varthabharthi

ಕರ್ನಾಟಕ

ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವುದಿಲ್ಲ: ಅತೃಪ್ತ ಶಾಸಕರ ಸ್ಪಷ್ಟನೆ

ವಾರ್ತಾ ಭಾರತಿ : 21 Jul, 2019

ಬೆಂಗಳೂರು/ಮುಂಬೈ, ಜು.21: ಯಾರು ಎಷ್ಟು ಪ್ರಯತ್ನಪಟ್ಟರೂ ನಾವು ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವುದಿಲ್ಲ. ನಾಳೆ ನಡೆಯಲಿರುವ ವಿಶ್ವಾಸಮತ ಯಾಚನೆಗೂ ತೆರಳುವುದಿಲ್ಲ. ರಾಜೀನಾಮೆ ನೀಡಿರುವ ನಾವೆಲ್ಲರೂ ಒಟ್ಟಿಗೆ ಇದ್ದೇವೆ ಎಂದು ಅತೃಪ್ತ ಶಾಸಕರು ಸ್ಪಷ್ಟಪಡಿಸಿದ್ದಾರೆ.

ಮೈತ್ರಿ ಸರಕಾರದ ವಿರುದ್ಧ ಬಂಡಾಯವೆದ್ದು ರಾಜೀನಾಮೆ ನೀಡಿ ಮುಂಬೈನಲ್ಲಿರುವ ಅತೃಪ್ತ ಶಾಸಕರು ವಿಡಿಯೋ ಮೂಲಕ ಸಂದೇಶ ನೀಡಿದ್ದು, ನಾವೆಲ್ಲರೂ ಒಟ್ಟಿಗೆ ಇದ್ದು, ನಮ್ಮಲ್ಲಿ ಯಾವುದೇ ಗುಂಪುಗಳು ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್, ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಯಾರೇ ಸಿಎಂ ಆದರೂ ನಮ್ಮ ನಿರ್ಧಾರದಲ್ಲಿ ಬದಲಾವಣೆಯಿಲ್ಲ. ಸರಕಾರ ಉಳಿಸಿಕೊಳ್ಳಲು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ನಮ್ಮಲ್ಲಿ ಯಾವುದೇ ಗುಂಪುಗಳು ಇಲ್ಲ. ಒಗ್ಗಟ್ಟಾಗಿದ್ದೇವೆ. ನಮ್ಮದು ಒಂದೇ ನಿಲುವಾಗಿದ್ದು, ಏನಾದರೂ ರಾಜೀನಾಮೆ ಹಿಂಪಡೆಯುವುದಿಲ್ಲ ಎಂದು ಹೇಳಿದ್ದಾರೆ.

ಜೀವಂತವಾಗಿದ್ದೇವೆ, ಸತ್ತಿಲ್ಲ: ಶುಕ್ರವಾರ ನಡೆದ ಸದನದಲ್ಲಿ ಕಾಂಗ್ರೆಸ್‌ನ ಶಾಸಕರೊಬ್ಬರು ಮುಂಬೈನಲ್ಲಿ 15 ಶಾಸಕರಿದ್ದು, ಅವರು ಜೀವಂತವಾಗಿದ್ದಾರ ಅಥವಾ ಸತ್ತಿದ್ದಾರಾ ಎಂದು ಪ್ರಶ್ನಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಅತೃಪ್ತರು ನಾವು ಯಾರೂ ಸತ್ತಿಲ್ಲ, ಜೀವಂತವಾಗಿದ್ದೇವೆ. ಕಾಂಗ್ರೆಸ್ ಸಚಿವರೊಬ್ಬರು ಗನ್ ಪಾಯಿಂಟ್ ಇಟ್ಟುಕೊಂಡು ಅಲ್ಲಿದ್ದಾರೆ ಎಂದು ಟೀಕಿಸಿದ್ದನ್ನು ಖಂಡಿಸಿರುವ ಅತೃಪ್ತರು, ನಮ್ಮನ್ನು ಯಾರೂ ಗನ್ ಇಟ್ಟುಕೊಂಡು ಎದುರಿಸುವ ಪ್ರಯತ್ನ ಮಾಡುತ್ತಿಲ್ಲ. ಸ್ವ ಇಚ್ಛಯಿಂದಲೇ ಇದ್ದು, ದೋಸ್ತಿಗಳಿಗೆ ಬುದ್ಧಿ ಕಲಿಸಲು ಒಟ್ಟಿಗಿದ್ದೇವೆ ಎಂದು ತಿಳಿಸಿದ್ದಾರೆ.

ನಾವು ಯಾವುದೇ ಆಮಿಷ, ಹಣಕ್ಕಾಗಿ ರಾಜೀನಾಮೆ ನೀಡಿಲ್ಲ. ನಾವೆಲ್ಲರೂ ಸ್ವಾಭಿಮಾನದಿಂದ ಬದುಕುತ್ತಿದ್ದೇವೆ, ಆಮಿಷಗಳಿಗೆ ಬಲಿಯಾಗುವುದಿಲ್ಲ. ಸೋಮವಾರ ನಡೆಯಲಿರುವ ಅಧಿವೇಶನಕ್ಕೆ ನಾವು ಯಾರೂ ಭಾಗವಹಿಸುವುದಿಲ್ಲ. ಸಮ್ಮಿಶ್ರ ಸರಕಾರದ ಬಹುಮತ ಸಾಬೀತುಪಡಿಸುವುದರಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಅತೃಪ್ತ ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ನನ್ನಲ್ಲಿ ಸ್ವಾಭಿಮಾನದ ಕಿಚ್ಚು ಕಾಡುತ್ತಿದ್ದು, ಅಧಿಕಾರಕ್ಕಾಗಿ, ದುಡ್ಡಿಗಾಗಿ ರಾಜೀನಾಮೆ ನೀಡಿಲ್ಲ. ಕಳೆದ ಲೋಕಸಭಾ ಚುನಾವಣೆಯ ಬಳಿಕ ಸಮ್ಮಿಶ್ರ ಸರಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್‌ನ ಹಿರಿಯ ನಾಯಕರು ಯಾರೂ ಪ್ರಯತ್ನ ಮಾಡಿಲ್ಲ. ನಾಳೆ(ಜು.22) ಸಮ್ಮಿಶ್ರ ಸರಕಾರ ಕೈಗೊಳ್ಳುವ ತೀರ್ಮಾನ ನಂತರ ನಾವೆಲ್ಲರೂ ಒಟ್ಟಿಗೆ ಬೆಂಗಳೂರಿಗೆ ಬಂದು ಸುದ್ದಿಗೋಷ್ಠಿಯ ಮೂಲಕ ಎಲ್ಲ ಅಂಶಗಳನ್ನು ಬಹಿರಂಗ ಮಾಡುತ್ತೇವೆ ಎಂದು ಶಾಸಕ ಬೈರತಿ ಬಸವರಾಜು ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೇವೆ. ಆದರೆ, ಎರಡು ಬಾರಿ ಗೆದ್ದ ಶಾಸಕರನ್ನು ಸಚಿವರನ್ನಾಗಿ ಮಾಡುತ್ತಾರೆ. ಏಳು ಬಾರಿ ಶಾಸಕರಾಗಿ ಗೆದ್ದಿದ್ದವರನ್ನು ಮೂಲೆಗುಂಪು ಮಾಡಿದ್ದಾರೆ. ಪಕ್ಷದ ಹೊರಗಡೆ ಇದ್ದವರನ್ನು ಕರೆತಂದು ಸಚಿವರನ್ನಾಗಿ ಮಾಡುತ್ತಾರೆ, ನಮ್ಮನ್ನು ಗುರುತಿಸುವುದಿಲ್ಲ. ಹೀಗಾದರೂ ನಾವು ಸುಮ್ಮನೆ ಕೂರಬೇಕಾ ಎಂದು ಬಂಡಾಯ ಶಾಸಕ ಮುನಿರತ್ನ ಆರೋಪಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)