varthabharthi


ವೈವಿಧ್ಯ

ಪಕ್ಷಾಂತರ ಕಾನೂನು: ಹೇಗೆ ಸಾಧ್ಯ?

ವಾರ್ತಾ ಭಾರತಿ : 29 Jul, 2019
ಯೋಗೇಂದ್ರ ಯಾದವ್

ಕರ್ನಾಟಕದ ಸಮ್ಮಿಶ್ರ ಸರಕಾರದ ಪತನವು ಪಕ್ಷಾಂತರ ನಿಷೇಧ ಕಾನೂನನ್ನು ಇನ್ನಷ್ಟು ಕಟ್ಟುನಿಟ್ಟುಗೊಳಿಸಬೇಕು ಎಂಬ ಹಳೆಯ ಬೇಡಿಕೆಗೆ ಮತ್ತೆ ಜೀವ ತುಂಬಿದೆ. ವಿಷಾದದ ವಿಷಯವೆಂದರೆ ಇಲ್ಲಿ ಕಾಯಿಲೆಗಿಂತ ಚಿಕಿತ್ಸೆಯೇ ಕೆಟ್ಟದ್ದಾಗಿದೆ.
ಮೇಲ್ನೋಟಕ್ಕೆ ಈ ಬೇಡಿಕೆ ಸರಿ ಎಂದು ಯಾರಿಗಾದರೂ ಅನ್ನಿಸುತ್ತದೆ. ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರಕಾರವನ್ನು ಉರುಳಿಸಿರುವ ರೀತಿಯು ರಾಷ್ಟ್ರೀಯ ಅವಮಾನವಾಗಿದೆ. ಈ ಸರಕಾರವು ಹೆಮ್ಮೆ ಪಡುವಂತಹದ್ದೇನಾಗಿರಲಿಲ್ಲ. ರಾಜಕಾರಣಿಗಳ ಸ್ವಾರ್ಥ,ಲಾಲಸೆಗಳ ಪರಿಣಾಮವಾಗಿ ಅಸ್ತಿತ್ವಕ್ಕೆ ಬಂದಿದ್ದ ಈ ಸರಕಾರವು ಆರಂಭದಿಂದಲೂ ಪರಸ್ಪರ ಅಪನಂಬಿಕೆಗಳು ಮತ್ತು ದೈನಂದಿನ ನಾಟಕಗಳ ನಡುವೆಯೇ ಜೀವ ಉಳಿಸಿಕೊಂಡು ಬಂದಿತ್ತು. ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಈ ಸರಕಾರವೇ ಒಂದು ಪ್ರಹಸನವಾಗಿತ್ತು. ಆದರೆ ಅದನ್ನು ಉರುಳಿಸಿದ ರೀತಿಯು ಅತ್ಯಂತ ಕೆಟ್ಟದ್ದಾಗಿತ್ತು. ಇದೇ ಕಾರಣದಿಂದ ಇದೊಂದು ರಾಷ್ಟ್ರೀಯ ಅವಮಾನವಾಗಿದೆ. ಈ ಪತನವು ದಿಲ್ಲಿಯಲ್ಲಿನ ಅಧಿಕಾರ ಬಲದ ಬೆಂಬಲದೊಂದಿಗೆ ಹಣಬಲವು ಏನನ್ನಾದರೂ ಖರೀದಿಸಲು ಸಮರ್ಥವಾಗಿದೆ ಎನ್ನುವುದನ್ನು ದೃಢಪಡಿಸಿದೆ. ಇಲ್ಲಿ ಮತದಾರರು ಲೆಕ್ಕಕ್ಕೇ ಇಲ್ಲ. ಇದೇ ಕಾರಣವಾಗಿ ನೈತಿಕ ಆಕ್ರೋಶವೊಂದು ಜನರಲ್ಲಿ ಕಂಡು ಬರುತ್ತಿದೆ. ಇದು ಸಂವಿಧಾನದಲ್ಲಿ ಸೇರ್ಪಡೆಗೊಳಿಸಲಾಗಿರುವ ಪಕ್ಷಾಂತರ ನಿಷೇಧ ನಿಬಂಧನೆಗಳ ಅಣಕ ಎನ್ನುವುದರಲ್ಲಿ ಯಾವುದೇ ಶಂಕೆಯಿಲ್ಲ.
ಹೀಗಾಗಿಯೇ ಪಕ್ಷಾಂತರವನ್ನು ತಡೆಯಲು ಹೆಚ್ಚು ಕಠಿಣ ಕಾನೂನುಗಳನ್ನು ತರಬೇಕು ಎಂಬ ಬೇಡಿಕೆಯು ಈ ಇಡೀ ನಾಟಕಕ್ಕೆ ಮೊದಲ ಪ್ರತಿಕ್ರಿಯೆಯಾಗಿದೆ. ಆದರೆ ಈಗಾಗಲೇ ಇರುವ ಕಾನೂನುಗಳು ಕಠೋರವಲ್ಲದಿದ್ದರೂ ಸಾಕಷ್ಟು ಕಟ್ಟುನಿಟ್ಟಾಗಿಯೇ ಇವೆ. ಪ್ರಸಕ್ತ ಕಾನೂನು ವಿಶ್ವಾಸಮತ ಸೇರಿದಂತೆ ಸಂಸತ್ತಿನಲ್ಲಿ ಮಂಡನೆಯಾಗುವ ಯಾವುದೇ ನಿರ್ಣಯದ ಮೇಲೆ ನಿರ್ದಿಷ್ಟವಾಗಿ ಹೀಗೆಯೇ ಮತ ಚಲಾಯಿಸುವಂತೆ ತಮ್ಮ ಪ್ರತಿನಿಧಿಗಳಿಗೆ ಆದೇಶಿಸಲು ಅಥವಾ ಸಚೇತಕಾಜ್ಞೆಯನ್ನು ಹೊರಡಿಸಲು ರಾಜಕೀಯ ಪಕ್ಷಗಳಿಗೆ ಅವಕಾಶ ನೀಡಿದೆ. ಸಚೇತಕಾಜ್ಞೆಯನ್ನು ಪಾಲಿಸದ ಸದಸ್ಯ ಸದನದ ಸದಸ್ಯತ್ವಕ್ಕೆ ಅನರ್ಹಗೊಳ್ಳುತ್ತಾನೆ. ಮೊದಲು ಪಕ್ಷವೊಂದರ ಶೇ.50 ರಷ್ಟು ಶಾಸಕರು ಪಕ್ಷಾಂತರ ಮಾಡಿದರೆ ಅದಕ್ಕೆ ಪಕ್ಷಾಂತರ ನಿಷೇಧ ಕಾಯ್ದೆಯಿಂದ ವಿನಾಯಿತಿಯಿತ್ತು. ಆದರೆ 2003ರಲ್ಲಿ ಈ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಕಾಯ್ದೆಯನ್ನು ಇನ್ನಷ್ಟು ಕಠಿಣಗೊಳಿಸಲಾಗಿದೆ. ಹೀಗಾಗಿ ಈಗ ಪಕ್ಷಾಂತರಗೊಳ್ಳುವ ಶಾಸಕರು ಅಥವಾ ಸಂಸದರು ಅನರ್ಹಗೊಳ್ಳುವ ಅಪಾಯದಿಂದ ಪಾರಾಗಬೇಕಾದರೆ ಅಂತಹವರ ಸಂಖ್ಯೆ ಪಕ್ಷದ ಒಟ್ಟು ಶಾಸಕರ ಮೂರನೇ ಎರಡರಷ್ಟಿರಬೇಕಾಗುತ್ತದೆ.
ಪ್ರಸ್ತುತ ಕಾಯ್ದೆಯಲ್ಲಿಯ ಲೋಪದೋಷಗಳು
ಯಾವುದೇ ಕಾನೂನಾದರೂ ಅದರಲ್ಲಿ ಏನಾದರೂ ಲೋಪದೋಷಗಳು ಇದ್ದೇ ಇರುತ್ತವೆ. ಈಗಿನ ಪಕ್ಷಾಂತರ ನಿಷೇಧ ಕಾಯ್ದೆಯ ನಿಯಮಗಳು ಶಾಸಕಾಂಗ ಪಕ್ಷದ ಮೂರನೇ ಎರಡರಷ್ಟು ಸದಸ್ಯರು ಪಕ್ಷದಿಂದ ಅಧಿಕೃತವಾಗಿ ಬೇರ್ಪಡಲು ಅವಕಾಶವನ್ನು ನೀಡುತ್ತದೆ. ಇತ್ತೀಚೆಗೆ ಗೋವಾದ ಕಾಂಗ್ರೆಸ್ ಶಾಸಕರು ಬಿಜೆಪಿಯನ್ನು ಸೇರಲು ಮತ್ತು ತೆಲಂಗಾಣದಲ್ಲಿಯ ಕಾಂಗ್ರೆಸ್ ಶಾಸಕರು ಆಡಳಿತ ಟಿಆರ್‌ಎಸ್‌ನ್ನು ಸೇರಲು ಇದೇ ನಿಯಮವನ್ನು ಬಳಸಿಕೊಂಡಿದ್ದರು. ಈ ಮಿತಿಯನ್ನು ಶೇ.100ಕ್ಕೆ ಏರಿಸುವುದೊಂದೇ ಈಗ ಕಾಯ್ದೆಯನ್ನು ಇನ್ನಷ್ಟು ಕಠಿಣಗೊಳಿಸಲು ಇರುವ ಏಕೈಕ ಮಾರ್ಗವಾಗಿದೆ. ಅಂದರೆ ಯಾವುದೇ ಚುನಾಯಿತ ಶಾಸಕ ಅಥವಾ ಸಂಸದ ತನ್ನ ಪಕ್ಷವನ್ನು ತೊರೆಯುವುದನ್ನು ಕಾನೂನುಬಾಹಿರವಾಗಿಸುವುದು.
ಕರ್ನಾಟಕದಲ್ಲಿ 2008ರ ವಿಧಾನಸಭಾ ಚುನಾವಣೆಗಳ ಬಳಿಕ ತನ್ನ ’ಆಪರೇಷನ್ ಕಮಲ’ದ ಮೂಲಕ ಈ ಕಾಯ್ದೆಯಲ್ಲಿನ ಇನ್ನೊಂದು ಲೋಪವನ್ನು ಬಿಜೆಪಿಯು ಕಂಡುಕೊಂಡಿತ್ತು. ಅದೆಂದರೆ ಶಾಸಕನೋರ್ವ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಇನ್ನೊಂದು ಪಕ್ಷಕ್ಕೆ ಸೇರಿ ಮರುಚುನಾವಣೆಯಲ್ಲಿ ಆ ಪಕ್ಷದಿಂದ ಗೆದ್ದು ಮತ್ತೆ ಶಾಸಕನಾಗುವುದು. ಈ ಬಾರಿಯೂ ಬಿಜೆಪಿಯು ಈ ವಿಧಾನವನ್ನು ಬಳಸಿ ಮೈತ್ರಿಕೂಟದ ಅತೃಪ್ತ ಶಾಸಕರಿಂದ ರಾಜೀನಾಮೆಗಳನ್ನು ಕೊಡಿಸಿತ್ತು. ಭಾರೀ ಮೊತ್ತದ ಹಣ ಕೈಗಳನ್ನು ಬದಲಾಯಿಸಿತ್ತು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ರಾಜೀನಾಮೆಗಳ ಬಳಿಕ ಮರುಚುನಾವಣೆಗಳು ನಡೆಯುತ್ತವೆ ಮತ್ತು ಅವು ಯಾವುದೇ ರೀತಿಯಲ್ಲಿಯೂ ನ್ಯಾಯಸಮ್ಮತವಲ್ಲ. ಇದನ್ನು ಕಾನೂನುಬದ್ಧವಾಗಿ ತಡೆಯಲು ಇರುವ ಏಕೈಕ ಮಾರ್ಗವೆಂದರೆ ರಾಜೀನಾಮೆ ನೀಡುವುದನ್ನೇ ಕಾನೂನು ಬಾಹಿರಗೊಳಿಸುವುದು. ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿದವರು ನಿರ್ದಿಷ್ಟ ಅವಧಿಗೆ ಚುನಾವಣೆಗಳಲ್ಲಿ ಸ್ಪರ್ಧಿಸುವುದರಿಂದ ಅನರ್ಹಗೊಳಿಸುವುದನ್ನೇ ಈಗ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಹೆಚ್ಚು ಕಠಿಣಗೊಳಿಸಬೇಕು ಎನ್ನುವವರು ಬಯಸುತ್ತಿದ್ದಾರೆ.
ಆದರೆ ಇದು ನಿರೀಕ್ಷಿತ ಫಲ ನೀಡುತ್ತದೆ ಎಂದೇನಿಲ್ಲ. ನಾವೀಗ ಮಾಡಬಹುದಾದ್ದೆಂದರೆ ಬಹುಶಃ ಇನ್ನಷ್ಟು ನಿರ್ಬಂಧಗಳನ್ನು ಸೇರಿಸಲು ಹಾಲಿ ಕಾನೂನನ್ನು ಕೊಂಚ ಪರಿಷ್ಕರಿಸುವುದು. ಉದಾಹರಣೆಗೆ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಇನ್ನೊಂದು ಪಕ್ಷದಿಂದ ಆಯ್ಕೆಯಾದ ಶಾಸಕನನ್ನು ಒಂದು ವರ್ಷದ ಅವಧಿಗೆ ಸಚಿವ ಸ್ಥಾನ ಅಥವಾ ಬೇರೆ ಸ್ಥಾನಕ್ಕೆ ಅನರ್ಹನನ್ನಾಗಿಸುವುದು. ಆದರೆ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಇತರ ಯಾವುದೇ ರೀತಿಯಲ್ಲಿ ಬಲಗೊಳಿಸುವುದು ಉದ್ದೇಶ ಸಾಧನೆಗೆ ಪೂರಕವಾಗುವುದಿಲ್ಲ. ಅದು ಸಮಸ್ಯೆಗಳನ್ನು ಮತ್ತು ಗೋಜಲುಗಳನ್ನು ಇನ್ನಷ್ಟು ತೀವ್ರಗೊಳಿಸುತ್ತದೆ,ಅಷ್ಟೇ.
 ಪಕ್ಷಾಂತರ ತಡೆ ಸಾಧ್ಯವಿಲ್ಲ
ಪಕ್ಷಾಂತರವನ್ನು ತಡೆಯಲು ಯಾವುದೇ ಲೋಪರಹಿತ ಪರಿಹಾರವಿಲ್ಲ. ಲೋಪಗಳನ್ನು ಎಷ್ಟೇ ತಿದ್ದಿದರೂ ಪಕ್ಷಾಂತರ ಮಾಡಲು ನಿರ್ಧರಿಸಿರುವ ಶಾಸಕರನ್ನು ತಡೆಯಲು ಸಾಧ್ಯವಿಲ್ಲ. ಹೆಚ್ಚು ಕಠಿಣವಾದ ಕಾನೂನು ಪಕ್ಷಾಂತರದ ವೆಚ್ಚವನ್ನು ಹೆಚ್ಚಿಸುತ್ತದೆ ಅಷ್ಟೇ. ಅದು ಪಕ್ಷಾಂತರಗೊಳ್ಳಲು ಬೆಲೆಯನ್ನು ಹೆಚ್ಚಿಸುತ್ತದೆ. ಯಾವುದೇ ಸಂದರ್ಭದಲ್ಲಿಯೂ ಪಕ್ಷದಲ್ಲಿ ಯಾವುದೇ ವಿಭಜನೆಗೆ ಅವಕಾಶವಿರದಂತೆ ಕಾನೂನಿಗೆ ತಿದ್ದುಪಡಿ ತರುವುದಾದರೆ ಆಗ ಪ್ರತಿಯೊಬ್ಬ ಪಕ್ಷಾಂತರಿಯೂ ರಾಜೀನಾಮೆಯ ಮಾರ್ಗವನ್ನೇ ಅನುಸರಿಸುತ್ತಾನೆ. ಪ್ರತಿ ರಾಜೀನಾಮೆಗೂ ಅನರ್ಹತೆ ದಂಡನೆಯಾದರೆ ಪಕ್ಷಾಂತರಿಗಳು ತಮಗಾದ ನಷ್ಟಕ್ಕೆ ಪ್ರತಿಯಾಗಿ ಹೆಚ್ಚಿನ ಬೆಲೆಯನ್ನು ಕೇಳಲು ಆರಂಭಿಸುತ್ತಾರೆ. ಇವೆಲ್ಲವೂ ಪಕ್ಷಾಂತರವನ್ನು ನಿರುತ್ತೇಜಿಸುತ್ತವೆ ನಿಜ,ಆದರೆ ಅದನ್ನು ಸಂಪೂರ್ಣವಾಗಿ ತಡೆಗಟ್ಟುವುದಿಲ್ಲ.
ಒಂದು ವೇಳೆ ನಾವು ಇದರಲ್ಲಿ ಯಶಸ್ವಿಯಾದರೂ ಅದಕ್ಕಾಗಿ ದುಬಾರಿ ಬೆಲೆಯನ್ನು ತೆರಬೇಕಾಗುತ್ತದೆ. ಬಹುಶಃ ಹಿರಿಯ ಸಮಾಜವಾದಿ ದಿ.ಮಧು ಲಿಮಯೆ ಅವರು ಪಕ್ಷಾಂತರ ನಿಷೇಧ ಕಾಯ್ದೆಯ ಅಪಾಯಗಳ ವಿರುದ್ಧ ಧ್ವನಿಯೆತ್ತಿದ್ದ ಏಕೈಕ ವ್ಯಕ್ತಿಯಾಗಿದ್ದರು. ಈ ಕಾಯ್ದೆಯು ಅಂತರ್-ಪಕ್ಷೀಯ ಪ್ರಜಾಪ್ರಭುತ್ವವನ್ನು ಮತ್ತು ಜನ ಪ್ರತಿನಿಧಿಯ ಸ್ವಾತಂತ್ರವನ್ನು ಕೊನೆಗೊಳಿಸುತ್ತದೆ ಎಂದು ಅವರು ಹೇಳಿದ್ದರು. ಅವರ ನಿಲುವು ಸರಿಯಾಗಿತ್ತು ಎನ್ನುವುದನ್ನು ಇತಿಹಾಸವು ಸಾಬೀತುಗೊಳಿಸಿದೆ. ಪಕ್ಷಾಂತರ ನಿಷೇಧ ಕಾಯ್ದೆ ಮತ್ತು ಅದನ್ನು ಇನ್ನಷ್ಟು ಬಿಗಿಗೊಳಿಸಲು ನಂತರ ಕೈಗೊಳ್ಳಲಾದ ಕ್ರಮಗಳು ಚುನಾಯಿತ ಪ್ರತಿನಿಧಿಗಳ ಮೇಲೆ ಪಕ್ಷಗಳ ನಾಯಕತ್ವಗಳು ಬಿಗಿಹಿಡಿತವನ್ನು ಸಾಧಿಸಲು ಕಾರಣವಾಗಿವೆ. ಈ ಪ್ರತಿನಿಧಿಗಳು ತಮ್ಮ ನಾಯಕರ ಅವಕೃಪೆಗೆ ಗುರಿಯಾದರೆ ಅವರು ಎಲ್ಲಿಯೂ ಸಲ್ಲುವುದಿಲ್ಲ ಮತ್ತು ಅವರನ್ನು ಆರಿಸಿದ ಮತದಾರರು ಸಹ.
ಮತದಾರರಿಂದ ಮಾತ್ರ ಪರಿಹಾರ ಸಾಧ್ಯ
ಇಂದು ಪಕ್ಷವೊಂದರಲ್ಲಿಯ ಭಿನ್ನಮತೀಯರ ಎದುರು ಎರಡು ಆಯ್ಕೆಗಳಿವೆ;ಪಕ್ಷದ ವಿರುದ್ಧ ಬಂಡೇಳುವುದು ಅಥವಾ ರಾಜೀನಾಮೆ ನೀಡುವುದು. ಪಕ್ಷದ ಮೂರನೇ ಎರಡರಷ್ಟು ಶಾಸಕರು ಅಥವಾ ಸಂಸದರೂ ಪಕ್ಷದಿಂದ ಬೇರೆಯಾಗಲು ಅವಕಾಶವಿರದಂತೆ ಕಾನೂನಿಗೆ ತಿದ್ದುಪಡಿ ತಂದರೆ ಇದು ಇಡೀ ಶಾಸಕಾಂಗ ಪಕ್ಷವೇ ನಿಷ್ಠೆಯನ್ನು ಬದಲಿಸುವಂತೆ ಮಾಡುವ,ಯಾರೂ ಬಯಸದ ಹಾಸ್ಯಾಸ್ಪದ ಸ್ಥಿತಿಗೆ ಕಾರಣವಾಗಬಹುದು. ರಾಜೀನಾಮೆ ನೀಡಿದವರನ್ನು ದಂಡಿಸಲು ಕಾನೂನನ್ನು ತಿದ್ದುಪಡಿಗೊಳಿಸಿದರೆ ಭಿನ್ನಮತೀಯನಿಗಿರುವ ಕೊನೆಯ ಆಯ್ಕೆಯೂ ಇಲ್ಲವಾಗುತ್ತದೆ. ಪಕ್ಷಾಂತರಕ್ಕೆ ಬಾಗಿಲುಗಳನ್ನು ನಾವು ಮುಚ್ಚಬಹುದು,ಆದರೆ ಪಕ್ಷದೊಳಗೆ ಉಳಿದುಕೊಂಡಿರ ಬಹುದಾದ ಚೂರುಪಾರು ಆಂತರಿಕ ಪ್ರಜಾಪ್ರಭುತ್ವವನ್ನು ನಿರ್ಬಂಧಿಸುವ ಮೂಲಕ ನಮ್ಮ ಹೋರಾಟವು ಇನ್ನಷ್ಟು ದೊಡ್ಡ ಕೆಡುಕನ್ನು ಸೃಷ್ಟಿಸುತ್ತದೆ.
ಹೀಗಿದ್ದರೆ ಇದಕ್ಕೆ ನಿಜಕ್ಕೂ ಪರಿಹಾರವೇನು? ಪ್ರಜಾಪ್ರಭುತ್ವದಲ್ಲಿ ಇಂತಹ ಸಮಸ್ಯೆಗಳಿಗೆ ಏಕೈಕ ಪರಿಹಾರವೆಂದರೆ ಜನರ ಬಳಿ ಮತ್ತೆ ತೆರಳುವುದು. ವ್ಯಕ್ತಿಯನ್ನು ಹೆಸರಿಸುವುದು ಮತ್ತು ಅವಮಾನಿಸುವುದು ಯಾವುದೇ ಕಾನೂನು ಪರಿಹಾರಕ್ಕಿಂತ ಹೆಚ್ಚು ಶಕ್ತಿಶಾಲಿ ತಂತ್ರವಾಗಿದೆ. ಮತದಾರರೇ ಪಕ್ಷಾಂತರಿಯನ್ನು ಶಿಕ್ಷಿಸುವಂತೆ ಮಾಡುವುದೇ ಪಕ್ಷಾಂತರವನ್ನು ತಡೆಯಲು ಏಕೈಕ ಮಾರ್ಗವಾಗಿದೆ. ತನ್ನ ರಾಜಕೀಯ ವೃತ್ತಿಜೀವನವು ಅವಧಿಗೆ ಮುನ್ನವೇ ಅಂತ್ಯಗೊಳ್ಳುವುದನ್ನು ಯಾವುದೇ ರಾಜಕೀಯ ಮುಂದಾಳು ಬಯಸುವುದಿಲ್ಲ. ಹೀಗಾಗಿ ಪಕ್ಷವನ್ನು ಬದಲಿಸುವುದು ತಾನು ಮತದಾರರ ಬಳಿ ಮತ್ತೆ ಹೋಗುವುದನ್ನು ಮತ್ತು ಪುನರಾಯ್ಕೆಗೊಳ್ಳುವುದನ್ನು ಅಸಾಧ್ಯವಾಗಿಸುತ್ತದೆ ಎನ್ನುವುದು ಆತನಿಗೆ/ಆಕೆಗೆ ಗೊತ್ತಿದ್ದರೆ ಆತ/ಆಕೆ ಪಕ್ಷಾಂತರದ ಚಿಂತನೆಯನ್ನು ಮಾಡುವುದಿಲ್ಲ. ಕರ್ನಾಟಕದ ಪಕ್ಷಾಂತರಿಗಳು ಎಲ್ಲಿಯವರೆಗೆ ಜನರಿಂದ ಪುನರಾಯ್ಕೆಗೊಳ್ಳುವ ನಿರೀಕ್ಷೆಯನ್ನು ಹೊಂದಿರುತ್ತಾರೋ ಅಲ್ಲಿಯವರೆಗೆ ಪಕ್ಷಾಂತರವನ್ನು ನೀವು ತಡೆಯಲು ಸಾಧ್ಯವಿಲ್ಲ. ನೀವು ಪ್ರಜಾಪ್ರಭುತ್ವವನ್ನು ಜನರಿಂದ ಬೇರ್ಪಡಿಸಲು ಸಾಧ್ಯವಿಲ್ಲ. ರಾಜಕೀಯದಲ್ಲಿ ಲೋಪರಹಿತ ಪರಿಹಾರಗಳ ಹುಡುಕಾಟಕ್ಕೆ ಅರ್ಥವಿಲ್ಲ.
 ಕೃಪೆ: theprint.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)