varthabharthi


ಸುಗ್ಗಿ

ಬಾಲ್ಯದ ಗಾಯಗಳು: ಭಾಗ - 6

ದೌರ್ಜನ್ಯದ ಪರಿಣಾಮಗಳು

ವಾರ್ತಾ ಭಾರತಿ : 28 Jul, 2019
ನಿರೂಪಣೆ: ಸೌಮ್ಯಶ್ರೀ ಗೋಣೀಬೀಡು

ನನ್ನ ಚೆಲ್ಲು ಚೆಲ್ಲು ನಡತೆ, ನನ್ನ ಯಾವುದೂ ತಪ್ಪಲ್ಲ ಎನ್ನುವ ಮನೋಭಾವ ನನ್ನನ್ನು ನನ್ನ ಕಣ್ಣಲ್ಲೇ ಕೀಳಾಗಿ ಮಾಡಿತ್ತು. ನನ್ನ ಯೋಚನೆಗಳನ್ನು ಯಾರಿಗಾದರೂ ಹೇಳಿದರೆ ಅವರಿಗೆ ನಾನೆಷ್ಟು ಕೆಟ್ಟವಳು ಎಂದು ಗೊತ್ತಾಗುತ್ತದೆ ಎನಿಸುತ್ತಿತ್ತು. ಯಾರಾದರೂ ನನ್ನನ್ನು ಹೊಗಳಿದರೆ, ಅವರಿಗೆ ನಿಜವಾದ ಕುಮಾರಿ ಯಾರೆಂದು ಗೊತ್ತಿಲ್ಲ, ಇಲ್ಲವಾದರೆ ಅವರು ನನ್ನನ್ನು ಎಂದಿಗೂ, ಏತಕ್ಕೂ ಹೊಗಳುತ್ತಿರಲಿಲ್ಲ ಅನಿಸುತ್ತಿತ್ತು.

ಸೌಮ್ಯಶ್ರೀ ಗೋಣೀಬೀಡು

ಚಿಕ್ಕವಳಿದ್ದಾಗ ಬೆಂಗಳೂರಿಗೆ ಹೋಗಿ, ನನ್ನ ಸೋದರತ್ತೆಯ ಮನೆಯಲ್ಲಿ, ಎರಡು, ಮೂರು ವಾರವಿದ್ದರೂ ಆರೋಗ್ಯದಿಂದಿರುತ್ತಿದ್ದ ನಾನು, ಚಿಕ್ಕಮಗಳೂರಲ್ಲಿ, ನನ್ನ ಚಿಕ್ಕಮ್ಮ ಮತ್ತು ತೊಂದರೆ ನೀಡುತ್ತಿದ್ದ ವ್ಯಕ್ತಿಯ ಮನೆಗೆ ಹೋದಾಗ ಮಾತ್ರ ಹುಷಾರು ತಪ್ಪುತ್ತಿದ್ದೆ. ಮೊದಲ ಬಾರಿಗೆ ಅವರ ಮನೆಗೆ ಹೋದಾಗ ಬಿಡದ ತಲೆನೋವು. ಚಿಕ್ಕಮ್ಮ ನನ್ನ ಬಳಿಯೇ ಇರಬೇಕು ಎಂಬ ಆಸೆ. ನೋವು ಒಂದು ಕಡೆಯಿಂದ ಇನ್ನೊಂದು ಕಡೆಗೆ ಓಡಾಡಿದ ಅನುಭವ. ಎರಡನೆಯ ಬಾರಿ, ಜ್ವರ. ಸುಸ್ತು, ಸಂಕಟ, ಎಲ್ಲಾ ಸೇರಿ, ಅಮ್ಮ ಅಲ್ಲಿಗೆ ಬಂದು ನನ್ನನ್ನು ಮನೆಗೆ ವಾಪಸ್ ಕರೆತರುವವರೆಗೂ ಜ್ವರ. ಕೆಲವು ವರ್ಷ ಅಲ್ಲಿಗೆ ಹೋಗುವುದನ್ನೇ ಬಿಟ್ಟುಬಿಟ್ಟೆ. ಸ್ವಲ್ಪ ದೊಡ್ದವಳಾದ ಮೇಲೆ, ಹೀಗೆ ಹುಷಾರು ತಪ್ಪುತ್ತಿರಲಿಲ್ಲ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ನನ್ನ ಮೂವತ್ತನೇ ವಯಸ್ಸಿನಲ್ಲಿ ಕಲಿತ ಮೇಲೆ, ಆಗ ಹುಷಾರು ತಪ್ಪಿದ ಕಾರಣ ಆ ತೊಂದರೆ ವ್ಯಕ್ತಿ ಮಾಡಿದ ದೌರ್ಜನ್ಯ ಇರಬಹುದೇ ಎಂಬ ಅನುಮಾನ. ಆದರೆ, ಚಿಕ್ಕಮಗಳೂರಲ್ಲಿ ಅವರ ಮನೆಗೆ ಹೋದಾಗ ಏನು ನಡೆಯುತ್ತಿತ್ತು, ಈಗ ನೆನಪಿಲ್ಲ. ನನ್ನನ್ನು ಆ ಘಟನೆಗಳಿಂದ ರಕ್ಷಿಸಲು ನನ್ನ ಮೆದುಳು ಆ ನೆನಪುಗಳನ್ನು ಅಳಿಸಿಹಾಕಿರಬಹುದೇ, ಅನುಮಾನ.

ಅವರ ಮನೆ, ಗುಂಡಿಯಿಂದ ನೀರು ಹೊರುತ್ತಿದ್ದುದು, ಸಣ್ಣ ಮಲಗುವ ಕೋಣೆ, ಅಲ್ಲಿ ಅವರ ಕೈಗೆ ಸಿಗುತ್ತಿದ್ದ ನಾನು, ಎಲ್ಲಾ ನೆನಪಿದೆ. ಅವರ ರೂಮಿನ ಹೆಂಚಿನ ಸೂರು ಬಲು ಎತ್ತರಕ್ಕೆ ಇತ್ತು. ನನಗೆ ಅವರು ಸ್ನಾನ ಕೂಡ ಮಾಡಿಸುತ್ತಿದ್ದರೇನೋ, ನೆನಪಿಲ್ಲ, ಆದರೆ ಆ ಮನೆ ಚೆನ್ನಾಗಿ ನೆನಪಿದೆ. ನನ್ನ ಚಿಕ್ಕಮ್ಮನ ಎರಡನೇ ಮಗನೊಡನೆ ಆಡುತ್ತಿದ್ದುದು, ಅವನ ಅಣ್ಣ ಅವನನ್ನು ದನಕ್ಕೆ ಬಡಿದಂತೆ ಬಾರಿಸುತ್ತಿದ್ದುದು, ನಾನು ಹೆದರಿ, ಏನೂ ಸಹಾಯ ಮಾಡಲಾಗದೆ ನೋಡುತ್ತಿದ್ದುದು ನೆನಪಿದೆ. ಅವರ ಮನೆಯ ಎತ್ತರದ ಸೂರಿನ ರೂಮಿನಲ್ಲಿ, ಮಂಚ ಮತ್ತು ಗೋಡೆಯ ನಡುವಿನ ಇಕ್ಕಟ್ಟಿನ ಜಾಗದಲ್ಲಿ ಅವರ ಕೈಗೆ ಸಿಗುತ್ತಿದ್ದೆ. ಅಷ್ಟು ಗೊತ್ತು.

ಕಟ್ಟಿಹೋಗಿದ್ದ ಬಾಯಿ

ನಾನು ಹತ್ತನೇ ತರಗತಿಯಲ್ಲಿದ್ದಾಗ, ದಸರಾ ರಜದಲ್ಲಿ ನೆಂಟರ ಮನೆಗೆ ಅಮ್ಮನ ಜೊತೆ ಹೋಗಿದ್ದೆ. ಹಿಂದಿರುಗುವಾಗ ಬಂದ ವ್ಯಾನಿನಲ್ಲಿ ತುಂಬಾ ಜನ. ಯಾವುದೋ ಹುಡುಗ ಅವನ ಪಕ್ಕ ಜಾಗ ಮಾಡಿ ನನ್ನ ಅಮ್ಮನನ್ನು ಕರೆದ. ನನ್ನ ಅಮ್ಮ, ನನ್ನನ್ನು ಅಲ್ಲಿ ಕೂರಲು ಹೇಳಿದಳು. ಕೈ ಕಟ್ಟಿ ಕುಳಿತ ಆ ಹುಡುಗ ನಿಧಾನವಾಗಿ ನನ್ನ ಉದ್ದ ಲಂಗದ ಬ್ಲೌಸ್ ಎತ್ತಲಾರಂಬಿಸಿದ. ತಪ್ಪಾಗಿ ಆಗಿರಬೇಕೆಂದು ನಾನು ಅವನ ಕೈ ಮೆತ್ತಗೆ ಜಾಡಿಸಿ ಜಾಕೀಟು ಸರಿಮಾಡಿಕೊಂಡೆ. ಮತ್ತೆ ಅದೇ. ಎರಡು ಮೂರು ಸಲ ಇದು ನಡೆಯಿತು. ಏಳುತ್ತೇನೆ ಎಂದೆ. ಬೇರೆ ಜಾಗ ಇಲ್ಲ, ಅಲ್ಲೇ ಕೂರು ಎಂದಳು ಅಮ್ಮ. ಮುಂದೇನಾಯಿತು ಈಗ ನೆನಪಿಲ್ಲ. ಆದರೆ ಅಮ್ಮನಿಗೆ ಅಲ್ಲಿ ನಡೆದಿದ್ದೇನು ಹೇಳಲಿಲ್ಲ ಎಂದು ನೆನಪಿದೆ.

ಅಪರಿಚಿತನೊಬ್ಬ ನನ್ನ ಜೊತೆ ಹೀಗೆ ನಡೆದುಕೊಂಡರೂ, ಅಮ್ಮನಿಗೆ ಹೇಳಬೇಕು, ಅಥವಾ ಹೇಳಬಹುದು, ಸಹಾಯ ಕೇಳಬಹುದು ಎಂದು ನನಗೆ ಅನ್ನಿಸಲೇ ಇರಲಿಲ್ಲ.

ಪರಿಣಾಮಗಳ ತೀವ್ರತೆ

ಕಾಲೇಜಿಗೆ ಬರುವ ಹೊತ್ತಿಗೆ ಯಾರು ನನ್ನನ್ನು ನಿಜವಾಗಿ ಇಷ್ಟಪಡುತ್ತಾರೆ, ಯಾರು ಆಸೆ ತೀರಿಸಿಕೊಳ್ಳಲು ಬಯಸುತ್ತಾರೆ ಎಂದು ಗೊತ್ತಾಗುತ್ತಿರಲಿಲ್ಲ. ನನ್ನ ಅಜ್ಜಿಯ ಕಡೆಯ ಕುಟುಂಬದವರು ಎಲ್ಲಾ ಒಟ್ಟಿಗೆ ಸೇರಿದಾಗ, ಸಾಮಾನ್ಯವಾಗಿ ತಬ್ಬಿಕೊಂಡಾಗ ಯಾವುದು ಒಳ್ಳೆಯದು, ಯಾವುದು ದುರಾಲೋಚನೆಯಿಂದ ಕೂಡಿದ್ದು ಎಂದು ತಿಳಿಯದೆ ಸುಮ್ಮನೆ ಇರುತ್ತಿದ್ದೆ.

ನನ್ನನ್ನು ಚೆನ್ನಾಗಿ ಮಾತನಾಡಿಸಿದರೆ ಸಾಕು, ಅವರು ಅವರ ಹೆಂಡತಿಯ ಜೊತೆ ಚೆನ್ನಾಗಿಲ್ಲವೇನೋ ಎಂದು ಅನುಮಾನ ಪಡುತ್ತಿದ್ದೆ. ಎಲ್ಲರಿಗೂ ನನ್ನ ದೇಹದ ಮೇಲೆ ಆಸೆ ಇದೆ ಅದಕ್ಕಾಗಿಯೇ ಅವರು ನನ್ನನ್ನು ಮಾತನಾಡಿಸುತ್ತಾರೆ ಎನಿಸುತ್ತಿತ್ತು.

ನನ್ನನ್ನು ಬರೀ ನಾನಾಗಿ ಯಾರೂ ಪ್ರೀತಿಸುವುದಿಲ್ಲ, ಬರೀ ಬಳಸಿಕೊಳ್ಳುತ್ತಾರೆ ಎಂದೆನೆಸುತ್ತಿತ್ತು. ವಿದ್ಯೆ ಚೆನ್ನಾಗಿ ಹತ್ತಿದರೂ, ರೂಪ, ಗುಣ ಎರಡೂ ನನ್ನಲ್ಲಿ ಇಲ್ಲ ಎಂಬ ನಂಬಿಕೆ ಗಟ್ಟಿಯಾಗಿತ್ತು. ಯಾರ ಪ್ರೀತಿಗೂ ನಾನು ಅರ್ಹಳಲ್ಲ ಎಂದು ನಂಬಿದ್ದೆ.

ಕಾಲೇಜು ಮುಗಿದು, ಎಂ.ಬಿ.ಎ. ಓದಲು ಬೆಂಗಳೂರಿಗೆ ಬಂದೆ. ಪ್ರೀತಿಗೂ, ದೈಹಿಕ ಆಕರ್ಷಣೆಗೂ ನಡುವೆ ವ್ಯತ್ಯಾಸವಿರಲಿಲ್ಲ. ದೈಹಿಕ ಆಕರ್ಷಣೆಯಿಲ್ಲದೆ ಸಂಬಂಧಗಳಿಲ್ಲ ಅನ್ನಿಸುತ್ತಿತ್ತು. ಸ್ನೇಹಿತರ ನಡುವೆ ಕೂಡ. ಒಂದು ಗಂಡು, ಹೆಣ್ಣು, ದೈಹಿಕ ಆಕರ್ಷಣೆ ಇಲ್ಲದೆ ಇರಲು ಸಾಧ್ಯವೇ ಇಲ್ಲ ಅನ್ನಿಸುತ್ತಿತ್ತು.

ನನ್ನ ಸುತ್ತ ಸುಳಿದ ಯಾವ ಹುಡುಗರನ್ನೂ ಮನಃ ಪೂರ್ವಕವಾಗಿ ಪ್ರೀತಿಸಲಾಗಲಿಲ್ಲ. ಪ್ರೀತಿಸುವುದು ಏನೆಂದು ಗೊತ್ತಿದ್ದರೆ ತಾನೆ? ಆದರೆ ನಿನ್ನ ಪ್ರೀತಿಸುತ್ತೇನೆ ಎಂದು ಹೇಳಿದ ಎಲ್ಲ ಹುಡುಗರಿಗೂ ನಾನೂ ಅವರನ್ನು ಪ್ರೀತಿಸುವೆ ಎಂದು ಬಾಯಿಮಾತಿನಲ್ಲಿ ಉತ್ತರವನ್ನಂತೂ ಹೇಳಿದ್ದೆ.

ಕೆಲವೊಮ್ಮೆ ಈ ಪ್ರಪಂಚದ ಗಂಡಸರೆಲ್ಲಾ ದೈಹಿಕ ಸಂಪರ್ಕದಲ್ಲಿ ನಿರಾಸೆಗೂಡಿರುವವರು, ನಾನೊಬ್ಬಳೇ ಅವರ ಕಣ್ಣಿಗೆ ಅವರ ಆಸೆಗಳನ್ನು ತೀರಿಸುವಂತೆ ಕಾಣುವ ಹೆಣ್ಣು, ಎಲ್ಲರೂ ನನ್ನಿಂದ ಅದನ್ನೇ ಬಯಸುತ್ತಾರೆ, ನನ್ನ ದೇಹವನ್ನೇ ಬಯಸುತ್ತಾರೆ ಅನ್ನಿಸುತಿತ್ತು. ಹಾಗಾಗಿ ಅವರೆಲ್ಲಾ ನನ್ನನ್ನು ಆಸೆಪಡುತ್ತಾರೆ ಅನ್ನಿಸಿದರೆ, ಇನ್ನು ಕೆಲವೊಮ್ಮೆ, ನನ್ನನ್ನು ಕಂಡರೆ ಯಾರಿಗೂ ಇಷ್ಟವಿಲ್ಲ ಅನ್ನಿಸುತ್ತಿತ್ತು.

ನನ್ನ ಚೆಲ್ಲು ಚೆಲ್ಲು ನಡತೆ, ನನ್ನ ಯಾವುದೂ ತಪ್ಪಲ್ಲ ಎನ್ನುವ ಮನೋಭಾವ ನನ್ನನ್ನು ನನ್ನ ಕಣ್ಣಲ್ಲೇ ಕೀಳಾಗಿ ಮಾಡಿತ್ತು. ನನ್ನ ಯೋಚನೆಗಳನ್ನು ಯಾರಿಗಾದರೂ ಹೇಳಿದರೆ ಅವರಿಗೆ ನಾನೆಷ್ಟು ಕೆಟ್ಟವಳು ಎಂದು ಗೊತ್ತಾಗುತ್ತದೆ ಎನಿಸುತ್ತಿತ್ತು. ಯಾರಾದರೂ ನನ್ನನ್ನು ಹೊಗಳಿದರೆ, ಅವರಿಗೆ ನಿಜವಾದ ಕುಮಾರಿ ಯಾರೆಂದು ಗೊತ್ತಿಲ್ಲ, ಇಲ್ಲವಾದರೆ ಅವರು ನನ್ನನ್ನು ಎಂದಿಗೂ, ಏತಕ್ಕೂ ಹೊಗಳುತ್ತಿರಲಿಲ್ಲ ಅನಿಸುತ್ತಿತ್ತು.

ಎಂ.ಬಿ.ಎ ಮುಗಿಸಿ ಕೆಲಸಕ್ಕೆ ಸೇರಿ ದುಡ್ಡುಮಾಡಬೇಕು ಅಷ್ಟೇ ನನ್ನ ಗುರಿಯಾಗಿತ್ತು. ಕೆಲಸ ಸಿಗುವ ಬಗ್ಗೆ ಹೆದರಿದ್ದ ನಾನು, ಯಾವುದಾದರೂ ಕೆಲಸದಲ್ಲಿರುವ ಹುಡುಗ ನನ್ನ ಬಾಯ್ ಫ್ರೆಂಡ್ ಆದರೆ ಸುಲಭಕ್ಕೆ ಕೆಲಸ ಸಿಗಬಹುದೆಂದು, ಒಬ್ಬ ಹುಡುಗನ ಪ್ರೀತಿಗೆ ಒಪ್ಪಿ, ಅವನನ್ನು ಪ್ರೀತಿಸುತ್ತೇನೆ ಎಂದಿದ್ದೆ. ಅವನು ಮದುವೆಯಾಗು ಎಂದ. ಇಲ್ಲಾ ನಿನ್ನ ಅಪ್ಪನಿಗೆ ಫೋನ್ ಮಾಡಿ ನಮ್ಮ ನಡುವೆ ಇರುವ ಸಂಬಂಧ ಹೇಳುತ್ತೇನೆ ಎಂದು ಹೆದರಿಸಿದ.

ಗೊತ್ತಿರದ ದೇವರಿಗಿಂತ, ಗೊತ್ತಿರುವ ದೆವ್ವ ಮೇಲು ಎಂದು ಅವನನ್ನು ಮದುವೆಯೂ ಆದೆ. (ಮದುವೆಯಾಗಿದ್ದು ಅವನನ್ನು ದೆವ್ವಕ್ಕೆ ಹೋಲಿಸಿದ ಮೇಲೆ, ಅವನ ಗುಣಗಳು ಗೊತ್ತಿದ್ದೂ, ಈ ಮದುವೆ ಬಹುಕಾಲ ಬಾಳುವುದಿಲ್ಲ ಎಂಬ ಅನುಮಾನ ಇದ್ದರೂ). ಅವನು ನನ್ನನ್ನು ಪ್ರೀತಿಸುತ್ತೇನೆ ಎಂದ. ನಿನ್ನ ಕಾಯುತ್ತೇನೆ, ರಕ್ಷಿಸುತ್ತೇನೆ, ಕಾಪಾಡುತ್ತೇನೆ ಎಂದ. ನೀನು ನನ್ನವಳು ಮಾತ್ರ. ಯಾರೂ ನಿನ್ನನ್ನು ನೋಡಲೂ ಬಾರದು ಹಾಗೆ ನಿನ್ನನ್ನು ಪೊರೆಯುತ್ತೇನೆ ಎಂದ. ಅವನನ್ನು ಮದುವೆಯಾದೆ. ಅಡಿಪಾಯ ಸರಿಯಿಲ್ಲದ ಮನೆಯಂತೆ ನಮ್ಮ ಮದುವೆ ಮುರಿದುಬಿತ್ತು.

ಮುಂದುವರಿಯುತ್ತದೆ.....

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)