varthabharthi

ಸಿನಿಮಾ

ಗಣೇಶ್ ನಟನೆಯ ‘ಗೀತಾ’ ಚಿತ್ರ ದೊಡ್ಡ ಮೊತ್ತಕ್ಕೆ ಮಾರಾಟ

ವಾರ್ತಾ ಭಾರತಿ : 28 Jul, 2019

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಗೀತಾ’ದ ಚಿತ್ರೀಕರಣ ಮುಕ್ತಾಯ ಗೊಂಡಿದೆ. ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದು ವಿಜಯ್ ನಾಗೇಂದ್ರ ಅವರ ಚೊಚ್ಚಲ ನಿರ್ದೇಶನದ ಚಿತ್ರ. ರೊಮ್ಯಾಂಟಿಕ್-ಸಾಹಸಮಯ ‘ಗೀತಾ’ ಚಿತ್ರದಲ್ಲಿ ಮೂವರು ನಾಯಕಿಯರು. ಪ್ರಯಾಗ್ ಮಾರ್ಟಿನ್, ಪಾರ್ವತಿ ಅರುಣ್ ಹಾಗೂ ಶಾನ್ವಿ ಶ್ರೀವಾತ್ಸವ. ಚಿತ್ರಕ್ಕೆ ಗೋಲ್ಡನ್ ಫಿಲ್ಮ್ಸ್ ಹಾಗೂ ನಿರ್ಮಾಪಕ ಸೈಯದ್ ಸಲಾಮ್ ಹಣ ಹೂಡಿದ್ದಾರೆ. ಹರಿಕೃಷ್ಣ ಅವರ ಸಂಗೀತ ಹಾಗೂ ಶ್ರೀಶಾ ಕುಡುವಲ್ಲಿ ಅವರ ಛಾಯಾಗ್ರಹಣ ಇದೆ. ಚಿತ್ರದ ಆಡಿಯೊ ಹಾಗೂ ಟೀಸರ್ ಅನ್ನು ಅದ್ದೂರಿ ಯಾಗಿ ಬಿಡುಗಡೆ ಮಾಡಲು ಚಿತ್ರದ ನಿರ್ಮಾಪಕರು ಚಿಂತಿಸುತ್ತಿದ್ದಾರೆ. 

ಈ ಕಾರ್ಯಕ್ರಮ ಆಗಸ್ಟ್ ಮೊದಲ ವಾರದಲ್ಲಿ ನಡೆಯಲಿದೆ. ಕಾರ್ಯಕ್ರಮದ ದಿನಾಂಕ ಶೀಘ್ರ ಪ್ರಕಟವಾಗಲಿದೆ. ಈ ನಡುವೆ, ಚಿತ್ರ ಡಿಜಿಟಲ್ ಫ್ಲಾಟ್‌ಫಾರ್ಮ್ ನಲ್ಲಿ ಉತ್ತಮ ಬೆಲೆಗೆ ಈಗಾಗಲೇ ಮಾರಾಟವಾಗಿದೆ ಎಂದು ಹೇಳಲಾಗುತ್ತಿದೆ. ಚಿತ್ರದ ಹಕ್ಕನ್ನು 2.75 ಕೋಟಿ ರೂಪಾಯಿಗೆ ಅಮೆಝಾನ್ ಪಡೆದುಕೊಂಡಿದೆ ಎಂದು ಮೂಲವೊಂದು ತಿಳಿಸಿದೆ. ಇದು ಡಿಜಿಟಲ್ ಫ್ಲಾಟ್‌ಫಾರ್ಮ್‌ನಲ್ಲಿ ಕನ್ನಡ ಚಿತ್ರವೊಂದರ ಹಕ್ಕು ಮಾರಾಟವಾದ ಅತ್ಯಧಿಕ ಮೊತ್ತ. ‘ಗೀತಾ’ ಚಿತ್ರದೊಂದಿಗೆ ಗಣೇಶ್ ‘ಗಿಮಿಕ್’ನಲ್ಲಿ ಕೂಡ ನಟಿಸುತ್ತಿದ್ದಾರೆ. ನಾಗಣ್ಣ ನಿರ್ದೇಶನದ ಈ ಚಿತ್ರ ಹಾರರ್-ಕಾಮಿಡಿ. ಈ ಚಿತ್ರದ ಹೆಚ್ಚಿನ ಭಾಗವನ್ನು ಶ್ರೀಲಂಕಾದ ಮನೆಯೊಂದರಲ್ಲಿ ಚಿತ್ರೀಕರಿಸಲಾಗಿದೆ. ಕೆಲವು ಭಾಗವನ್ನು ಮೈಸೂರು ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ‘ಗಿಮಿಕ್’ ಗಣೇಶ್ ಅವರ ಮೊದಲ ಹಾರರ್-ಕಾಮಿಡಿ ಚಿತ್ರ. ‘ಗಿಮಿಕ್’ ಚಿತ್ರಕ್ಕೆ ದೀಪಕ್ ಸಮಿ ಅವರು ಸಮಿ ಪಿಕ್ಚರ್ಸ್‌ ಅಡಿಯಲ್ಲಿ ಹಣ ಹೂಡುತ್ತಿದ್ದಾರೆ. ನಾಯಕಿ ರೋನ್ಸಿಯಾ ಸಿಂಗ್‌ಗೆ ಕನ್ನಡ ಚಿತ್ರರಂಗದಲ್ಲಿ ಇದು ಚೊಚ್ಚಲ ಚಿತ್ರ. ಚಿತ್ರದಲ್ಲಿ ರವಿಶಂಕರ್ ಗೌಡ, ಸಾಧು ಕೋಕಿಲಾ, ಶೋಭರಾಜ್ ಹಾಗೂ ಸುಂದರ್ ರಾಜ್ ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)