varthabharthi

ಸುಗ್ಗಿ

ಕಥಾಸಂಗಮ

ಸೇಲ್ಸ್ ಮ್ಯಾನ್

ವಾರ್ತಾ ಭಾರತಿ : 28 Jul, 2019
ಮುನವ್ವರ್, ಜೋಗಿಬೆಟ್ಟು

ಎರಡು ಅಂತಸ್ತಿನ ಮಹಡಿ ಹತ್ತಿ ಸುಸ್ತಾಗಿದ್ದ ಕುಮಾರ್ ಬೆಡ್ಡಿನ ಮೇಲೆ ದೊಪ್ಪನೆ ಬೀಳುವ ಮುಂಚೆ ಅಂಗಿಯ ಗುಂಡಿ ಒಂದೊಂದೇ ತೆಗೆಯುತ್ತಾ ಕನ್ನಡಿಯೊಮ್ಮೆ ನೋಡಿಕೊಂಡ. ಕಣ್ಣುಗಳು ಆಳಕ್ಕೆ ಬಿದ್ದು ಕೆಂಪಾಗಿದ್ದವು. ಕಳೆದ ಒಂದುವಾರದಿಂದ ಕೆಲಸ ಮುಗಿಸುವಾಗ ಮಧ್ಯ ರಾತ್ರಿಯಾಗುತ್ತಿತ್ತು. ಬೆಳಗ್ಗೆ ಮತ್ತೆ 9 ಗಂಟೆಗೆ ಎದ್ದು ಕೆಲಸಕ್ಕೆ ಹೋಗಬೇಕು. ಎಲ್ಲಾ ಅಕ್ಷಯ ತೃತೀಯದ ಹಿಂದಿನ ವಾರ ಹೀಗೆಯೇ. ಚಿನ್ನ ತಿನ್ನುವಷ್ಟು ತೆಗೆದುಕೊಳ್ಳುವ ಗ್ರಾಹಕರಿಗೆ ಇದ್ದದ್ದೆಲ್ಲವೂ ತೋರಿಸಿ ಸುಸ್ತಾಗಿ ಅವರಿಂದ ಅಡ್ವಾನ್ಸ್ ಮಾಡಿಸುವಷ್ಟರಲ್ಲಿ ಸಾಕು ಸಾಕೆನಿಸುತ್ತಿತ್ತು. ಸಾಲದ್ದಕ್ಕೆ ಆ ಡಿಸೈನ್ ತೋರಿಸಿಲ್ಲ, ಇದು ವಿವರಿಸಿಲ್ಲ ಅಂತ ಮೊಸರಲ್ಲಿ ಕಲ್ಲು ಹುಡುಕುವ ಗ್ರಾಹಕರಿಗೂ ಕಡಿಮೆ ಇರಲಿಲ್ಲ. ಕಣ್ತಪ್ಪಿನಿಂದ ನಡೆವ ತಪ್ಪಿಗೂ ವಾಚಾಮಗೊಚರವಾಗಿ ಬೈಗುಳ ತಿನ್ನುತ್ತಾ ಎದುರುತ್ತರಿಸಲಾಗದ ಅಸಹಾಯಕತೆ. ಎಲ್ಲಕ್ಕೂ ಮುಗುಳ್ನಗುತ್ತಾ ಉತ್ತರಿಸಿ ನೋವು ನುಂಗುವ ಅನಿವಾರ್ಯತೆ. ಕೊನೆಗೆ ರಾದ್ಧಾಂತಗಳು ಮುಗಿದು ಹೋಯಿತಲ್ಲವೆಂದು ಕೈತೊಳೆದುಕೊಂಡರೆ, ಗ್ರಾಹಕರ ಅಸಮಾಧಾನ ಮ್ಯಾನೆಜ್ಮೆಂಟ್ ತನಕ ಎತ್ತರಿಸಲ್ಪಟ್ಟು ಬಾಸ್ ನಿಂದಲೂ ಮಂಗಳಾರತಿ. ಎಲ್ಲವೂ ನೆನೆದು ಉಸ್ಸಪ್ಪಾ ಎನ್ನುತ್ತಾ ನಿಟ್ಟುಸಿರು ಬಿಟ್ಟು ಬೆಡ್ ಮೇಲೊಮ್ಮೆ ಕುಳಿತುಕೊಂಡ. ಈ ಕೆಲಸವೊಮ್ಮೆ ಬಿಟ್ಟಿದ್ದರೆ,

ಅಯ್ಯೋ ಬೇರೊಂದು ಕೆಲಸ ಸಿಗುವುದು ಅಷ್ಟು ಸುಲಭವೇನು? ಅದೂ ಓದಿದ್ದು ಕಡಿಮೆ. ಸೀನಿಯರ್ ಸೇಲ್ಸ್‌ಮ್ಯಾನ್ ಅಂತ ಈ ಜ್ಯುವೆಲ್ಲರಿಯಲ್ಲಿ ಆರು ವರ್ಷ ಸವೆದಾಗಿದೆ. ಇನ್ನೇನಿದ್ದರೂ ಸಾಯುವವರೆಗೂ ಇದೇ ಜೈಲು. ಹಾಗೆಯೇ ಅರ್ಧ ಗುಂಡಿತೆಗೆದ ಬಟ್ಟೆಯಲ್ಲೇ ಆಕಳಿಸುತ್ತಾ ಮೈಮುರಿದ. ಅಷ್ಟರಲ್ಲಿ ಹತ್ತಿರವೇ ಇದ್ದ ಮೊಬೈಲ್‌ನಲ್ಲಿ ನೋಟಿಫಿಕೇಶನ್ ಮಿಂಚು ಕಂಡಿತು. ಎತ್ತಿ ನೋಡಿದರೆ ಹದಿನಾರು ತಪ್ಪಿದ ಕರೆಗಳು. ಅಷ್ಟರಲ್ಲೇ ಹದಿನೇಳನೆಯದೆಂಬಂತೆ ಮೈ ವೈಫ್ ನಂಬರಿನಿಂದ ಮೊಬೈಲ್ ಹೊಡೆದುಕೊಳ್ಳತೊಡಗಿತು. ಫೋನೆತ್ತಿದ.

ನಿದ್ದೆಯ ಮಂಪರಿನಲ್ಲಿದ್ದ ಹೆಂಡತಿಯ ಸ್ವರ ಆ ಕಡೆಯಿಂದ ಕೇಳುತ್ತಿತ್ತು.

 ‘‘ಹಲೋ, ಹೇಗಿದ್ದೀರಿ. ಜ್ವರ ಹೇಗಿದೆ?’’

‘‘ಹು ಇದ್ದೇನೆ ಹೀಗೆ, ಜ್ವರ ಸ್ವಲ್ಪ ಜೋರಿದೆ ಕಣೇ. ತುಂಬಾ ಸುಸ್ತು, ನೀ ಹೇಗಿದ್ಯಾ?’’

‘‘ನಾನು ಇದ್ದೇನೆ. ನೀವು ಡಾಕ್ಟರತ್ರ ಹೋಗಿ, ನಾಡಿದ್ದು ಹೇಗೂ ಶಂಕರನ ಮದ್ವೆ, ರಜೆ ಕೇಳಿ ಬನ್ನಿ. ಮನೆಯೂಟ ತಿಂದ್ರೆ ಸರಿ ಹೋಗ್ತೀರಾ?’’

‘‘ಹೂ ಹೌದು ಮರಾಯ್ತಿ. ಶಂಕರ ಬೇರೆ ಜೀವದ ಗೆಳೆಯ. ರಜೆ ಕೇಳ್ತೇನೆ. ಆದ್ರೆ ಸಿಗೋದು ಡೌಟು. ನಾಡಿದ್ದು ಅಕ್ಷಯ ತೃತೀಯ ಅಲ್ವಾ?’’

‘‘ಏನೂ ಆಗಲ್ಲ. ರಜೆ ಕೇಳಿ ಸಿಗಬಹುದು. ಐದು ವರ್ಷವೂ ಅಕ್ಷಯ ತೃತೀಯಕ್ಕೆ ಅಲ್ಲೇ ಇದ್ರಲ್ವ? ಇದಕ್ಕಾದ್ರೂ ರಜೆ ಕೊಡದೆ ಇರ್ತಾರಾ? ಕೇಳಿ ಕೊಟ್ಟೇ ಕೊಡ್ತಾರೆ’’.

ಮಡದಿ ರಜೆ ಸಿಗಬಹುದೆಂಬ ಆಸೆ ಚಿಗುರಿಸಿ ಫೋನಿಟ್ಟಳು. ಲೈಟು ಆರಿಸಿ ಮಲಗಿದ ಕುಮಾರ್ ಸಣ್ಣಗೆ ಮೈ ಬಿಸಿಯೇರುತ್ತಿರುವುದು ಗಮನಕ್ಕೆ ಬಂದಿತ್ತು. ವಿಪರೀತ ಸುಸ್ತು ಆಯಾಸದ ಮಧ್ಯೆಯೂ ಸರ್ವಾಧಿಕಾರಿ ಬಾಸ್ ರಜೆ ಕೊಡುತ್ತಾರೋ ಇಲ್ಲವೋ ಎಂಬ ಅರ್ಧ ಆಸೆಯಿಂದ ನಿದ್ದೆ ಹತ್ತಲಿಲ್ಲ. ಮುಗ್ಗಲು ಬದಲಿಸುತ್ತಾ ಬಾರದ ನಿದ್ದೆಗೆ ಶರಣಾದ.

ಬೆಳಗ್ಗಾಯಿತು. ಅದಾಗಲೇ ತಡವಾಗಿರುವುದರಿಂದ ಅರ್ಧರ್ಧ ತಿಂಡಿ ತಿಂದು, ಅವಸರದ ಕಾಗೆ ಸ್ನಾನ ಮುಗಿಸಿ ಬರುವ ಹೊತ್ತಿಗೆ ಸಮಯ ಎರಡು ನಿಮಿಷ ತಡವಾಗಿತ್ತು. ಬೆಳಗ್ಗಿನ ಮೀಟಿಂಗಿನಲ್ಲಿ ಅದಕ್ಕಾಗಿಯೇ ಒಂದು ಮಂಗಳಾರತಿ ಮುಗಿಯಿತು. ‘ಇವು ಯಾವಾಗಲೂ ಇದ್ದದ್ದೇ ಅಲ್ವಾ’ ಅಂತ ಸಮಾಧಾನ ಪಟ್ಟುಕೊಳ್ಳಬೇಕು. ಮೀಟಿಂಗ್ ಮುಗಿದು ಶೋ ರೂಂ ತೆರೆದ ಮರುಕ್ಷಣ ಸಕ್ಕರೆಗೆ ಬರುವ ಇರುವೆ ಹಿಂಡಿನಂತೆ ಗ್ರಾಹಕರು ಮುಗಿ ಬೀಳಲಾರಂಭಿಸಿದರು. ಟಾರ್ಗೆಟ್ ಎಂಬ ಪೆಡಂಭೂತ ಜೀವ ತಿನ್ನುವುದರಿಂದ ಆದಷ್ಟು ಬೇಗ ಎಲ್ಲಾ ಸೇಲ್ಸ್ ಮ್ಯಾನ್‌ಗಳು ಗ್ರಾಹಕರನ್ನು ತೃಪ್ತಿಪಡಿಸಿ ತಮ್ಮ ಟಾರ್ಗೆಟ್‌ಗಳನ್ನು ಮುಗಿಸುವ ಸನ್ನಾಹದಲ್ಲಿದ್ದರು. ಕುಮಾರ್ ನಿಂತಲ್ಲಿಗೂ ಒಬ್ಬಳು ಬಂದಳು. ಪಕ್ಕಾ ಮಾಡರ್ನ್ ಲೇಡಿ, ಕನ್ನಡದ ಮಧ್ಯೆ ಇಂಗ್ಲಿಷನ್ನೇ ಹರಿಸುತ್ತಾ ‘‘ಕಾನ್ಯೂ ಶೋ ದಾಟ್ ಒನ್’’ ಅದು ಇದು ಅನ್ನುತ್ತಾ ಸಾವಿರ ಬಾರಿ ಅಲ್ಲಿದ್ದ ಎಲ್ಲಾ ನೆಕ್ಲೇಸನ್ನು ತೋರಿಸಲು ಹೇಳಿದಳು. ಅವನು ಥಾಂಕ್ಯೂ, ವೆಲ್ಕಂ, ಎಸ್ ನೋ ಇನ್ನು ಗೊತ್ತಿರುವ ಹರುಕು ಮುರುಕು ಇಂಗ್ಲಿಷ್ನಲ್ಲೇ ಅವಳನ್ನು ಸಂಭಾಳಿಸುತ್ತಲೇ ಇದ್ದ. ಮಧ್ಯೆ ತಲೆ ಗಿರ್ರೆಂದು ಸುತ್ತುತ್ತಿತ್ತು. ಅಲ್ಲಿರುವ ಎಲ್ಲಾ ನೆಕ್ಲೇಸ್ ಮುಗಿದರೂ ಇಲ್ಲದ ನಕ್ಲೇಸ್‌ಗಾಗಿ ತಡಕಾಡಿ ಬಂದು ಯಾವುದೋ ಒಂದು ತೋರಿಸಿಕೊಟ್ಟು ದಣಿವಾರಲೆಂದು ಪಕ್ಕದ ಚೆಯರ್‌ನಲ್ಲಿ ಕುಳಿತುಕೊಂಡ. ಅಷ್ಟೊತ್ತಿಗೆ ಅವಳಿಗೆ ಎಲ್ಲಿಲ್ಲದ ಕೋಪ ಬಂತೋ ಗೊತ್ತಿಲ್ಲ.

‘‘ಮ್ಯಾನೆರ್ಸ್ ಇಲ್ವೇನ್ರೀ ನಿಮ್ಗೆ, ಕಸ್ಟಮರ್ ಜೊತೆ ಯಾವ ರೀತಿ ಬಿಹೇವ್ ಮಾಡ್ಬೇಕಂತ್ಲೂ ಗೊತ್ತಿಲ್ವಾ? ಕರೀರಿ ನಿಮ್ ಮ್ಯಾನೇಜರನ್ನು. ಕಸ್ಟಮರ್ಸ್ ಐಟಂ ತೋರಿಸ್ಬೇಕೆಂದ್ರೆ ನೀವು ಚೆಯರ್‌ನಲ್ಲಿ ಕೂತ್ಕೊಂಡು ಆರಾಮ ನೋಡ್ತಿದ್ದೀರಲ್ವಾ, ನಾಚಿಕೆ ಏನಾದ್ರೂ ಇದ್ಯೇನ್ರೀ ನಿಮ್ಗೆ’’ ಅಂತ ದಬಾಯಿಸಿದಳು.

ಸುಸ್ತು ,ಅಸಹಾಯಕತೆ, ಸಿಟ್ಟು ಕುಮಾರ್‌ನನ್ನು ಇನ್ನಷ್ಟು ಕ್ರೋಧಗೊಳ್ಳುವಂತೆ ಮಾಡಿತ್ತು. ಆ ಸಿಟ್ಟು ಎಲ್ಲಿತ್ತೋ ಗೊತ್ತಿಲ್ಲ.

‘‘ಅಲ್ಲ ಮೇಡಂ ನಿಮ್ಗೆ ಸಲ್ಪನಾದ್ರೂ ಮನುಷ್ಯತ್ವ ಇಲ್ವಾ?’’ ಎಂದು ಜೋರಾಗಿಯೇ ಪ್ರತಿಕ್ರಿಯಿಸಿದ. ಹೇಳಿದ ಮೇಲೆ ಯಾಕಾಗಿ ಹೇಳಿದೆನೋ ಎನ್ನುತ್ತಾ ನಾಲಗೆ ಕಚ್ಚಿಕೊಂಡು ಸುಮ್ಮನಾದ.

‘‘ಶಟ್ ಅಪ್’’ ಶೋರೂಂನಲ್ಲಿರುವವರು ಎಲ್ಲರೂ ಕೇಳಿಸಿ ಕೊಳ್ಳುವಂತೆ ಅವಳು ಜೋರಾಗಿ ಘರ್ಜಿಸಲಾರಂಭಿಸಿದಳು. ಆ ಹೊತ್ತಿಗೆ ಮ್ಯಾನೇಜರ್ ಅಲ್ಲಿಗೆ ಬಂದ. ಅದು ಇದು ಎನ್ನುತ್ತಾ ಕುಮಾರನನ್ನು ಗೋಳು ಹೊಯ್ದು ಕೊಂಡವಳು ಇಡೀ ಶೋರೂಂಗೆ ಕೇಳಿಸುವಂತೆ ಕಿರುಚ ತೊಡಗಿದ್ದಳು. ಹೇಗೂ ಅವಳನ್ನು ಸಮಾಧಾನ ಮಾಡಿದ ಮ್ಯಾನೇಜರ್ ಕುಮಾರನಿಗೆ ಅವಳ ಎದುರಲ್ಲಿ ಬೈದು ‘ಕಸ್ಟಮರ್ ಈಸ್ ಕಿಂಗ್’ ಅನ್ನುವುದನ್ನು ಸಮರ್ಥಿಸಿಕೊಂಡಿದ್ದ. ಆದಾಗಲೇ ಕುಮಾರ್‌ಗೆ ಜ್ವರವೇರಿ ಮೈಯೆಲ್ಲಾ ಸುಡುತ್ತಿತ್ತು. ಕಣ್ಣುಗಳು ಎಲ್ಲವನ್ನೂ ಎರೆಡರಾಗಿ ತೋರಿಸುತ್ತಿದ್ದವು. ಸುಮಾರು ಹೊತ್ತು ಕಳೆದು ಅಲ್ಲಿಂದ ಎದ್ದು ಸೀದಾ ಬಾಸ್ ಕೊಠಡಿಗೆ ಬಂದ.

‘‘ಸರ್ ನಾಳೆ ರಜೆ ಬೇಕಿತ್ತು, ಫ್ರೆಂಡ್‌ಗೆ ಮದ್ವೆ ಇದೆ’’

‘‘ಏನು ರಜೇನಾ, ಫ್ರೆಂಡ್ ಏನೂ ಫ್ಯಾಮಿಲಿ ಅಲ್ವಲ್ಲ. ಅಕ್ಷಯ ತೃತೀಯ ಸೀಸನ್ ಅಂತ ಗೊತ್ತಾಗಲ್ವಾ, ನೆಟ್ಟಗೆ ಒಬ್ಬ ಕಸ್ಟಮರ್‌ನ ಹ್ಯಾಂಡಲ್ ಮಾಡೋಕೆ ಬರಲ್ಲ. ರಜೆಯಂತೆ ರಜೆ’’ ಬಾಸ್ ಚೆನ್ನಾಗಿ ಉಗಿದು ಕಳಿಸಿದ.

ವಿಷಣ್ಣನಾಗಿ ಹೊರಬಂದ ಕುಮಾರ್ ಮತ್ತೆ ಕೌಂಟರ್‌ನಲ್ಲಿ ಕಾರ್ಯೋನ್ಮುಖನಾದ. ಜ್ವರದೊಂದಿಗೆ ಎಲ್ಲಾ ಗ್ರಾಹಕರನ್ನು ನಗುತ್ತಲೇ ಸ್ವಾಗತಿಸಲು ಪ್ರಯತ್ನಪಟ್ಟ. ಕಾಲುಗಳು ನಿಂತಲ್ಲಿ ನಿಲ್ಲದೆ ನಡುಗುತ್ತಾ ಸೋಲುತ್ತಿರುವುದು ಅವನರಿವಿಗೆ ಬಾರದಿರಲಿಲ್ಲ. ಮಧ್ಯಾಹ್ನದ ಊಟದ ಬದಲಿಗೆ ಬಹಳಷ್ಟು ರಶ್ ಇದ್ದದ್ದರಿಂದ ಎಲ್ಲರಿಗೂ ಸ್ನಾಕ್ಸ್ ಹಂಚಲಾಗಿತ್ತು. ಸಿಕ್ಕಿದಷ್ಟು ಪಡೆದು ತಿಂದು ಹೊಟ್ಟೆ ತುಂಬಿಸಿಕೊಂಡು ನೀರು ಕುಡಿದ. ಹೊಟ್ಟೆ ನೋವು ಸೇರಿಕೊಂಡು ತಲೆ ಗಮ್ಮೆನ್ನುತ್ತಿತ್ತು. ಹೇಗೂ ಸಂಜೆಯಾಯಿತು. ಮತ್ತೆ ಬಾಸ್ ಕೊಠಡಿಗೆ ಬಂದ. ‘‘ಸರ್ ಮೈ ಹುಷಾರಿಲ್ಲ, ನಿಂತ್ಕೊಳ್ಳೋಕೆ ಆಗ್ತಿಲ್ಲ’’

‘‘ಥೋ ಅಯೋಗ್ಯ, ನಾಚ್ಕೆ ಮಾನ ಮರ್ಯಾದಿ ಏನಾದ್ರೂ ಇದ್ಯ. ಫ್ರೆಂಡ್ ಮದ್ವೆಗೆ ಇಷ್ಟೆಲ್ಲಾ ನಾಟಕ ಮಾಡಿ ಹೋಗುವ ಅವಶ್ಯಕತೆ ಏನಿದೆ? ಅವನೇನು ಸ್ಯಾಲರಿ ಕೊಡ್ತಾನಾ’’

‘‘ಇಲ್ಲ ಸರ್, ತುಂಬಾ ಸುಸ್ತಾಗ್ತಿದೆ. ಮೈ ಸಿಕ್ಕಾಪಟ್ಟೆ ಹುಷಾರಿಲ್ಲ’’

‘‘ಮುಚ್ಕೊಂಡು ಕೆಲ್ಸ ನೋಡು’’ ಎಂದು ಕ್ಯಾಬಿನ್‌ನಿಂದ ಹೊರಗಟ್ಟಿದ.

ಸೋಲುವ ಹೆಜ್ಜೆ ಹಾಕುತ್ತಾ ಕಣ್ಣೀರನ್ನು ಹಾಗೇ ಒರೆಸಿಕೊಳ್ಳುತ್ತಾ ಮತ್ತೆ ಕುಮಾರ್ ಕೌಂಟರ್ ಸೇರಿದ. ನಿಲ್ಲದ ಗ್ರಾಹಕರ ಹಾವಳಿಯಿಂದ ರಾತ್ರಿ ಹತ್ತರವರೆಗೂ ಶೋ ರೂಂ ಕ್ಲೋಸ್ ಆಗಲಿಲ್ಲ. ಎಲ್ಲಾ ಕಳೆದು ಸ್ಟಾಕ್ಸ್ ತಾಳೆ ಹಾಕಿ ರೂಮಿಗೆ ಬರುವಷ್ಟರಲ್ಲಿ ರಾತ್ರಿ ಎರಡಾಗಿತ್ತು. ಭಾರ ಕಣ್ಣುಗಳು, ಸುಡುವ ಜ್ವರ, ಆಯಾಸದ ಮೇಲೆ ಮೊಬೈಲೊಮ್ಮೆ ನೋಡಿದ. ಜೀವದ ಗೆಳೆಯ ಮದುಮಗ ಶಂಕರನ ಐದು ಮಿಸ್ಡ್ ಕಾಲ್‌ಗಳಿದ್ದವು. ಯಾವುದಕ್ಕೂ ಮನಸ್ಸಾಗದೆ ದೊಪ್ಪೆಂದು ಬೆಡ್ ಮೇಲೆ ಬಿದ್ದ.

ಕರುಳು ಕತ್ತರಿಸುವ ಹೊಟ್ಟೆನೋವು. ಕಣ್ಣು ಗುಡ್ಡೆ ಕಿತ್ತು ಬರುವಂಥಹ ಅಸಾಧ್ಯ ಬೇನೆ. ಕುಮಾರ್ ಎಚ್ಚರ ತಪ್ಪಿದ. ದೀರ್ಘ ನೋವಿನ ರಾತ್ರಿಗಳು ಪ್ರಜ್ಞೆ ಇಲ್ಲದೆ ಕಳೆದು ಹೋಯಿತು. ಬೆಳಗ್ಗಾಗಿರಬೇಕು. ತುಂಬಾ ಮಂದಿ ಸುತ್ತು ಇರುವಂತೆ ದನಿ ಕೇಳಿಸುತ್ತಿತ್ತು. ಅವರ ಮಾತುಗಳು ಕೇಳಿಸುತ್ತಿದೆಯಾದರೂ ಉತ್ತರಿಸುವ ತ್ರಾಣ ಕುಮಾರ್‌ಗೆ ಇರಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಯಾರೋ ತನ್ನನ್ನು ಹೊತ್ತೊಯ್ಯುತ್ತಿದ್ದಾರೆ ಅನಿಸುವಷ್ಟರಲ್ಲಿ ಮತ್ತೆ ಪ್ರಜ್ಞೆ ತಪ್ಪಿತು.

ಮೂರು ದಿನಗಳ ತರುವಾಯ ಎಚ್ಚರ ಬಂತು. ಕೈಗಳಿಗೆ ತುಂಬಾ ವಯರ್‌ಗಳು ಹಾಕಲಾಗಿತ್ತು. ಶ್ವಾಸ ಅಪೂರ್ಣವಾಗದಿರಲು ವೆಂಟಿಲೇಟರ್ ಅಳವಡಿಸಲಾಗಿತ್ತು. ಅಸಾಧ್ಯ ನೋವೊಂದು ಕಾಲಿನ ಹಿಮ್ಮಡಿಯಿಂದ ಒತ್ತರಿಸಿದಂತೆ ಭಾಸವಾಯಿತು. ದೂರದಲ್ಲಿ ಕುಳಿತಿದ್ದ ಮಡದಿ ಹತ್ತಿರ ಓಡಿ ಬರುತ್ತಿರುವುದು ಮಂಜುಮಂಜಾಗಿ ಕಾಣಿಸಿತು. ಉಸಿರಾಟ ಸಿಗುತ್ತಿಲ್ಲ, ಮತ್ತಷ್ಟು ಕೊಸರಾಡಿದ. ಇನ್ನೆಂದು ಉಸಿರಾಟ ಸಿಗದಂತಹ ನಿರ್ವಾತ ಅವನನ್ನಾವರಿಸಿತು. ಸ್ಕ್ರೀನ್‌ನಲ್ಲಿ ಕೆಂಪು ಅಲೆಗಳು ನಿಧಾನವಾಗಿ ಟೀಂ ಎಂದು ಸದ್ದು ಬಾರಿಸುತ್ತಾ ಸರಳ ರೇಖೆಯಾಗತೊಡಗಿತು. ಎಲ್ಲರೂ ಡಾಕ್ಟರ್‌ನನ್ನು ಕರೆದರು. ಚೆಕ್ ಅಪ್ ಮಾಡಿದ ಡಾಕ್ಟರ್ ‘ಐ ಆಮ್ ಸ್ವಾರಿ’ ಎಂದು ಹೊರಟು ಹೋದ.

ಕುಮಾರ್ ಅಂತ್ಯ ಸಂಸ್ಕಾರಕ್ಕೆ ಒಂದೆರಡು ಸಹೋದ್ಯೋಗಿಗಳು ಬಂದು ಹೋದರು. ಜೀವದ ಗೆಳೆಯ ಶಂಕರ ಸ್ಯಾಲರಿ ಕೊಡದಿದ್ದರೂ ಎಲ್ಲಾ ಮುಗಿಯುವವರೆಗೂ ಜೊತೆಗಿದ್ದ. ಮರು ದಿನ ಶೋರೂಂ ನಲ್ಲಿ ಒಂದು ಮೌನ ಪ್ರಾರ್ಥನೆಯಾಯ್ತು. ಬಾಸ್‌ನ ಕಣ್ಣಲ್ಲಿ ನಾಲ್ಕು ನಾಟಕದ ಹನಿಗಳುದುರಿದವು. ಗೆಳೆಯರೇ ಹಣಕೊಟ್ಟು ಮಾಡಿಸಿದ ‘ಮತ್ತೆ ಹುಟ್ಟಿ ಬಾ’ ಎಂದು ಬರೆದ ಶ್ರದ್ಧಾಂಜಲಿ ಪೋಸ್ಟರೊಂದು ಶೋರೂಂನ ಬದಿಯಲ್ಲಿ ತೂಗು ಹಾಕಲಾಯಿತು. ಮಧ್ಯಾಹ್ನದ ಹೊತ್ತಿಗೆ ಕುಮಾರ್ ಜೊತೆ ಜಗಳವಾಡಿದ್ದ ಕಸ್ಟಮರ್ ಶೋರೂಂಗೆ ಬಂದು ಸ್ವಾರಿ ಕೇಳಿ ಹೊರಡುವಾಗ 500 ರೂ. ಕೊಟ್ಟು ಹೋದಳು. ಕುಮಾರ್ ಸಹೋದ್ಯೋಗಿಗಳೆಲ್ಲಾ ಒಳಗೊಳಗೆ ಕುದಿಯುತ್ತಾ ಹಲ್ಲು ಕಡಿಯುತ್ತಾ ಅವಳನ್ನೊಮ್ಮೆ ನೋಡಿ ಅಸಹಾಯಕರಾಗಿ ನೋಡುತ್ತಾ ನಿಂತರು. ಕುಮಾರ್ ಹತ್ತಿರದಲ್ಲೇ ನಿಂತು ‘ಬಿಡ್ರೋ ಹೋಗ್ಲಿ ಪಾಪ, ಕಸ್ಟಮರ್ ಈಸ್ ಕಿಂಗ್’ ಎಂದು ಅಣಕಿಸುತ್ತಾ ಮಾತಾನಾಡಿದಂತೆ ಭಾಸವಾಯಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)