varthabharthi

ನಿಮ್ಮ ಅಂಕಣ

ಇದು ಭಾರತದ ಆರ್ಥಿಕತೆಯನ್ನು ಸಂಕೇತಿಸುತ್ತಿದೆಯೇ?

ವಾರ್ತಾ ಭಾರತಿ : 31 Jul, 2019
-ಜಿ. ರವಿಕಿರಣ, ಸಂಜಯನಗರ, ಬೆಂಗಳೂರು

ಮಾನ್ಯರೇ,

ತೆರಿಗೆ ಇಲಾಖೆಗಳ ಭಯೋತ್ಪಾದನೆಯ ಮೂಲಕ ಮೋದಿಯವರು, ದೇಶದ ಉದ್ದಿಮೆಗಳನ್ನು ಸಾಯಿಸುತ್ತಿದ್ದಾರೆ ಎಂಬ ಮಾತು ಎಲ್ಲೆಡೆ ಹರಿದಾಡುತ್ತಿದೆ. ಇದನ್ನು ಈಗ ಎಲ್ಲಾ ಉದ್ಯಮಿಗಳು ಒಪ್ಪುತ್ತಿದ್ದಾರೆ. ದೊಡ್ಡ ಉದ್ಯಮಿಗಳಾದ ರಾಹುಲ್ ಬಜಾಜ್ ಮತ್ತು ಆದಿತ್ಯ ಬಿರ್ಲಾ ಇವರು ಸರಕಾರದ ಕೆಟ್ಟ ಆರ್ಥಿಕ ನೀತಿಯನ್ನು ಬಹಿರಂಗವಾಗಿ ಟೀಕಿಸಿದ್ದಾರೆ. ಕೇವಲ ಬಜೆಟ್ ಮಂಡನೆಯಾಗಿ ಎರಡೇ ವಾರದಲ್ಲಿ 12 ಲಕ್ಷ ಕೋಟಿ ಮೌಲ್ಯದ ಹೊಡೆತ ಷೇರು ಹೂಡಿಕೆದಾರರಿಗೆ ಬಿದ್ದಿದೆ. 35 ಸಾವಿರ ಕೋಟಿ ಮೌಲ್ಯದ ಕಾರು ಮತ್ತು ದ್ವಿಚಕ್ರ ವಾಹನಗಳು ಮಾರಾಟವಾಗದೆ ಕೊಳೆಯುತ್ತಿವೆ. ಹಾಗಾಗಿ ದೊಡ್ಡ ಕಾರು ಮತ್ತು ಸ್ಕೂಟರ್ ತಯಾರಕರು ತಮ್ಮ ಉತ್ಪಾದನೆ ಎರಡು ತಿಂಗಳ ಮಟ್ಟಿಗೆ ಬಂದ್ ಮಾಡಿ ಸಾವಿರಾರು ನೌಕರರಿಗೆ ಲೇಆಫ್ ಕೊಟ್ಟಿದ್ದಾರೆ. ದೇಶದಲ್ಲಿ ಸುಮಾರು ಎರಡು ಸಾವಿರ ಕಾರು ಶೋ ರೂಮುಗಳು ಬಂದ್ ಆಗಿವೆ.

ಆಟೋಮೊಬೈಲ್ ಬಿಡಿಭಾಗ ತಯಾರಿಕಾ ಕ್ಷೇತ್ರದಲ್ಲಿ 10 ಲಕ್ಷ ಜನ ಕೆಲಸ ಕಳೆದುಕೊಂಡಿದ್ದಾರೆ. ರೈಲ್ವೆಯಲ್ಲಿಯೂ 3 ಲಕ್ಷ ನೌಕರರು ಕೆಲಸ ಕಳೆದುಕೊಳ್ಳಲಿದ್ದಾರೆ. ಕಾರಣ ಎಲ್ಲಾ ಕ್ಷೇತ್ರದ ಉದ್ಯಮಗಳಲ್ಲೂ ಭಾರೀ ಹಿಂಜರಿಕೆ ಉಂಟಾಗಿದ್ದರಿಂದ ರೈಲ್ವೆಯ ಸರಕು ಸಾಗಣೆ ವಿಭಾಗ ಭಾರೀ ನಷ್ಟ ಅನುಭವಿಸುತ್ತಿದೆ. ಇಡೀ ಭಾರತದ ಆರ್ಥಿಕತೆಯು ಈಗ ದಾರ ಕಡಿದ ಗಾಳಿಪಟದಂತಾಗಿದೆ. ಮೊದಲು ದಿವಾಳಿಯತ್ತ ಸಾಗುತ್ತಿದ್ದ ಪಾಕಿಸ್ತಾನದ ಕೆಟ್ಟ ಆರ್ಥಿಕತೆಯನ್ನು ನೋಡಿ ಲೇವಡಿ ಮಾಡುತ್ತಿದ್ದವರು ಈಗ ಭಾರತದ ಸ್ಥಿತಿಯೂ ಅದೇ ಮಟ್ಟಕ್ಕೆ ಬರುತ್ತಿರುವಾಗ ಬಾಯಿ ಮುಚ್ಚಿಕೊಂಡು ಕೂತಿದ್ದಾರೆ. ಸುಮ್ಮನೆ ಜಿಡಿಪಿಯ ಅಂಕಿ ಸಂಖ್ಯೆಗಳನ್ನು ಏರುಪೇರು ಮಾಡುವುದರಿಂದ ಮೋದಿ ಸರಕಾರ ಜನರನ್ನು ಇನ್ನು ಮೋಸ ಮಾಡುವುದು ಸಾಧ್ಯವಿಲ್ಲ. ಕಾಫಿಡೇ ಸಿದ್ಧಾರ್ಥರ ದಯನೀಯ ಅಂತ್ಯ ಅದಃಪತನದತ್ತ ಸಾಗುತ್ತಿರುವ ಭಾರತದ ಆರ್ಥಿಕತೆಯನ್ನು ಸರಿಯಾಗಿ ಸಂಕೇತಿಸುತ್ತಿದೆಯೇ? 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)