varthabharthi

ನಿಮ್ಮ ಅಂಕಣ

ಮಾರಿಕೊಳ್ಳಬೇಡಿ

ವಾರ್ತಾ ಭಾರತಿ : 29 Jul, 2019
-ಸೌಮ್ಯಾ ಕೆ.ಆರ್., ಪದ್ಮನಾಭ ನಗರ, ಬೆಂಗಳೂರು

ಮಾನ್ಯರೇ,

ಅಧಿಕಾರ ಸಿಗಲಿಲ್ಲ ಎಂದು ತಮ್ಮನ್ನು ತಾವು ಮಾರಿಕೊಂಡ ಶಾಸಕರು, ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋಗುವವರಿಗೆ ಜನರ ಮಧ್ಯೆ ಕೆಲಸಮಾಡುವ ನೈತಿಕತೆ ಇರುವುದಿಲ್ಲ. ಅವರು ಜನರ ಮನದಲ್ಲಿ ಯಾವತ್ತಿಗೂ ಸಣ್ಣತನದ ರಾಜಕಾರಣಿಗಳಾಗುತ್ತಾರೆ. ನಾಯಕತ್ವ ಅನ್ನುವುದು ಜನರ ಭಾವನೆಗಳಿಗೆ ಸ್ಪಂದಿಸುವುದು, ಅವರ ಕಷ್ಟ ಸುಖಗಳ ನಡುವೆ ಬೆರೆತು ಅವರ ವಿಶ್ವಾಸ, ನಂಬಿಕೆ ಗಳಿಸಿಕೊಳ್ಳುವುದಾಗಿದೆ. ಆದರೆ ಇತ್ತೀಚೆಗೆ ಅಂತಹ ನಾಯಕತ್ವದ ಗುಣವಿರುವ ರಾಜಕಾರಣಿಗಳು ವಿರಳರಾಗುತ್ತಿದ್ದಾರೆ. ಈಗ ರಾಜಕಾರಣದಲ್ಲಿ ಕ್ರಿಮಿನಲ್‌ಗಳೇ ಹೆಚ್ಚಾಗುತ್ತಿದ್ದಾರೆ. ಜನರಿಗಾಗಿ ರಾಜಕೀಯದಲ್ಲಿರಬೇಕಾದ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣವನ್ನು ಬಳಸಿಕೊಂಡು ಪ್ರಜಾಪ್ರಭುತ್ವಕ್ಕೆ ಒಂದು ಕಪ್ಪುಚುಕ್ಕೆಗಳಾಗುತ್ತಿದ್ದಾರೆ.

ಅವರನ್ನು ನಂಬಿದ ಜನರು, ಸ್ನೇಹಿತರು ಮತ್ತು ಕೌಟುಂಬಿಕ ಬಂಧುಗಳೂ ಕೂಡಾ ಅವಮಾನದಿಂದ ತಲೆತಗ್ಗಿಸುವ ರೀತಿಯಲ್ಲಿ ಇಂದಿನ ರಾಜಕಾರಣಿಗಳು ನಡೆದುಕೊಳ್ಳುತ್ತಿದ್ದಾರೆ. ಒಂದು ಸಲ ಒಬ್ಬ ಜನಪ್ರತಿನಿಧಿ ಜನರ ಅಪನಂಬಿಕೆಗೆ ತುತ್ತಾದರೆ ಅವನ ಇಡೀ ರಾಜಕೀಯ ಜೀವನವೇ ಕಲುಷಿತವೆಂದು ಬಿಂಬಿತವಾಗುತ್ತದೆ. ಮುಂದೆಂದೂ ಜನರು ಅಂತಹವರನ್ನು ನಂಬುವುದಿಲ್ಲ. ರಾಜಕಾರಣವೆಂದರೆ ಅದೊಂದು ವ್ಯಾಪಾರಕ್ಷೇತ್ರ ಅಲ್ಲ, ಅದೊಂದು ಸಾಮಾಜಿಕವಾಗಿ ಸೇವೆ ಸಲ್ಲಿಸುವ ಕಾನೂನು ಅಡಿಯಲ್ಲಿ ಬರುವ ಒಂದು ವ್ಯವಸ್ಥೆ. ಈ ವ್ಯವಸ್ಥೆಗೆ ಪ್ರಾಮಾಣಿಕವಾಗಿದ್ದು, ಜನರೊಂದಿಗೆ ಬೆರೆತು ಅವರ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಿದರೆ ಸಾಕು. ನೊಂದವರು ನಿಮ್ಮ ಬಳಿ ಬಂದರೆ ನಾಲ್ಕು ಸಾಂತ್ವನದ ಮಾತು, ಸಹಕಾರ, ಸಲಹೆ ಕೊಟ್ಟರೇ ಸಾಕು ಜನರು ನಿಮ್ಮನ್ನು ನಮ್ಮ ನಾಯಕರು ಅಂದುಕೊಂಡು ಅಷ್ಟೇ ಪ್ರಾಮಾಣಿಕವಾಗಿ ಮತ ಹಾಕುತ್ತಾರೆ, ಜೈಕಾರಗಳನ್ನು ಕೂಡ ಹಾಕುತ್ತಾರೆ. ಪ್ರಾಮಾಣಿಕ ರಾಜಕಾರಣಿ ಮಾತ್ರ ಜನರ ಮನಸ್ಸಿನಲ್ಲಿ ಸದಾ ಉಳಿಯುತ್ತಾನೆ ಹೊರತು, ಅಧಿಕಾರ, ಹಣದ ಆಸೆಗೆ ಸಿಕ್ಕಿ ತಮ್ಮತನವನ್ನು ಕಳೆದುಕೊಂಡವರನ್ನು ಜನತೆ ಎಂದೂ ಕ್ಷಮಿಸರು.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)