varthabharthi

ನಿಮ್ಮ ಅಂಕಣ

ನಮ್ಮ ಅಪ್ಪ, ಅಮ್ಮ ಹೀಗಿದ್ದರು!

ವಾರ್ತಾ ಭಾರತಿ : 28 Jul, 2019
ಸತ್ಯ ಪಿ. ಎನ್.

ನೊಂದವರಿಗಾಗಿ ಸದಾ ಮಿಡಿಯುತ್ತಿದ್ದ, ಫಲಾಕಾಂಕ್ಷೆ ಬಯಸದೆ ಅವರ ಪರ ವಹಿಸುತ್ತಿದ್ದ ಹಿರಿಯ ವಕೀಲ, ಕಮ್ಯೂನಿಸ್ಟ್ ನಾಯಕ ಮತ್ತು ಬರಹಗಾರ ದಿ. ಪಿ. ಎಂ. ಎನ್. ಮೂರ್ತಿ ಮತ್ತು ಅವರ ಪತ್ನಿ ದಿ. ಸರಸ್ವತಿ ಮೂರ್ತಿಯವರ ಬಗ್ಗೆ ಅವರ ಮಗಳು ಸತ್ಯ ಪಿ. ಎನ್. ತಮ್ಮ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.


ಹತ್ತು ವರ್ಷಗಳ ಹಿಂದೆ ಗತಿಸಿದ ನಮ್ಮ ತಂದೆ ಪಿ. ಎಂ. ನಾರಾಯಣ ಮೂರ್ತಿ ಮತ್ತು ಕೆಲವೇ ದಿನಗಳ ಹಿಂದೆ ನಮ್ಮಿಂದ ಅಗಲಿದ ನಮ್ಮ ಅಮ್ಮ ಶ್ರೀಮತಿ ಸರಸ್ಪತಿ ಮೂರ್ತಿಯವರ ಬಗ್ಗೆ ನಾಲ್ಕು ಮಾತು ಬರೆದುಕೊಡಿ ಎಂದು ‘ವಾರ್ತಾಭಾರತಿ’ಯವರು ಕರೆ ಮಾಡಿದಾಗ ನನಗೆ ಆನಂದಕ್ಕಿಂತ ಹೆಚ್ಚಾಗಿ ಆದುದು ಆತಂಕ. ಏಕೆಂದರೆ ನಾನು ಬರಹಗಾರಳಲ್ಲ. ಅದಕ್ಕಿಂತ ಮುಖ್ಯವಾಗಿ ಯಾರಿಗೇ ಆದರೂ ತಮ್ಮ ಅಪ್ಪ-ಅಮ್ಮನ ಬಗ್ಗೆ ನಿಷ್ಪಕ್ಷಪಾತವಾಗಿ ಬರೆದು ಅವರ ವ್ಯಕ್ತಿತ್ವಕ್ಕೆ ನ್ಯಾಯ ಒದಗಿಸುವುದು ಅಸಾಧ್ಯ.

ಬಾಲ್ಯದಲ್ಲಿ ನಮಗೆ, ತಂದೆಯವರ ಬಗ್ಗೆ ಅಭಿಮಾನಕ್ಕಿಂತ ಅಸಮಾಧಾನವೇ ಹೆಚ್ಚಾಗಿತ್ತು. ಹುಟ್ಟುಹಬ್ಬಕ್ಕೆ ಐಸ್‌ಕ್ರೀಮ್ ಕೊಡಿಸದ, ಹಬ್ಬಕ್ಕೆ ಬಟ್ಟೆ ಕೊಡಿಸದ, ದೀಪಾವಳಿಗೆ ಪಟಾಕಿ ಕೊಡಿಸದ, ಹೋಗಲಿ, ನಾವೆಷ್ಟನೇ ತರಗತಿಯಲ್ಲಿದ್ದೇವೆ ಎಂದೇ ತಿಳಿಯದ ತಂದೆಯ ಬಗ್ಗೆ ಪ್ರೀತಿಗಿಂತ, ಆತ್ಮೀಯತೆಗಿಂತ ಭಯ ಮತ್ತು ಅಸಹನೆಗಳೇ ಜಾಸ್ತಿಯಿತ್ತು. ಅಪ್ಪ ಮನೆಯೊಳಗೆ ಇದ್ದುದಕ್ಕಿಂತ ಹೊರಗೇ ಇರುತ್ತಿದ್ದುದು ಹೆಚ್ಚು. ನಮ್ಮ ಅಮ್ಮನೇ ನಮಗೆ ಅಪ್ಪ, ಅಮ್ಮ ಎಲ್ಲವೂ. ಆಕೆ ಗಟ್ಟಿ ಮಹಿಳೆ. ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡು, ವಿದ್ಯಾಭ್ಯಾಸಕ್ಕಾಗಿ ಯಾರದೋ ಮನೆಯಲ್ಲಿದ್ದುಕೊಂಡು ಒಂಟಿಯಾಗಿ ಬೆಳೆದವರು. ಸರಕಾರಿ ಹೈಸ್ಕೂಲಿನಲ್ಲಿ ಗಣಿತ ಶಿಕ್ಷಕಿಯಾಗಿ, ನಲ್ವತ್ತನೇ ವಯಸ್ಸಿನಲ್ಲಿ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಎರಡನೇ ರ್ಯಾಂಕ್ ಪಡೆದುಕೊಂಡು, ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದಾಕೆ. ಎಲ್ಲ ಕಮ್ಯುನಿಷ್ಟರ ಮಡದಿಯರಂತೆ, ಆಕೆಯದೂ ಬದುಕು. ಮನೆಯೊಳಗೆ ಸ್ವಾತಂತ್ರವಿತ್ತು. ಸಮಾನತೆಯಿತ್ತು. ಗೌರವವಿತ್ತು. ಪ್ರೀತಿ ಇತ್ತು. ಆದರೆ ದೈನಂದಿನ ಆಗುಹೋಗುಗಳಲ್ಲಿ, ದಿನನಿತ್ಯದ ಜಂಜಾಟಗಳಿಗೆ ಇವು ಯಾವುವೂ ಹೆಚ್ಚು ಪ್ರಯೋಜನಕ್ಕೆ ಬರುವುದಿಲ್ಲ, ಅಲ್ಲವೇ?

ನಾಲ್ಕು ಮಕ್ಕಳ ಇಡೀ ಕುಟುಂಬವನ್ನು ಸಾಕುವ ಆರ್ಥಿಕ ಜವಾಬ್ದಾರಿ ಆಕೆಯ ಹೆಗಲ ಮೇಲಿತ್ತು. ಅದಕ್ಕಿಂತ ಹೆಚ್ಚಾಗಿ ದಿನನಿತ್ಯದ ಸಮಸ್ಯೆಗಳು, ವಿದ್ಯಾಭ್ಯಾಸದ ಜವಾಬ್ದಾರಿಗಳು, ಮಕ್ಕಳ ಕಾಯಿಲೆಗಳು, ಇವು ಯಾವುದಕ್ಕೂ ಅಪ್ಪನ ಆಧಾರ, ಸಹಾಯಗಳು ಇರುತ್ತಿರಲಿಲ್ಲ. ಅಪ್ಪಯಾವ ಸಮಸ್ಯೆ ಬಂದರೂ ‘‘ಯಾನು ಸನ್ಯಾಸಿ ಯಾಪೆ!’’ ಎಂದು ನಕ್ಕು ಬಿಟ್ಟು ಹಾರಿಸಿಬಿಟ್ಟರೆ, ಅಮ್ಮ ‘‘ನಾನು ‘ಕಾಸುದಾಯೆ ಕಂಡನಿ!’ಯನ್ನು ಹುಡುಕಬೇಕಿತ್ತು’’ ಎಂದು ಕೋಪದಲ್ಲಿ ಉತ್ತರ ಕೊಡುತ್ತಿದ್ದರು. ಈ ಎರಡು (ತುಳು) ನಾಟಕಗಳ ನಡುವೆ ಬೆಳೆದ ಮಕ್ಕಳು ನಾವು. ನಮಗೆ, ನಮ್ಮ ಅಮ್ಮ ಯಾವತ್ತೂ ಒರಗಿಕೊಳ್ಳಬಹುದಾದ ಗಟ್ಟಿಯಾದ ಆಧಾರಸ್ತಂಭ. ಅಪ್ಪ, ನಮ್ಮ ದೃಷ್ಟಿಯಲ್ಲಿ, ಕೈಗೆ ಸಿಗದ, ನಮ್ಮ ಪ್ರಯೋಜನಕ್ಕೆ ಬಾರದ, ‘‘ಅಪ್ಪನಿಗೆ ಹೇಳುತ್ತೇನೆ’’ ಎಂದು ಅಮ್ಮನಿಗೆ ನಮ್ಮನ್ನು ಹೆದರಿಸಲು ಮಾತ್ರ ಉಪಯೋಗಕ್ಕೆ ಬರುವ ನಮ್ಮ ಮನೆಯಲ್ಲಿದ್ದ ವ್ಯಕ್ತಿ. ಸಂಗತಿ ಹೀಗಿದ್ದರೂ, ಈಗ, ಅರುವತ್ತರ ಆಸುಪಾಸಿನಲ್ಲಿರುವ ನಮಗೆ, ಅಮ್ಮ ಅಮ್ಮನಾಗಿಯೇ ಉಳಿದರೆ, ಐದೂವರೆ ಅಡಿಯ ಅಪ್ಪಮಾತ್ರ ಬೆಟ್ಟದಷ್ಟು ಎತ್ತರವಾಗಿ ಯಾಕೆ ಕಾಣಿಸುತ್ತಾರೆ? ಈಗ ನಾವು ಅಪ್ಪನನ್ನು ಒಂದು ವ್ಯಕ್ತಿಯಾಗಿ ನೋಡುತ್ತಿದ್ದೇವೆಯೇ? ಅಪ್ಪನಿಗೆ, ಅಪ್ಪನ ಪಾತ್ರ ನಿರ್ವಹಣೆಗೆ ನೂರಕ್ಕೆ ಬರೀ 35 ಮಾರ್ಕು ಕೊಡಬಹುದು. ಅಷ್ಟೇ. ಆದರೆ, ವ್ಯಕ್ತಿಯಾಗಿ, ಮನುಷ್ಯನಾಗಿ, ಶೋಷಿತ ವರ್ಗಗಳ ಪರ ಧ್ವನಿ ಎತ್ತುವ, ಅವರಿಗೆ ನ್ಯಾಯ ಒದಗಿಸಿಕೊಡುವ ಕಮ್ಯುನಿಷ್ಟ್ ವಕೀಲರಾಗಿ, ತಮ್ಮ ಜೀವನವನ್ನೇ ಮುಡಿಪಾಗಿಟ್ಟ ವ್ಯಕ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಮಗೆ ಬಾಲ್ಯದಲ್ಲಿ ಅಪ್ಪಹಂಚು, ಗೇರುಬೀಜ, ಬೀಡಿ, ಬಂದರು ಕಾರ್ಮಿಕರಿಗಾಗಿ, ಗೇಣಿ ಒಕ್ಕಲುಗಳ ಪರವಾಗಿ ದುಡಿಯುತ್ತಿದ್ದಾರೆ, ಎಂದು ಅಷ್ಟೇ ಗೊತ್ತಿತ್ತು.

ಈ ಕ್ಷೇತ್ರಗಳಲ್ಲಿ ಅವರ ಸ್ಥಾನಮಾನ ಏನಿತ್ತು? ಅವರು ಏನಾಗಿದ್ದರು ಎಂದು ನಮಗೆ ಗೊತ್ತಿರಲಿಲ್ಲ. ತಿಳಿದುಕೊಳ್ಳುವ ಪ್ರಯತ್ನವನ್ನೂ ನಾವು ಮಾಡಿರಲಿಲ್ಲ. ಈ ಲೇಖನ ಬರೆಯುವುದಕ್ಕೆಂದೇ ಅವರ ಸಮೀಪದ ನಿಕಟವರ್ತಿ, ಆದರೆ ವಯಸ್ಸಿನಲ್ಲಿ ಅವರಿಗಿಂತ ತುಂಬಾ ಚಿಕ್ಕವರು (ಅವರ ಸಮಕಾಲೀನರು ಈಗ ಯಾರು ಇಲ್ಲ) ಅವರಿಗೆ ಕರೆ ಮಾಡಿ ಕೇಳಿದೆ. ಅವರಿಗೂ ಅಷ್ಟು ನೆನಪಿಲ್ಲ. ಅವರು ಕೊಟ್ಟ ಮಾಹಿತಿಗಳು ಹೀಗಿವೆ. ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಮಂಡಳಿಯ ಸದಸ್ಯರು, ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರು, ಎಐಟಿಯುಸಿ ಜಿಲ್ಲಾ ಅಧ್ಯಕ್ಷರು, ಮಂಗಳೂರು ಮುನ್ಸಿಪಾಲಿಟಿಯ ಕಾರ್ಪೊರೇಟರು, ಅದರ ಟೌನ್ ಪ್ಲಾನಿಂಗ್ ಸಮಿತಿಯ ಸದಸ್ಯರು, ಮುನ್ಸಿಪಲ್ ಕೆಲಸಗಾರರ ಸಂಘದ ಅಧ್ಯಕ್ಷರು, ರೈತಸಂಘದ ಅಧ್ಯಕ್ಷರು ಇತ್ಯಾದಿ. ನಿಜ ಹೇಳಬೇಕೆಂದರೆ, ನಮ್ಮ ದೃಷ್ಟಿಯಲ್ಲಿ ನಮ್ಮ ಅಪ್ಪ ಬೆಳದದ್ದು ಈ ಸ್ಥಾನಮಾನಗಳಿಂದ ಅಲ್ಲ. ಅವರ ಆಳೆತ್ತರದ ವ್ಯಕ್ತಿತ್ವವನ್ನು ನಮಗೆ ಗ್ರಹಿಸಲು ಸಾಧ್ಯವಾದುದು, ಬಾಲ್ಯದಲ್ಲಿ ನಮ್ಮ ಮನೆಯಲ್ಲೇ ನಡೆದ ಘಟನೆಗಳು, ಸಂಗತಿಗಳು, ಸನ್ನಿವೇಶಗಳನ್ನು ಅರ್ಥೈಸಿಕೊಳ್ಳುವಷ್ಟು ನಮ್ಮ ಬುದ್ಧಿ ಬೆಳೆದಾಗ.

ಅರುವತ್ತರ ದಶಕಗಳಲ್ಲಿ ಶ್ರೀಮತಿ ಇಂದಿರಾಗಾಂಧಿಯವರ ಭೂಸುಧಾರಣಾ ಕಾಯ್ದೆಗೆ ಅನುಸಾರವಾಗಿ ‘ಉಳುವವನೇ ಹೊಲದೊಡೆಯ’ ಎಂಬ ಪರಿಕಲ್ಪನೆ ಬಂದಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆದ ಅಲ್ಲೋಲಕಲ್ಲೋಲ ಬಹುಶಃ ಆ ಕಾಲದವರಿಗೆ ನೆನಪಿರಬಹುದು. ಆಗ ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತರು ಹಳ್ಳಿ ಹಳ್ಳಿಗೆ ಹೋಗಿ ಒಕ್ಕಲುಗಳಿಗೆ ತಮ್ಮ ಭೂಮಿಯ ಬಗ್ಗೆ ‘ಡಿಕ್ಲರೇಶನ್’ ಕೊಡುವಂತೆ ಹುರಿದುಂಬಿಸುತ್ತಿದ್ದರು. ಬಲಿಷ್ಠ ಭೂಮಾಲಕರ ವಿರುದ್ಧ ಹೋಗಲು ಒಕ್ಕಲುಗಳು ಹಿಂಜರಿಯುತ್ತಿದ್ದ ಕಾಲ ಅದು. ಭೂಮಾಲಕರು ತಮ್ಮ ಆಸ್ತಿಯನ್ನು ಉಳಿಸಿಕೊಳ್ಳಲು ಏನು ಮಾಡಲೂ ಹಿಂಜರಿಯುತ್ತಿರಲಿಲ್ಲ. ಆ ಸಮಯದಲ್ಲಿ ಒಕ್ಕಲುಗಳು ಭೂಮಾಲಕರಿಂದ ಹೊಡೆಸಿಕೊಂಡು ರಕ್ತ ಸುರಿಸಿಕೊಂಡು ನಮ್ಮ ಮನೆಗೆ ಬರುತ್ತಿದ್ದುದು ಈಗಲೂ ನೆನಪಿಗೆ ಬರುತ್ತಿದೆ. ಒಮ್ಮಿಮ್ಮೆ ಅವರಲ್ಲಿ ಹೆಂಗಸರು, ಮಕ್ಕಳು ಇರುತ್ತಿದ್ದರು. ಅಪ್ಪ, ನಮ್ಮ ಮನೆಯಲ್ಲಿ, ಜಗಲಿಯಲ್ಲಿ ಅವರಿಗೆ ಆಶ್ರಯಕೊಟ್ಟು ತಮ್ಮ ಖರ್ಚಿನಲ್ಲೇ ವೈದ್ಯಕೀಯ ಚಿಕಿತ್ಸೆ ಕೊಡಿಸಿ, ದೂರುಕೊಡಲು ಪೊಲೀಸ್ ಠಾಣೆಗೆ ಅವರನ್ನು ಕರೆದೊಯ್ಯುತ್ತಿದ್ದರು.

ಅಪ್ಪಆಗ ಯಾವುದೋ ಭೂನ್ಯಾಯ ಮಂಡಳಿಯ ಸದಸ್ಯರಾಗಿದ್ದರೆಂದು ನೆನಪು. ಅಪ್ಪನಿಂದಾಗಿ ಎಷ್ಟೋ ಒಕ್ಕಲುಗಳಿಗೆ ಭೂಮಿ ಸಿಕ್ಕಿತ್ತು. ಆದರೆ ಅವರ ಮಕ್ಕಳೆಲ್ಲರೂ ಕೇಸರಿ ಪಡೆಗೆ ಸೇರಿದ್ದಾರೆ ಎಂದು ಅಪ್ಪಸಾಯುವ ಮುಂಚೆ ಹೇಳಿ ಬೇಜಾರು ಮಾಡಿಕೊಳ್ಳುತ್ತಿದ್ದರು.

 ನನ್ನನ್ನು ಯಾವಾಗಲೂ ಕಾಡುವ ಇನ್ನೊಂದು ಘಟನೆ, ಒಂದು ಅಪಘಾತದ ಕೇಸು. ಪಣಂಬೂರು ಬಂದರಿನಲ್ಲಿ ಏನೋ ಕೆಲಸ ಮಾಡುವಾಗ ಮಲಯಾಳಿ ಕಾರ್ಮಿಕನೋರ್ವ ಸತ್ತಿದ್ದ. ಆಡಳಿತ ಮಂಡಳಿಯವರು ಕಾರ್ಮಿಕನ ಕುಟುಂಬಕ್ಕೆ ಪರಿಹಾರ ಕೊಡಲು ಏನೋ ತಕರಾರು ತೆಗೆದರು. ಆತನ ಪತ್ನಿ, ತನ್ನ ಎರಡು ಚಿಕ್ಕ ಮಕ್ಕಳೊಡನೆ ಊರಿಗೆ ಹೋಗಿಬಿಟ್ಟಳು. ಅಪ್ಪ, ಆ ಕೇಸಿನ ಬೆನ್ನು ಹಿಡಿದು ಸುಮಾರು ಹನ್ನೆರಡು ವರ್ಷಗಳ ಕಾಲ ಹೋರಾಡಿ ಕೊನೆಗೂ ಆಕೆಗೆ ನ್ಯಾಯ ದೊರಕಿಸಿ ಕೊಡುವುದರಲ್ಲಿ ಗೆದ್ದರು. ಮುಂದೆ, ಒಂದು ದಿನ ಆಕೆ, ತನ್ನ ಬೆಳೆದ ಎರಡು ಗಂಡು ಮಕ್ಕಳೊಂದಿಗೆ ಹಣವನ್ನು ತೆಗೆದುಕೊಂಡು ಹೋಗಲು ನಮ್ಮ ಮನೆಗೆ ಬಂದಿದ್ದಳು. ಅಪ್ಪಅವಳ ಕೈಗೆ ಚೆಕ್ಕು ಕೊಟ್ಟಾಗ, ಆಕೆಯ ಕಣ್ಣಲ್ಲಿ ನೀರು. ‘‘ಈ ಹಣವನ್ನು ತೆಗೆದುಕೊಂದು ನಾನೇನು ಮಾಡಲಿ. ಮೊದಲೇ ಸಿಕ್ಕಿದ್ದರೆ, ನನ್ನ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬಹುದಿತ್ತು. ಆ ಮಕ್ಕಳನ್ನು ಶಾಲೆ ಬಿಡಿಸಿ ಕೆಲಸಕ್ಕೆ ಹಾಕಿ ಆಗಿದೆ. ನನ್ನ ಮಕ್ಕಳ ಜೀವನ ಹಾಳಾಯಿತು’’ ಎಂದು ಅತ್ತಳು. ಆದರೂ ಕೊನೆಗೆ ಆ ಮಹಿಳೆ, ‘‘ಇದರಲ್ಲಿ ನಿಮ್ಮ ಫೀಜು ನೀವು ತೆಗೆದುಕೊಳ್ಳಿ’’ ಎಂದು ಕೊಡಲು ಬಂದಾಗ ಅಪ್ಪನ ಕಣ್ಣಲ್ಲೂ ನೀರು.

ಇನ್ನೊಂದು ಅಪಘಾತದ ಕೇಸು. ಬೆಳಗ್ಗೆ ಕದ್ರಿ ಪಾರ್ಕ್‌ನಲ್ಲಿ ಒಬ್ಬ ವ್ಯಕ್ತಿ ನಡೆದುಕೊಂಡು ಹೋಗುತ್ತಿದ್ದಾಗ, ಒಂದು ಕಾರು ಬಂದು ಹೊಡೆದು ಆ ವ್ಯಕ್ತಿ ಸತ್ತಿದ್ದ. ಹೊಡೆದ ಕಾರು ಓರ್ವ ವೈದ್ಯನದು. ಆತ ಪತ್ನಿಗೆ ಕಾರು ಚಾಲನೆ ಮಾಡಲು ಕಲಿಸುತ್ತಿದ್ದ. ಕಾರನ್ನು ಚಲಾಯಿಸುತ್ತಿದ್ದುದು, ಲೈಸನ್ಸ್ ಇಲ್ಲದ ಆತನ ಪತ್ನಿ. ಕಾರು ಹೊಡೆದ ಕೂಡಲೇ ಬಿದ್ದವನನ್ನು ಅಲ್ಲೇ ಇದ್ದ ಜನರು ಇನ್ನೊಬ್ಬ ವೈದ್ಯರ ಕ್ಲಿನಿಕ್‌ಗೆ ಕರೆದುಕೊಂಡು ಹೋಗಿದ್ದರು. ಅವರು ಆತನಿಗೆ ಪ್ರಥಮ ಚಿಕಿತ್ಸೆ ಕೊಟ್ಟು, ಆಸ್ಪತ್ರೆಗೆ ಕಳುಹಿಸಿದಾಗ ದಾರಿಯಲ್ಲಿ ಆತ ಮೃತಪಟ್ಟಿದ್ದ. ಮೃತ ಪಟ್ಟಿದ್ದ ವ್ಯಕ್ತಿಯ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಲು, ಪ್ರಥಮ ಚಿಕಿತ್ಸೆ ಕೊಟ್ಟ ವೈದ್ಯರ ಸಾಕ್ಷಿ ಹೇಳಿಕೆ ಅತೀ ಅಗತ್ಯವಾಗಿತ್ತು. ಆದರೆ ಆ ವೈದ್ಯರು ತಪ್ಪಿಸಿಕೊಳ್ಳಲು ನೋಡುತ್ತಿದ್ದರು. ಸಹಜವಾಗಿಯೇ ಒರ್ವ ವೈದ್ಯ ಇನ್ನೋರ್ವ ವೈದ್ಯನ ವಿರುದ್ಧ ಸಾಕ್ಷಿ ಹೇಳಲು ಮುಜುಗರ ಪಡುತ್ತಿದ್ದಿರಬಹುದು. ನಮ್ಮ ಅಪ್ಪ, ಛಲ ಬಿಡದ ಬೇತಾಳನಂತೆ ಸುಮಾರು ಹದಿನೆಂಟು ಸಾರಿ ಅವರ ಮನೆಗೆ ಹೋಗಿರಬಹುದು. ವೈದ್ಯರಿಗೆ ಮೃತಪಟ್ಟ ವ್ಯಕ್ತಿಯ ಮೇಲಲ್ಲ, ನಮ್ಮ ಅಪ್ಪನ ಮೇಲೆ ಕೊನೆಗೆ ಕರುಣೆ ಬಂದು, ಕೋರ್ಟಿಗೆ ಆಗಮಿಸಿ ಸಾಕ್ಷಿ ಹೇಳಿ ಕೇಸು ಗೆಲ್ಲಿಸಿದ್ದು ಈಗಲೂ ನೆನಪಿಗೆ ಬರುತ್ತಿದೆ.

ಇಂತಹ ಘಟನೆಗಳು ಅಪ್ಪನ ವೃತ್ತಿ ಜೀವನದಲ್ಲಿ ನೂರಾರು ಇದ್ದಿರಬಹುದು. ಇವು ನಮ್ಮ ಮನೆಯಲ್ಲಿ ನಡೆದಿದ್ದುದರಿಂದ, ಅಥವಾ ಇದರಲ್ಲಿ ಭಾಗಿಯಾದ ವ್ಯಕ್ತಿಗಳು ನಮಗೆ ಗೊತ್ತಿದ್ದುದರಿಂದ, ಇವು ನಮಗೆ ಗೊತ್ತಿದೆ ಅಷ್ಟೆ!. ಅಪ್ಪ ಅವರಾಗಿಯೇ ಎಂದೂ ತಮ್ಮ ಕೇಸುಗಳ ಬಗ್ಗೆ ಹೇಳಿಕೊಂಡವರಲ್ಲ. ಇವೆಲ್ಲಾ ಅವರಿಗೆ ಮಾಮೂಲಿ. ಅಪ್ಪನ ಹತ್ತಿರ ಬರುತ್ತಿದ್ದ ಹೆಚ್ಚಿನ ಕಕ್ಷಿದಾರರಲ್ಲಿ ಸ್ಟಾಂಪ್ ಪೇಪರಿಗೆ ಕೊಡುವಷ್ಟು ಹಣವೂ ಇರುತ್ತಿರಲಿಲ್ಲ. ಅಪ್ಪನೇ ಕೈಯಿಂದ ಹಾಕಬೇಕಿತ್ತು. ಅಪ್ಪನಿಗೆ ಹಣಕ್ಕಿಂತ, ಹೆಸರಿಗಿಂತ, ಸ್ಥಾನಮಾನಗಳಿಗಿಂತ ಅವರ ಮೌಲ್ಯಗಳು ಮುಖ್ಯವಾಗಿದ್ದುವು. ಬಹುಶಃ ಆ ಮೌಲ್ಯಗಳನ್ನು ಅವರು ಎಂದೂ ಅಡವಿಟ್ಟಿದ್ದಿಲ್ಲ.

ಅಪ್ಪನ ವೃತ್ತಿ ಜೀವನದ ಪ್ರಾರಂಭಿಕ ವರ್ಷದಲ್ಲಿಯೇ ಒಂದು ಘಟನೆ ನಡೆಯಿತಂತೆ. ಕೋರ್ಟಿನಲ್ಲಿ ಓರ್ವ ನ್ಯಾಯಾಧೀಶರು ಒಬ್ಬ ಹಿರಿಯ ವಕೀಲರಿಗೆ ಹಿಗ್ಗಾಮುಗ್ಗಾಬೈದು ಅವರನ್ನು ಅವಮಾನಿಸಿದ್ದರಂತೆ, ಆ ಹಿರಿಯ ವಕೀಲರು ಮೇಲಿನ ಅಧಿಕಾರಿಗಳಿಗೆ ದೂರು ಕೊಡಲು ಹೊರಟಿದ್ದು, ಅಲ್ಲಿದ್ದ ಉಳಿದ ವಕೀಲರ ಹತ್ತಿರ ಸಾಕ್ಷಿ ಹಾಕಲು ಕೇಳಿಕೊಂಡರಂತೆ, ಒಬ್ಬನೇ ಒಬ್ಬ ವಕೀಲ ಕೂಡ ಸಾಕ್ಷಿ ಹಾಕಲು ಒಪ್ಪಲಿಲ್ಲವಂತೆ, ಅಪ್ಪನೇ ಆಗ ಮುಂದೆ ಬಂದು ‘‘ನಾನು ಸಾಕ್ಷಿ ಹೇಳುತ್ತೇನೆ’’ ಎಂದರಂತೆ. ಆಗ ಆ ಹಿರಿಯ ವಕೀಲರು, ‘‘ನೀನು ಇನ್ನೂ ಜ್ಯೂನಿಯರ್, ಈ ನ್ಯಾಯಾಧೀಶನನ್ನು ಎದುರು ಹಾಕಿ ಕೊಂಡರೆ ನಾಳೆ ನಿನ್ನ ಕೇಸುಗಳೆಲ್ಲಾ ಬಿದ್ದು ಹೋಗಬಹುದು’’ ಎಂದರಂತೆ. ‘‘ಅವರು ನಿಮ್ಮನ್ನು ಅವಮಾನಿಸಿದ್ದು ನಿಜವಲ್ಲವೇ? ನಿಜ ಹೇಳಲು ಯಾಕೆ ಹೆದರಬೇಕು’’ ಎಂದರಂತೆ ನಮ್ಮಪ್ಪ. ಈ ವಿಷಯವನ್ನು ಆ ಹಿರಿಯ ವಕೀಲರೇ ನನ್ನ ಹತ್ತಿರ ಹೇಳಿಕೊಂಡದ್ದರಿಂದ ನನಗೆ ಇದು ಗೊತ್ತಾಗಿದ್ದು.

ಸುಮಾರು 80 ವರ್ಷಗಳವರೆಗೂ ದುಡಿಯುತ್ತಿದ್ದ ಅಪ್ಪನಿಗೆ ಇನ್ನು ಸಾಕು ನಿಲ್ಲಿಸಿ, ಎಂದು ನಾವೆಲ್ಲರೂ ಒತ್ತಡ ಹೇರುತ್ತಿದ್ದೆವು. ‘‘ಯಾವುದೋ ಒಂದು ಕೇಸು ಇನ್ನೂ ಬಾಕಿ ಇದೆ, ಅದು ಮುಗಿಯುವ ವರೆಗೆ ಮಾತ್ರ ಹೋಗುತ್ತೇನೆ. ನಂತರ ನಿಲ್ಲಿಸುತ್ತೇನೆ’’ ಎಂದಿದ್ದರು. ಕೊನೆಗೂ ಆ ಕೇಸು ಮುಗಿದಾಗ ಮನೆಗೆ ಬಂದು, ‘‘ಇವತ್ತು ಕೊನೆಯ ದಿನ, ನಾಳೆಯಿಂದ ನಾನು ಆಫೀಸಿಗೆ ಹೋಗುವುದಿಲ್ಲ’’ ಎಂದ ಅಪ್ಪ, ಎಂದಿನಂತೆ ಮರುದಿನ ಹೊರಟು ನಿಂತಾಗ ನಮಗೆಲ್ಲಾ ಅಚ್ಚರಿ. ‘‘ಯಾಕಪ್ಪಾ, ಕೊನೇ ದಿನ ಅಂದಿರಿ. ಇವತ್ತು ಯಾಕೆ ಹೊರಡುತ್ತಿದ್ದೀರಿ?’’ ಎಂದು ವಿಚಾರಿಸಿದಾಗ ಅವರು ಹೇಳಿದ ಸಂಗತಿ ಹೀಗಿತ್ತು. ಹಿಂದಿ ದಿನ ಇನ್ನೇನು ಆಫೀಸು ಮುಚ್ಚಬೇಕು ಎಂದು ಹೊರಟಾಗ ಒಬ್ಬ ಮುಸ್ಲಿಂ ಮಹಿಳೆ, ಬಂಟ್ವಾಳದಿಂದ ತನ್ನ ಮೂರು ಪುಟ್ಟ ಮಕ್ಕಳನ್ನು ಕರೆದು ಕೊಂಡು ಆಫೀಸಿಗೆ ಬಂದಿದ್ದಳಂತೆ, ‘‘ನನ್ನ ಗಂಡ, ಲಾರಿ ಚಾಲಕ, ಲಾರಿ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ. ಲಾರಿ ಮಾಲಕ ಏನೂ ಪರಿಹಾರ ಕೊಟ್ಟಿಲ್ಲ. ನನಗೆ ನನ್ನ ಮಕ್ಕಳಿಗೆ ಗತಿಯಿಲ್ಲ. ದಯವಿಟ್ಟು ನೀವು ನ್ಯಾಯ ಒದಗಿಸಿಕೊಡಬೇಕು’’ ಅಂದಳಂತೆ.

‘‘ನೀವು ಒಪ್ಪಿದಿರೇನು?’’ ಅಂತ ಕೇಳಿದೆ
‘‘ಒಪ್ಪದೇ ಇನ್ನೇನು ಮಾಡಲಿ’’ ಎಂದು ಆಫೀಸಿಗೆ ಹೊರಟೇ ಬಿಟ್ಟರು.
ಬಹುಶಃ, ಮೇಲೆ ಅರುಹಿದ ಘಟನೆ ನಮ್ಮ ಅಪ್ಪನ ಇಡೀ ವೃತ್ತಿ ಜೀವನದ ಒಂದು ಝಲಕ್.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)