡುವಾಗ ನಿಯಮ ಮೀರಿರಬಹುದು. 2003ರಲ್ಲಿ ನಾನು ಅಧ್ಯಕ್ಷನಾದಾಗ ಕೇವಲ 3 ಕೋಟಿ ರೂ. ಠೇವಣಿ ಇತ್ತು. ಇಂದು ಸಾವಿರಾರು ಕೋಟಿಯಾಗಿದೆ. ಇದರಲ್ಲಿ ಸರಕಾರದ ಒಂದು ನಯಾಪೈಸೆ ಇಲ್ಲ. ನನ್ನನ್ನು ಮತ್ತು ನಿರ್ದೇಶಕರನ್ನು ನಂಬಿ ಸಾವಿರಾರು ಕೋಟಿ ಠೇವಣಿ ಇರಿಸಿದ್ದಾರೆ. ರಾಜಕೀಯ ವೈಷಮ್ಯಕ್ಕೆ ಡಾ.ಜಿ.ಪರಮೇಶ್ವರ್ ಮತ್ತು ಹೆಚ್.ಡಿ.ದೇವೇಗೌಡರು ಸೂಪರ್ ಸೀಡ್ ಮಾಡಿಸಿದ್ದಾರೆ. ಸರಕಾರ ನನಗಾಗಲಿ, ನಿರ್ದೇಶಕರಿಗಾಗಲಿ ನೊಟೀಸ್ ಜಾರಿ ಮಾಡಿಲ್ಲ. ಬಡಪಾಯಿ ಅಧಿಕಾರಿಗಳಿಂದ ಆದೇಶ ಮಾಡಿಸಿದ್ದಾರೆ. ಇದಕ್ಕಿಂತ ರಾಜಕೀಯ ಹಗೆತನ ಮತ್ತೊಂದಿಲ್ಲ ಎಂದು ದೂರಿದರು.

ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿ ರಾಜಕೀಯ ಮಾಡಿಲ್ಲ. ಜಾತಿ, ಪಕ್ಷದ ಅಧಾರದ ಮೇಲೆ ತಾರತಮ್ಯ ಮಾಡಿಲ್ಲ. ಪತ್ರಿಕೆಗಳಲ್ಲಿ ಜಾಹಿರಾತು ನೀಡಿ, ಸಾಲ ಪಡೆದುಕೊಳ್ಳುವಂತೆ ರೈತರಲ್ಲಿ ಮನವಿ ಮಾಡಲಾಗಿತ್ತು. ನನ್ನ ಮೇಲಿನ ರಾಜಕೀಯ ವೈಷಮ್ಯದಿಂದ ನಿರ್ದೇಶಕರಿಗೆ, ರೈತರಿಗೆ ತೊಂದರೆ ನೀಡುತ್ತಿದೆ. ಸೋಮವಾರ ಸರಕಾರ ಹೋದರೆ, ಗುರುವಾರ ಮತ್ತೊಂದು ಆದೇಶ ತಂದು ನಾನೇ ಅಧ್ಯಕ್ಷನಾಗುತ್ತೇನೆ ಎಂದು ಕೆ.ಎನ್.ರಾಜಣ್ಣ ಸವಾಲು ಹಾಕಿದರು.

ಬ್ಯಾಂಕಿಂಗ್ ನಿಯಮಾವಳಿಗಳ ಪ್ರಕಾರ ಸರಕಾರಕ್ಕೆ ಸೂಪರ್ ಸೀಡ್ ಮಾಡಲು ಯಾವುದೇ ಅಧಿಕಾರವಿಲ್ಲ. ಏಕೆಂದರೆ ಸರಕಾರದ ಒಂದು ಪೈಸೆಯೂ ನಮ್ಮ ಬ್ಯಾಂಕಿನಲ್ಲಿ ಇಲ್ಲ. ಕಾನೂನು ರೀತಿಯ ಹೋರಾಟ ಮಾಡುತ್ತೇನೆ. ದೇವೇಗೌಡರ ಸೋಲು ಈ ಆದೇಶಕ್ಕೆ ಕಾರಣ ಎಂಬುದು ಸ್ಪಷ್ಟವಾಗಿದೆ. ನನ್ನ ಬೆಂಬಲಿಗರು, ಅಭಿಮಾನಿಗಳು, ರೈತರ ಬದಲು, ಬ್ಯಾಂಕ್ ಸಿಬ್ಬಂದಿ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡುವಂತೆ ಕರೆ ನೀಡಿದ್ದೇನೆ ಎಂದು ಕೆ.ಎನ್.ರಾಜಣ್ಣ ತಿಳಿಸಿದರು.

ಹೆಚ್.ಡಿ.ರೇವಣ್ಣ ಅವರು ಕೆ.ಎಂ.ಎಫ್.ಅಧ್ಯಕ್ಷರಾಗಿದ್ದ ವೇಳೆ ನಡೆಸಿದ ಹಲವು ಅಕ್ರಮಗಳ ಬಗ್ಗೆ ತನಿಖೆಯಾಗಿ ವರದಿಯೂ ಬಂದಿದೆ. ಅದೇ ರೀತಿ ಡಾ.ಜಿ.ಪರಮೇಶ್ವರ್ ಬೇಗೂರಿನ ಅರ್ಕಾವತಿ ಜಮೀನನ್ನು ಆಸ್ಪತ್ರೆಯ ಉದ್ದೇಶಕ್ಕೆ ಪಡೆದು, ಹೊಟೇಲ್ ಮತ್ತು ಕಾಂಪ್ಲೆಕ್ಸ್ ಕಟ್ಟಿಸಿದ್ದಾರೆ. ಹೆಗ್ಗರೆಯ ಮೆಡಿಕಲ್ ಕಾಲೇಜು, ಮರಳೂರು ಸಮೀಪದ ರಿಂಗರಸ್ತೆ ಒತ್ತುವರಿಯಾಗಿದೆ. ಇವುಗಳ ಬಗ್ಗೆ ಕಾನೂನು ಹೋರಾಟ ನಡೆಸುತ್ತೇನೆ ಎಂದರು.

ಚುನಾವಣೆಗೆ ಸ್ಪರ್ಧಿಸಲ್ಲ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸಬಾರದು ಎಂದು ತೀರ್ಮಾನ ಕೈಗೊಂಡಿದ್ದೇನೆ. ನನಗೀಗ 69 ವರ್ಷ, ಓಡಾಡಿ ಕೆಲಸ ಮಾಡುವ ಶಕ್ತಿ ಕಡಿಮೆಯಾಗಿದೆ. ನನ್ನ ಹಿತೈಸಿಗಳ ಬಳಿ ಅಧಿಕಾರವಿದ್ದರೂ ಜನರಿಗೆ ಒಳ್ಳೆಯ ಕೆಲಸ ಮಾಡಬಹುದು. ದೇವೇಗೌಡರ ಸೋಲಿಗೆ ನಾನೊಬ್ಬನೇ ಕಾರಣನಲ್ಲ. ಕಾನೂನು ಪರಿದಿಯಲ್ಲಿ ನನ್ನ ಕೈಲಾದ ಸಹಾಯ ಮಾಡಿದ್ದೇನೆ. ನನ್ನ ಜಾತಿಯ ಬಗ್ಗೆ ನನಗೆ ಹೆಮ್ಮೆಯಿದೆ. ಎಲ್ಲಾ ಜಾತಿಯಲ್ಲಿಯೂ ನನ್ನ ಸ್ನೇಹಿತರಿದ್ದಾರೆ. ಅವರ ಬಲದಿಂದ ನಾನು ಬೆಳೆದಿದ್ದೇನೆ. ಸೋಮವಾರ ನಂತರ ಸರಕಾರವೂ ಇರುವುದಿಲ್ಲ. ಜಿಲ್ಲೆಯಲ್ಲಿ 'ಝೀರೋ ಟ್ರಾಫೀಕ್' ಕೂಡ ಇರುವುದಿಲ್ಲ ಎಂದರು

ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ನಿರ್ದೇಶಕರಾದ ಜಿ.ಜೆ.ರಾಜಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)