varthabharthi


ವಿಶೇಷ-ವರದಿಗಳು

ಯಡಿಯೂರಪ್ಪ ಎದುರು ಅಸಹಾಯಕರಾದರು ಅಡ್ವಾಣಿ, ಜೋಶಿಯನ್ನು ಪಳಗಿಸಿದ ವರಿಷ್ಠರು

ಮೋದಿ-ಶಾ ಖಡಕ್ ನಿಯಮಗಳನ್ನೇ ಸಡಿಲಿಸಿದ ನಾಯಕ ಬಿಎಸ್‌ವೈ

ವಾರ್ತಾ ಭಾರತಿ : 26 Jul, 2019

ಕರ್ನಾಟಕ ಬಿಜೆಪಿ ಪಾಲಿಗೆ ಇನ್ನೂ ತಾನೇ ಪ್ರಶ್ನಾತೀತ ನಾಯಕ ಎಂದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಮತ್ತೆ ಸಾಬೀತುಪಡಿಸಿದ್ದಾರೆ. ಅಷ್ಟೇ ಅಲ್ಲ, ರಾಷ್ಟ್ರಮಟ್ಟದಲ್ಲಿ ಪಕ್ಷದ ಪ್ರಶ್ನಾತೀತ ನಾಯಕರಾಗಿರುವ ಪ್ರಧಾನಿ ನರೇಂದ್ರ ಮೋದಿ ಹಾಗು ಪಕ್ಷಾಧ್ಯಕ್ಷ ಹಾಗು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಅಚಲ ನಿರ್ಧಾರವನ್ನು ಬದಲಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಸದ್ಯಕ್ಕಂತೂ ರಾಜ್ಯ ಬಿಜೆಪಿಗೆ ತನಗೆ ಪರ್ಯಾಯ ನಾಯಕರೂ ಯಾರೂ ಇಲ್ಲ ಎಂದು ಎಲ್ಲರಿಗೂ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. 

ಮೋದಿ, ಶಾ ಅವರ ದೃಢ ನಿರ್ಧಾರದೆದುರು ಪಕ್ಷದ ಪಿತಾಮಹ ಎಲ್.ಕೆ ಅಡ್ವಾಣಿಯವರೂ ತಲೆಬಾಗಬೇಕಾಯಿತು. ಮುರಳಿ ಮನೋಹರ್ ಜೋಶಿ, ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ರಂತಹ ಹಿರಿಯ ನೇತಾರರೇ ಪಕ್ಷ ವಿಧಿಸಿದ 75 ವರ್ಷಕ್ಕೆ ನಿವೃತ್ತಿ ನಿಯಮಕ್ಕೆ ಶರಣಾಗಿ ರಾಜಕೀಯ ತೆರೆಮರೆಗೆ ಸರಿದರು. ಸುಷ್ಮಾ ಸ್ವರಾಜ್ ರಂತಹ ನಾಯಕರನ್ನು ಅನಾರೋಗ್ಯದ ಹೆಸರಲ್ಲಿ ಬದಿಗೆ ಸರಿಸಲಾಯಿತು. ಆದರೆ ಕರ್ನಾಟಕದ ನಾಯಕ ಯಡಿಯೂರಪ್ಪ ಅವರು 76 ವರ್ಷವಾಗಿದ್ದರೂ ರಾಜ್ಯದ ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಬಿಜೆಪಿ ಪಾಲಿಗೆ ತಾನು ಅನಿವಾರ್ಯ ಎಂದು ಮತ್ತೆ ಸಂದೇಶ ರವಾನಿಸಿದ್ದಾರೆ. 

ಹಾಗೆ ನೋಡಿದರೆ ಯಡಿಯೂರಪ್ಪ ವಿರುದ್ಧ 75 ವರ್ಷದ ನಿಯಮ ಮಾತ್ರ ಇದ್ದದ್ದಲ್ಲ. ಅವರ ಕುಟುಂಬದಲ್ಲಿ ಇತರರೂ ರಾಜಕೀಯವಾಗಿ ಬೇರೆ ಬೇರೆ ಸ್ಥಾನದಲ್ಲಿದ್ದಾರೆ. ಅವರ ಪುತ್ರ ಬಿ.ವೈ ರಾಘವೇಂದ್ರ ಶಿವಮೊಗ್ಗ ಸಂಸದರು. ಇನ್ನೋರ್ವ ಪುತ್ರ ಬಿ.ವೈ ವಿಜಯೇಂದ್ರ ಪಕ್ಷದ ಯುವಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ. ಸಾಲದ್ದಕ್ಕೆ ಯಡಿಯೂರಪ್ಪ ಅವರ ಆಪ್ತರಾದ ಶೋಭಾ ಕರಂದ್ಲಾಜೆ ಅವರೂ ಸಂಸದರು.  ಬಿಜೆಪಿ ನಿಯಮಗಳ ಪ್ರಕಾರ ಹೀಗೆ ಒಂದೇ ಕುಟುಂಬದ ಹಲವರು ಪಕ್ಷದಲ್ಲಿ ಅಧಿಕಾರ ಪಡೆಯಲು ಅವಕಾಶವಿಲ್ಲ. ಆದರೆ ಯಡಿಯೂರಪ್ಪ ಅವರ ಪ್ರಭಾವ ಹಾಗು ವರ್ಚಸ್ಸು ಹಾಗು ರಾಜ್ಯದ ಸದ್ಯದ ರಾಜಕೀಯ ಪರಿಸ್ಥಿತಿ ಬಿಜೆಪಿ ವರಿಷ್ಠರ ಕೈಕಟ್ಟಿ ಹಾಕಿದೆ. ದೇಶದೆಲ್ಲೆಡೆ ತಮಗೆ ಸರಿಕಂಡದ್ದನ್ನು ಮುಲಾಜಿಲ್ಲದೆ ಜಾರಿಗೆ ತರುವ ಮೋದಿ-ಶಾ ಜೋಡಿ ಕರ್ನಾಟಕದಲ್ಲಿ ಮಾತ್ರ ಬೂಕನಕೆರೆಯ ಯಡಿಯೂರಪ್ಪ ಅವರಿಗೆ ಶರಣಾಗಿದೆ ಎಂದರೆ ತಪ್ಪಲ್ಲ. 

ಬಿಜೆಪಿ ಹೈಕಮಾಂಡ್ ಸುಖಾಸುಮ್ಮನೆ ಯಡಿಯೂರಪ್ಪ ಅವರನ್ನು ಸಿಎಂ ಮಾಡಿಲ್ಲ. ಈ ಹಿಂದೆ ಹಲವು ಬಾರಿ ಪಕ್ಷ ರಾಜ್ಯದಲ್ಲಿ ಪರ್ಯಾಯ ನಾಯಕತ್ವ ಬೆಳೆಸಲು ಪ್ರಯತ್ನಿಸಿದೆ. ಆದರೆ ಪ್ರತಿಬಾರಿ ವಿಫಲವಾಗಿ ಮತ್ತೆ ಬಿಎಸ್‌ವೈ ಗೆ ಜೈ ಹೇಳಬೇಕಾಗಿ ಬಂದಿದೆ. ದಿವಂಗತ ಅನಂತ್ ಕುಮಾರ್, ಡಿ.ವಿ ಸದಾನಂದ ಗೌಡ, ಜಗದೀಶ್ ಶೆಟ್ಟರ್, ಆರ್.ಅಶೋಕ್  ಹೀಗೆ ಹಲವು ನಾಯಕರಿಗೆ ಬಿಜೆಪಿ ಮಣೆ ಹಾಕಿ ನೋಡಿದರೂ ಕೊನೆಗೂ ಅವರು ಯಾರೂ ಯಡಿಯೂರಪ್ಪ ಅವರಂತೆ ಜನರನ್ನು ಸೆಳೆಯಲಿಲ್ಲ, ಮತ ಗಳಿಸಲಿಲ್ಲ, ಸ್ಥಾನಗಳನ್ನು ಗೆಲ್ಲಲಿಲ್ಲ. ಅದಕ್ಕಾಗಿ ಮತ್ತೆ ಮತ್ತೆ ಪಕ್ಷ ಮೊರೆ ಹೋಗಿದ್ದು ಯಡಿಯೂರಪ್ಪ ಅವರಿಗೇ. 

ಪ್ರಬಲ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕರೆಂದೇ ತಮ್ಮ ವರ್ಚಸ್ಸು ಬೆಳೆಸಿಕೊಂಡಿರುವ ಯಡಿಯೂರಪ್ಪನವರು 2013 ರಲ್ಲಿ ಪಕ್ಷ ತನ್ನನ್ನು ಕಡೆಗಣಿಸಿದಾಗ ಬಂಡೆದ್ದು ಹೊರಹೋದರು. ಭ್ರಷ್ಟಾಚಾರದ ಹಲವು ಆರೋಪ ಹೊತ್ತಿದ್ದ ಅವರು ಕೆಜೆಪಿ ಎಂಬ ಹೊಸ ಪಕ್ಷ ಕಟ್ಟಿದರೂ ಬಿಜೆಪಿ ತಲೆಕೆಡಿಸಿಕೊಳ್ಳಲಿಲ್ಲ. ಆದರೆ ಆ ವರ್ಷ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶ ಬಿಜೆಪಿಗೆ ದೊಡ್ಡ ಶಾಕ್ ನೀಡಿತು. ಅದು ಮೂರನೇ ಸ್ಥಾನಕ್ಕೆ ಇಳಿಯಿತು. ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿತು. 2018 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಲಿಂಗಾಯತ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಿ ಸೆಳೆಯಲು ಮುಂದಾದರೂ ಕೇಂದ್ರದಲ್ಲಿದ್ದ ಬಿಜೆಪಿ ಅದನ್ನು ವಿಫಲಗೊಳಿಸಿತು. ಲಿಂಗಾಯತರು ಮತ್ತೆ ಬಿಜೆಪಿ ಕೈಹಿಡಿದರು. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ಗಳಿಸಿ ಏಕೈಕ ದೊಡ್ಡ ಪಕ್ಷವಾಗಿ ಮೂಡಿಬಂತು. ಬಳಿಕ ಒಂದು ವರ್ಷದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲೂ ಬಿಎಸ್‌ವೈ ನೇತೃತ್ವದಲ್ಲಿ ಬಿಜೆಪಿ 28 ರಲ್ಲಿ 25 ಸ್ಥಾನಗಳನ್ನು ಗಳಿಸಿ ಪ್ರಚಂಡ ಜಯ ದಾಖಲಿಸಿತು.  

ಹಾಗಾಗಿ ಯಡಿಯೂರಪ್ಪ ಇದ್ದಾಗಲೆಲ್ಲ ಬಿಜೆಪಿ ಗೆದ್ದಿದೆ, ಅವರು ಮುನಿಸಿಕೊಂಡಾಗಲೆಲ್ಲಾ ಪಕ್ಷ ನಷ್ಟ ಅನುಭವಿಸಿದೆ. ಈ ಬಾರಿಯೂ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರಕಾರ ಉರುಳಿದ ಮೇಲೂ ಬಿಎಸ್‌ವೈ ಅವರ ನೇತೃತ್ವದಲ್ಲಿ ಸರಕಾರ ರಚಿಸಲು ಅಮಿತ್ ಶಾ ಮೀನಮೇಷ ಎಣಿಸುತ್ತಿದ್ದರು. ಅತೃಪ್ತರ ಕಾಟ ಒಂದು ಕಡೆಯಾದರೆ, ಬಿಎಸ್‌ವೈ ಅವರನ್ನು ಬದಿಗೆ ಸರಿಸಿ ಹೊಸ ನಾಯಕನ ನೇತೃತ್ವ ರಾಜ್ಯಕ್ಕೆ ನೀಡಲು ಸಾಧ್ಯವೇ ಎಂದು ಮೋದಿ - ಅಮಿತ್ ಶಾ ಭಾರೀ ತಲೆಕೆಡಿಸಿಕೊಂಡಿದ್ದಾರೆ ಎಂದು ವರದಿಗಳು ಬಂದವು. ವಯಸ್ಸಿನ ಮಿತಿ ಮೀರಿರುವ, ಭ್ರಷ್ಟಾಚಾರದ ಆರೋಪವಿರುವ ಯಡಿಯೂರಪ್ಪ ಅವರನ್ನು ಗೌರವದಿಂದ ಗವರ್ನರ್ ಮಾಡಿ ರಾಜ್ಯ ಬಿಜೆಪಿಗೆ ಹೊಸ ನಾಯಕನಿಗೆ ಪಟ್ಟಕಟ್ಟಲು ಮನಸ್ಸಿದ್ದರೂ ಸದ್ಯದ ಸ್ಥಿತಿಯಲ್ಲಿ ರಾಜ್ಯದಲ್ಲಿ ಬಿಎಸ್‌ವೈ ಅವರನ್ನು ಬದಲಾಯಿಸುವುದು ಅಸಾಧ್ಯ ಎಂದು ಶಾ ಅವರಿಗೆ ಮನದಟ್ಟಾಗಿದೆ. ಈಗ ಬಹುತೇಕ ಶಾಸಕರೂ ಯಡಿಯೂರಪ್ಪ ಪರವಾಗಿದ್ದಾರೆ. ಪಕ್ಷಕ್ಕೆ ಭರ್ಜರಿ ಬಹುಮತವೂ ಇಲ್ಲ. ಹಾಗಾಗಿ ಸದ್ಯಕ್ಕೆ ಅವರೇ ಗತಿ ಎಂದು ಕೊನೆಗೂ ಸರಕಾರ ರಚನೆಗೆ ಹಸಿರು ನಿಶಾನೆ ತೋರಿಸಿದ್ದಾರೆ. 

ಮುಂದೆ ಏನೂ ಆಗಬಹುದು. ಆದರೆ ಸದ್ಯಕ್ಕೆ ರಾಜ್ಯ ಬಿಜೆಪಿ ಪಾಲಿಗೆ ಯಡಿಯೂರಪ್ಪನವರೇ ನಾಯಕ. ಹೋರಾಟದ ಮೂಲಕ ರಾಜಕೀಯ ಜೀವನ ರೂಪಿಸಿಕೊಂಡಿರುವ ಯಡಿಯೂರಪ್ಪನವರು ಅಷ್ಟರ ಮಟ್ಟಿಗೆ ಪಕ್ಷದ ಹೈಕಮಾಂಡ್ ಪಾಲಿಗೆ ಅನಿವಾರ್ಯವಾಗಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)