varthabharthi

ನಿಮ್ಮ ಅಂಕಣ

ರಾಷ್ಟ್ರೀಯ ಶಿಕ್ಷಣ ನೀತಿ-2019: ಪರಿಗಣಿಸಬೇಕಾದ ಒಂದಿಷ್ಟು ಸಲಹೆಗಳು

ವಾರ್ತಾ ಭಾರತಿ : 26 Jul, 2019
ಡಾ. ಜಗನ್ನಾಥ ಕೆ. ಡಾಂಗೆ ಪ್ರಾಧ್ಯಾಪಕರು, ಶಿಕ್ಷಣ ಅಧ್ಯಯನ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ.

ಭಾಗ-2

ಶಿಕ್ಷಕರ ನೇಮಕಾತಿ:

* ಪ್ರತಿಯೊಂದು ಶಿಕ್ಷಣ ಸಂಸ್ಥೆಗಳಲ್ಲೂ ಎಲ್ಲಾ ಜಾತಿಯ, ಎಲ್ಲಾ ಜನಾಂಗದ ಶಿಕ್ಷಕರು, ಸಿಬ್ಬಂದಿ ವರ್ಗದವರಿರುವಂತೆ ಎಲ್ಲರಿಗೂ ಕೆಲಸ ಮಾಡಲು ಅವಕಾಶ ಮಾಡಿಕೊಡುವುದರ ಮೂಲಕ ವಿರ್ದ್ಯಾರ್ಥಿಗಳಲ್ಲಿ ಸಮಾನತೆಯ ಮನೋಭಾವನೆಯನ್ನು ಮತ್ತು ರಾಷ್ಟ್ರ ಪ್ರೇಮವನ್ನು ಮೂಡಿಸುವಲ್ಲಿ ನಿಯಮ ರೂಪಿಸುವುದು.

* ನೇಮಕಾತಿಯನ್ನು ಶಾಲಾ ಕಾಲೇಜುಗಳು ಪ್ರಾರಂಭವಾಗುವ 6 ತಿಂಗಳ ಮುಂಚೆಯೇ ಖಾಲಿಯಾದ, ನಿವೃತ್ತಿಯಾದ ಹುದ್ದೆಗಳು, ಹೊಸ ಹುದ್ದೆಗಳಿಗೆ ಅನುಗುಣವಾಗಿ, ವಿಷಯಾಧಾರಿತ, ವರ್ಗಾಧಾರಿತ, ಸಂಸ್ಥೆ ಆಧಾರಿತ ಹುದ್ದೆಗಳನ್ನು ನೇಮಕ ಮಾಡಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಮತ್ತು ಶಿಕ್ಷಕರಲ್ಲಿ ಉತ್ತಮ ಸಂಬಂಧ ಏರ್ಪಡಿಸಬಹುದು. ಇಲ್ಲದಿದ್ದರೆ ವಿದ್ಯಾರ್ಥಿಗಳ ಅಧ್ಯಯನಕ್ಕೆ ತೊಂದರೆ ಉಂಟಾಗಿ ಅಧ್ಯಯನವು ಕುಂಠಿತವಾಗಬಹುದು.

* ಶಾಲಾ ಸಮುಚ್ಚಯದ ಮುಖ್ಯ ಶಿಕ್ಷಕರು/ಪ್ರಾಂಶುಪಾಲರ ಹುದ್ದೆಗಳಿಗೆ ಎಂ.ಇಡಿ ಪದವಿಯನ್ನು ಪರಿಗಣಿಸುವುದು.

* ಪ್ರತೀ ಶಾಲಾ ಸಮುಚ್ಚಯದಲ್ಲಿ ಸಲಹೆಗಾರರನ್ನಾಗಿ ಎಂ.ಇಡಿ. ಪದವಿ/ಎಂ.ಎಸ್ಸಿ ಮನೋವಿಜ್ಞಾನ/ಎಂ.ಎಸ್.ಡಬ್ಲೂ./ಕೌನ್ಸೆಲಿಂಗ್‌ಗೆ ಸಂಬಂಧಪಟ್ಟ ಸರ್ಟಿಫಿಕೇಟ್‌ಕೋರ್ಸ್ ಪಡೆದಿರುವ ಪದವೀಧರರನ್ನು ಪರಿಗಣಿಸುವುದು.

* ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಪ್ರತೀ ರಾಜ್ಯಗಳಲ್ಲೂ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲೂ ಪರೀಕ್ಷೆ ನಡೆಸುವ ರಾಷ್ಟ್ರೀಯ ಪರೀಕ್ಷಾಂಗ ಏಜೆನ್ಸಿ ಸ್ಥಾಪಿಸಿ ಖಾಲಿ ಇರುವ ಹುದ್ದೆಗಳಿಗೆ ಅನುಗುಣವಾಗಿ ಪ್ರತೀ ವರ್ಷವೂ ನೇಮಕಾತಿಯನ್ನು ಕಡ್ಡಾಯವಾಗಿ ಮಾಡುವುದು.

* ಪ್ರತೀ ಶಾಲಾ ಸಮುಚ್ಚಯಕ್ಕೆ ಕನಿಷ್ಠ ಇಬ್ಬರು ದೈಹಿಕ ಶಿಕ್ಷಕರನ್ನು ನೇಮಕ ಮಾಡಿ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವುದು.

* ಖಾಸಗಿ ಶಾಲೆಗಳ ಪ್ರಾಂಶುಪಾಲರ ಆಯ್ಕೆ ಮತ್ತು ಭಡ್ತಿಯನ್ನು ನೀಡುವಾಗ ಅವರ ಶೈಕ್ಷಣಿಕ ಅರ್ಹತೆ ಮತ್ತು ಸರಕಾರಿ ನಿಯಮವನ್ನು ಕಡ್ಡಾಯವಾಗಿ ಪಾಲಿಸಲು ನಿಯಮ ರೂಪಿಸುವುದು.

* ಸರಕಾರಿ ಶಾಲೆಗಳಿಂದ ಅನುದಾನಿತ ಶಾಲೆಗಳಿಗೆ, ಅನುದಾನಿತ ಶಾಲೆಗಳಿಂದ ಸರಕಾರಿ ಶಾಲೆಗಳಿಗೆ ಶಿಕ್ಷಕರ ವರ್ಗಾವಣೆ, ಸ್ಥಳಾಂತರ ಹಾಗೂ ಅನುದಾನಿತ ಶಾಲೆಗಳ ಮತ್ತು ಖಾಸಗಿ ಶಾಲೆಗಳ ಶಿಕ್ಷಕರ ನೇಮಕಾತಿಯನ್ನು ಸರಕಾರದ ವತಿಯಿಂದ ನಡೆಸಲು ನಿಯಮ ರೂಪಿಸುವುದು.

* ಪ್ರತೀ ಶಾಲಾ ಸಮುಚ್ಚಯದಲ್ಲೂ ಕಡ್ಡಾಯವಾಗಿ ಕನಿಷ್ಠ ಒಬ್ಬ ಖಾಯಂ ಗ್ರಂಥಪಾಲಕರ ನೇಮಕಾತಿಯನ್ನು ಮಾಡುವುದು ಮತ್ತು ಉತ್ತಮ ವ್ಯವಸ್ಥೆಯ ಗ್ರಂಥಾಲಯವನ್ನು ರೂಪಿಸುವುದು.

ಉನ್ನತ ಶಿಕ್ಷಣ: 
* ಉನ್ನತ ಶಿಕ್ಷಣಕ್ಕೆ ಕನಿಷ್ಠ ಮತ್ತು ಕಡ್ಡಾಯವಾಗಿ ಶೇ. 6 ಜಿಡಿಪಿಯನ್ನು ಹೆಚ್ಚಿಸುವುದು.

* ಎಲ್ಲಾ ಹಂತದ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪವಾಗದಂತೆ ನೋಡಿಕೊಳ್ಳುವುದು.

* ಕುಲಪತಿಗಳು/ಕುಲಸಚಿವರು/ ಕುಲಸಚಿವರು(ಮೌಲ್ಯಮಾಪನ) ಹುದ್ದೆಗಳಿಗೆ ಸೇವಾನುಭವ, ಹಿರಿತನ ಮತ್ತು ವೃತ್ತಿಪರತೆಯ ಆಧಾರದ ಮೇಲೆ ಉನ್ನತ ಶಿಕ್ಷಣ ಪರಿಷತ್ ಮುಖಾಂತರ ಆಯ್ಕೆ ಮಾಡಿ, ತರಬೇತಿ ನೀಡಿ, ನಿಯೋಜಿಸುವುದು.

* ಖಾಸಗಿ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಯನ್ನು ಸರಕಾರದ ನಿಯಮಾವಳಿಗಳ ಪ್ರಕಾರ ಉನ್ನತ ಶಿಕ್ಷಣ ಪರಿಷತ್ ಮುಖಾಂತರ ನೇಮಿಸುವುದರಿಂದ ಅರ್ಹರಿಗೆ ಅವಕಾಶ ಸಿಕ್ಕಿದಂತಾಗುತ್ತದೆ.

* ಭಾರತದ ಶೇ. 65ಕ್ಕೂ ಹೆಚ್ಚು ಕಾಲೇಜುಗಳು ನ್ಯಾಕ್‌ನ ಮಾನ್ಯತಾ ಪಟ್ಟಿಯ ಸರಾಸರಿಗಿಂತಲೂ ಕೆಳಗಿರುವುದರಿಂದ, ಪ್ರಸ್ತುತ ಜಾರಿಯಲ್ಲಿರುವ ಅಫಿಲಿಯೇಷನ್ ವ್ಯವಸ್ಥೆಯನ್ನು ಎಲ್ಲಾ ಬಹುಶಿಸ್ತೀಯ ಸಂಸ್ಥೆಗಳಿಗೆ (ಕಾಲೇಜುಗಳಿಗೆ) ಮುಂದುವರಿಸಬೇಕು.

* ಖಾಸಗಿ ಶಾಲಾ ಕಾಲೇಜುಗಳನ್ನು ಸಹ ಸರಕಾರದ ಭಾಗವೆಂದು ಪರಿಗಣಿಸಿ ಸರಕಾರದ ನೀತಿ ನಿಯಮಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತದೆಯೇ ಎಂದು ಕಾಲಕಾಲಕ್ಕೆ ಪರೀಕ್ಷಿಸುವುದರ ಮೂಲಕ ಮೌಲ್ಯಮಾಪನ ಮಾಡುವುದರ ಜೊತೆಗೆ ಸರಿತಪ್ಪುಗಳನ್ನು ತಿಳಿಸಿ ಸರಕಾರದ ಜೊತೆ ಕೊಂಡೊಯ್ಯುವಲ್ಲಿ ಸೂಕ್ತ ಸಲಹೆ ನೀಡುವುದು.

ಶಿಕ್ಷಕರ ಶಿಕ್ಷಣ:
* ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಸ್ವತಂತ್ರ ಬಿ.ಇಡಿ. ಕಾಲೇಜುಗಳಿಗೆ ಪದವಿ ಕೋರ್ಸ್‌ಗಳ ಜೊತೆಗೆ ನಾಲ್ಕು ವರ್ಷದ ಬಿ.ಇಡಿ. ಕೋರ್ಸಿಗೆ ಅವಕಾಶ ನೀಡುವುದು.

* ಪ್ರತೀ ಡಯೆಟ್ (ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ) ಮತ್ತು ಸಿಟಿಇ (ಶಿಕ್ಷಕರ ಶಿಕ್ಷಣದ ಕಾಲೇಜು)ಗಳನ್ನು ಬಹುಶಿಸ್ತೀಯ ಕಾಲೇಜುಗಳಾಗಿ ಉನ್ನತೀಕರಿಸುವುದು ಮತ್ತು ನೇರ ನೇಮಕಾತಿಯ ಮೂಲಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದು ಹಾಗೂ ಕನಿಷ್ಠ ಒಂದು ಪ್ರಾಯೋಗಿಕ/ಮಾದರಿ/ಪ್ರಾತ್ಯಕ್ಷಿಕೆ ಶಾಲೆಯನ್ನಾದರೂ ಹೊಂದುವುದು.

* ಜಂಟಿ ನಿರ್ದೇಶಕರು, ಡಿಡಿಪಿಐ, ಬಿಇಒ ಮುಂತಾದ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ನೇರ ನೇಮಕದ ಮೂಲಕ ಆಯ್ಕೆ ಮಾಡಿಕೊಂಡು ನಿರ್ದಿಷ್ಟ ವಿದ್ಯಾರ್ಹತೆಯಾದ ಎಂ.ಇಡಿ. ಅಥವಾ ಎಂ.ಎ. ಶಿಕ್ಷಣ ಸ್ನಾತಕೋತ್ತರ ಪದವಿ ಅಥವಾ ಶಿಕ್ಷಣಶಾಸ್ತ್ರದಲ್ಲಿ ಪಿಎಚ್.ಡಿ. ಪದವಿ ಪಡೆದವರನ್ನು ಸೂಕ್ತ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಿಕೊಳ್ಳುವುದು.

* ಸಹೋದ್ಯೋಗಿಗಳು, ವಿದ್ಯಾರ್ಥಿಗಳು, ಪೋಷಕರು ಮತ್ತು ಸಮುದಾಯದ ಜನರ ಮೌಲ್ಯಮಾಪನದೊಂದಿಗೆ ಬಹುಶಿಸ್ತೀಯ ಸಂಸ್ಥೆಗಳ/ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಿಗೆ ಅವರ ಬದ್ಧತೆ, ನವೀನ ವಿಧಾನಗಳ ಸಂಶೋಧನೆ, ಉತ್ತಮ ಬರಹ, ಕೌಶಲಗಳು, ಸಮಾಜ ಸೇವೆ ಆಧಾರದ ಮೇಲೆ ಪ್ರಶಸ್ತಿಗಳನ್ನು ನೀಡುವುದು.

* ನಾಲ್ಕು ವರ್ಷದ ಶಿಕ್ಷಕರ ತರಬೇತಿಯನ್ನು ಪೂರೈಸಿರುವಂತಹ ಪ್ರಶಿಕ್ಷಣಾರ್ಥಿಗಳಿಗೆ ಒಂದು ವರ್ಷದ ಎಂ.ಇಡಿ. ಪದವಿಯು ಅಪೇಕ್ಷಣೀಯ ಹಾಗಾಗಿ ಎರಡು ವರ್ಷದ ಎಂ.ಇಡಿ. ಪದವಿಯನ್ನು ಒಂದು ವರ್ಷಕ್ಕೆ ಇಳಿಸುವುದು.

* ಸೇವಾ-ಪೂರ್ವ ಮತ್ತು ಸೇವಾ-ನಿರತ ಶಿಕ್ಷಕರಿಗೆ ವಿದೇಶಿ ಭಾಷೆಗಳನ್ನು (ಜರ್ಮನಿ, ಜಪಾನೀಸ್, ಸ್ಪಾನಿಷ್, ಫ್ರೆಂಚ್) ಕಲಿಯಲು ಆನ್‌ಲೈನ್‌ನಲ್ಲಿ ಸರ್ಟಿಫಿಕೇಟ್ ಅಥವಾ ಅಲ್ಪಾವಧಿ ಕೋರ್ಸ್‌ಗಳನ್ನು ಪ್ರಾರಂಭಿಸುವುದು ಮತ್ತು ಅಂತಹವರನ್ನು ಭಾಷಾ ಶಿಕ್ಷಕರನ್ನಾಗಿ ನೇಮಿಸುವುದು.

* ಪ್ರತೀ ಬಹುಶಿಸ್ತೀಯ ಸಂಸ್ಥೆಗಳು/ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಣ ವಿಭಾಗಗಳು ಆರಂಭವಾಗಬೇಕಿದ್ದು, ವಿಭಾಗಗಳ ಬೌದ್ಧಿಕ ಸಂಪನ್ಮೂಲಗಳನ್ನು ವಿಶ್ವವಿದ್ಯಾಲಯದ ಮತ್ತು ಅದರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಿಕ್ಷಕರ ತರಬೇತಿಗೆ ಆನ್‌ಲೈನ್, ಮೂಕ್ ಕೋರ್ಸ್‌ಗಳು, ತರಬೇತಿ ಕೋರ್ಸ್‌ಗಳು ದೊರೆಯುವಂತಾಗಬೇಕು.

ಈ ಮೇಲಿನ ಸಲಹೆ ಸೂಚನೆಗಳನ್ನು ಈಗಾಗಲೇ ಘನ ಭಾರತ ಸರಕಾರಕ್ಕೆ ಸಲ್ಲಿಸಲಾಗಿದ್ದು ಸದರಿ ಸಲಹೆಗಳನ್ನು ಪರಿಗಣಿಸಿ ಅನುಷ್ಠಾನಕ್ಕೆ ತಂದಾಗ ರಾಷ್ಟ್ರೀಯ ಶಿಕ್ಷಣ ನೀತಿ- 2019ರ ಮೌಲ್ಯವು ಕೂಡ ಹೆಚ್ಚಾಗಿ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಉತ್ತಮ ಸುಧಾರಣೆ ತರುವ ಮೂಲಕ 21ನೇ ಶತಮಾನಕ್ಕೆ ಬೇಕಾಗುವಂತಹ ಸೂಕ್ತ ಮಾನವ ಸಂಪನ್ಮೂಲವನ್ನು ಸಂಘಟಿಸಿ, ಸದ್ಬಳಕೆ ಮಾಡಿಕೊಳ್ಳುವುದರಿಂದ ದೇಶದ ಪ್ರಗತಿಯು ಸಾಧ್ಯವಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)