varthabharthi


ನಿಮ್ಮ ಅಂಕಣ

ಎಸೆಸೆಲ್ಸಿ ಪರೀಕ್ಷಾ ಪ್ರಶ್ನೆಪತ್ರಿಕೆ ಸ್ವರೂಪ ಬದಲಾವಣೆ ಬೇಕೇ?

ವಾರ್ತಾ ಭಾರತಿ : 26 Jul, 2019
-ಭೀಮಾನಂದ ಮೌರ್ಯ, ಮಾನಸಗಂಗೋತ್ರಿ, ಮೈಸೂರು

ಮಾನ್ಯರೇ

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಸೆಸೆಲ್ಸಿ ಪರೀಕ್ಷಾ ಪ್ರಶ್ನೆಪತ್ರಿಕೆ ಸ್ವರೂಪದಲ್ಲಿ ಬದಲಾವಣೆ ತರಲು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮುಂದಾಗಿದೆ. ಶಿಕ್ಷಣ ತಜ್ಞರು, ನುರಿತ ಶಿಕ್ಷಕರು, ಶಿಕ್ಷಣಾಸಕ್ತರ ವಿಸ್ತೃತ ಚರ್ಚೆಯ ನಂತರ ತೀರ್ಮಾನ ಕೈಗೊಳ್ಳದೆ ಅಝೀಂ ಪ್ರೇಮ್‌ಜಿ ಫೌಂಡೇಶನ್ ಮೂಲಕ ನಡೆಸಿದ ಹಿಂದಿನ ಪ್ರಶ್ನೆಪತ್ರಿಕೆಗಳ ವಿಶ್ಲೇಷಣಾ ವರದಿಯ ಆಧಾರದ ಮೇಲೆ ನೀಡಲಾಗಿರುವ ಸಲಹೆಯನ್ನು ಪರಿಗಣಿಸಿ ಈ ಬಗ್ಗೆ ಆದೇಶ ಹೊರಡಿಸಿರುವುದು ಅಚ್ಚರಿ ಉಂಟುಮಾಡಿದೆ.

ಮೇಲ್ನೋಟಕ್ಕೆ ಅಲ್ಪಬದಲಾವಣೆ ಎನಿಸಿದರೂ ಮುಖ್ಯಾಂಶಾಧಾರಿತ/ವಿಷಯಾಧಾರಿತ ಅಂಕಗಳ ಹಂಚಿಕೆಗೆ ಒತ್ತು ನೀಡಿರುವುದರಿಂದ ಒಟ್ಟಾರೆಯಾಗಿ ಪ್ರಶ್ನೆಗಳ ಸ್ವರೂಪವೂ ಬದಲಾಗುವುದು ನಿಶ್ಚಿತ. ಈ ಹಿಂದೆ ಕೇಳಲಾಗುತ್ತಿದ್ದ ಬಹು ಆಯ್ಕೆ ಮತ್ತು ಕಿರು ಉತ್ತರಗಳ ಪ್ರಶ್ನೆಗಳ ಸಂಖ್ಯೆಯಲ್ಲಿ ಕಡಿತಗೊಳಿಸಿ ಮೂರು- ನಾಲ್ಕು ಅಂಕಗಳ ಪ್ರಶ್ನೆಗಳ ಸಂಖ್ಯೆಯನ್ನು ಹೆಚ್ಚು ಮಾಡಿರುವುದಲ್ಲದೆ ದೀರ್ಘ ಉತ್ತರದ ಐದು ಅಂಕದ ಪ್ರಶ್ನೆಯೊಂದನ್ನು ಹೊಸದಾಗಿ ಪರಿಚಯಿಸಲಾಗಿದೆ.

ನೀಲನಕಾಶೆ ಆಧಾರವಾಗಿಟ್ಟುಕೊಂಡು ಶಿಕ್ಷಕರು ಕಡಿಮೆ ಅಂಕ ಹಂಚಿಕೆಯಿರುವ ಪಾಠಗಳನ್ನು ಬೋಧಿಸದೇ ಇರುವ ಸಂದರ್ಭ ಗಮನಿಸಿ ಶಿಕ್ಷಕರು ಎಲ್ಲ ಅಧ್ಯಾಯಗಳನ್ನು ಬೋಧಿಸುವಂತೆ ಮಾಡುವುದು, ಸಾಮೂಹಿಕ ನಕಲನ್ನು ತಡೆಗಟ್ಟುವುದು, ಮಕ್ಕಳಲ್ಲಿ ತಾರ್ಕಿಕ ಚಿಂತನೆ ಹಾಗೂ ಅಭಿವ್ಯಕ್ತಿ ಕೌಶಲವನ್ನು ವೃದ್ಧಿಸುವುದರ ಜೊತೆಗೆ ಶಿಕ್ಷಕರಲ್ಲಿ ಬೋಧನಾ ನಾವೀನ್ಯತೆ ತಂತ್ರಜ್ಞಾನದ ಅರಿವು ಮೂಡಿಸುವ ಸಲುವಾಗಿ ಈ ಬದಲಾವಣೆ ಮಾಡಲಾಗಿದೆಯೆಂದು ಮಂಡಳಿ ತನ್ನ ನಿರ್ಧಾರಕ್ಕೆ ಕಾರಣಗಳನ್ನು ನೀಡಿರುವುದು ಸಮಂಜಸವೆನಿಸುವುದಿಲ್ಲ.

ಪ್ರಶ್ನೆಪತ್ರಿಕೆ ಸ್ವರೂಪ ಬದಲಾಯಿಸಿದ ಮಾತ್ರಕ್ಕೆ ಸಾಮೂಹಿಕ ನಕಲು ತಡೆಗಟ್ಟಲು ಸಾಧ್ಯವೆಂಬುದೇ ಬಾಲಿಶವಾದ ಆಲೋಚನೆಯಾಗಿದೆ. ಪ್ರಸ್ತುತ ಒಂದರಿಂದ ಒಂಬತ್ತನೇ ತರಗತಿಯವರೆಗೆ ಜಾರಿಯಲ್ಲಿರುವ ಸಿಸಿಇ ಪದ್ಧತಿಯು ಚಟುವಟಿಕೆ ಆಧಾರಿತ ಮೌಲ್ಯಮಾಪನಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ತಾರ್ಕಿಕ ಚಿಂತನೆಗಿಂತ ಜೀವನ ಕೌಶಲಗಳನ್ನು ಅಂತರ್ಗತಗೊಳಿಸುವ, ಮಕ್ಕಳಲ್ಲಿರುವ ಸೃಜನಶೀಲತೆಯನ್ನು ಹೊರತೆಗೆಯುವುದಕ್ಕೆ ನೆರವಾಗಿದೆ. ಹಾಗಾಗಿ ಪ್ರಾಥಮಿಕ ಹಂತದಿಂದ ತಾರ್ಕಿಕ ಚಿಂತನೆಯ ಪ್ರಶ್ನೆಗಳಿಗೆ ಉತ್ತರಿಸುವುದನ್ನು ಮೊದಲು ರೂಢಿಸಬೇಕಾದದ್ದು ಹೆಚ್ಚು ವೈಜ್ಞಾನಿಕ ಹಾಗೂ ತಾರ್ಕಿಕವೆನಿಸುತ್ತದೆ. ಕಳೆದ ಎರಡು ವರ್ಷಗಳಿಂದ ಮಂಡಳಿಯೇ ಗಣತಿ ಆಧಾರಿತ ರಾಜ್ಯ ಕಲಿಕಾ ಸಾಧನಾ ಸಮೀಕ್ಷೆ ಹೆಸರಿನಲ್ಲಿ 4ರಿಂದ 10ನೇ ತರಗತಿವರೆಗೆ ಬಹು ಆಯ್ಕೆ ಪ್ರಶ್ನೆಗಳ ವಸ್ತುನಿಷ್ಠ ಮಾದರಿಯ ಪರೀಕ್ಷೆ ನಡೆಸಿಕೊಂಡು ಬರುತ್ತಿದ್ದು ಈ ವರ್ಷದ ಸೆಪ್ಟಂಬರ್‌ನಲ್ಲಿ ಪರೀಕ್ಷೆ ನಡೆಸಲು ಸಿದ್ಧ್ದತೆ ಮಾಡಿಕೊಳ್ಳುತ್ತಿದೆ.

ಇದರ ಜೊತೆಗೆ ಪರಿಷ್ಕೃತ ಎನ್‌ಸಿಇಆರ್‌ಟಿ ಪಠ್ಯಕ್ರಮವನ್ನು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು ಈ ಹಿಂದೆ ಇದ್ದ ರಾಜ್ಯ ಪಠ್ಯಕ್ರಮಕ್ಕಿಂತ ಭಿನ್ನ-ವ್ಯಾಪಕವಾದ ವಿಷಯವಸ್ತುವನ್ನು ಅರ್ಥಮಾಡಿಕೊಳ್ಳಲು ಪ್ರಯತ್ತಿಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಪರೀಕ್ಷಾ ಸ್ವರೂಪದಲ್ಲಿ ದಿಢೀರ್ ಬದಲಾವಣೆಯ ಪ್ರಯೋಗಕ್ಕೆ ಕೈ ಹಾಕಿರುವುದು ಸರಿಯೆನಿಸುವುದಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ 2019ರ ಕರಡು ಇನ್ನೂ ಚರ್ಚೆಯಲ್ಲಿದ್ದು ಅಂತಿಮ ರೂಪ ಪಡೆದು ಸ್ವೀಕೃತವಾಗುವುದಕ್ಕೂ ಮುನ್ನವೇ ಅದರಲ್ಲಿರುವ ಅಂಶಗಳನ್ನು ಅಳವಡಿಸಿಕೊಳ್ಳಲು ಮುಂದಾಗುವುದು ಆತುರದ ನಿರ್ಧಾರವೆನಿಸುತ್ತದೆ. ಮಂಡಳಿಯ ನಿರ್ಧಾರದಿಂದ ಪ್ರಶ್ನೆಪತ್ರಿಕೆ ತಯಾರಿಸುವವರಿಗೆ ಹೆಚ್ಚಿನ ಆಯ್ಕೆಯ ಸ್ವಾತಂತ್ರ್ಯ ಮತ್ತು ಬುದ್ಧಿವಂತಿಕೆ ಪ್ರದರ್ಶಿಸಲು ಅವಕಾಶ ದೊರಕುತ್ತದೆಯಷ್ಟೆ. ಸಾಧಾರಣ ಹಾಗೂ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಹೆಚ್ಚಿನ ಶ್ರಮ ಮತ್ತು ಒತ್ತಡ ಹಾಕಬೇಕಾದ ಪರಿಸ್ಥಿತಿಯನ್ನು ಸೃಷ್ಟಿಸುವುದಕ್ಕಿಂತ ಯಥಾಸ್ಥಿತಿ ಕಾಪಾಡಿಕೊಳ್ಳುವ ಬಗ್ಗೆ ಮರುಚಿಂತನೆ ನಡೆಸಬೇಕಾಗಿದೆ. ಹಾಗೆಯೆ ಕೇವಲ ಬಹು ಆಯ್ಕೆ ಪ್ರಶ್ನೆಗಳನ್ನು ಆಧರಿಸಿ ನಡೆಯುತ್ತಿರುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಪ್ರವೇಶ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳ ಸ್ವರೂಪದಲ್ಲೂ ಬದಲಾವಣೆ ತರಬೇಕೇ ಎಂಬುದರ ಬಗ್ಗೆಯೂ ಚರ್ಚೆ ನಡೆಸಲು ಇದು ಸಕಾಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)