varthabharthi

ಆರೋಗ್ಯ

ಮಧ್ಯರಾತ್ರಿಯಲ್ಲಿ ಆಗಾಗ್ಗೆ ಎಚ್ಚರಗೊಳ್ಳುತ್ತೀರಾ?: ಇದಕ್ಕೆ ಕಾರಣಗಳಿಲ್ಲಿವೆ...

ವಾರ್ತಾ ಭಾರತಿ : 31 Jul, 2019

ನಿದ್ರೆಯು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯಂತ ಮುಖ್ಯವಾಗಿದೆ. ವಯಸ್ಕ ವ್ಯಕ್ತಿ ಮರುದಿನದ ಕಾರ್ಯಭಾರಗಳಿಗೆ ತನ್ನ ಶರೀರವನ್ನು ಸಜ್ಜಾಗಿಸಲು ಕನಿಷ್ಠ 6ರಿಂದ 8 ಗಂಟೆಗಳ ಕಾಲ ನಿದ್ರೆ ಅಗತ್ಯವಿದೆ. ಆದರೆ ಇಂದಿನ ಅವಸರದ ಜಗತ್ತಿನಲ್ಲಿ ನಿದ್ರೆಯ ಮಹತ್ವವನ್ನು ಕಡೆಗಣಿಸಲಾಗುತ್ತಿದೆ. ಕೆಲಸದ ಮೇಲೆ ಗಮನವನ್ನು ಕೇಂದ್ರೀಕರಿಸುವ ನಾವು ಶರೀರಕ್ಕೆ ಸೂಕ್ತ ವಿಶ್ರಾಂತಿ ಬೇಕು ಎನ್ನುವುದನ್ನು ಗಮನಕ್ಕೇ ತೆಗೆದುಕೊಳ್ಳುವುದಿಲ್ಲ. ಇದು ಮರುಕಳಿಸುವ ಲಯವನ್ನು ವ್ಯತ್ಯಯಗೊಳಿಸುತ್ತದೆ ಮತ್ತು ನಮ್ಮ ನಿದ್ರೆಯ ಸ್ವರೂಪದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಆಗಾಗ್ಗೆ ನಿದ್ರೆಯನ್ನು ಕಳೆದುಕೊಳ್ಳುವುದು,ಮಧ್ಯರಾತ್ರಿಗಳಲ್ಲಿ ದಿಢೀರನೆ ಎಚ್ಚರಗೊಳ್ಳುವುದು ಇವೆಲ್ಲ ಜನರು ಅನುಭವಿಸುತ್ತಿರುವ ಕೆಲವು ಸಾಮಾನ್ಯ ಸಮಸ್ಯೆಗಳಾಗಿವೆ. ನಿದ್ರೆಯಲ್ಲಿರುವಾಗ ಎಚ್ಚರವಾಗುವುದು ದಿನನಿತ್ಯದ ಕರ್ಮವಾಗಿದ್ದರೆ ನಿಮ್ಮ ಶರೀರದಲ್ಲಿ ಎಲ್ಲೋ ಏನೋ ತಾಳ ತಪ್ಪಿದೆ ಎಂದೇ ಅರ್ಥ.

ನಿದ್ರೆಗೆ ವ್ಯತ್ಯಯಕ್ಕೆ ಕೆಲವು ಕಾರಣಗಳಿಲ್ಲಿವೆ....

► ಆತಂಕಕಾರಿ ಸಮಸ್ಯೆಗಳ ಕಾಡುವಿಕೆ

ಮನಸ್ಸಿನಲ್ಲಿ ಆತಂಕಗಳನ್ನು ಸೃಷ್ಟಿಸಿರುವ ಸಮಸ್ಯೆಗಳೊಂದಿಗೆ ಏಗಾಡುತ್ತಿರುವವರಿಗೆ ಸಾಮಾನ್ಯವಾಗಿ ರಾತ್ರಿಗಳಲ್ಲಿ ಸುಖವಾಗಿ ನಿದ್ರಿಸುವ ಭಾಗ್ಯವಿರುವುದಿಲ್ಲ. ಇದಕ್ಕೆ ವಿರುದ್ಧವಾದ ಸ್ಥಿತಿಯೂ ಇರುತ್ತದೆ,ಅಂದರೆ ಕಳಪೆ ನಿದ್ರೆಯು ಆತಂಕಕ್ಕೆ ಕಾರಣವಾಗಬಹುದು. ನಿದ್ರೆಯಲ್ಲಿನ ವ್ಯತ್ಯಯಗಳು ಮತ್ತು ಮಾನಸಿಕ ಅಸ್ವಸ್ಥತೆಗಳು ಪರಸ್ಪರ ತಳುಕು ಹಾಕಿಕೊಂಡಿವೆ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ. ನೀವು ಒತ್ತಡ ಮತ್ತು ಆತಂಕದಲ್ಲಿದ್ದರೆ ನಿಮ್ಮ ನಿದ್ರೆಗೆ ವ್ಯತ್ಯಯ ವುಂಟಾಗುತ್ತದೆ.

► ನೀವು ಸೇವಿಸುತ್ತಿರುವ ಔಷಧಿಗಳು

ಕೆಲವು ಔಷಧಿಗಳಲ್ಲಿಯ ಘಟಕಗಳು ನಿಮ್ಮ ಜೈವಿಕ ಗಡಿಯಾರದ ಮೇಲೆ ಪರಿಣಾಮವನ್ನುಂಟು ಮಾಡುವ ಮೂಲಕ ನಿದ್ರೆಗೆ ವ್ಯತ್ಯಯವನ್ನುಂಟು ಮಾಡುತ್ತವೆ. ಖಿನ್ನತೆ ನಿವಾರಕಗಳು,ಡಿಕಂಜೆಸ್ಟಂಟ್,ಹೃದ್ರೋಗದ ಮದ್ದು ಇತ್ಯಾದಿಗಳನ್ನು ನಿಯಮಿತವಾಗಿ ಸೇವಿಸುವವರು ನಿದ್ರೆಯ ಕೊರತೆಯಿಂದ ಬಳಲುವ ಹೆಚ್ಚಿನ ಸಾಧ್ಯತೆಗಳಿರುತ್ತವೆ. ಈ ಸ್ಥಿತಿಯನ್ನು ಔಷಧಿಗಳಿಂದ ಪ್ರೇರಿತ ನಿದ್ರಾಹೀನತೆ ಎಂದು ಕರೆಯಲಾಗಿದೆ.

► ಹೃದಯದ ಅನಾರೋಗ್ಯ

ನಿಮ್ಮ ನಿದ್ರೆಗೂ ನಿಮ್ಮ ಹೃದಯದ ಆರೋಗ್ಯಕ್ಕ್ಕೂ ನಿಕಟ ನಂಟು ಇದೆ. ಅಥೆರೊಸ್ಲೆರೊಸಿಸ್ ಅಥವಾ ಅಪಧಮನಿ ಕಾಠಿಣ್ಯ ಸ್ಥಿತಿಯು ನಿದ್ರೆಗೆ ವ್ಯತ್ಯಯವನ್ನುಂಟು ಮಾಡುತ್ತದೆ. ನಿಮಗೆ ಒಳ್ಳೆಯ ನಿದ್ರೆ ದೊರೆಯುತ್ತಿಲ್ಲವಾದರೆ ನೀವು ರಕ್ತನಾಳದಲ್ಲಿ ತಡೆಯ ಅಪಾಯವನ್ನು ಎದುರಿಸುತ್ತಿದ್ದೀರಿ ಎಂದಾಗುತ್ತದೆ.

► ಹಸಿವು

ದಿನದ ಕೊನೆಯ ಊಟವನ್ನು ರಾತ್ರಿ ಏಳು ಅಥವಾ ಎಂಟು ಗಂಟೆಗೆಲ್ಲ ಮುಗಿಸಬೇಕು ಎಂದು ಹೇಳಲಾಗುತ್ತದೆ,ಆದರೆ ಹಾಗೆ ಮಾಡುವುದು ಮಧ್ಯರಾತ್ರಿಯಲ್ಲಿ ಹಸಿವನ್ನುಂಟು ಮಾಡಬಹುದು. ತುಂಬ ಹೊತ್ತು ಉಪವಾಸವಿರುವುದು ಅಥವಾ ಏನನ್ನೂ ತಿನ್ನದಿರುವುದು ಶರೀರದ ರಕ್ತದೊತ್ತಡವನ್ನು ತಗ್ಗಿಸುತ್ತದೆ ಮತ್ತು ಇದರಿಂದಾಗಿ ಶಕ್ತಿಯ ಕೊರತೆಯು ಉಂಟಾಗುತ್ತದೆ ಮತ್ತು ನಿದ್ರೆಗೆ ವ್ಯತ್ಯಯವುಂಟಾಗುತ್ತದೆ. ಹೀಗಾಗಿ ಎಂಟು ಗಂಟೆಯ ಬಳಿಕ ಭಾರೀ ಭೋಜನ ಬೇಡ,ಆದರೆ ಹಸಿವೆಯಿಂದ ಇರಲೂಬೇಡಿ.

► ಮಿದುಳಿನ ಚಟುವಟಿಕೆ

ಚೆನ್ನಾಗಿ ನಿದ್ರೆ ಮಾಡುವವರ ಜನರಲ್ಲಿ ಮಿದುಳಿನ ಚಟುವಟಿಕೆಗಳು ನಿದ್ರೆಯ ಕೊರತೆಯನ್ನು ಅನುಭವಿಸುವರಿಗೆ ಹೋಲಿಸಿದರೆ ಹೆಚ್ಚಾಗಿರುತ್ತವೆ. ಮಿದುಳು ಒಳ್ಳೆಯ ಚಟುವಟಿಕೆಯಿಂದ ಕೂಡಿದ್ದರೆ ದೊಡ್ಡ ಶಬ್ದಗಳಿಗೆ ನಿದ್ರೆಯಿಂದ ಎಚ್ಚರವಾಗುವ ಸಾಧ್ಯತೆಯು ಕಡಿಮೆಯಾಗುತ್ತದೆ. ಹೀಗಾಗಿ ರಾತ್ರಿ ನಿಮ್ಮ ನಿದ್ರೆಗೆ ವ್ಯತ್ಯಯವುಂಟಾಗುತ್ತಿದ್ದರೆ ಅದಕ್ಕೆ ಮಿದುಳಿನ ಕಳಪೆ ವಿದ್ಯುತ್ ಚಟುವಟಿಕೆಗಳು ಕಾರಣವಾಗಿರಬಹುದು.

► ರಚನಾತ್ಮಕತೆ

ರಚನಾತ್ಮಕತೆಯನ್ನು ವ್ಯಕ್ತಿಯಲ್ಲಿನ ಧನಾತ್ಮಕ ಅಂಶವೆಂದು ಪರಿಗಣಿಸಬಹುದು,ಆದರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದರೆ ಅಚ್ಚರಿ ಪಡಬೇಡಿ. ರಚನಾತ್ಮಕತೆಯನ್ನು ಹೊಂದಿರುವ ಜನರು ಕಡಿಮೆ ನಿದ್ರೆ ಮಾಡುತ್ತಾರೆ ಎನ್ನಲಾಗಿದೆ. ಅವರ ಮನಸ್ಸು ಹಲವಾರು ರಚನಾತ್ಮಕ ಚಿಂತನೆಗಳಲ್ಲಿ ಮುಳುಗಿರುವುದರಿಂದ ಅವರಿಗೆ ಸುಖನಿದ್ರೆ ಮಾಡುವುದು ಸಾಧ್ಯವಾಗುವುದಿಲ್ಲ. * ಕತ್ತಲೆಯ ಭಯ

ಹಲವಾರು ಜನರು ಕತ್ತಲು ಮತ್ತು ಕತ್ತಲು ತುಂಬಿದ ವಾತಾವರಣವಿದ್ದಾಗ ಭೀತಿಗೊಳಗಾಗುತ್ತಾರೆ. ದೀಪಗಳು ಆರಿಸಲ್ಪಟ್ಟು ಸುತ್ತಲೂ ಕತ್ತಲು ಆವರಿಸಿಕೊಂಡಾಗ ಇಂತಹ ಜನರು ಭಯಪಟ್ಟುಕೊಳ್ಳುತ್ತಾರೆ ಮತ್ತು ಈ ಪ್ರವೃತ್ತಿ ಅವರ ನಿದ್ರೆಗೂ ವ್ಯತ್ಯಯವನ್ನುಂಟು ಮಾಡುತ್ತದೆ.

 ಅಂದ ಹಾಗೆ ಹಗಲಿನಲ್ಲಿಯೂ ಸುಖನಿದ್ರೆ ಮಾಡಲು ನಿಮಗೆ ಸಾಧ್ಯವಿಲ್ಲದಿದ್ದರೆ ನಿಮ್ಮ ಶರೀರದಲ್ಲಿನ ಯಾವುದೋ ಅನಾರೋಗ್ಯ ಈ ಸಮಸ್ಯೆಗೆ ಕಾರಣವಾಗಿರಬಹುದು. ಆದ್ದರಿಂದ ತಕ್ಷಣವೇ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆದುಕೊಳ್ಳಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)