varthabharthi


ವಿಶೇಷ-ವರದಿಗಳು

‘ಬೆಟ್ಟ ಅಗೆದು ಇಲಿ ಹಿಡಿದ’ ಹಸಿರು ಪೀಠದ ತಜ್ಞರ ಸಮಿತಿ

ಯುಪಿಸಿಎಲ್‌ನಿಂದಾದ ಪರಿಸರ ಹಾನಿಯ ಮೌಲ್ಯ 4.89 ಕೋಟಿ ರೂ.!

ವಾರ್ತಾ ಭಾರತಿ : 30 Jul, 2019
ಬಿ ಬಿ ಶೆಟ್ಟಿಗಾರ್

ಉಡುಪಿ : ಇದೇ ವರ್ಷದ ಮಾ.14ರಂದು ಪಡುಬಿದ್ರಿ ಸಮೀಪದ ಎಲ್ಲೂರಿನಿಂದ ಕಾರ್ಯಾಚರಿಸುತ್ತಿರುವ ಉಡುಪಿ ಪವರ್ ಕಾರ್ಪೋರೇಷನ್ ಲಿಮಿಟೆಡ್ (ಯುಪಿಸಿಎಲ್)ನ ಅಕ್ರಮಗಳ ವಿರುದ್ಧ ಹಲವು ನಿರ್ಧಾರಗಳನ್ನು ಪ್ರಕಟಿಸುವ ವೇಳೆ ಹೊಸದಿಲ್ಲಿಯ ರಾಷ್ಟ್ರೀಯ ಹಸಿರು ಪೀಠ(ಎನ್‌ಜಿಟಿ) ಇದರಿಂದ ಕರಾವಳಿಯಲ್ಲಿ ಈವರೆಗೆ ಉಂಟಾಗಿರುವ ಪರಿಸರ ಹಾನಿಯ ಅಂದಾಜು ಮಾಡಲು ನೇಮಿಸಿದ್ದ ತಜ್ಞರ ಸಮಿತಿ ಇದೀಗ ತನ್ನ ವರದಿಯನ್ನು ಪೀಠಕ್ಕೆ ನೀಡಿದ್ದು, ಇದರಲ್ಲಿ ಕಂಪೆನಿಗೆ ಕೇವಲ 4.89 ಕೋಟಿ ರೂ.ಗಳ ದಂಡವನ್ನು ವಿಧಿಸಿ ಕೈ ತೊಳೆದುಕೊಂಡಿದೆ.

ತಾನು ಕಾರ್ಖಾನೆಯಿಂದ 10ಕಿಮೀ ದೂರದ ವ್ಯಾಪ್ತಿಯಲ್ಲಿ ಆಗಿರುವ ಪರಿಸರ ಹಾನಿಯ ಪರಿಶೀಲನೆ ಮಾಡಿರುವುದಾಗಿ ಸಮಿತಿ ವರದಿಯಲ್ಲಿ ಹೇಳಿಕೊಂಡಿದೆ.

ಆದರೆ ತಮಾಷೆಯ ವಿಷಯವೆಂದರೆ ಸ್ವತಃ ಹಸಿರು ಪೀಠ ಮಾ.14ರಂದು ತೀರ್ಪು ನೀಡುವಾಗ ಯುಪಿಸಿಎಲ್ ಪರಿಸರ ಹಾನಿ ಹಾಗೂ ತಾನು ಮಾಡಿರುವ ಅಕ್ರಮಗಳಿಗಾಗಿ ಮುಂಗಡವಾಗಿ 5 ಕೋಟಿ ರೂ. ಗಳ ದಂಡವನ್ನು ಪಾವತಿಸುವಂತೆ ಕಾರ್ಖಾನೆಗೆ ಸೂಚಿಸಿದ್ದು, ಕಾರ್ಖಾನೆಗೆ ಅದು ಸೂಚಿಸಿದಂತೆ ಐದು ಕೋಟಿ ರೂ.ಗಳನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ)ಗೆ ಈಗಾಗಲೇ ಪಾವತಿಸಿದೆ. ಹೀಗಾಗಿ ಪರಿಣತರ ತಂಡ ಒಟ್ಟು ದಂಡದ ಮೌಲ್ಯವನ್ನು ಮುಂಗಡ ದಂಡಕ್ಕಿಂತಲೂ ಕಡಿಮೆಗೆ ಅಂದಾಜು ಮಾಡಿರುವುದು ಅಚ್ಚರಿ ಮೂಡಿಸಿದೆ.

ಹಸಿರು ಪೀಠದ ಆದೇಶದಂತೆ, 2010ರಿಂದ ಕಾರ್ಯಾಚರಿಸುತ್ತಿರುವ ಯುಪಿಸಿಎಲ್‌ನ ಎರಡು ಯುನಿಟ್‌ಗಳಿಂದ ಈವರೆಗೆ ಆಗಿರುವ ಪರಿಸರ ಹಾನಿಯನ್ನು ಅಂದಾಜಿಸಲು ಮೂವರು ತಜ್ಞರ ಸಮಿತಿಯನ್ನು ಎ.15ರಂದು ರಚಿಸಲಾಗಿತ್ತು. ಎ.27ರಂದು ಈ ಸಮಿತಿ ಬೆಂಗಳೂರಿನಲ್ಲಿ ತನ್ನ ಮೊದಲ ಸಭೆಯನ್ನು ನಡೆಸಿತ್ತು.

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಾಯನ್ಸ್‌ನ ಸುಸ್ಥಿರ ತಂತ್ರಜ್ಞಾನ ಕೇಂದ್ರದ ಡಾ.ಎಚ್.ಎನ್.ಚಾಣಕ್ಯ, ಚೆನ್ನೈನ ಮದರಾಸ್ ಸ್ಕೂಲ್ ಆಫ್ ಇಕನಾಮಿಕ್ಸ್‌ನ ಇಕನಾಮಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಝರೀನಾ ಬೇಗಂ ಹಾಗೂ ಬೆಂಗಳೂರಿನ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ನಿರ್ದೇಶನಾಲಯದ ಹೆಚ್ಚುವರಿ ನಿರ್ದೇಶಕ ಜಿ.ತಿರುಮೂರ್ತಿ ಹಸಿರು ಪೀಠದ ಪರಿಣತರ ಸಮಿತಿಯ ಸದಸ್ಯರಾಗಿದ್ದರು.

ಈ ಸಮಿತಿ ಜೂ.6ರಂದು ಯುಪಿಸಿಎಲ್‌ಗೆ ಭೇಟಿ ನೀಡಿ, ಕಂಪೆನಿಯ ಇದುವರೆಗಿನ ಎಲ್ಲಾ ಪರಿಸರ ನಿಗಾ ಡಾಟಾಗಳು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕಾರ್ಖಾನೆಗೆ ಬಂದಿರುವ ನೋಟೀಸು ಹಾಗೂ ಅದಕ್ಕೆ ಕಂಪೆನಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು ಎಂದು ವರದಿಯಲ್ಲಿ ತಿಳಿಸಲಾಗಿದೆ. ಯುಪಿಸಿಎಲ್‌ಗೆ ಭೇಟಿ ನೀಡಿದ ತಂಡದಲ್ಲಿ ಡಾ.ಎಚ್.ಎನ್.ಚಾಣಕ್ಯ, ಜಿ.ತಿರುಮೂರ್ತಿ ಅಲ್ಲದೇ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಾದ ಮಂಗಳೂರಿನ ರಾಜಶೇಖರ ಪುರಾಣಿಕ್ ಹಾಗೂ ಉಡುಪಿಯ ಡಾ.ಎಚ್.ಲಕ್ಷ್ಮೀಕಾಂತ್ ಉಸ್ಥಿತರಿದ್ದರು.

ಕಾರ್ಖಾನೆಯ ಹತ್ತು ಕಿ.ಮೀ. ವ್ಯಾಪ್ತಿಯಲ್ಲಿ ಒಟ್ಟು 29 ಗ್ರಾಮಗಳಿದ್ದು, ಇಲ್ಲಿ 2011ರ ಜನಗಣತಿಯಂತೆ ಇರುವ ಜನಸಂಖ್ಯೆ 1,26,084 ಎಂದು ತಿಳಿಸಲಾಗಿದೆ. ತಾವು ಕಾರ್ಖಾನೆ ಹೊರಬಿಡುವ ಹಾರುಬೂದಿ, ತಳಬೂದಿ, ಗಾಳಿಯ ಶುದ್ಧತೆ, ಗಾಳಿಗೆ ಬಿಡುವ ಗಂಧಕಾಮ್ಲ ಹಾಗೂ ಆಕ್ಸೈಡ್ ಆಫ್ ನೈಟ್ರೋಜನ್‌ನ ಪ್ರಮಾಣವನ್ನು ಪರಿಶೀಲಿಸಿರುವುದಾಗಿ ವರದಿಯಲ್ಲಿ ತಿಳಿಸಿದೆ.

ವಿದ್ಯುತ್ ಉತ್ಪಾದನೆಗೆ ಬಳಸುವ ಕಲ್ಲಿದ್ದಲಿನ ಗುಣಮಟ್ಟ, ಅದರ ನಿರ್ವಹಣೆ, ಅದರಿಂದ ಹೊರಬರುವ ಹಾರುಬೂದಿ ಹಾಗೂ ತಳಬೂದಿಯ ಪ್ರಮಾಣ, ಅದರ ಪುನರ್ಬಳಕೆ ಕುರಿತೂ ಪರಿಶೀಲಿಸಿರುವುದಾಗಿ ಸಮಿತಿ ತಿಳಿಸಿದೆ. ಕಾರ್ಖಾನೆಯ ಮೊದಲ ಯುನಿಟ್ 2010ರ ಅ.11ರಂದು ಕಾರ್ಯಾರಂಭ ಮಾಡಿದ್ದು, 4ನೇ ವರ್ಷದಲ್ಲಿ ಅದರ ಹಾರುಬೂದಿಯ ಶೇ.100 ಪುನರ್ಬಳಕೆಯಾಗುತ್ತಿದೆ. ಅದೇ ರೀತಿ ಎರಡನೇ ಯುನಿಟ್ 2012ರ ಆ.19ರಿಂದು ಕಾರ್ಯಾಚರಿಸುತಿದ್ದು, ಇದರ ಹಾರುಬೂದಿ ಐದನೇ ವರ್ಷ ದಿಂದ ಪುನರ್ಬಳಕೆಯಾಗುತ್ತಿದೆ ಎಂದು ತಂಡ ಹೇಳಿದೆ.

2018-19ರಲ್ಲಿ 1,12,782 ಮೆಟ್ರಿಕ್ ಟನ್ ಹಾರುಬೂದಿ, 12,670 ಟನ್ ತಳಬೂದಿ ಸೇರಿ 1,25,451 ಮೆ.ಟನ್ ಬೂದಿ ಉತ್ಪಾದನೆ ಯಾಗಿದ್ದು, ಇದರಲ್ಲಿ 1,26,170ಮೆ.ಟ.ಬಳಕೆಯಾಗಿ ಶೇ.101 ಸಾಧನೆ ಮಾಡಲಾಗಿದೆ. 2019-20ರಲ್ಲಿ ಈವರೆಗೆ 25,420 ಮೆ.ಟ. ಹಾರು ಬೂದಿ, 3171 ಮೆ.ಟ. ತಳಬೂದಿ ಉತ್ಪತ್ತಿಯಾಗಿದ್ದು, ಒಟ್ಟು 28,590 ಟನ್‌ಗಳಲ್ಲಿ 28,452ಟನ್ ಬಳಕೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಒಟ್ಟಾರೆಯಾಗಿ ಸಮಿತಿ ಯುಪಿಸಿಎಲ್‌ನಿಂದ ಅಂಥ ಹೇಳಿಕೊಳ್ಳುವಂತೆ ಪರಿಣಾಮ ಪರಿಸರದ ಮೇಲಾಗುತ್ತಿಲ್ಲ, ಕಂಪೆನಿ ಪರಿಸರ ನಿಗಾ ಡಾಟಾ ದಲ್ಲಿ ಯಾವುದೇ ಗಂಭೀರವಾದ ತಪ್ಪುಗಳನ್ನು ಮಾಡುವುದು ಗಮನಕ್ಕೆ ಬಂದಿಲ್ಲ. ಪರಿಸರದ ಗಾಳಿಯ ಗುಣಮಟ್ಟ, ಜಲಮೂಲದ ಗುಣಮಟ್ಟ, ಹರಿಯುವ ನೀರಿನ ಗುಣಮಟ್ಟದಲ್ಲಿ ಯಾವುದೇ ದೋಷವಾಗಲೀ ತ್ಯಾಜ್ಯ ಹೊರಬಿಡುವಲ್ಲಿ ಯಾವುದೇ ಗಂಭೀರ ಅಕ್ರಮವಾಗಿ ಪತ್ತೆಯಾಗಿಲ್ಲ. ಆದರೆ ಈಗಿನ ವ್ಯವಸ್ಥೆಯನ್ನು ಸುಧಾರಿಸಲು ಕಂಪೆನಿಗೆ ಇನ್ನೂ ಅವಕಾಶಗಳಿವೆ ಎಂದೂ ವರದಿ ಹೇಳಿದೆ.

ವರದಿಯ ಕೊನೆಯಲ್ಲಿ ಸಮಿತಿ ಹಸಿರು ಪೀಠಕ್ಕೆ ಕೆಲವು ಸಲಹೆಗಳನ್ನು ನೀಡಿದೆ. ಅವುಗಳಲ್ಲಿ ಸುರತ್ಕಲ್‌ನ ಎನ್‌ಐಟಿಕೆ ನಿರ್ದೇಶಕರ ನೇತೃತ್ವದಲ್ಲಿ ಪ್ರತ್ಯೇಕವಾದ ಸಮಿತಿಯೊಂದನ್ನು ರಚಿಸಸುವಂತೆ ಅದರಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ, ಕೇಂದ್ರ ಜಲಮೂಲ ಪ್ರಾಧಿಕಾರದ ನೀರು ಪರಿಸರ ನಿರ್ವಹಣಾ ವಿಭಾಗ, ಕೃಷಿ ವಿವಿಯ ತಜ್ಞರನ್ನು ಸೇರಿಸುವಂತೆ, ಇದರ ಮೂಲಕ ಪರಿಸರ ಸೂಕ್ಷ್ಮ ವಿಷಯಗಳ ಮೇಲೆ ಸದಾ ನಿಗಾ ಇರಿಸುವಂತೆ ಸೂಚಿಸಲು ತಿಳಿಸಲಾಗಿದೆ.

ಜಲಮೂಲಗಳ ಗುಣಮಟ್ಟ, ಹರಿಯುವ ನೀರಿನ ಗುಣಮಟ್ಟ, ಗಾಳಿ ಗುಣಮಟ್ಟ, ಪೈಪ್‌ಲೈನ್‌ಗಳ ಮೂಲಕ ಬರುವ ನೀರಿನ ಪರಿಶೀಲನೆ, ಸಮುದ್ರ ನೀರಿನ ಮೇಲೆ ನಿಗಾ ಹಾಗೂ ಜನರ ಆರೋಗ್ಯದ ಮೇಲೆ ನಿಗಾ ಇಡುವಂತೆ ಸಮಿತಿ ಸಲಹೆ ನೀಡಿದೆ.

ಎನ್‌ಜಿಟಿ ಆ್ಯಕ್ಟ್‌ನ ಸೆಕ್ಷನ್ 20ರಲ್ಲಿ ಹೇಳಿರುವಂತೆ ಮಾಲಿನ್ಯಕಾರರು ದಂಡ ತರಬೇಕೆಂಬ ನಿಯಮದಂತೆ ಸಿಪಿಸಿಬಿ ಅನುಸರಿಸುವ ಹಾನಿಯ ಲೆಕ್ಕಾಚಾರವನ್ನು ಅನುಸರಿಸಿದಾಗ, ಯುಪಿಸಿಎಲ್, ಕೆಎಸ್‌ಪಿಸಿಬಿ ಆಗಾಗ ನೀಡುತಿದ್ದ ಸೂಚನೆ, ಮಾರ್ಗಸೂಚಿ, ನಿರ್ದೇಶನಗಳನ್ನು ಪಾಲಿಸಲು 1630 ದಿನಗಳನ್ನು ಬಳಸಿರುವುದನ್ನು ಸಮಿತಿ ಕಂಡುಕೊಂಡಿದ್ದು, ಇದರಂತೆ ಆಗಿರುವ ಹಾನಿಗೆ ಪರಿಸರ ಪರಿಹಾರವಾಗಿ ಯುಪಿಸಿಎಲ್ ಒಟ್ಟು 4,89,00,000ರೂ.ಗಳನ್ನು ಪಾವತಿಸುವಂತೆ ಪರಿಣತರ ಸಮಿತಿ ಹಸಿರು ಪೀಠಕ್ಕೆ ನೀಡಿದ ವರದಿಯಲ್ಲಿ ಸೂಚಿಸಿದೆ.

ಆದರೆ ಎಲ್ಲೂರಿನಿಂದ 25 ಕಿ.ಮೀ..ದೂರದಲ್ಲಿರುವ ಉಡುಪಿಯಲ್ಲಿ ಕಳೆದ ವರ್ಷ ಎರಡೆರಡು ಬಾರಿ ಬೂದಿ ಮಳೆಯಾಗಿರುವುದನ್ನು ಎನ್‌ಐಟಿಕೆ ಸುರತ್ಕಲ್‌ನ ವರದಿ ಖಚಿತಪಡಿಸಿರುವುದನ್ನು ಸಮಿತಿ ಗಮನಕ್ಕೆ ತೆಗೆದುಕೊಳ್ಳದೇ ನಿರ್ಲಕ್ಷ ಮಾಡಿರುವುದು ಎದ್ದು ಕಾಣುತ್ತಿದೆ.

ಆದರೆ ಎಲ್ಲೂರಿನಿಂದ 25 ಕಿ.ಮೀ. ದೂರದಲ್ಲಿರುವ ಉಡುಪಿಯಲ್ಲಿ ಕಳೆದ ವರ್ಷ ಎರಡೆರಡು ಬಾರಿ ಬೂದಿ ಮಳೆಯಾಗಿರುವುದನ್ನು ಎನ್‌ಐಟಿಕೆ ಸುರತ್ಕಲ್‌ನ ವರದಿ ಖಚಿತಪಡಿಸಿರುವುದನ್ನು ಸಮಿತಿ ಗಮನಕ್ಕೆ ತೆಗೆದುಕೊಳ್ಳದೇ ನಿರ್ಲಕ್ಷ ಮಾಡಿರುವುದು ಎದ್ದು ಕಾಣುತ್ತಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಖಾನೆಯಿಂದ ಹೊರಸೂಸುವ ದೂಳು, ಗಂಧಕ, ನೈಟ್ರೋಜನ್ ಸೇರಿದಂತೆ ಇತರ ಅನಿಲಗಳ ಮೇಲೆ ನಿಗಾ ವಹಿಸುವಂತೆ ಸೂಚಿಸಿ ಸಮಿತಿ ಕೈತೊಳೆದುಕೊಂಡಂತೆ ಭಾಸವಾಗುತ್ತಿದೆ. ಒಟ್ಟಾರೆ ಸಮಿತಿಯ ವರದಿ ‘ಬೆಟ್ಟ ಅಗೆದು ಇಲಿ ಹಿಡಿದ’ ಕತೆಯಂತಾಗಿದೆ.

ಸಮಿತಿ ಜು.15ರಂದು ನೀಡಿರುವ ವರದಿ ಬಗ್ಗೆ ರಾಷ್ಟ್ರೀಯ ಹಸಿರು ಪೀಠ ಯಾವ ನಿರ್ಧಾರ ತಳೆಯುತ್ತದೆ ಎಂಬುದನ್ನು ಕಾದುನೋಡಬೇಕಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)