varthabharthi

ಕ್ರೀಡೆ

ಟೆಸ್ಟ್ ಕ್ರಿಕೆಟ್‌: ಸಹಾಗೆ ಕಠಿಣ ಸವಾಲು

ವಾರ್ತಾ ಭಾರತಿ : 23 Jul, 2019

ಹೊಸದಿಲ್ಲಿ, ಜು.22: ಮುಂಬರುವ ವೆಸ್ಟ್‌ಇಂಡೀಸ್ ಪ್ರವಾಸಕ್ಕೆ ತಂಡವನ್ನು ರವಿವಾರ ಪ್ರಕಟಿಸಿದ್ದ ಬಿಸಿಸಿಐ ಮುಖ್ಯ ಆಯ್ಕೆಗಾರ ಎಂ.ಎಸ್.ಕೆ. ಪ್ರಸಾದ್ ಎಡಗೈ ವಿಕೆಟ್‌ಕೀಪರ್-ಬ್ಯಾಟ್ಸ್ ಮನ್ ರಿಷಭ್ ಪಂತ್ ಭಾರತೀಯ ಕ್ರಿಕೆಟ್‌ನ ಭವಿಷ್ಯದ ವಿಕೆಟ್‌ಕೀಪರ್ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಪಂತ್ ಎಲ್ಲ ಮೂರು ಪ್ರಕಾರದ ಕ್ರಿಕೆಟ್‌ನಲ್ಲಿ ಆಡಲಿದ್ದಾರೆ. ಆದರೆ ಹಿರಿಯ ವಿಕೆಟ್‌ಕೀಪರ್ ವೃದ್ಧಿಮಾನ್ ಸಹಾ ಅವರನ್ನು ಎರಡನೇ ವಿಕೆಟ್‌ಕೀಪರ್ ಆಗಿ ಟೆಸ್ಟ್ ಸರಣಿಗೆ ಮಾತ್ರ ಆಯ್ಕೆ ಮಾಡಲಾಗಿದೆ.

2018ರ ದಕ್ಷಿಣ ಆಫ್ರಿಕ ಪ್ರವಾಸದ ವೇಳೆ ಗಾಯಗೊಂಡಿದ್ದ ಸಹಾ ಇದೀಗ ಸಂಪೂರ್ಣ ಚೇತರಿಸಿಕೊಂಡ ಬಳಿಕ ಟೀಮ್ ಇಂಡಿಯಾಕ್ಕೆ ವಾಪಸ್ ಕರೆಸಲಾಗಿದೆ. ಹಿರಿಯ ಕ್ರಿಕೆಟಿಗ ಗಾಯಗೊಂಡಿ ದ್ದಾಗ ಅವರಿಗೆ ಮತ್ತೊಮ್ಮೆ ಅವಕಾಶ ನೀಡುವುದು ನಮ್ಮಲ್ಲಿರುವ ಅಲಿಖಿತ ನಿಯಮ. ಹೀಗಾಗಿ ಸಹಾಗೆ ಮತ್ತೊಂದು ಅವಕಾಶ ಕಲ್ಪಿಸಲಾಗಿದೆ ಎಂದು ಕೋಲ್ಕತಾ ಬ್ಯಾಟ್ಸ್‌ಮನ್ ಸಹಾರನ್ನು ವೆಸ್ಟ್‌ಇಂಡೀಸ್ ವಿರುದ್ಧ ಟೆಸ್ಟ್ ಸರಣಿಗೆ ಆಯ್ಕೆ ಮಾಡಿದ್ದನ್ನು ಉಲ್ಲೇಖಿಸಿ ಪ್ರಸಾದ್ ತಿಳಿಸಿದ್ದಾರೆ.

ಸಹಾ 2018ರ ಕೇಪ್‌ಟೌನ್ ಟೆಸ್ಟ್ ವೇಳೆ ಗಾಯಗೊಂಡ ಬಳಿಕ ಆಫ್ರಿಕ ವಿರುದ್ಧ ಸರಣಿಯಿಂದ ಹೊರಗುಳಿದಿದ್ದರು. ಆ ನಂತರ 2018ರ ಐಪಿಎಲ್ ಟೂರ್ನಿಯ ವೇಳೆ ಹೆಬ್ಬೆರಳ ಮೂಳೆ ಮುರಿತಕ್ಕೆ ಒಳಗಾಗಿದ್ದರು. ಭುಜನೋವಿಗೆ ತುತ್ತಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ವಿಂಡೀಸ್ ಪ್ರವಾಸಕ್ಕೆ ಮೊದಲ ಆಯ್ಕೆಯ ವಿಕೆಟ್‌ಕೀಪರ್ ಆಗಿ ಆಯ್ಕೆಯಾಗಿಲ್ಲ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ ವಿರುದ್ಧ ಸರಣಿಯಲ್ಲಿ ಪಂತ್ ವಿಕೆಟ್‌ಕೀಪಿಂಗ್ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸಿದ್ದರು. ಈಗಾಗಲೇ 14 ಪಂದ್ಯಗಳಿಂದ ವಂಚಿತರಾಗಿರುವ ಸಹಾ, ಜೇಸನ್ ಹೋಲ್ಡರ್ ನೇತೃತ್ವದ ವಿಂಡೀಸ್ ವಿರುದ್ಧ ಎರಡು 2 ಟೆಸ್ಟ್ ನಲ್ಲಿ ಅವಕಾಶ ಪಡೆಯುವ ಸಾಧ್ಯತೆ ಕ್ಷೀಣಿಸಿದೆ.

ಟೀಮ್ ಮ್ಯಾನೇಜ್‌ಮೆಂಟ್ ಪಂತ್‌ಗೆ ವಿಶ್ರಾಂತಿ ನೀಡಲು ಬಯಸಿದರೆ ಅಥವಾ ಪಂತ್ ಗಾಯಗೊಂಡರೆ ಮಾತ್ರ ಸಹಾಗೆ ಅಂತಿಮ-11ರ ಬಳಗದಲ್ಲಿ ಅವಕಾಶ ಸಿಗಬಹುದು. ಹೀಗಾಗಿ ವೆಸ್ಟ್‌ಇಂಡೀಸ್ ಪ್ರವಾಸದ ವೇಳೆ ಸಹಾಗೆ ಆಡುವ ಅವಕಾಶ ಸಿಗುವ ಖಾತ್ರಿಯಿಲ್ಲ. ಸಹಾ 32 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 34ರ ಸರಾಸರಿಯಲ್ಲಿ 1164 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ದಾಖಲೆ ಅವರಿಗೆ ಅಂತಿಮ-11 ಬಳಗದಲ್ಲಿ ಸ್ಥಾನ ಪಡೆಯಲು ಪೂರಕವಾಗಿಲ್ಲ. 2015ರಲ್ಲಿ ಎಂಎಸ್ ಧೋನಿ ದಿಢೀರನೆ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿಯಾದ ಬಳಿಕ ಸಹಾಗೆ ಅವಕಾಶ ಲಭಿಸಿತ್ತು. ಸಹಾ ವಿಕೆಟ್‌ಕೀಪಿಂಗ್ ಕೌಶಲ್ಯತೆ ಪಂತ್‌ಗಿಂತ ಉತ್ತಮವಾಗಿದೆ. ಈ ಕ್ಷಣದಲ್ಲಿ ಭಾರತಕ್ಕೆ ವಿಕೆಟ್‌ಕೀಪರ್‌ಗಿಂತಲೂ ವಿಕೆಟ್‌ಕೀಪರ್-ಬ್ಯಾಟ್ಸ್ ಮನ್ ಅಗತ್ಯವಿದೆ. ಮಿಂಚಿನ ವೇಗದಲ್ಲಿ ರನ್ ಗಳಿಸುವ ಬ್ಯಾಟ್ಸ್ ಮನ್ ನಿರೀಕ್ಷೆಯಲ್ಲಿರುವ ನಾಯಕ ವಿರಾಟ್ ಕೊಹ್ಲಿಗೆ ಪಂತ್ ಮೇಲೆ ಹೆಚ್ಚಿನ ಒಲವಿದೆ.

ಸಹಾ ಇದೀಗ ಎರಡು ಅಲಗಿನ ಖಡ್ಗದ ಮೇಲೆ ನಡೆಯುತ್ತಿದ್ದಾರೆ. ಒಂದೆಡೆ ಅವರಿಗೆ ರಾಷ್ಟ್ರೀಯ ತಂಡಕ್ಕೆ ಮತ್ತೆ ಕರೆ ನೀಡಲಾಗಿದೆ. ಮತ್ತೊಂದೆಡೆ ಪಂತ್ ಮೊದಲ ಆಯ್ಕೆಯ ವಿಕೆಟ್‌ಕೀಪರ್ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)