varthabharthi


ವೈವಿಧ್ಯ

ರಾಷ್ಟ್ರ ಸಂತ ತುಕಡೋಜಿ ಮಹಾರಾಜ್ ನಾಗಪುರ ವಿಶ್ವವಿದ್ಯಾನಿಲಯ ಇದರ ಉಪಕುಲಪತಿಯವರಿಗೊಂದು ಬಹಿರಂಗ ಪತ್ರ

ವಿಶ್ವವಿದ್ಯಾನಿಲಯದ ಪಠ್ಯಕ್ರಮದಲ್ಲಿ ಆರೆಸ್ಸೆಸ್ ಇತಿಹಾಸದ ಸೇರ್ಪಡೆ!

ವಾರ್ತಾ ಭಾರತಿ : 26 Jul, 2019
ಶಂಸುಲ್ ಇಸ್ಲಾಂ

ಉಪಕುಲಪತಿ ಸಿದ್ಧಾರ್ಥ್ ವಿನಾಯಕ್ ಪಿ. ಕಾಣೆ

ಸರ್,
ಈ ವಿಷಯದಲ್ಲಿ ಅತ್ಯಂತ ಕೆಟ್ಟ ಹಾಗೂ ಕ್ರಿಮಿನಲ್ ಭಾಗವೆಂದರೆ ನೀವು ಓರ್ವ ಮಹಾನ್ ಸ್ವಾತಂತ್ರ್ಯ ಹೋರಾಟಗಾರನ ಹೆಸರು ಹೊತ್ತಿರುವ ಒಂದು ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿದ್ದೀರಿ. ಆ ಸ್ವಾತಂತ್ರ್ಯ ಹೋರಾಟಗಾರ ತುಕಡೋಜಿ ಮಹಾರಾಜ್ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಹಲವು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದರು. ನಾವಿಲ್ಲಿ ನೋಡಿರುವಂತೆ ಆರೆಸ್ಸೆಸ್ ಆ ಚಳವಳಿಯನ್ನು ಯಾವುದೇ ನಾಚಿಕೆ, ಮುಜುಗರ ಇಲ್ಲದೆ ವಿರೋಧಿಸಿತ್ತು ಹಾಗೂ ಚಳವಳಿಗೆ ವಿಶ್ವಾಸದ್ರೋಹ ಬಗೆದಿತ್ತು.

 ಗೌರವಾನ್ವಿತ ಉಪಕುಲಪತಿ ಸಾಹೇಬರೇ,
 ನಿಮ್ಮ ವಿಶ್ವವಿದ್ಯಾನಿಲಯದ ಪಠ್ಯಕ್ರಮದ ವಿಷಯಗಳಿಗೆ ಸಂಬಂಧಿಸಿದ ಒಂದು ಗಂಭೀರ ವಿಷಯದ ಬಗ್ಗೆ ನಾನು ನಿಮಗೆ ಈ ಪತ್ರ ಬರೆಯುತ್ತಿದ್ದೇನೆ. ವಿಶ್ವವಿದ್ಯಾನಿಲಯದ ಒಂದು ಸೂಚನಾ ಪತ್ರದ ಪ್ರಕಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ಇತಿಹಾಸ ಮತ್ತು ‘ರಾಷ್ಟ್ರ ನಿರ್ಮಾಣ’ದಲ್ಲಿ ಅದರ ಪಾತ್ರವನ್ನು ದ್ವಿತೀಯ ವರ್ಷದ ಬಿ.ಎ. ಇತಿಹಾಸ ಪಠ್ಯಕ್ರಮದಲ್ಲಿ ಸೇರ್ಪಡೆಗೊಳಿಸಲಾಗಿದೆ. ಆಶ್ಚರ್ಯವೆಂದರೆ ‘ಭಾರತದಲ್ಲಿ ಕೋಮುವಾದದ ಉದಯ ಮತ್ತು ಬೆಳವಣಿಗೆ’ ಎಂಬ ಒಂದು ಮುಖ್ಯ ಶೀರ್ಷಿಕೆಯನ್ನು ತೆಗೆದು ಹಾಕಿ ಆ ಪಾಠದ ಜಾಗದಲ್ಲಿ ‘ರಾಷ್ಟ್ರೀಯ ವಿಚಾರಧಾರೆಗಳು’ ಎಂಬ ವಿಷಯವನ್ನು ಬೋಧಿಸಲು ಹೀಗೆ ಮಾಡಲಾಗಿದೆ.
ಉಪಕುಲಪತಿ ಸಾಹೇಬರೇ
ಆರೆಸ್ಸೆಸ್ ಯಾವತ್ತಾದರೂ ಒಂದು ರಾಷ್ಟ್ರೀಯವಾದಿ ಸಂಘಟನೆಯಾಗಿತ್ತು ಎನ್ನುವುದಕ್ಕಿಂತ ಅಥವಾ ನಮ್ಮ ಪ್ರಜಾಸತ್ತಾತ್ಮಕ ಜಾತ್ಯತೀತ (ಸೆಕ್ಯುಲರ್) ಭಾರತಕ್ಕೆ ಸಂಬಂಧಿಸಿದಂತೆ ಆರೆಸ್ಸೆಸ್ ಯಾವುದೇ ರೀತಿಯಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಪಾತ್ರ ವಹಿಸಿತ್ತು ಎನ್ನುವುದಕ್ಕಿಂತ ದೊಡ್ಡದಾದ ಇನ್ನೊಂದು ಸುಳ್ಳು ಇರಲಾರದು. 1925ರಲ್ಲಿ ತನ್ನ ಸ್ಥಾಪನೆಯಾದಂದಿನಿಂದ ವಿ.ಡಿ. ಸಾವರ್ಕರ್ ನೇತೃತ್ವದ ಹಿಂದೂ ಮಹಾಸಭಾದಂತಹ ಮಿತ್ರ ಸಂಘಟನೆಯೊಂದಿಗೆ ಸೇರಿಕೊಂಡು ವಸಾಹತು ಶಾಹಿ ವಿರುದ್ಧವಾದ ಸ್ವಾತಂತ್ರ್ಯ ಹೋರಾಟಕ್ಕೆ ಅದು ದ್ರೋಹ ಬಗೆದಿದೆ. ರಾಷ್ಟ್ರೀಯ ಏಕತೆಯ ಎಲ್ಲ ಸಂಕೇತಗಳನ್ನು, ಹುತಾತ್ಮರನ್ನು ಅವಮಾನಗೊಳಿಸಿದೆ; ಭಾರತದ ಸಂವಿಧಾನವಾಗಿ ಅಮಾನವೀಯವಾದ ಮನುಸ್ಮತಿಯನ್ನು ಅಂಗೀಕರಿಸಬೇಕೆಂದು ಒತ್ತಾಯಿಸಿದೆ; ಪ್ರಜಾಪ್ರಭುತ್ವವನ್ನು ಖಂಡಿಸಿದೆ ಮತ್ತು ಪ್ರಜಾಸತ್ತಾತ್ಮಕ ಜಾತ್ಯತೀತ ದೇಶವನ್ನು ಒಂದು ಹಿಂದೂ ರಾಷ್ಟ್ರವಾಗಿ ಮಾಡಬೇಕೆಂದು ಹಕ್ಕೊತ್ತಾಯ ಸಲ್ಲಿಸಿದೆ. ಇಷ್ಟು ಸಾಲದು ಎಂಬಂತೆ ಆರೆಸ್ಸೆಸ್‌ನ ಅಗ್ರನಾಯಕ ಮತ್ತು ಹಿಂದುತ್ವದ ಐಕಾನ್ ‘ವೀರ’ ಸಾವರ್ಕರ್ ನೇತೃತ್ವದ ಹಿಂದೂ ಮಹಾಸಭಾ 1942ರಲ್ಲಿ ಮುಸ್ಲಿಂ ಲೀಗ್ ಜೊತೆ ಸೇರಿಕೊಂಡು ಮೈತ್ರಿ ಸರಕಾರಗಳನ್ನು ನಡೆಸಿತು ಮತ್ತು ನೇತಾಜಿ ಅವರು ಭಾರತದ ಸೇನೆಯನ್ನು ವಿಮೋಚನೆಗೊಳಿಸಲು ಪ್ರಯತ್ನಿಸಿದಾಗ ಅವರಿಗೆ ಬೆನ್ನ ಹಿಂದಿನಿಂದ ಇರಿಯಿತು.
ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆದ ಕುರಿತು ಸ್ವತಃ ಆರೆಸ್ಸೆಸ್ ಮಾಡಿಕೊಂಡ ತಪ್ಪೊಪ್ಪಿಗೆ:
ಆರೆಸ್ಸೆಸ್‌ನ ಅತ್ಯಂತ ಪ್ರಮುಖ ಸಿದ್ಧಾಂತಿ ಮತ್ತು (1940ರಿಂದ 1970ರ ನಡುವೆ) ಅದರ ಮುಖ್ಯಸ್ಥರಾಗಿದ್ದವರು ಅತ್ಯಂತ ಸ್ಪಷ್ಟವಾಗಿ ಆರೆಸ್ಸೆಸ್ ಬ್ರಿಟಿಷ್ ವಿರೋಧಿ ಸ್ವಾತಂತ್ರ್ಯ ಹೋರಾಟದಿಂದ ದೂರ ಉಳಿದಿದ್ದನ್ನು ಒಪ್ಪಿಕೊಂಡಿದ್ದಾರೆ. ಭಾರತದ ಸ್ವಾತಂತ್ರ್ಯ ಚಳವಳಿಯ ಇತಿಹಾಸದಲ್ಲಿ ಎರಡು ಮಹಾ ಮೈಲುಗಲ್ಲುಗಳಾಗಿದ್ದ ಅಸಹಕಾರ ಚಳವಳಿ ಮತ್ತು ಕ್ವಿಟ್ ಇಂಡಿಯಾ ಚಳವಳಿಯ ಬಗ್ಗೆ ಮಹಾನ್ ಗೋಳ್ವ್ವಾಲ್ಕರ್ ಅವರ ಮಹಾಪ್ರಬಂಧ (ಥೀಸಿಸ್) ಹೀಗಿದೆ:
‘‘ಹೋರಾಟದಿಂದ ಖಂಡಿತವಾಗಿಯೂ ಕೆಟ್ಟ ಪರಿಣಾಮಗಳಾಗುತ್ತವೆ. 1920-21ರ ಚಳವಳಿಯ ಬಳಿಕ ಹುಡುಗರನ್ನು ನಿಯಂತ್ರಿಸಲು ಆಗಲಿಲ್ಲ. ಹೋರಾಟದ ಬಳಿಕ ಇವು ಅನಿವಾರ್ಯ ಉತ್ಪನ್ನಗಳು. ವಿಷಯವೇನೆಂದರೆ ನಾವು ಈ ಪರಿಣಾಮಗಳನ್ನು ಸರಿಯಾಗಿ ನಿಯಂತ್ರಿಸಲು ಸಾಧ್ಯವಾಗಲಿಲ್ಲ. 1942ರ ನಂತರ ಕಾನೂನಿನ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಜನರು ತಿಳಿಯಲಾರಂಭಿಸಿದರು’’
ಕ್ವಿಟ್ ಇಂಡಿಯಾ ಚಳವಳಿ ಬಗ್ಗೆ ಆರೆಸ್ಸೆಸ್ ಧೋರಣೆ ಕುರಿತು ಗೋಳ್ವಾಲ್ಕರ್ ಹೇಳಿದರು: ‘‘1942ರಲ್ಲಿ ಕೂಡ ಹಲವರ ಹೃದಯಗಳಲ್ಲಿ ಪ್ರಬಲವಾದ ಒಂದು ಭಾವನೆ ಇತ್ತು. ಆಗ ಕೂಡ ಸಂಘದ ದೈನಂದಿನ, ಮಾಮೂಲಿ ಕೆಲಸ ಮುಂದುವರಿಯಿತು. ನೇರವಾಗಿ ಏನನ್ನೂ ಮಾಡದೇ ಇರಲು ಸಂಘವು ದೃಢ ನಿರ್ಧಾರ ತಳೆಯಿತು.


ಉಪಕುಲಪತಿ ಸಾಹೇಬರೇ,
ಗುರು ಗೋಳ್ವಾಲ್ಕರ್ ಅವರು ಕೂಡ ಆರೆಸ್ಸೆಸ್ ಬ್ರಿಟಿಷರನ್ನು ವಿರೋಧಿಸುತ್ತಿತ್ತೆಂದು ಎಲ್ಲೂ ಹೇಳಲಿಲ್ಲ. 1960ರಲ್ಲಿ ಇಂದೋರ್‌ನಲ್ಲಿ ಮಾಡಿದ ಒಂದು ಭಾಷಣದಲ್ಲಿ ಅವರು ಹೀಗೆ ಹೇಳಿದರು: ‘‘...ನಾವು ಕೈಗೊಂಡ ಪ್ರತಿಜ್ಞೆಯಲ್ಲಿ ಧರ್ಮ ಮತ್ತು ಸಂಸ್ಕೃತಿಯನ್ನು ರಕ್ಷಿಸುವ ಮೂಲಕ ದೇಶದ ಸ್ವಾತಂತ್ರ್ಯ ಎಂದು ನಾವು ಹೇಳಿದ್ದೆವೆಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು.’’
ಸ್ವಾತಂತ್ರ್ಯ ಹೋರಾಟವನ್ನು ಹೀಗಳೆದು ಬ್ರಿಟಿಷ್ ಸರಕಾರವನ್ನು ವೈಭವೀಕರಿಸಿದವರು ಗುರು ಗೋಳ್ವಾಲ್ಕರ್ ಒಬ್ಬರೇ ಅಲ್ಲ. ಅವರ ಗುರು ಮತ್ತು ಆರೆಸ್ಸೆಸ್‌ನ ಸ್ಥಾಪಕ ಹೆಡ್ಗೆವಾರ್‌ಗೂ ಅದೇ ರೀತಿಯಾದ ದೃಷ್ಟಿಕೋನಗಳು, ಅಭಿಪ್ರಾಯಗಳು ಇದ್ದವು. ಹೆಡ್ಗೆವಾರ್ ಅವರ ಅಧಿಕೃತ ಜೀವನ ಚರಿತ್ರೆಯಲ್ಲಿ ಈ ಕೆಳಗಿನ ಅರ್ಥಪೂರ್ಣವಾದ ಹೇಳಿಕೆಯಿದೆ. ‘‘ಸಂಘವನ್ನು ಸ್ಥಾಪಿಸಿದ ಬಳಿಕ ಸಂಘದ ಡಾಕ್ಟರ್ ಸಾಹೇಬರು ತನ್ನ ಭಾಷಣಗಳಲ್ಲಿ ಹಿಂದೂ ಸಂಘಟನೆಯ ಬಗ್ಗೆ ಮಾತ್ರ ಮಾತಾಡುತ್ತಿದ್ದರು. ಸರಕಾರದ ಕುರಿತಾದ ನೇರವಾದ ಟೀಕೆ ಕಮೆಂಟ್ ಯಾವತ್ತೂ ಇರುತ್ತಿರಲಿಲ್ಲ.’’
ಬ್ರಿಟಿಷ್ ಸರಕಾರ ಹಾಗೂ ಮುಸ್ಲಿಂ ಲೀಗ್‌ನ ಜೊತೆ ಸೇರಿಕೊಂಡು ಆರೆಸ್ಸೆಸ್ ಮತ್ತು ವೀರ ಸಾವರ್ಕರ್ ಒಟ್ಟಾಗಿ ಸ್ವಾತಂತ್ರ್ಯ ಚಳವಳಿಗೆ ದ್ರೋಹ ಬಗೆದರು.
ಸರ್,
ದೇಶದಲ್ಲಿ ಎಲ್ಲ ರಾಜಕೀಯ ಚಟುವಟಿಕೆಗಳನ್ನು ನಿಷೇಧಿಸಿ, ಕ್ವಿಟ್ ಇಂಡಿಯಾ ಚಳವಳಿಯನ್ನು ಹತ್ತಿಕ್ಕುವುದಕ್ಕಾಗಿ ಸಾವಿರಾರು ದೇಶಪ್ರೇಮಿ ಭಾರತೀಯರನ್ನು (ಬ್ರಿಟಿಷ್ ಸರಕಾರ) ಕೊಲ್ಲುತ್ತಿದ್ದಾಗ ಈ ಮಹಾನ್ ಹಿಂದುತ್ವದ ಐಕಾನ್ ನೇತೃತ್ವದ ಹಿಂದೂ ಮಹಾಸಭಾ 1942ರಲ್ಲಿ ಮುಸ್ಲಿಂ ಲೀಗ್‌ನ ಜೊತೆ ಸೇರಿಕೊಂಡು ಸಿಂಧ್, ಬಂಗಾಳ ಹಾಗೂ ಎಂಡಬ್ಲ್ಯೂ ಎಫ್‌ಸಿ (ನಾರ್ತ್‌ವೆಸ್ಟ್ ಫ್ರಾಂಟಿಯರ್ ಪ್ರಾವಿನ್ಸ್)ನಲ್ಲಿ ಮೈತ್ರಿ ಸರಕಾರ ಸೇರಿಕೊಂಡಿತು. 1942ರಲ್ಲಿ ಕಾನ್ಪುರದಲ್ಲಿ ನಡೆದ ಹಿಂದೂ ಮಹಾಸಭಾದ 24ನೇ ಅಧಿವೇಶನದಲ್ಲಿ ಅಧ್ಯಕ್ಷೀಯ ಭಾಷಣ ಮಾಡುತ್ತಾ ಮುಸ್ಲಿಂ ಲೀಗ್ ಜೊತೆ ಕೈಜೋಡಿಸಿರುವುದನ್ನು ಅವರು ಸಮರ್ಥಿಸಿಕೊಂಡಿದ್ದರು: ‘‘ಪ್ರಾಯೋಗಿಕ ರಾಜಕಾರಣದಲ್ಲಿ ಕೂಡ ಸಮರ್ಪಕವಾದ ಸಂಧಾನಗಳ ಮೂಲಕ ನಾವು ಮುಂದುವರಿಯಬೇಕೆಂದು ಮಹಾಸಭಾಕ್ಕೆ ಗೊತ್ತಿದೆ. ಇತ್ತೀಚೆಗಷ್ಟೇ ಸಿಂಧ್‌ನಲ್ಲಿ ಸಿಂಧ್-ಹಿಂದೂ ಮಹಾಸಭಾ ತನಗೆ ದೊರೆತ ಆಹ್ವಾನದ ಮೇರೆಗೆ ಮುಸ್ಲಿಂ ಲೀಗ್ ನೊಂದಿಗೆ ಕೈಜೋಡಿಸುವ ಜವಾಬ್ದಾರಿಯನ್ನು ತೆಗೆದುಕೊಂಡು ಸಮ್ಮಿಶ್ರ ಸರಕಾರ ನಡೆಸಲು ಒಪ್ಪಿಕೊಂಡಿತೆಂಬುದನ್ನು ಗಮನಿಸಿ...’’
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಬೆನ್ನ ಹಿಂದೆ ಇರಿ
1942ರ ದಶಕದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಕಾಂಗ್ರೆಸ್ ತೊರೆದು ವಸಾಹತುಶಾಹಿ ಆಡಳಿತದಿಂದ ಭಾರತವನ್ನು ವಿಮೋಚನೆ ಗೊಳಿಸುವುದಕ್ಕಾಗಿ ಒಂದು ಮಿಲಿಟರಿ ಅಭಿಯಾನವನ್ನು ಆರಂಭಿಸುವ ಉದ್ದೇಶದಿಂದ ಭಾರತ ತ್ಯಜಿಸಿದರು. ಆಘಾತಕಾರಿ ವಿಷಯವೇನೆಂದರೆ ಸಾವರ್ಕರ್ ಅವರ ನೇತೃತ್ವದಲ್ಲಿ ಹಿಂದೂ ಮಹಾಸಭಾ ಯಾವುದೇ ರೀತಿಯ ಮಿಲಿಟರಿ ವಿರೋಧವನ್ನು ದಮನಿಸಲು ಬ್ರಿಟಿಷರಿಗೆ ನೆರವು ನೀಡಿತು. ಆಗ ಸಾವರ್ಕರ್ ಹೀಗೆ ಘೋಷಿಸಿದರು: ‘‘ಭಾರತ ರಕ್ಷಣೆಯ ಮಟ್ಟಿಗೆ ಹೇಳುವುದಾದರೆ, ಸಹಕಾರದ ಒಂದು ಪ್ರಕ್ರಿಯೆಯಾಗಿ ಹಿಂದೂ ಸಮುದಾಯವು ನಿಸ್ಸಂಕೋಚವಾಗಿ ಭಾರತ ಸರಕಾರದ ಯುದ್ಧ ಪ್ರಯತ್ನಕ್ಕೆ ಕೈಜೋಡಿಸಬೇಕು. ಹಿಂದೂ ಹಿತಾಸಕ್ತಿಗಳಿಗೆ ಎಲ್ಲಿಯವರೆಗೆ ಈ ಪ್ರಯತ್ನ ಪೂರಕವಾಗಿರುತ್ತದೆಯೋ ಅಲ್ಲಿಯವರೆಗೆ ನೌಕಾಪಡೆ ಮತ್ತು ವಾಯು ಪಡೆಗಳಿಗೆ ಎಷ್ಟು ಗರಿಷ್ಠ ಸಂಖ್ಯೆಯಲ್ಲಿ ಸಾಧ್ಯವೋ ಅಷ್ಟು ಗರಿಷ್ಠ ಸಂಖ್ಯೆಯಲ್ಲಿ ಹಿಂದೂಗಳು ಸೇರಿಕೊಳ್ಳಬೇಕು.’’


ಸರ್,
1857ರಿಂದ ಆರಂಭಿಸಿ ದೇಶಪ್ರೇಮಿ ಭಾರತೀಯರು ಬ್ರಿಟಿಷ್ ಆಡಳಿತ ವಿರುದ್ಧ ನೂರಾರು ವಿಮೋಚನಾ ಹೋರಾಟಗಳನ್ನು ನಡೆಸಿದರು. ಸಾವಿರಾರು ಮಂದಿ ಈ ಹೋರಾಟಗಳಲ್ಲಿ ತಮ್ಮ ಪ್ರಾಣ ತೆತ್ತರು. ಆದರೆ ಆರೆಸ್ಸೆಸ್ ಯಾವುದೇ ನಾಚಿಕೆ ಇಲ್ಲದೆ ಹುತಾತ್ಮರ ಪರಂಪರೆಯನ್ನೇ ಹೀಯಾಳಿಸಿತು; ಅವಮಾನಿಸಿತು. ಗುರು ಗೋಳ್ವಾಲ್ಕರ್ ಜೀವನದಲ್ಲಿ ಯಶಸ್ವಿಯಾದವರು ಮಾತ್ರ ಆರೆಸ್ಸೆಸ್‌ಗೆ ಯಾವಾಗಲೂ ಪೂಜಾರ್ಹರು ಮತ್ತು ‘ಭಾರತೀಯ ಸಂಸ್ಕೃತಿ’ (ಅಂದರೆ ಆರೆಸ್ಸೆಸ್ ಸಂಸ್ಕೃತಿ) ಹುತಾತ್ಮ ನಾಗುವಿಕೆಯನ್ನು ಪೂಜಿಸುವುದೂ ಇಲ್ಲ; ಮತ್ತು ‘‘ಅಂತಹ ಹುತಾತ್ಮರನ್ನು ತಮ್ಮ ಹೀರೋ’’ಗಳೆಂದು ಪರಿಗಣಿಸುವುದಿಲ್ಲ ಎಂದು ಘೋಷಿಸಿದರು:
‘‘ಹುತಾತ್ಮರಾಗುವವರು ಮಹಾನ್ ಹೀರೋಗಳೆಂಬುದರಲ್ಲಿ ಅನುಮಾನವಿಲ್ಲ ಮತ್ತು ಅವರ ತತ್ವ ಕೂಡ ಖಂಡಿತವಾಗಿಯೂ ಪೌರುಷಯುತ... ಅದೇನಿದ್ದರೂ ನಮ್ಮ ಸಮಾಜದಲ್ಲಿ ಅಂತಹ ವ್ಯಕ್ತಿಗಳನ್ನು ಆದರ್ಶ ಪುರುಷರೆಂದು ಪರಿಗಣಿಸುವುದಿಲ್ಲ. ಯಾಕೆಂದರೆ, ಎಷ್ಟೆಂದರೂ ಅವರು ತಮ್ಮ ಆದರ್ಶವನ್ನು ಸಾಧಿಸಲು ವಿಫಲರಾದವರು ಮತ್ತು ವೈಫಲ್ಯ, ಸೋಲು ಎಂಬುದರ ಅರ್ಥ ಅವರಲ್ಲಿ ಏನೋ ಭಾರೀ ದೋಷವಿತ್ತು ಎಂದು.
ಉಪ ಕುಲಪತಿ ಸಾಹೇಬರೇ,
ಹುತಾತ್ಮರ ಬಗ್ಗೆ ಇದಕ್ಕಿಂತ ಹೆಚ್ಚು ಅವಮಾನಕಾರಿಯಾದ ಹೀನಾಯವಾದ ಬೇರೆ ಹೇಳಿಕೆ ಇರಲು ಸಾಧ್ಯವೇ?
ಆರೆಸ್ಸೆಸ್ ಪ್ರಕಟಿಸಿರುವ ಹೆಡ್ಗೆವಾರ್ ಜೀವನ ಚರಿತ್ರೆಯ ಪ್ರಕಾರ ‘‘ದೇಶಭಕ್ತಿ ಎಂದರೆ ಕೇವಲ ಜೈಲಿಗೆ ಹೋಗುವುದಲ್ಲ. ಸಮಯ ಬಂದಾಗ ದೇಶಕ್ಕಾಗಿ ಸಾಯಲು ಸಿದ್ಧರಾಗಿರುವಂತೆ ದೇಶದ ಸ್ವಾತಂತ್ರ್ಯಕ್ಕಾಗಿ ಸಂಘಟನೆ ಮಾಡುತ್ತಿರುವಾಗ ಬದುಕಬೇಕೆಂಬ ಆಸೆ ಇರುವುದು ಕೂಡ ಬಹಳ ಅಗತ್ಯ’’


ಸರ್,
ಯಾರೇ ಒಬ್ಬ ಆರೆಸ್ಸೆಸ್ ನಾಯಕನಾಗಲಿ ಅಥವಾ ಗುರು ಗೋಳ್ವಾಲ್ಕರ್, ದೀನ ದಯಾಳ್ ಉಪಾಧ್ಯಾಯ, ಬಾಲರಾಜ್ ಮಧೋಶ್, ಎಲ್. ಕೆ. ಅಡ್ವಾಣಿ, ಅಟಲ್ ಬಿಹಾರಿ ವಾಜಪೇಯಿಯಂತಹ ಸಿದ್ಧಾಂತಿಗಳಾಗಲಿ ಜೈಲಿಗೆ ಹೋಗದೆ ಇರಲು ಇದೇ ಕಾರಣವಿದ್ದಿರಬೇಕು. ಅವರೆಲ್ಲ ಹುತಾತ್ಮರಾಗುವ ಮಾತು ಹಾಗಿರಲಿ!
ಸಾವರ್ಕರರ ಹೆಜ್ಜೆಗಳನ್ನು ಅನುಸರಿಸಿದ ಆರೆಸ್ಸೆಸ್, ಹಿಂದೂಗಳು ಹಾಗೂ ಮುಸ್ಲಿಮರು ಸೇರಿ ಒಂದು ರಾಷ್ಟ್ರ ಎಂಬ ಪರಿಕಲ್ಪನೆಯನ್ನೇ ಸಾರಾಸಗಟಾಗಿ ತಿರಸ್ಕರಿಸಿತು.

ಆರೆಸ್ಸೆಸ್‌ನಿಂದ ರಾಷ್ಟ್ರಧ್ವಜ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಅವಹೇಳನ
ಸರ್,
ದಯವಿಟ್ಟು ನಿಮ್ಮ ಮಾಹಿತಿಗಾಗಿ ಹೇಳುತ್ತಿದ್ದೇನೆ. ದೇಶಕ್ಕೆ ಸ್ವಾತಂತ್ರ್ಯ ದೊರಕುವ ವೇಳೆ ದಿಲ್ಲಿಯ ಕೆಂಪುಕೋಟೆಯಲ್ಲಿ ರಾಷ್ಟ್ರ ಧ್ವಜವನ್ನು ಅರಳಿಸುವ ಬದಲು ಆರೆಸ್ಸೆಸ್‌ನ ಇಂಗ್ಲಿಷ್ ಮುಖವಾಣಿಯಾದ ‘ಆರ್ಗನೈಸರ್’ ಪತ್ರಿಕೆಯು 1947ರ ಆಗಸ್ಟ್ 14ರ ತನ್ನ ಪತ್ರಿಕೆಯಲ್ಲಿ ರಾಷ್ಟ್ರಧ್ವಜವಾದ ತ್ರಿವರ್ಣ ಧ್ವಜದ ಆಯ್ಕೆಯ ಕುರಿತು ಅವಹೇಳನಕಾರಿಯಾಗಿ ಹೀಗೆ ಬರೆಯಿತು: ‘‘ಅದೃಷ್ಟದಿಂದಾಗಿ ಅಧಿಕಾರಕ್ಕೆ ಬಂದಿರುವ ಜನರು ನಮ್ಮ ಕೈಗಳಿಗೆ ತ್ರಿವರ್ಣ ಧ್ವಜ ನೀಡಬಹುದು. ಆದರೆ ಅದನ್ನು ಹಿಂದೂಗಳು ಯಾವತ್ತೂ ಗೌರವಿಸುವುದಿಲ್ಲ ಮತ್ತು ಒಪ್ಪಿಕೊಳ್ಳುವುದಿಲ್ಲ. ತ್ರೀ (ಮೂರು) ಎಂಬ ಶಬ್ದವೇ ಒಂದು ಅನಿಷ್ಟ ಪೀಡೆ ಮತ್ತು ಮೂರು ಬಣ್ಣಗಳಿರುವ ಒಂದು ಧ್ವಜವು ಖಂಡಿತವಾಗಿಯೂ ಒಂದು ಕೆಟ್ಟ ಮಾನಸಿಕ ಪರಿಣಾಮ ಬೀರುತ್ತದೆ ಮತ್ತು ಅದು ದೇಶಕ್ಕೆ ಹಾನಿಕಾರಕವಾಗಿದೆ.’’
ಆದ್ದರಿಂದ ಆರೆಸ್ಸೆಸ್‌ನ ಪ್ರಕಾರ ಭಾರತದ ರಾಷ್ಟ್ರಧ್ವಜ ಎಂದಿಗೂ ಗೌರವಿಸಲ್ಪಡತಕ್ಕದ್ದಲ್ಲ. ಅದೊಂದು ಕೆಟ್ಟ ಶಕುನ ಮತ್ತು ದೇಶಕ್ಕೆ ಹಾನಿ ಉಂಟು ಮಾಡುವಂತಹುದು.
ಸರ್,
ಆರೆಸ್ಸೆಸ್ ಮನುಸ್ಮತಿಯನ್ನು ಅಳವಡಿಸಿಕೊಳ್ಳಬೇಕೆಂದು ಹೇಳುತ್ತಾ ಬಂದಿದೆ. ಮನುಸ್ಮತಿ ಶೂದ್ರರ ಕುರಿತು ಅವಮಾನಕಾರಿ, ಆಕ್ಷೇಪಾರ್ಹ ಮತ್ತು ಅಮಾನವೀಯವಾದ ಉಲ್ಲೇಖಗಳನ್ನು ಹೊಂದಿದೆ. ಅಸ್ಪೃಶ್ಯರ ಹಾಗೂ ಮಹಿಳೆಯರ ಬಗ್ಗೆ ಕೂಡ ಇದೇ ರೀತಿಯ ಉಲ್ಲೇಖಗಳಿರುವ ಮನುಸ್ಮತಿಯನ್ನು ಭಾರತದ ಸಂವಿಧಾನವಾಗಿ ಮಾಡಬೇಕೆಂದು ಹೇಳುತ್ತಾ ಬಂದಿರುವ ಆರೆಸ್ಸೆಸ್‌ನ 1949ರ ನವೆಂಬರ್ 26ರ ಮುಖವಾಣಿ ಪತ್ರಿಕೆ ‘ಆರ್ಗನೈಸರ್’ನ ಸಂಪಾದಕೀಯದಲ್ಲಿ ಹೀಗೆ ಬರೆಯಲಾಗಿದೆ:
‘‘ಆದರೆ ನಮ್ಮ ಸಂವಿಧಾನದಲ್ಲಿ ಪ್ರಾಚೀನ ಭಾರತದಲ್ಲಿ ಆಗಿದ್ದ ವಿಶಿಷ್ಟವಾದ ಸಾಂವಿಧಾನಿಕ ಬೆಳವಣಿಗೆಯ ಉಲ್ಲೇಖವೇ ಇಲ್ಲ. ಮನುವಿನ ಕಾನೂನುಗಳು ಸ್ಪಾರ್ಟಾದ ಅಕ್ಯೂರ್ಗಸ್ ಅಥವಾ ಪರ್ಶಿಯಾದ ಸೋಲೋನ್‌ಗಿಂತ ಬಹಳ ಹಿಂದೆಯೇ ಬರೆಯಲ್ಪಟ್ಟವುಗಳು. ಇಂದಿಗೂ ಮನುಸ್ಮತಿಯಲ್ಲಿ ಹೇಳಲಾಗಿರುವ ಮನುವಿನ ಕಾನೂನುಗಳು ವಿಶ್ವದ ಮೆಚ್ಚುಗೆಗೆ ಪಾತ್ರವಾಗಿವೆ.’’
ಸರ್,
 ನಿಮ್ಮ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ನಿಜವಾದ ಆರೆಸ್ಸೆಸ್ ಏನು ಎಂದು ತಿಳಿಯಬೇಕೆಂದು ನೀವು ಬಯಸುವಿರಾದಲ್ಲಿ ನಾನು ಇಲ್ಲಿ ಉಲ್ಲೇಖಿಸಿರುವ ಎಲ್ಲ ಆರೆಸ್ಸೆಸ್ ಹಿಂದೂ ಮಹಾಸಭಾದ ದಾಖಲೆಗಳು ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಮಾಡಲು ನೀವು ಇತಿಹಾಸ ವಿಭಾಗಕ್ಕೆ ಹೇಳಬೇಕು.
ಸರ್,
ಈ ವಿಷಯದಲ್ಲಿ ಅತ್ಯಂತ ಕೆಟ್ಟ ಹಾಗೂ ಕ್ರಿಮಿನಲ್ ಭಾಗವೆಂದರೆ ನೀವು ಓರ್ವ ಮಹಾನ್ ಸ್ವಾತಂತ್ರ್ಯ ಹೋರಾಟಗಾರನ ಹೆಸರು ಹೊತ್ತಿರುವ ಒಂದು ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿದ್ದೀರಿ. ಆ ಸ್ವಾತಂತ್ರ್ಯ ಹೋರಾಟಗಾರ ತುಕಡೋಜಿ ಮಹಾರಾಜ್ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಹಲವು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದರು. ನಾವು ಈ ಮೇಲೆ ನೋಡಿರುವಂತೆ ಆರೆಸ್ಸೆಸ್ ಆ ಚಳವಳಿಯನ್ನು ಯಾವುದೇ ನಾಚಿಕೆ, ಮುಜುಗರ ಇಲ್ಲದೆ ವಿರೋಧಿಸಿತ್ತು ಹಾಗೂ ಚಳವಳಿಗೆ ವಿಶ್ವಾಸದ್ರೋಹ ಬಗೆದಿತ್ತು.
ವಿಶ್ವವಿದ್ಯಾನಿಲಯದ ಪರವಾಗಿ ನೀವು ತಕ್ಷಣ ರಾಷ್ಟ್ರದ ಕ್ಷಮೆ ಕೋರಬೇಕೆಂದು ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.
ಇತಿ
ಗೌರವಪೂರ್ವಕವಾಗಿ
ಶಂಸುಲ್ ಇಸ್ಲಾಂ
ಅಸೋಸಿಯೇಟ್ ಪ್ರೊಫೆಸರ್(ನಿವೃತ್ತ), ದಿಲ್ಲಿ ವಿಶ್ವವಿದ್ಯಾನಿಲಯ
(ಕೃಪೆ: countercurrents)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)