varthabharthi

ನಿಮ್ಮ ಅಂಕಣ

ಒಂದು ಅಸ್ತ್ರವಾಗಿ ‘‘ಜೈ ಶ್ರೀ ರಾಮ್’’ನ ಬಳಕೆ

ವಾರ್ತಾ ಭಾರತಿ : 29 Jul, 2019
ಪವನ್ ಕೆ. ವರ್ಮ

ಕೋಲ್ಕತಾದಲ್ಲಿ ‘‘ಜೈ ಶ್ರೀರಾಮ್’’ ಎನ್ನುವ ಮೂಲಕ ತನ್ನನ್ನು ಉದ್ದೇಶಿಸಿ ಕೂಗಿದವರಿಗೆ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಾಯಶಃ ಅಷ್ಟೊಂದು ಸಿಟ್ಟಾಗಿ ಪ್ರತಿಕ್ರಿಯಿಸಬೇಕಾಗಿರಲಿಲ್ಲ. ಸಾಮಾನ್ಯವಾಗಿ ಇದು, ನಿರ್ದಿಷ್ಟವಾಗಿ ಉತ್ತರ ಭಾರತದಲ್ಲಿ ಜನ ಪರಸ್ಪರ ಭೇಟಿಯಾದಾಗ ವಂದಿಸುವ ಒಂದು ನಡವಳಿಕೆಯ ರೂಪವಾಗಿದೆ.

ಆದರೆ ಇತ್ತೀಚೆಗೆ ‘ಜೈ ಶ್ರೀರಾಮ’ ಎನ್ನುವುದು ಹೊಸರೀತಿಯ ಆಕ್ರಮಣಕಾರಿಯಾದ ರೀತಿಯಲ್ಲಿ ಬಳಕೆಯಾಗುತ್ತಿದೆ. ಜಾರ್ಖಂಡ್, ಮಹಾರಾಷ್ಟ್ರ, ಅಸ್ಸಾಂ, ಯುಪಿ ಮತ್ತು ಕೋಲ್ಕತಾದಲ್ಲಿ ಮುಸ್ಲಿಮರನ್ನು ಥಳಿಸಿ ‘ಜೈ ಶ್ರೀರಾಮ್’ ಎಂದು ಬಲವಂತವಾಗಿ ಹೇಳಿಸಿದ ಪ್ರಕರಣಗಳು ವರದಿಯಾಗಿವೆ. ಮರ್ಯಾದಾ ಪುರುಷೋತ್ತಮನಾಗಿರುವ ರಾಮನ ಕರುಣಾ ಪೂರಿತ ಸ್ವಭಾವದ ಬಗ್ಗೆ ಏನೂ ತಿಳಿಯದ ನಿರಕ್ಷರಿ ಗುಂಪುಗಳು ರಾಮನನ್ನು ತಪ್ಪಾಗಿ ಬಳಸಲಾರಂಭಿಸಿರುವುದನ್ನು ನಾವು ನೋಡುತ್ತಿದ್ದೇವೆ.

ರಾಮಾಯಣದಲ್ಲಿ (ಕ್ರಿ. ಪೂ. 500) ವಾಲ್ಮೀಕಿ ಚಿತ್ರಿಸಿರುವ ರಾಮ ಒಬ್ಬ ಧೀರೋದಾತ್ತ ನಾಯಕ, ಅನ್ಯಾಯದ ವಿರುದ್ಧ ಹೋರಾಡುವ ಸನ್ನಡತೆಯ, ಸನ್ಮಾರ್ಗಿ, ದುರ್ಬಲರ ಓರ್ವ ಮಿತ್ರ, ಸ್ತ್ರೀಯರನ್ನು ಗೌರವಿಸುವವ ಮತ್ತು ಪರಾಕ್ರಮಿ. ತುಳಸಿದಾಸರ ರಾಮಚರಿತ ಮಾನಸದಲ್ಲಿ (16ನೇ ಶತಮಾನ) ರಾಮನ ಸಭ್ಯವರ್ತನೆ, ಸಾರ್ವಜನಿಕ ಕರ್ತವ್ಯಕ್ಕೆ ಬದ್ಧತೆ, ದುರ್ಬಲರ ಮತ್ತು ದಮನಕ್ಕೊಳಗಾದವರ ಉದಾರವಾದ ವರ್ತನೆಯ ಚಿತ್ರಣ ಇದೆ.

‘ಕ್ರುದ್ಧ ದೇವ’ರಾಗಿ ವಿಕೃತವಾಗಿ, ತಪ್ಪಾಗಿ ಈಗ ಚಿತ್ರಿಸಲಾಗುತ್ತಿರುವ ರಾಮನಿಗಿಂತ ತೀರ ಭಿನ್ನವಾಗಿ ರಾಮ ಮಹಾಕಾವ್ಯಗಳಲ್ಲಿ ಒಬ್ಬ ಶ್ರೇಷ್ಠ ಸಂಧಾನಕಾರನಾಗಿ ಚಿತ್ರಿತನಾಗಿದ್ದಾನೆ. ತುಳಸಿ ರಾಮಾಯಣದಲ್ಲಿ ರಾಮ, ವೈಷ್ಣವರ ಮತ್ತು ಶೈವರ ನಡುವೆ ಸಂಧಾನವೇರ್ಪಡಿಸುತ್ತಾನೆ. ಭಕ್ತಿಯನ್ನು ಎತ್ತಿಹಿಡಿಯುವ ಆತ ಕರ್ಮ ಮತ್ತು ಜ್ಞಾನ ಮಾರ್ಗಗಳ ಮಹತ್ವವನ್ನು ಒಪ್ಪಿಕೊಳ್ಳುತ್ತಾನೆ. ರಾವಣನ ಜತೆ ಯುದ್ಧ ನಡೆಯುತ್ತಿರುವಾಗ, ರಾಮಚರಿತ ಮಾನಸದಲ್ಲಿ ಶಿವ ಪಾರ್ವತಿಗೆ ಹೇಳುತ್ತಾನೆ: ‘‘ಓ ಉಮಾ, ರಾಮ ಮೃದು ಹೃದಯಿ ಮತ್ತು ದಯಾಮಯಿ.. ಅವನಷ್ಟು ದಯಾಮಯಿ ಇನ್ಯಾರು ತಾನೇ ಇರಲು ಸಾಧ್ಯ ಹೇಳು, ಭವಾನಿ?’’ ರಾಮನ ಈ ಗುಣವನ್ನು, ಚಿತ್ರವನ್ನು ನಿರೂಪಿಸುವ ಹಲವಾರು ಘಟನೆಗಳನ್ನು ರಾಮಾಯಣದಲ್ಲಿ ಕಾಣಬಹುದು. ಉದಾಹರಣೆಗೆ ದಶರಥ ನೀಡಿದ ವರವನ್ನು ಬಳಸಿಕೊಂಡು ರಾಮನನ್ನು 14 ವರ್ಷಗಳ ಕಾಲ ವನವಾಸಕ್ಕೆ ಕಳುಹಿಸಬೇಕೆಂದು ಕೈಕೇಯಿ ಹೇಳುತ್ತಾಳೆ. ಆದರೆ ಬಳಿಕ ರಾಮ ಆಕೆಯನ್ನು ಭೇಟಿಯಾದಾಗ ಸಮಾಧಾನ ಚಿತ್ತಸಮತೆ, ವಿನಯಶೀಲ ಹಾಗೂ ಕರ್ತವ್ಯ ಪರಾಯಣನಾಗಿ, ಯಾವುದೇ ರೀತಿಯಲ್ಲಿ ಆಕ್ರೋಶಗೊಳ್ಳದೆ ತುಳಸಿದಾಸರ ರಾಮಾಯಣದಲ್ಲಿ ರಾಮಕೈಕೇಯಿಗೆ ನೀಡುವ ಉತ್ತರವು, ಯಾಕೆ ಮಿಲಿಯಗಟ್ಟಲೆ ಜನರು ಇಂದಿಗೂ ಮರ್ಯಾದಾ ಪುರುಷೋತ್ತಮನನ್ನು ಗೌರವಿಸುತ್ತಾರೆ ಎಂಬುದನ್ನು ಹೇಳುತ್ತದೆ:

‘‘ಸುನಾ ಜನನಿ ಸೊಯಿ ಸುತಾ ಬಡಾಭಾಗಿ, ಜೊ ಪಿತು ಮಾತಾ ಬಚನ್ ಅನುರಾಗಿ’’ ( ಕೇಳು ಮಾತೆ, ತನ್ನ ತಂದೆ ತಾಯಿಯ ಮಾತನ್ನು ಪಾಲಿಸುವ ಅವಕಾಶ ಯಾವ ಮಗನಿಗೆ ಲಭಿಸುತ್ತದೋ ಅವನೇ ಅದೃಷ್ಟವಂತ).

ಅನಗತ್ಯವಾದ ಹಿಂಸೆಗೆ ರಾಮನ ಹೆಸರನ್ನು ಬಳಸಿಕೊಳ್ಳುವವರು, ತುಳಸಿದಾಸರು ನೀಡುವ ರಾಮ ರಾಜ್ಯದ ವಿವರಣೆಯನ್ನು ಓದಬೇಕು. ಮಹಾತ್ಮಾ ಗಾಂಧಿಗೆ ಕೂಡ ಸ್ಫೂರ್ತಿ ನೀಡಿದ ವಿವರಣೆ ಅದು. ರಾಮ ರಾಜ್ಯವನ್ನು ವರ್ಣಿಸುತ್ತ ತುಳಸಿದಾಸರು ಹೇಳುತ್ತಾರೆ: ‘‘ಅಲ್ಲಿ ಯಾರೂ ಕೂಡ ದೈಹಿಕ ಆಧ್ಯಾತ್ಮಿಕ ಅಥವಾ ಐಹಿಕ ಅಸಾಮರ್ಥ್ಯದಿಂದ ಬಳಲುವುದಿಲ್ಲ. ಪ್ರತಿಯೊಬ್ಬರೂ ಪ್ರೀತಿ ಹಾಗೂ ಸಾಮರಸ್ಯದಿಂದ ಬದುಕುತ್ತಾರೆ ಮತ್ತು ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮವನ್ನು ಶಾಂತಿಯಿಂದ ಪಾಲಿಸುತ್ತಾರೆ.’’ ತುಳಸಿದಾಸರು ಹಿಂದೂ ಧರ್ಮದ ಸಾರವನ್ನು, ಸತ್ವವನ್ನು ಸಂಕ್ಷೇಪಿಸಿ ಹೀಗೆ ಹೇಳುತ್ತಾರೆ:

‘‘ಪರಹಿತ ಸರಿಸ್ ಧರಂ ನಹಿ ಭಾಯೀ, ಪರಪೀಡ ಸಮ್ ನಹೀ ಅತ್‌ಮಾಯಿ.’’ (ಇತರರ ಕಲ್ಯಾಣವೇ ಅತ್ಯಂತ ಶ್ರೇಷ್ಠ ಧರ್ಮ ಮತ್ತು ಇತರರಿಗೆ ಹಾನಿಮಾಡುವುದೇ ಅತ್ಯಂತ ದೊಡ್ಡ ಪಾಪ.)

ಆದ್ದರಿಂದ ‘‘ಜೈ ಶ್ರೀರಾಮ್’’ನ ಅನಗತ್ಯ, ಅನುಚಿತ ಮಿಲಿಟರೀಕರಣವು ಮಿಲಿಯಗಟ್ಟಲೆ ಹಿಂದೂಗಳಿಗೆ ಸ್ಫೂರ್ತಿ ನೀಡಿದ, ಇಂದಿಗೂ ನೀಡುತ್ತಿರುವ ರಾಮನ ಪಾತ್ರಕ್ಕೆ ನೇರವಾಗಿ ಬಗೆಯುವ ಅಪಚಾರ.

ತನ್ನ ಶತ್ರುಗಳಿಗೆ ಕೂಡ ಬಿಡುಗಡೆ ನೀಡುವ ಮತ್ತು ತನ್ನ ಎದುರಾಳಿಗಳ ಬಗ್ಗೆ ಸ್ವತಃ ತಾನೇ ಯಾವುದೇ ರೀತಿಯಲ್ಲಿ ಕೋಪಗೊಳ್ಳದ, ಸೌಮ್ಯ ಸ್ವಭಾವದ ಸಾಕಾರಮೂರ್ತಿಯಾಗಿರುವ ರಾಮನಂತಹ ಒಬ್ಬ ದೇವರನ್ನು ಮಿಲಿಟರೀಕರಿಸುವುದೆಂದರೆ ಅದೊಂದು ಭಯಾನಕ ವಿಕೃತಗೊಳಿಸುವಿಕೆ, ಸತ್ಯದ ತಿರುಚುವಿಕೆ.

ಆದ್ದರಿಂದ ಹೀಗೆ ರಾಮನನ್ನು ಕೋಪಾವಿಷ್ಟನೆಂಬಂತೆ ತಿರುಚುವುದನ್ನು ಖಂಡಿಸುವುದು ಬಹಳ ಮುಖ್ಯ. ಕಾನೂನಿನ ಉಲ್ಲಂಘನೆಗಾಗಿಯಷ್ಟೇ ಅಲ್ಲ, ಇಂತಹ ಕ್ರಿಯೆಗಳು ಸ್ವತಃ ರಾಮನಿಗೇ ಭಯಾನಕ ಅನ್ನಿಸಿಯಾವು ಎಂಬ ಕಾರಣಕ್ಕಾಗಿ ಕೂಡ. ಸಂಸತ್ತಿನಲ್ಲಿ ಹೊಸದಾಗಿ ಸಂಸದರಾದವರು ಪ್ರಮಾಣವಚನ ಸ್ವೀಕರಿಸುವಾಗ ‘‘ಜೈ ಶ್ರೀರಾಮ್’’ ಎಂದು ಕೂಗಿದ ಕೆಲವು ಸಂಸದರು ಸೇರಿದಂತೆ, ಎಲ್ಲಾ ಸಂಸದ ಸದಸ್ಯರು ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅವರು ಹೀಗೆ ಕೊಗಿದ್ದು ಸನ್ನಡತೆಯ ಸಾಕಾರ ಮೂರ್ತಿಯಾಗಿರುವ ಶ್ರೀ ರಾಮನಿಗೆ ನೇರವಾಗಿ ಮಾಡಿದ ಅವಮಾನ.

 ನನ್ನ ಅಭಿಪ್ರಾಯದ ಪ್ರಕಾರ ಅಯೋಧ್ಯೆಯಲ್ಲಿ ರಾಮನಿಗೆ ಸೂಕ್ತವಾದ ಒಂದು ಮಂದಿರ ಕಟ್ಟುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ಕಾನೂನಿಗೆ ಅನುಸಾರವಾಗಿ ಮತ್ತು ಶ್ರೀ ರಾಮ ಬಯಸಿದಂತೆ ಸಾಮಾಜಿಕ ಸಾಮರಸ್ಯವನ್ನು ಕಾಪಾಡಿಕೊಂಡು ಮಂದಿರ ನಿರ್ಮಾಣ ಕಾರ್ಯ ನಡೆಯಬೇಕು. ಅದೇನಿದ್ದರೂ ರಾಮನ ಪೂಜನೀಯ ವ್ಯಕ್ತಿತ್ವವನ್ನು, ಪಾತ್ರವನ್ನು ತಿರುಚುವುದು ಖಂಡಿತವಾಗಿಯೂ ತಪ್ಪು. ಅಂತಿಮವಾಗಿ, ಹೀಗೆ ತಿರುಚುವ ಮೂಲಕ ತಮ್ಮ ಧರ್ಮಕ್ಕೆ ಧಕ್ಕೆ ತರುವವರ ವಿರುದ್ಧ ಸ್ವತಃ ಹಿಂದೂಗಳೇ ಹೋರಾಡಬೇಕಾಗಿದೆ.

ಕೃಪೆ: the times of india

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)