varthabharthi


ವಿಶೇಷ-ವರದಿಗಳು

ಭಾರೀ ಟೀಕೆಗೊಳಗಾದ ‘ಮ್ಯಾನ್ ವರ್ಸಸ್ ವೈಲ್ಡ್’ ಪ್ರೋಮೋ

ಪುಲ್ವಾಮ ದಾಳಿಯ ನಂತರವೂ ಪ್ರಧಾನಿ ಶೂಟಿಂಗ್ ಮುಂದುವರಿಸಿದ್ದರೇ?: ಹಳೆ ವಿವಾದಕ್ಕೆ ಹೊಸ ತಿರುವು!

ವಾರ್ತಾ ಭಾರತಿ : 29 Jul, 2019

ಆಗಸ್ಟ್ 12ರಂದು ಪ್ರಸಾರವಾಗಲಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಬ್ರಿಟಿಷ್ ನಿರೂಪಕ ಬೇರ್ ಗ್ರಿಲ್ಸ್ ಕಾಣಿಸಿಕೊಳ್ಳಲಿರುವ ‘ಡಿಸ್ಕವರಿ ಇಂಡಿಯಾ’ ವಾಹಿನಿಯ ‘ಮ್ಯಾನ್ ವರ್ಸಸ್ ವೈಲ್ಡ್' ಸರಣಿಯ ಪ್ರಮೋಶನಲ್ ವೀಡಿಯೋ ಸೋಮವಾರ ಬಿಡುಗಡೆಗೊಳ್ಳುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷ ಈ ಹಿಂದೆ ಮಾಡಿದ್ದ ಗಂಭೀರ ಆರೋಪವೊಂದು ಮತ್ತೆ ಗರಿಗೆದರಿದೆ.

ಫೆಬ್ರವರಿ 14ರಂದು ಪುಲ್ವಾಮ ಉಗ್ರ ದಾಳಿಯಲ್ಲಿ 50 ಮಂದಿ ಸಿಆರ್ ಪಿಎಫ್ ಯೋಧರು ಹುತಾತ್ಮರಾದ ಹಲವು ಗಂಟೆಗಳ ನಂತರವೂ ಪ್ರಧಾನಿ ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕಿನಲ್ಲಿ ಶೂಟಿಂಗ್ ನಲ್ಲಿ ಭಾಗವಹಿಸಿದ್ದರು ಎಂದು ಕಾಂಗ್ರೆಸ್ ಆಗ ಆರೋಪಿಸಿತ್ತು.

“ಇಡೀ ದೇಶ ನಮ್ಮ ಜವಾನರ ಸಾವಿಗೆ ಶೋಕಿಸುತ್ತಿರುವಾಗ ಪ್ರಧಾನಿ ಮೋದಿ ಕಾರ್ಬೆಟ್ ನ್ಯಾಷನಲ್ ಪಾರ್ಕ್ ನಲ್ಲಿ ಶೂಟಿಂಗ್ ನಲ್ಲಿ ಭಾಗವಹಿಸಿದ್ದರು ಹಾಗೂ ಮೊಸಳೆಗಳನ್ನು ನೋಡಲು ಬೋಟಿಂಗ್ ಮಾಡಿದ್ದರು'' ಎಂದು  ಪುಲ್ವಾಮ ದಾಳಿ ನಡೆದು ಒಂದು ವಾರದ ನಂತರ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು.

“ಈ ಚಿತ್ರೀಕರಣ ಆ ದಿನ ಸಂಜೆ 6.30 ತನಕ ಮುಂದುವರಿದಿತ್ತು, ಪ್ರಧಾನಿ ಸಂಜೆ 6.45ಕ್ಕೆ ಚಹಾ ಮತ್ತು ಸ್ನ್ಯಾಕ್ಸ್  ಸವಿದರು. ಇಂತಹ ಒಂದು ದಾಳಿ ನಡೆದು ನಾಲ್ಕು ಗಂಟೆಗಳ ನಂತರವೂ ಮೋದಿ ತಮ್ಮದೇ ಬ್ರ್ಯಾಂಡಿಂಗ್, ಫೋಟೋಶೂಟ್ ಹಾಗೂ ಸ್ನ್ಯಾಕ್ಸ್ ನಲ್ಲಿ ಬ್ಯುಸಿಯಾಗಿದ್ದರು'' ಎಂದು ಸುರ್ಜೇವಾಲ ಹೇಳಿದ್ದರು. ತನ್ನ ಆರೋಪಗಳಿಗೆ ಪುರಾವೆಯಾಗಿ ಕಾಂಗ್ರೆಸ್ ಒಂದು ಫೋಟೋ ಕೂಡ ಬಿಡುಗಡೆಗೊಳಿಸಿತ್ತು.

ನಂತರ ಈ  ಪ್ರಮಾದಕ್ಕೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ದೂರುವ ರೀತಿಯ ವರದಿಗಳು ನ್ಯೂಸ್‍ ಎಕ್ಸ್ ಟಿವಿ ವಾಹಿನಿ ಹಾಗೂ ಸಿಎನ್‍ಎನ್ ನ್ಯೂಸ್ 18 ವಾಹಿನಿಯ ಪತ್ರಕರ್ತರ ಟ್ವಿಟರ್ ಖಾತೆಯಲ್ಲಿ ಕಾಣಿಸಿಕೊಂಡಿದ್ದವು ಹಾಗೂ ಕೆಲ ಮೂಲಗಳ ಆಧಾರದಲ್ಲಿ ಈ ಮಾಹಿತಿ ನೀಡಲಾಗಿತ್ತು.

ಪುಲ್ವಾಮ ದಾಳಿ ಕುರಿತಂತೆ ಪ್ರಧಾನಿಗೆ ಸರಿಯಾದ ಸಮಯಕ್ಕೆ ದೋವಲ್ ಮಾಹಿತಿ ನೀಡಿರದೇ ಇದ್ದುದರಿಂದ ಮೋದಿ ಅಸಮಾಧಾನ ಹೊಂದಿದ್ದರೆಂದೂ ವರದಿಗಳು ಹೇಳಿತ್ತವಲ್ಲದೆ, ಈ ಮೂಲಕ ಪ್ರಧಾನಿ ತಮ್ಮ ಶೂಟಿಂಗ್ ಮುಂದುವರಿಸಿದ್ದನ್ನು ಸಮರ್ಥಿಸುವ ಯತ್ನವೂ ನಡೆದಿತ್ತು. ಕಾಂಗ್ರೆಸ್ ಈ ವಿಚಾರಕ್ಕೆ ಅನಗತ್ಯವಾಗಿ ರಾಜಕೀಯ ಬಣ್ಣ ಹಚ್ಚಿದೆ ಎಂದು ಬಿಜೆಪಿ ಆಗ ಆರೋಪಿಸಿತ್ತು.

ಡಿಸ್ಕವರಿ ಶೋಗೆ ಚಿತ್ರೀಕರಣ ನಡೆದ ದಿನ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಧಿಕಾಲ ಫಾರೆಸ್ಟ್ ರೆಸ್ಟ್ ಹೌಸ್ ನಲ್ಲಿ ಪ್ರವಾಸಿಗರು ಮಾಡಿದ್ದ ಎಲ್ಲಾ ಬುಕ್ಕಿಂಗ್ ಅನ್ನು ಆ ದಿನ ಉತ್ತರಾಖಂಡ ಅರಣ್ಯ ಇಲಾಖೆ  ರದ್ದುಗೊಳಿಸಿತ್ತು.

ಭಾರತಕ್ಕೆ ಆಗಮಿಸುವ ಮುನ್ನ ಕಾರ್ಯಕ್ರಮದ ನಿರೂಪಕ ಗ್ರಿಲ್ಸ್ ಕೆಲ ಟ್ವೀಟ್ ಕೂಡ ಮಾಡಿದ್ದರೂ ಅವುಗಳನ್ನು ನಂತರ ಡಿಲೀಟ್ ಮಾಡಿದ್ದರು. ಫೆಬ್ರವರಿ 12ರಂದು ಭಾರತಕ್ಕೆ ಪಯಣಿಸುವ ವಿಮಾನದಲ್ಲಿ ಅವರು ಸೆಲ್ಫಿ ಕೂಡ ತೆಗೆದು ಪೋಸ್ಟ್ ಮಾಡಿ ಟ್ವೀಟ್ ಮಾಡಿ ನಂತರ ಡಿಲೀಟ್ ಮಾಡಿದ್ದರು. ಫೆಬ್ರವರಿ 15ರಂದು ಪುಲ್ವಾಮ ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಸಿ ಪ್ರಧಾನಿ ಮಾಡಿದ್ದ ಟ್ವೀಟ್ ಗೆ ನಿರೂಪಕ ಗ್ರಿಲ್ಸ್  ಉತ್ತರಿಸಿ ತಮ್ಮ ಸಂತಾಪವನ್ನೂ ಸೂಚಿಸಿದ್ದರು.

ಕೃಪೆ: scroll.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)