varthabharthi


ವೈವಿಧ್ಯ

ಅವಸಾನದ ಹಾದಿಯಲ್ಲಿ ವಂಶಾಡಳಿತ

ವಾರ್ತಾ ಭಾರತಿ : 22 Jul, 2019
ಸೈಯದ್ ಮುನೀರ್ ಖುಸ್ರು

ಬ್ರಿಟಿಷರು ಭಾರತೀಯ ಉಪಖಂಡವನ್ನು ತೊರೆದ ಬಳಿಕ, ದಕ್ಷಿಣ ಏಶ್ಯಾದ ಹೆಚ್ಚಿನ ರಾಷ್ಟ್ರಗಳಲ್ಲಿ ವಂಶಾಡಳಿತ ನಡೆದಿದೆ. ನೆಹರೂ-ಗಾಂಧಿ ಕುಟುಂಬದ ನೇತೃತ್ವದಲ್ಲಿ ಸಾಗಿ ಬಂದ ಭಾರತದ ಕಾಂಗ್ರೆಸ್ ಪಕ್ಷವು ಸ್ವಾತಂತ್ರೊತ್ತರ ಭಾರತದ ಬಹುಪಾಲು ಅವಧಿಯಲ್ಲಿ ಅಧಿಕಾರ ನಡೆಸಿದೆ. ಅದೇ ರೀತಿಯಾಗಿ ಭುಟ್ಟೊ, ಝರ್ದಾರಿ ಮತ್ತು ಶರೀಫ್ ಕುಟುಂಬದ ಸದಸ್ಯರೇ ವರ್ಷಾನುಗಟ್ಟಲೆ ಪಾಕಿಸ್ತಾನದಲ್ಲಿ ಆಡಳಿತ ನಡೆಸಿದರು. ಶ್ರೀಲಂಕಾದಲ್ಲಿ ಹಲವಾರು ವರ್ಷಗಳ ಕಾಲ ಭಂಡಾರನಾಯಕೆ ಕುಟುಂಬ ಮತ್ತು ಬಳಿಕ ರಾಜಪಕ್ಷೆ ಕುಟುಂಬ ಅಧಿಕಾರದಲ್ಲಿತ್ತು. ಬಾಂಗ್ಲಾದೇಶದಲ್ಲಿ ಎರಡು ರಾಜಕೀಯ ಪಕ್ಷಗಳು - ಶೇಖ್ ಮುಜೀಬುರ್ರಹ್ಮಾನ್ ಮತ್ತು ಜಿಯಾವುರ್ರಹ್ಮಾನ್ - ದೇಶದ ರಾಜಕೀಯದಲ್ಲಿ ಪ್ರಾಬಲ್ಯ ಮೆರೆದಿದ್ದವು.

 ಆದರೆ ರಾಜಕೀಯ ವಂಶಾಡಳಿತಕ್ಕೆ ಸೇರಿದ ನಾಯಕರು ಯಾವಾಗಲೂ ಭವ್ಯವಾದ, ಸುಭದ್ರವಾದ ಆಡಳಿತ ನೀಡಲು ಸಮರ್ಥರಾಗಲಿಲ್ಲ. ಭುಟ್ಟೊ ಕುಟುಂಬದ ಸದಸ್ಯರು, ಝುಲ್ಫಕರ್ ಅಲಿ ಭುಟ್ಟೊ ಮತ್ತು ಅವರ ಮಗಳು ಬೆನಝೀರ್ ಭುಟ್ಟೊ ಅಕಾಲಿಕವಾಗಿ ಮೃತಪಟ್ಟರು. ಭಾರತದಲ್ಲಿ ಇಂದಿರಾ ಗಾಂಧಿ ಮತ್ತು ಅವರ ಪುತ್ರ ರಾಜೀವ್ ಗಾಂಧಿ ಇಬ್ಬರೂ ಹತ್ಯೆಗೈಯಲ್ಪಟ್ಟರು. ಒಮ್ಮೆಮ್ಮೆ ಒಂದು ಕುಟುಂಬದ ಅಂತ್ಯ ಇನ್ನೊಂದು ಕುಟುಂಬವನ್ನು ಅಧಕಾರಕ್ಕೆ ಏರಿಸುವುದಿದೆ. ಉದಾಹರಣೆಗೆ, ಶ್ರೀಲಂಕಾದಲ್ಲಿ ಭಂಡಾರ ನಾಯಕೆ ಕುಟುಂಬದ ಅಧಕಾರ ಕೊನೆಗೊಂಡಾಗ ರಾಜ ಪಕ್ಷೆಯವರ ಕುಟುಂಬ ಅಧಿಕಾರ ಹಿಡಿಯಿತು.

ಅದೇನಿದ್ದರೂ, ಈಗ ರಾಜಕೀಯ ಅಧಿಕಾರ ವಂಶಾಡಳಿತದಿಂದ ದೂರ ಸರಿಯುತ್ತಿರುವುದು ಕಾಣಿಸುತ್ತಿದೆ. ಪಾಕಿಸ್ತಾನದಲ್ಲಿ ಓರ್ವ ಕ್ರಿಕೆಟ್ ಆಟಗಾರನಾಗಿದ್ದು ಬಳಿಕ ರಾಜಕಾರಣಿಯಾದ ಇಮ್ರಾನ್ ಖಾನ್ ಅಧಿಕಾರಕ್ಕೆ ಬಂದರೆ ಭಾರತದಲ್ಲಿ ಓರ್ವ ಸ್ವಯಂಸೇವಕ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ. ಈ ಸಂದರ್ಭದಲ್ಲಿ, ಭಾರತದಲ್ಲಿ ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಭಾರತದ ಪಾಲಿಗೆ ಒಂದು ಮುಖ್ಯವಾದ ಬೆಳವಣಿಗೆ ಎನ್ನಬಹುದಾಗಿದೆ. 2004ರಲ್ಲಿ ತನ್ನ 34ರ ಹರೆಯದಲ್ಲಿ ಸಂಸದನಾಗಿ ಚುನಾವಣಾ ರಾಜಕೀಯವನ್ನು ಪ್ರವೇಶಿಸಿದ್ದ ರಾಹುಲ್ ಗಾಂಧಿ, 2014 ಮತ್ತು 2019ರ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಸೋಲಿನ ಬಳಿಕ ಪಕ್ಷದ ಅಧ್ಯಕ್ಷ ಸ್ಥಾನವನ್ನು ತ್ಯಜಿಸಲು ನಿರ್ಧರಿಸಿದರು. ಅವರು ಭಾರತದ ಯುವ ಜನತೆಯನ್ನು ಆಕರ್ಷಿಸಿ ಪಕ್ಷವನ್ನು ಗೆಲ್ಲಿಸುತ್ತಾರೆ ಎಂಬ ಭರವಸೆ ಸುಳ್ಳಾಯಿತು. ತನ್ನ ಪಕ್ಷದ ಸೋಲಿಗೆ ಯಾರ್ಯಾರನ್ನೋ ದೂಷಿಸದೆ, ಹೊಣೆಯಾಗಿಸದೆ ಅವರು ತನ್ನ ಹೊಣೆಗಾರಿಕೆಯನ್ನು ಒಪ್ಪಿಕೊಂಡರೆಂಬುವುದು ಗಮನಾರ್ಹ.

 ಮತದಾರರಿಗೆ ಮೋಡಿ ಮಾಡಲು ರಾಹುಲ್‌ಗಾಂಧಿಯವರು ಸೋತಿರಬಹುದಾದರೂ ಪಕ್ಷದ ಸಮಸ್ಯೆಗಳಿಗೆ ತಾನೇ ಜವಾಬ್ದಾರಿಯನ್ನು ಹೊರುವ ಮೂಲಕ ತನ್ನ ಪಕ್ಷದ ಭವಿಷ್ಯಕ್ಕೆ ಅವರು ಸಾಕಷ್ಟು ಭರವಸೆಯನ್ನು ಹಾಗೂ ಹೆಚ್ಚಿನ ಪ್ರಜಾಸತ್ತಾತ್ಮಕ ಚೌಕಟ್ಟನ್ನು ಒದಗಿಸಿದರು. ಹೀಗೆ ಅವರ ರಾಜೀನಾಮೆಯು ಅವರ ಪಕ್ಷದಲ್ಲಿರುವ ಶಿಕ್ಷಿತರಾದ, ವರ್ಚಸ್ವಿಗಳಾದ ಹಾಗೂ ಸಮರ್ಥರಾದ ನಾಯಕರಿಗೆ ಒಂದು ಹೊಸ ಮಾರ್ಗವನ್ನು ಮಾಡಿಕೊಟ್ಟಿದೆ.

ರಾಹುಲ್ ಗಾಂಧಿಯವರು ತಾನೂ ತನ್ನ ಎದುರಾಳಿಗಳಿಗಿಂತ ಹೇಗೆ ಭಿನ್ನವೆಂಬುವುದನ್ನು ಈ ಮಾತುಗಳಲ್ಲಿ ಹೇಳಿದ್ದಾರೆ: ‘‘ಅವರು ಎಲ್ಲಿ ವ್ಯತ್ಯಾಸಗಳನ್ನು ಕಾಣುತ್ತಾರೋ ಅಲ್ಲಿ ನಾನು ಹೋಲಿಕೆಯನ್ನು, ಸಮಾನತೆಯನ್ನು ಕಾಣುತ್ತೇನೆ. ಅವರು ಎಲ್ಲಿ ದ್ವೇಷವನ್ನು ಕಾಣುತ್ತಾರೋ ಅಲ್ಲಿ ನಾನು ಪ್ರೀತಿಯನ್ನು ಕಾಣುತ್ತೇನೆ. ಅವರು ಯಾವುದಕ್ಕೆ ಹೆದರುತ್ತಾರೋ ನಾನು ಅದನ್ನು ಆಲಿಂಗಿಸಿಕೊಳ್ಳುತ್ತೇನೆ’’. ಅವರು ಈ ಮುಂದಿನ ಮಾತುಗಳೊಂದಿಗೆ ತನ್ನ ರಾಜೀನಾಮೆ ಪತ್ರವನ್ನು ಮುಕ್ತಾಯಗೊಳಿಸಿದಾಗ ಅವರು ಖಂಡಿತವಾಗಿಯೂ ಜನರ ಮೇಲೆ ಅಳಿಸಲಾಗದ ಪರಿಣಾಮ ಉಂಟುಮಾಡಿದರು. ‘‘ಭಾರತದಲ್ಲಿ ಬಲಿಷ್ಠರು ಅಧಿಕಾರಕ್ಕೆ ಅಂಟಿಕೊಳ್ಳುವುದು ಒಂದು ಅಭ್ಯಾಸವಾಗಿಬಿಟ್ಟಿದೆ. ಯಾರೊಬ್ಬರು ಕೂಡ ಅಧಿಕಾರವನ್ನು ತ್ಯಾಗ ಮಾಡುವುದಿಲ್ಲ. ಆದರೆ ಅಧಿಕಾರದ ಮೇಲಿನ ಆಸೆಯನ್ನು ತ್ಯಾಗಮಾಡದೆ ಮತ್ತು ಇನ್ನಷ್ಟು ಆಳವಾದ ಸೈದ್ಧಾಂತಿಕ ಸಮರ ನಡೆಸದೆ ನಾವು ನಮ್ಮ ವಿರೋಧಿಗಳನ್ನು, ಎದುರಾಳಿಗಳನ್ನು ಸೋಲಿಸಲಾರೆವು’’

ಇತರ ದೇಶಗಳೆಡೆಗೆ ಕಣ್ಣು ಹಾಯಿಸಿದರೆ, ದಕ್ಷಿಣ ಏಶ್ಯಾ ವಂಶಾಡಳಿತ ರಾಜಕಾರಣಕ್ಕೆ ವಿದಾಯ ಹೇಳುತ್ತಿರುವಂತೆಯೇ ನೇಪಾಳದ ಕೆ.ಪಿ.ಶರ್ಮಾ ಓಲಿ, ಭೂತಾನಿನ ಪ್ರಧಾನಿ ಲೋತೆ ಟ್ರಶರಿಂಗ್ ಮತ್ತು ಮಾಲ್ಡೀವ್ಸ್‌ನ ಇಬ್ರಾಹೀಂ ಮುಹಮ್ಮದ್ ಸಾಲಿಹ್‌ರಂತಹ ನಾಯಕರಿಗೆ ಅವಕಾಶ ಸೃಷ್ಟಿಸಲ್ಪಡುತ್ತಿದೆ.

ಅದೇನಿದ್ದರೂ ಅಭ್ಯರ್ಥಿಯೊಬ್ಬ/ಳು ಆತ/ಆಕೆ ಒಂದು ರಾಜಕೀಯ ಕುಟುಂಬದಿಂದ ಬಂದವರೆಂಬ ಏಕೈಕ ಕಾರಣಕ್ಕಾಗಿ ಅಂತಹ ಅಭ್ಯರ್ಥಿಯನ್ನು ತಿರಸ್ಕರಿಸಬೇಕಾಗಿಲ್ಲ. ವಂಶಾಡಳಿತದಿಂದ ಬಂದವನೊಬ್ಬ ತನ್ನ ಯೋಗ್ಯತೆ ಕೌಶಲಗಳಿಂದಾಗಿ ರಾಜಕೀಯ ಏಣಿಯಲ್ಲಿ ಮೇಲಕ್ಕೆ ಹತ್ತಿ ಬಂದಾಗ ಅಲ್ಲಿಕೂಡ ಪ್ರತಿಭಾಪ್ರಭುತ್ವ (ಮೆರಿಟೋಕ್ರಸಿ ) ಇರಲು ಖಂಡಿತ ಸಾಧ್ಯವಿದೆ. ಬಡ ಹಿಂದುಳಿದ ಸಮುದಾಯಗಳಿಂದ ತೀರ ಸಾಮಾನ್ಯ ಕುಟುಂಬಗಳಿಂದ ಬಂದವರಿಗೆ ಕೂಡ ಅತ್ಯಂತ ಹೆಚ್ಚಿನ ಸವಲತ್ತುಗಳ ಹಿನ್ನೆಲೆಯಿಂದ ಬರುವವರಿಗೆ ಸಿಗುವಂತಹ ಅಧಿಕಾರದ ಅವಕಾಶಗಳು ಸಿಗುವಂತೆ ಖಚಿತಪಡಿಸುವುದೇ ದೇಶದ ಮುಂದಿರುವ ಸವಾಲು. ವಿಶ್ವದ ಅತ್ಯಂತ ಉಜ್ವಲ ಪ್ರಜಾಪ್ರಭುತ್ವಗಳಲ್ಲಿ ಒಂದಾಗಿರುವ ಭಾರತವು ಪ್ರತಿಭೆ ಆಧಾರಿತ ಪ್ರಜಾಸತ್ತಾತ್ಮಕ ಸಮಾಜಗಳಿಗೆ ಒಂದು ಸ್ಫೂರ್ತಿಯಾಗಬಲ್ಲದು. ಈ ದೃಷ್ಟಿಯಿಂದ ನೋಡಿದರೆ, ರಾಹುಲ್ ಗಾಂಧಿಯವರು ದೇಶವನ್ನು ಮುನ್ನಡೆಸಿದ್ದಾರೆ. ಇಂತಹ ನಾಯಕತ್ವಕ್ಕೆ ಒಂದು ಉದಾಹರಣೆಯಾಗಿದ್ದಾರೆ.

 ಕೃಪೆ: ದಿ ಹಿಂದು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)