varthabharthi


ವಿಶೇಷ-ವರದಿಗಳು

ತಬ್ರೇಝ್ ಅನ್ಸಾರಿ ಗುಂಪು ಹತ್ಯೆ...

ಕೋಟ್ಯಂತರ ಫಾಲೋವರ್ ಗಳಿರುವ ಮೂವರು ಟಿಕ್ ಟಾಕ್ ಸ್ಟಾರ್ ಗಳು ಇದ್ದಕ್ಕಿದ್ದಂತೆ ವಿಲನ್ ಗಳಾಗಿದ್ದು ಹೇಗೆ ?

ವಾರ್ತಾ ಭಾರತಿ : 24 Jul, 2019

ಮುಂಬೈ, ಜು.24: ಇಪ್ಪತ್ತೆರಡು ವರ್ಷದ ಫೈಸಲ್ ಶೇಖ್ ಅದೆಷ್ಟು ಫೇಮಸ್ ಆಗಿದ್ದಾರೆಂದರೆ ಮುಂಬೈ ಉಪನಗರಿಯ ಅವರ ನಿವಾಸದಿಂದ ಅವರು ಹೊರಕ್ಕೆ ಹೊರಟರೆಂದರೆ ಜನರು ಅವರನ್ನು ಸುತ್ತುವರಿಯುತ್ತಿದ್ದರು. ಎರಡು ವಾರಗಳ ಹಿಂದಿನ ತನಕ ಫೈಸಲ್ ಶೇಖ್ ಅಥವಾ ‘ಫೈಸು’ ಟಿಕ್ ಟಾಕ್ ನ ಅತ್ಯಂತ ದೊಡ್ಡ ಸ್ಟಾರ್ ಆಗಿದ್ದರು. ಆದರೆ ಇಂದು ಅವರ ಪೇಜ್ ಅನ್ನು ಅವರ ಕೋಟ್ಯಂತರ ಫಾಲೋವರ್ಸ್ ನೋಡುವ ಹಾಗಿಲ್ಲ. ಶಿವಸೇನೆಯ ಐಟಿ ಸೆಲ್ ಸದಸ್ಯರೊಬ್ಬರ ದೂರಿನನ್ವಯ ಜುಲೈ 8ರಂದು ಟಿಕ್ ಟಾಕ್ ತನ್ನ ಮೂವರು ಬಳಕೆದಾರರ ಖಾತೆಗಳನ್ನು ಸಸ್ಪೆಂಡ್ ಮಾಡಿದೆ.

ಹಸ್ನನ್ ಖಾನ್, ಶದನ್ ಫಾರೂಖಿ ಹಾಗೂ ಪೈಸಲ್ ಶೇಖ್ ಅವರು ಮುಂಬೈ ಕಾಲೇಜೊಂದರ ಐದು ಮಂದಿ ಸದಸ್ಯರ ತಂಡವಾಗಿದ್ದು, ‘ಟಿಕ್ ಟಾಕ್’ನಲ್ಲಿ ಟೀಮ್ 07 ಎಂದು ಪ್ರಸಿದ್ಧಿ ಗಳಿಸಿದ್ದಾರೆ. ಈ ತಂಡದ ಇತರ ಇಬ್ಬರು ಅದ್ನಾನ್ ಶೇಖ್ ಹಾಗೂ ಫೈಝ್ ಬಲೋಚ್. ಐದು ಮಂದಿಯೂ ಮೋಟಾರ್ ಸೈಕಲ್ ಸ್ಟಂಟ್ ಪ್ರಿಯರಾಗಿದ್ದರಿಂದ ಸ್ನೇಹಿತರಾಗಿದ್ದರು. ಈ ಐದು ಮಂದಿಗೆ 4 ಕೋಟಿಗೂ ಅಧಿಕ ಫಾಲೋವರ್ಸ್ ಇದ್ದಾರೆ.

ಈ ಟಿಕ್ ಟಾಕ್ ಟೀಮ್ 07 ಸದಸ್ಯರು ಪ್ರತಿ ದಿನ ಡಜನುಗಟ್ಟಲೆ 15 ಸೆಕೆಂಡ್ ವೀಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ ಹಾಗೂ ಹೆಚ್ಚಿನವು ತಮಾಷೆಯಾಗಿರುತ್ತದೆ. ಹೆಚ್ಚಾಗಿ ಸಂಪೂರ್ಣ ಮನರಂಜನಾತ್ಮಕ ವೀಡಿಯೋಗಳು ಇವಾಗಿವೆ.

ಜುಲೈ 6ರಂದು ಹಸ್ನೈನ್ ಖಾನ್ ತನ್ನ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ ಅದರಲ್ಲಿ ಜಾರ್ಖಂಡ್ ನಲ್ಲಿ ನಡೆದ ತಬ್ರೇಝ್ ಅನ್ಸಾರಿ ಗುಂಪು ಥಳಿತ ಪ್ರಕರಣದ ಬಗ್ಗೆ ಮಾತನಾಡಿದ್ದರು. ಆತನ ತಂಡದ ಇತರ ಮಂದಿ ಆತನ ಹಿಂದೆ ನಿಂತಿದ್ದರು. “ನೀವು ಮುಗ್ಧ ತಬ್ರೇಝ್ ಅನ್ಸಾರಿಯನ್ನು ಕೊಂದಿದ್ದೀರಿ, ನಾಳೆ ಆತನ ಮಕ್ಕಳು ಪ್ರತೀಕಾರ ತೀರಿಸಿದರೆ, ಎಲ್ಲಾ ಮುಸ್ಲಿಮರೂ ಉಗ್ರರೆಂದು ಹೇಳಬೇಡಿ'' ಎಂದಿದ್ದರು. ಅದೇ ದಿನ ಫೈಸಲ್ ಶೇಖ್ ಹಾಗೂ ಶದನ್ ಫಾರೂಖಿ ಕೂಡ ಇಂತಹುದೇ ವೀಡಿಯೋಗಳನ್ನು ಪೋಸ್ಟ್ ಮಾಡಿದ್ದರು.

ತಬ್ರೇಝ್ ಅನ್ಸಾರಿ ಮೇಲೆ ಜಾರ್ಖಂಡ್ ನ ಸೆರೈಕಲ-ಖರ್ಸವಾನ್ ಜಿಲ್ಲೆಯಲ್ಲಿ ಗುಂಪೊಂದು ದಾಳಿ ನಡೆಸಿ ‘ಜೈ ಶ್ರೀ ರಾಮ್’ ಹೇಳುವಂತೆ ಬಲವಂತಪಡಿಸಿ ಗಂಟೆಗಟ್ಟಲೆ ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ಜೂನ್ 18ರಂದು ನಡೆದಿತ್ತು. ನಾಲ್ಕು ದಿನಗಳ ನಂತರ ತಬ್ರೇಝ್ ಮೃತಪಟ್ಟಿದ್ದರು.

ತಬ್ರೇಝ್ ಬಗ್ಗೆ ಟೀಮ್ 07 ಪೋಸ್ಟ್ ಮಾಡಿದ ವೀಡಿಯೋ ಕ್ಷಣ ಮಾತ್ರದಲ್ಲಿ ಭಾರೀ ಜನಪ್ರಿಯವಾಗಿ ಬಿಟ್ಟಿತ್ತು ಹಾಗೂ ಟ್ವಿಟರ್ ನಲ್ಲಿ ತಮ್ಮನ್ನು ‘ಹೆಮ್ಮೆಯ ಹಿಂದು ರಾಷ್ಟ್ರೀಯವಾದಿ’ ಎಂದು ಬಣ್ಣಿಸುವ ಶಿವಸೇನೆ ರಮೇಶ್ ಸೋಳಂಕಿ ಅವರ ಕಣ್ಣಿಗೂ ಬಿದ್ದಿತ್ತು.  ಮೊದಲು ಮುಂಬೈ ಪೊಲೀಸರ ಸೈಬರ್ ಸೆಲ್ ಘಟಕಕ್ಕೆ ಟ್ವಿಟರ್ ಮೂಲಕ ಇದರ ಬಗ್ಗೆ ಹೇಳಿದ ಸೋಳಂಕಿ ಮರುದಿನ ಎಫ್ ಐಆರ್ ದಾಖಲಿಸಿದ್ದರು.

“ದೂರು ನೀಡುವುದು ನನ್ನ ಸಾಂವಿಧಾನಿಕ ಹಕ್ಕು. ಈ ಹುಡುಗರನ್ನು ಹೀರೋ ಎಂದು ಪರಿಗಣಿಸಲಾಗುತ್ತಿದೆ. ಇಷ್ಟು ಖ್ಯಾತಿ ಪಡೆದವರು ಇಂತಹ ಹೇಳಿಕೆ ನೀಡಿದಾಗ ಅದು ದೇಶಕ್ಕೆ ಒಳ್ಳೆಯದಲ್ಲ'' ಎಂದು ಸೋಳಂಕಿ ಹೇಳಿದ್ದಾರೆ. “ಬೇರೆ ಯಾರೋ ಇವರ ಮೂಲಕ ಇಂತಹ ಕೆಲಸ ಮಾಡುತ್ತಿದ್ದಾರೆ, ಭಾರತವನ್ನು ಅಸ್ಥಿರಗೊಳಿಸುವ ಸಂಚಿನ ಭಾಗ ಇದು'' ಎಂದೂ ಅವರು ಹೇಳಿಕೊಂಡಿದ್ದಾರೆ.

ಐದು ಮಂದಿಯ ವಿರುದ್ಧವೂ ಮುಂಬೈ ಪೊಲೀಸರು ಸೆಕ್ಷನ್ 153ಎ  ಹಾಗೂ 34 ಅನ್ವಯ ಪ್ರಕರಣ ದಾಖಲಿಸಿದ್ದಾರೆ. ಇದರ ಮರುದಿನವೇ ಈ ವೀಡಿಯೋಗಳು ಟಿಕ್ ಟಾಕ್ ನಿಂದ ನಾಪತ್ತೆಯಾದವಲ್ಲದೆ ಟೀಮ್ 07ನ ಮೂವರು ಸದಸ್ಯರ ಖಾತೆಗಳೂ ನಾಪತ್ತೆಯಾಗಿ ಬಿಟ್ಟಿದ್ದವು.

ಜುಲೈ 8ರಂದು ತನ್ನ ಇನ್‍ ಸ್ಟಾಗ್ರಾಂ ಪುಟದಲ್ಲಿ ಫೈಸಲ್ ಶೇಖ್ ಕ್ಷಮೆ ಯಾಚಿಸಿದ್ದರಲ್ಲದೆ, ಯಾರನ್ನೂ ನೋಯಿಸುವ ಉದ್ದೇಶ ತಮಗಿರಲಿಲ್ಲ ಎಂದಿದ್ದರು.

ಆದರೆ ಅದಾಗಲೇ ಸಾಕಷ್ಟು ಹಾನಿ ಉಂಟಾಗಿತ್ತು. ಟಿಕ್ ಟಾಕ್ ನಿಷೇಧಿಸಬೇಕೆಂಬ ಕೂಗು ಟ್ವಿಟರ್ ನಲ್ಲಿ ಹೆಚ್ಚಾಗುತ್ತಿದೆ. ಜುಲೈ 14ರಂದು ಸ್ವದೇಶಿ ಜಾಗರಣ ಮಂಚ್ ಸಹ ಸಂಚಾಲಕ ಅಶ್ವಣಿ ಮಹಾಜನ್ ಪ್ರಧಾನಿಗೆ ಪತ್ರ ಬರೆದು ಚೀನಾ ಮೂಲದ ಟಿಕ್ ಟಾಕ್ ಹಾಗೂ ಹೇಲೋ ಆ್ಯಪ್ ನಿಷೇಧಿಸುವಂತೆ ಆಗ್ರಹಿಸಿದ್ದಾರೆ.

ಕಳೆದ ವಾರವಷ್ಟೇ ಭಾರತದ ಕೋಟ್ಯಂತರ ಅಂತರ್ಜಾಲ ಬಳಕೆದಾರರನ್ನು ತಲುಪಲು ಟಿಕ್ ಟಾಕ್ ಜತೆ ಪಾಲುದಾರಿಕೆಯನ್ನು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ ಘೋಷಿಸತ್ತು, ಆದರೆ ಬುಧವಾರ ಕೇಂದ್ರ ಐಟಿ ಸಚಿವಾಲಯ ಟಿಕ್ ಟಾಕ್ ಹಾಗೂ ಹೇಲೋಗೆ ನೋಟಿಸ್ ಜಾರಿಗೊಳಿಸಿ ಮಾತೃ ಸಂಸ್ಥೆ ಬೈಟ್ ಡ್ಯಾನ್ಸ್ ದೂರುಗಳಿಗೆ ಪ್ರತಿಕ್ರಿಯಿಸಬೇಕೆಂದು ಹೇಳಿದೆ. ಬೈಟ್ ಡ್ಯಾನ್ಸ್ ತನ್ನ ಪ್ರತಿಕ್ರಿಯೆಯಲ್ಲಿ ಸಮಾಜದ ಕುರಿತಂತೆ ತನ್ನ ಜವಾಬ್ದಾರಿಗಳನ್ನು ಗಂಭೀರವಾಗಿ  ಪರಿಗಣಿಸುತ್ತಿರುವುದಾಗಿ ಹೇಳಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)