varthabharthi


ವಿಶೇಷ-ವರದಿಗಳು

ಪಕ್ಷಾಂತರದ ತರ್ಕ

ವಾರ್ತಾ ಭಾರತಿ : 24 Jul, 2019

ಪಕ್ಷಗಳ ಈ ದೌರ್ಬಲ್ಯ ಮತ್ತು ವಿಶ್ವಾಸಾರ್ಹತೆಯ ಕೊರತೆಗಳಿಂದಾಗಿ ಜನರಿಗೂ ಸಹ ತಮ್ಮ ಜನಾದೇಶವು ಹೀಗೆ ಕುದುರೆ ವ್ಯಾಪಾರದ ಮೂಲಕ ಬುಡಮೇಲುಗೊಳ್ಳುತ್ತಿರುವ ಬಗ್ಗೆ ಯಾವ ಕಾಳಜಿಯೂ ಇಲ್ಲದ ಅಸಡ್ಡೆ ಅಥವಾ ನಿರ್ಲಕ್ಷ್ಯ ಮೂಡುತ್ತಿದೆ. ಒಂದು ಚುನಾವಣೆಯಲ್ಲಿ ತಾವು ಆಯ್ಕೆ ಮಾಡಿದ ಪ್ರತಿನಿಧಿಯು ಜನರ ಮತಾದೇಶವನ್ನು ಯಾವ ಪಕ್ಷದ ವಿರುದ್ಧವಾಗಿ ಕೇಳಿರುತ್ತಾರೋ ಅದೇ ಪಕ್ಷಕ್ಕೆ ಚುನಾವಣೆಯ ನಂತರ ಹೋಗಿ ಸೇರಿಕೊಂಡರೆ ತಮ್ಮ ಆದೇಶಕ್ಕೆ ಅವರ ಉತ್ತರದಾಯಿತ್ವವೇನು ಎಂದು ಜನರು ಪ್ರಶ್ನಿಸಬೇಕಾಗುತ್ತದೆ.

ಕಾಂಗ್ರೆಸ್ ಪಕ್ಷಕ್ಕೆ ಮತ್ತು ಜಾತ್ಯತೀತ ಜನತಾ ದಳಕ್ಕೆ ಸೇರಿದ ಕರ್ನಾಟಕದ ಶಾಸನ ಸಭೆಯ 15 ಸದಸ್ಯರು ರಾಜೀನಾಮೆ ನೀಡಿರುವುದರಿಂದ ಕರ್ನಾಟಕದ ಮೈತ್ರಿ ಸರಕಾರವು ರಾಜಕೀಯ ಬಿಕ್ಕಟ್ಟನ್ನು ಎದುರಿಸುವಂತಾಗಿದೆ. ಇದರ ಹಿಂದೆ ಮೈತ್ರಿ ಸರಕಾರವನ್ನು ಉರುಳಿಸಿ ಅಧಿಕಾರಕ್ಕೆ ಬರಲು ಹವಣಿಸುತ್ತಿರುವ ಬಿಜೆಪಿಯ ಹುನ್ನಾರವಿದೆಯೆಂದು ಆರೋಪಿಸಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಅವಲೋಕಿಸಿದರೆ ಕರ್ನಾಟಕದಲ್ಲಿ ಅನಾವರಣಗೊಳ್ಳುತ್ತಿರುವ ರಾಜಕೀಯ ಬಿಕ್ಕಟ್ಟು ಪ್ರಜಾತಂತ್ರವು ಇನ್ನೂ ಆಳದಲ್ಲಿ ಅನುಭವಿಸುತ್ತಿರುವ ತೀವ್ರತರ ನೈತಿಕ ಬಿಕ್ಕಟ್ಟಿನ ಸೂಚನೆಯೆಂದು ಮಾತ್ರ ಕಾಣುತ್ತದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಮರಳಿದ ನಂತರ ಅದರ ಗಮನ ಮತ್ತು ಉತ್ಸಾಹಗಳೆಲ್ಲಾ ತಮ್ಮ ಅಧಿಕಾರವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡು ಕೇಂದ್ರೀಕರಿಸಿಕೊಳ್ಳುವುದರ ಸುತ್ತಲೇ ಸುತ್ತುತ್ತಿವೆ. ಇದು ರಾಜ್ಯಗಳ ಶಾಸನ ಸಭೆಗಳಲ್ಲಿ ಮತ್ತು ರಾಜ್ಯಸಭೆಯಲ್ಲಿ ಬೇರೆ ಪಕ್ಷದ ಜನಪ್ರತಿನಿಧಿಗಳನ್ನು ತಮ್ಮ ಪಕ್ಷಕ್ಕೆ ಪಕ್ಷಾಂತರಗೊಳಿಸಿಕೊಳ್ಳುತ್ತಿರುವುದರಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತಿದೆ. ಬಹುಮತವನ್ನು ಹುಟ್ಟಿಸಿಕೊಳ್ಳುವ ತನ್ನ ಪ್ರಯತ್ನದಲ್ಲಿ ಅದು ಜನತೆಯ ಚುನಾವಣಾ ಆದೇಶಗಳನ್ನೆಲ್ಲಾ ಬುಡಮೇಲುಗೊಳಿಸುತ್ತಿದೆ. ಆದರೆ ಇದು ಹೊಸ ವಿದ್ಯಮಾನವೂ ಅಲ್ಲ ಮತ್ತು ಕೇವಲ ಬಿಜೆಪಿಗೆ ಮಾತ್ರ ಸೀಮಿತವಾಗಿರುವುದೂ ಅಲ್ಲವೆಂದು ಯಾರಾದರೂ ವಾದಿಸಬಹುದು. ಆದರೆ ಈ ಎಲ್ಲಾ ಪಕ್ಷಾಂತರಗಳು ಆಡಳಿತ ರೂಢ ಪಕ್ಷಕ್ಕೆ ರಾಜ್ಯಸಭೆಯಲ್ಲೂ ಸರಳ ಬಹುಮತವನ್ನು ಗಳಿಸಿಕೊಟ್ಟು ಅದರ ಶಾಸನಾತ್ಮಕ ಅಜೆಂಡಾಗಳನ್ನು ಯಾವುದೇ ಮೇಲ್ವಿಚಾರಣೆ ಹಾಗೂ ಪ್ರತಿರೋಧಗಳ ಅಡೆತಡೆಗಳಿಲ್ಲದೆ ಜಾರಿ ಮಾಡಲು ಸಹಕರಿಸಲಿದೆ ಎಂಬುದು ಅರ್ಥವಾಗುತ್ತದೆ. ಇನ್ನೂ ಆಳದಲ್ಲಿ ಅದು ಒಂದು ವಿರೋಧ ಮುಕ್ತ ಭಾರತವನ್ನು ಸಾಕಾರಮಾಡಿಕೊಳ್ಳುವಲ್ಲಿ ಅನುವುಮಾಡಿಕೊಡಲಿದೆ. ವಿರೋಧಪಕ್ಷಗಳ ಸದಸ್ಯರು ತಾವು ಹೇಳಿದಂತೆ ಕೇಳುವ ಹಾಗೆ ಮಾಡಿಕೊಳ್ಳುವ ಮತ್ತು ಕ್ರಮೇಣವಾಗಿ ಪಕ್ಷಾಂತರವನ್ನು ಮಾಡುವಂತೆ ಹಲವಾರು ಅಧಿಕಾರ ಯಂತ್ರಗಳ ಮೂಲಕ ಬಗೆಬಗೆಯಾದ ಒತ್ತಡಗಳನ್ನು ಹಾಕುವ ಕಲೆಯಲ್ಲಿ ಅಧಿಕಾರರೂಢ ಪಕ್ಷವು ಪರಿಣಿತಿಯನ್ನು ಸಾಧಿಸಿಬಿಟ್ಟಿದೆ. ಆದರೆ ಪ್ರತಿಪಕ್ಷಗಳು ಏಕೆ ಈ ಪ್ರಯತ್ನಗಳಿಗೆ ಪ್ರತಿರೋಧ ಒಡ್ಡದೆ ಬಲಿಯಾಗುತ್ತಿವೆ ಎಂಬುದೇ ಅಸಲೀ ಪ್ರಶ್ನೆಯಾಗಿದೆ. ಆಳುವ ಪಕ್ಷಗಳ ಹುನ್ನಾರಗಳ ಬಗ್ಗೆ ಅವರು ಎತ್ತುತ್ತಿರುವ ಧ್ವನಿಗಳು ಜನರಲ್ಲಿ ಏಕೆ ಮನ್ನಣೆಯನ್ನು ಪಡೆಯುತ್ತಿಲ್ಲ? ಚುನಾಯಿತ ಪ್ರತಿನಿಧಿಗಳು ಇಷ್ಟು ಸಲೀಸಾಗಿ ಪಕ್ಷಗಳನ್ನು ಬದಲಿಸುತ್ತಿರುವುದು ಯಾವುದೇ ಸೈದ್ಧಾಂತಿಕ ಅಥವಾ ತತ್ವನಿಯಮಗಳ ಬದ್ಧತೆ ಇಲ್ಲದ ರಾಜಕೀಯದ ಪರಿಣಾಮವಾಗಿದೆ. ಅಧಿಕಾರವನ್ನು ಪಡೆದುಕೊಂಡು ಹಣವನ್ನು ಗಳಿಸುವುದು ಮತ್ತು ಗಳಿಸಿದ ಹಣದ ಮೂಲಕ ಅಧಿಕಾರವನ್ನು ಮರಳಿ ಗಳಿಸಿಕೊಳ್ಳುವ ತರ್ಕವೇ ಚುನಾವಣಾ ರಾಜಕಾರಣದ ಪ್ರಧಾನ ಧಾರೆಯಾಗಿಬಿಟ್ಟಿದೆ. ಕೆಲವು ಅಪವಾದಗಳನ್ನು ಹೊರತು ಪಡಿಸಿದರೆ, ಪ್ರಮುಖ ವಿರೋಧ ಪಕ್ಷಗಳು ಸಹ ಇಂತಹ ರಾಜಕಾರಣದ ಸೃಷ್ಟಿಯಲ್ಲಿ ಭಾಗಸ್ಥರಾಗಿದ್ದಾರೆ. ಇಂತಹ ರಾಜಕಾರಣದಿಂದ ತಮ್ಮ ಅಸ್ತಿತ್ವವೇ ಕಳೆದುಹೋಗುವಂತಿದ್ದರೂ ಸಹ ಅವರು ಇದರ ಮುಂದುವರಿಕೆಯನ್ನು ವಿರೋಧಿಸುವುದಿಲ್ಲ. ಏಕೆಂದರೆ ಇಂದು ಅವು ಒಂದು ರಾಜಕೀಯ ಸಂಘಟನೆ ಎನ್ನುವುದಕ್ಕಿಂತ ಜಾಸ್ತಿ ಸಮಾನ ಹಿತಾಸಕ್ತಿಗಳ ಏಕ ಜಾಲವಾಗಿಬಿಟ್ಟಿವೆ. ಇಂತಹ ಸನ್ನಿವೇಶದಲ್ಲಿ ಬಿಜೆಪಿಯಂತಹ ಪಕ್ಷವು ಸಂವಿಧಾನಾತ್ಮಕ ಪ್ರಜಾತಂತ್ರಕ್ಕೆ ಗಂಡಾಂತರವನ್ನು ಉಂಟುಮಾಡುವಂತಹ ಸಿದ್ಧಾಂತವನ್ನು ಹೊಂದಿದ್ದರೂ ಒಂದು ನಿರ್ದಿಷ್ಟ ಸೈದ್ಧಾಂತಿಕ ಅಜೆಂಡಾವನ್ನು ಹೊಂದಿರುವುದರಿಂದ ವಿರೋಧ ಪಕ್ಷಗಳ ಸದಸ್ಯರನ್ನು ಹಾಗೂ ಕೆಲವೊಮ್ಮೆ ವಿರೋಧಿಸುವ ಪಕ್ಷವನ್ನೇ ಇಡಿಯಾಗಿ ಜೀರ್ಣಿಸಿಕೊಂಡುಬಿಡುವುದು ಸುಲಭವಾಗುತ್ತಿದೆ. ಅಧಿಕಾರದ ನೆರಳಲ್ಲಿ ಇಲ್ಲದೇ ರಾಜಕೀಯ ಮಾಡಲಾಗದ ಅವರ ಸಾಮರ್ಥ್ಯಹೀನತೆಯು ಒಂದು ನೈಜ ವಿರೋಧಪಕ್ಷ ರಾಜಕಾರಣ ಮಾಡಲಾಗದ ಅವುಗಳ ದೌರ್ಬಲ್ಯವನ್ನು ಸೂಚಿಸುತ್ತದೆ.

ಪಕ್ಷಗಳ ಈ ದೌರ್ಬಲ್ಯ ಮತ್ತು ವಿಶ್ವಾಸಾರ್ಹತೆಯ ಕೊರತೆಗಳಿಂದಾಗಿ ಜನರಿಗೂ ಸಹ ತಮ್ಮ ಜನಾದೇಶವು ಹೀಗೆ ಕುದುರೆ ವ್ಯಾಪಾರದ ಮೂಲಕ ಬುಡಮೇಲುಗೊಳ್ಳುತ್ತಿರುವ ಬಗ್ಗೆ ಯಾವ ಕಾಳಜಿಯೂ ಇಲ್ಲದ ಅಸಡ್ಡೆ ಅಥವಾ ನಿರ್ಲಕ್ಷ್ಯ ಮೂಡುತ್ತಿದೆ. ಒಂದು ಚುನಾವಣೆಯಲ್ಲಿ ತಾವು ಆಯ್ಕೆ ಮಾಡಿದ ಪ್ರತಿನಿಧಿಯು ಜನರ ಮತಾದೇಶವನ್ನು ಯಾವ ಪಕ್ಷದ ವಿರುದ್ಧವಾಗಿ ಕೇಳಿರುತ್ತಾರೋ ಅದೇ ಪಕ್ಷಕ್ಕೆ ಚುನಾವಣೆಯ ನಂತರ ಹೋಗಿ ಸೇರಿಕೊಂಡರೆ ತಮ್ಮ ಆದೇಶಕ್ಕೆ ಅವರ ಉತ್ತರದಾಯಿತ್ವವೇನು ಎಂದು ಜನರು ಪ್ರಶ್ನಿಸಬೇಕಾಗುತ್ತದೆ. ಇಂದು ಕರ್ನಾಟಕದಲ್ಲಿ ಸಂಭವಿಸುತ್ತಿರುವಂತೆ ಆಯ್ಕೆಯಾದ ಒಂದು ವರ್ಷದಲ್ಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದನ್ನು ಕರ್ತವ್ಯ ಚ್ಯುತಿಯೆಂದೇ ಪರಿಗಣಿಸಬೇಕಾಗುತ್ತದೆ. ವಾಸ್ತವವಾಗಿ ರಾಜೀನಾಮೆ ನೀಡಿದ ಶಾಸಕರ ಕ್ಷೇತ್ರಗಳಲ್ಲಿ ಜನರು ಸ್ವಯಂಪ್ರೇರಿತರಾಗಿ ಪ್ರತಿಭಟನಾ ಪ್ರದರ್ಶನಗಳನ್ನು ನಡೆಸುವ ಮೂಲಕ ಸಂಬಂಧಪಟ್ಟ ಶಾಸಕರ ಮೇಲೆ ಪ್ರಜಾತಾಂತ್ರಿಕ ಒತ್ತಡವನ್ನು ಹೇರುವುದು ಅತ್ಯಂತ ಅಪೇಕ್ಷಣೀಯ ಪ್ರತಿರೋಧ ಮಾದರಿಯಾಗಿರುತ್ತದೆ. ಆದರೆ ಅಂತಹ ಪ್ರತಿರೋಧಗಳು ಸಾರ್ವಜನಿಕ ರೂಪದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಬದಲಿಗೆ ಬಹಳಷ್ಟು ಪ್ರಕರಣಗಳಲ್ಲಿ ಅಂತಹ ಪಕ್ಷಾಂತರಿ ಶಾಸಕರೇ ಮರು ಆಯ್ಕೆಗೊಳ್ಳುತ್ತಿದ್ದಾರೆ. ಮತದಾರರಲ್ಲಿ ಏಕೆ ಈ ಬಗೆಯ ಸಾರ್ವಜನಿಕ ಭಿನ್ನಮತ, ಸಕಾರಣ ಕಾಳಜಿ ಅಥವಾ ಆಕ್ರೋಶಗಳು ಕಾಣುತ್ತಿಲ್ಲ?

ಒಂದು ಕಡೆ ಮೇಲೆ ಹೇಳಲಾದ ಕಾರಣಗಳಿಂದಾಗಿ ವಿರೋಧ ಪಕ್ಷಗಳು ಈ ವಿಷಯದ ಸುತ್ತ ಜನರನ್ನು ಸಂಘಟಿಸಲಾಗುತ್ತಿಲ್ಲ. ಮತ್ತೊಂದು ಕಡೆ ವಿಶೇಷವಾಗಿ ಕಳೆದ ಐದು ವರ್ಷಗಳಿಂದಲಂತೂ ಸಮೂಹ ಮಾಧ್ಯಮಗಳು ಮತ್ತು ರಾಜಕೀಯ ವಿಶ್ಲೇಷಕರು ಇಂತಹ ಅಪ್ರಜಾತಾಂತ್ರಿಕ ಹುನ್ನಾರಗಳನ್ನು ‘ಚಾಣಕ್ಯ ನೀತಿ’, ‘ಮಾಸ್ಟರ್ ಸ್ಟ್ರೋಕ್’, ‘ರಾಜಕೀಯ ಜಾಣ್ಮೆ’ ಎಂದೆಲ್ಲಾ ನಿರಂತರವಾಗಿ ವೈಭವೀಕರಿಸುತ್ತಾ ಅವಕ್ಕೆ ಮಾನ್ಯತೆ ತಂದುಕೊಡಲು ಅಹರ್ನಿಶಿ ಶ್ರಮಿಸುತ್ತಿದ್ದಾರೆ. ಇವೆಲ್ಲದರ ನಡುವೆಯೂ ಇಂತಹ ಹುನ್ನಾರಗಳ ವಿರುದ್ಧ ಜನರ ಅಸಮಾಧಾನಗಳು ತತ್ಪ್ರೇರಿತವಾಗಿಯಾದರೂ ಏಕೆ ಸ್ಫೋಟಗೊಳ್ಳುತ್ತಿಲ್ಲ? ಕೇವಲ ಯಾಂತ್ರಿಕ ಕ್ರಿಯೆಯಾಗಿ ಮಾತ್ರವಲ್ಲದೆ ಒಂದು ಗಟ್ಟಿಯಾದ ಪ್ರಜಾತಾಂತ್ರಿಕ ಸಂಸ್ಕೃತಿಯನ್ನು ರೂಪಿಸುವ ನೈತಿಕ ಶಕ್ತಿಯನ್ನು ಹೊಂದಿರುವ ಮತದಾನದ ಅರ್ಥವೇ ಬುಡಮೇಲುಗೊಳ್ಳುತ್ತಿರುವ ಬಗ್ಗೆ ಮತದಾರರೇಕೆ ಮೌನವಾಗಿದ್ದಾರೆ? ಪಕ್ಷಾಂತರವು ಈ ನೈತಿಕ ಶಕ್ತಿಯನ್ನು ಅರ್ಥಹೀನಗೊಳಿಸುತ್ತದೆ ಅಥವಾ ಅಸಂಬದ್ಧಗೊಳಿಸುತ್ತದೆಂಬುದನ್ನು ಮತದಾರರು ಏಕೆ ಅರ್ಥಮಾಡಿಕೊಳ್ಳುತ್ತಿಲ್ಲ? ಮೇಲೆ ಹೇಳಿದಂತಹ ಇನ್ನೂ ವಿಶಾಲವಾದ ವಿಷಯಗಳ ಕುರಿತು ಮತದಾರರ ಮೌನವು ನಾಗರಿಕರ ರಾಜಕಿಯ ಕ್ರಿಯಾಶೀಲತೆ ಯನ್ನು ಕೇವಲ ಮತದಾನ ಮಾಡುವುದಕ್ಕೆ ಮಾತ್ರ ಸೀಮಿತಗೊಳಿಸುತ್ತದೆ. ಮೇಲೆ ಹೇಳಿದಂತೆ ರಾಜಕೀಯ ಪಕ್ಷಗಳು ಚುನಾವಣೆ ಯನ್ನು ತಮ್ಮ ಹಿತಾಸಕ್ತಿ ಸಾಧನೆಯ ಉಪಕರಣಗಳನ್ನಾಗಿಸಿಕೊಂಡಿರುವುದೂ ಸಹ ಮತದಾರರ ರಾಜಕೀಯ ಅವಪ್ರಜ್ಞೆಗೆ ಕಾರಣವಾಗಿದೆ. ಮತದಾರರನ್ನು ಸಾಧನವನ್ನಾಗಿ ಬಳಸಿಕೊಳ್ಳುತ್ತಿರುವ ರಾಜಕಾರಣವನ್ನು ಮತದಾರರೂ ಸಹ ತಮ್ಮಿಳಗೆ ಅಂತರ್ಗತಗೊಳಿಸಿಕೊಂಡು ಬಿಟ್ಟಿದ್ದಾರೆಯೇ? ‘ಜನ ಪ್ರತಿನಿಧಿಗಳು’ ಯಾವುದೇ ಪ್ರಜಾತಾಂತ್ರಿಕ ಉತ್ತರದಾಯಿತ್ವವಿಲ್ಲದೆ ಬೇಕಾದ ಆಡಳಿತರೂಢ ಪಕ್ಷಗಳಿಗೆ ಮತಾಂತರಗೊಳ್ಳುತ್ತಿರುವ ಸಂದರ್ಭದಲ್ಲಿ ಈ ಪ್ರಶ್ನೆಯು ಇನ್ನಷ್ಟು ಮಹತ್ವವನ್ನು ಪಡೆದುಕೊಳ್ಳುತ್ತದೆ. ಯಾವುದೇ ಉತ್ತರದಾಯಿತ್ವವಿಲ್ಲದಿರುವ ಈ ಸನ್ನಿವೇಶವು ಆಡಳಿತರೂಢ ಪಕ್ಷಗಳಿಗೆ ತಮಗೆ ಬೇಕಾದ ಅಜೆಂಡಾವನ್ನು ಯಾವುದೇ ಪ್ರತಿರೋಧವಿಲ್ಲದೆ ಅನುಷ್ಠಾನಕ್ಕೆ ತರುವ ಅವಕಾಶವನ್ನು ಒದಗಿಸುತ್ತದೆ. ಹೀಗಾಗಿ ಅಂತಿಮವಾಗಿ ಜನರ ಮುಂದೆ ತಮ್ಮ ಪ್ರಜಾತಾಂತ್ರಿಕ ಪ್ರಜ್ಞೆಯನ್ನು ಜಾಗೃತಗೊಳಿಸಿಕೊಂಡು ವಿರೋಧ ಪಕ್ಷಗಳು ನೈಜವಾದ ವಿರೋಧ ಪಕ್ಷ ರಾಜಕಾರಣವನ್ನು ಮಾಡುವಂತೆ ಒತ್ತಾಯಿಸಬೇಕಾದ ಸವಾಲಿದೆ.

ಕೃಪೆ: Economic and Political Weekly

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)