varthabharthi


ವಿಶೇಷ-ವರದಿಗಳು

‘ಭಿನ್ನ ಪಕ್ಷ’ ಇದೀಗ ‘ಗೌರವಕ್ಕೆ ಅನರ್ಹ ಪಕ್ಷ’

ವಾರ್ತಾ ಭಾರತಿ : 1 Aug, 2019
ಕರಣ್ ಥಾಪರ್

ಆ ಮೂರು ದಶಕಗಳಲ್ಲಿ (1984-2004) ‘ಭಿನ್ನವಾದ ಒಂದು ಪಕ್ಷ’ ಕೇವಲ ಅರ್ಥಪೂರ್ಣವಷ್ಟೇ ಆಗಿರಲಿಲ್ಲ; ಬದಲಾಗಿ ಹಲವರಿಗೆ ಅದೊಂದು ನಂಬಿಕೆಯ, ವಿಶ್ವಾಸದ ತತ್ವವಾಗಿತ್ತು. ಕೇವಲ ಒಂದೂವರೆ ದಶಕದ ಬಳಿಕ ಮೋದಿ ಮತ್ತು ಶಾರವರು ಬಿಜೆಪಿಯನ್ನು ಪೂರ್ಣವಾಗಿ ಇನ್ನೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಈ ಪ್ರಕ್ರಿಯೆಯಲ್ಲಿ ತಾನು ‘ಇತರ ಪಕ್ಷಗಳ ಹಾಗಲ್ಲ’ ಎಂಬ ಹೆಗ್ಗಳಿಕೆಯನ್ನು ಅಳಿಸಿಹಾಕಲಾಗಿದೆ. ಇವತ್ತು ಆ ಹೆಗ್ಗಳಿಕೆ ಅಡ್ವಾಣಿಯವರ ತಲೆಮಾರಿಗೆ ಒಂದು ನೆನಪು ಮಾತ್ರ.

ಈ ದಿನಗಳಲ್ಲಿ ನಾನು ಯಾಕೋ ಲಾಲ್ ಕೃಷ್ಣ ಅಡ್ವಾಣಿಯವರ ಕುರಿತು ಹೆಚ್ಚು ಹೆಚ್ಚು ಯೋಚಿಸುತ್ತಿದ್ದೇನೆ. 1990ರಲ್ಲಿ ನಾನು ಭಾರತಕ್ಕೆ ಮರಳಿ ಪತ್ರಿಕೋದ್ಯಮಿಯಾಗಿ ಕೆಲಸ ಮಾಡಲಾರಂಭಿಸಿದಾಗ ಅವರು ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿದ್ದರು.

ನಾನು ಹಲವು ಬಾರಿ ಅಡ್ವಾಣಿಯವರ ಸಂದರ್ಶನ ನಡೆಸಿದ್ದೇನೆ. ಯಾವಾಗಲೇ ಆಗಲಿ ಒಂದು ವಿಷಯ ಅಥವಾ ನಿರ್ಧಾರ ಅಷ್ಟೊಂದು ನೈತಿಕ ಅಲ್ಲ ಅನ್ನಿಸಿದಾಗೆಲ್ಲ ನಾನು ಅವರ ಮುಂದೆ ಒಂದು ನಿರ್ದಿಷ್ಟ ಹೇಳಿಕೆಯನ್ನಿಡುತ್ತಿದ್ದೆ. ಅವರು ರಕ್ಷಣಾತ್ಮಕವಾದ ತನ್ನ ನಿರ್ಧಾರವನ್ನು, ತೀರ್ಮಾನವನ್ನು ಸಮರ್ಥಿಸುವಂತಹ ಉತ್ತರ ನೀಡಿದಾಗೆಲ್ಲ ನಾನು ಹೇಳುತ್ತಿದ್ದೆ: ‘‘ಆ ಉತ್ತರ ಬೇರೆ ನಾಯಕರು ಹೇಳಿದರೆ ಓಕೆ, ಆದರೆ ‘ಇತರ ಪಕ್ಷಗಳಿಗಿಂತ ಭಿನ್ನ’ (ಎ ಪಾರ್ಟಿ ವಿದ್ ಎ ಡಿಫರೆನ್ಸ್) ಎಂದು ತನ್ನನ್ನು ಕರೆದುಕೊಳ್ಳುವ ಒಂದು ಪಕ್ಷದ ಅಧ್ಯಕ್ಷರಿಗೆ ಅದು ಹೇಗೆ ಸ್ವೀಕಾರಾರ್ಹವಾಗುತ್ತದೆ’’?.

ಆ ದಿನಗಳಲ್ಲಿ ಬಿಜೆಪಿ ತಾನು ಇತರ ಪ್ರತಿಯೊಂದು ಪಕ್ಷಕ್ಕಿಂತಲೂ ಭಿನ್ನ, ತಾನು ಆ ಪಕ್ಷಗಳ ಹಾಗಲ್ಲ ಎಂದು ನಿಜವಾಗಿಯೂ ನಂಬಿತ್ತು. ಆ ಪಕ್ಷದ ನೈತಿಕ ತಿರುಳೇ ಈ ಭಿನ್ನತೆ ಆಗಿತ್ತು.

ಅವರ ಪಕ್ಷದ ಈಗಿನ ವರ್ತನೆಯ ಬಗ್ಗೆ, ನಡವಳಿಕೆಯ ಬಗ್ಗೆ ಅಡ್ವಾಣಿಯವರಿಗೆ ಏನು ಅನ್ನಿಸುತ್ತದೆಯೋ ಎಂದು ನಾನು ಹೇಳಲಾರೆ. ದ್ವಿತೀಯ ಅವಧಿಗೆ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಜ್ಞಾ ಸ್ವೀಕಾರ ಮಾಡಿದಂದಿನಿಂದ ಬಿಜೆಪಿ ಈ ಹಿಂದೆಂದೂ ಕಂಡಿರದ ಮತ್ತು ಓಟವನ್ನು ತಡೆಯಲು ಸಾಧ್ಯವಿಲ್ಲದ ರೀತಿಯಲ್ಲಿ ಸಂಸದರನ್ನು, ಶಾಸಕರನ್ನು ಮತ್ತು ಕಾರ್ಪೊರೇಟರ್‌ಗಳನ್ನೂ ಸಹ ತನ್ನೆಡೆಗೆ ಸೆಳೆದುಕೊಳ್ಳುವ ಭರಾಟೆಯಲ್ಲಿ ತೊಡಗಿದೆ. ಇದು ಕರ್ನಾಟಕ, ಪಶ್ಚಿಮ ಬಂಗಾಲ, ಗೋವಾ, ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶದಲ್ಲಿ ನಡೆದಿದೆ ಮತ್ತು ಇದು ಹಲವು ಹೊಸ ನಮೂನೆಗಳಲ್ಲಿ ನಡೆದಿದೆ. ಒಂದು ಪ್ರಕರಣದಲ್ಲಿ ಒಂದು ಪಕ್ಷದ ಮೂರನೆಯ ಎರಡರಷ್ಟು ಸದಸ್ಯರು ಪಕ್ಷಾಂತರ ಮಾಡಿದರು; ಇನ್ನೊಂದು ಸನ್ನಿವೇಶದಲ್ಲಿ ಬಿಜೆಪಿ ಬಹುಮತದ ಗಡಿ ದಾಟುವಂತೆ ಮಾಡಲು ಒಂದು ಗಣನೀಯ ಸಂಖ್ಯೆಯ ಶಾಸಕರು ರಾಜೀನಾಮೆ ನೀಡಿದರು.

ಇದೆಲ್ಲ ತನ್ನ ನೈತಿಕ ವರ್ಚಸ್ಸಿಗೆ ಏನು ಮಾಡಿದೆ ಎಂಬ ಬಗ್ಗೆ ಬಿಜೆಪಿ ಉಪೇಕ್ಷೆ ತಾಳಿರುವುದಷ್ಟೆ ಅಲ್ಲ, ಪ್ರಾಯಶಃ ಇದಕ್ಕಿಂತ ಹೆಚ್ಚು ಆಶ್ಚರ್ಯಕರವಾಗಿ, ತನ್ನ ಆಂತರಿಕ ಒಗ್ಗಟ್ಟು ಮತ್ತು ಸಿದ್ಧಾಂತಕ್ಕೆ ಇದರಿಂದೆಲ್ಲ ಏನಾಗಬಹುದೆಂಬ ಬಗ್ಗೆ ಕೂಡ ಅದು ಉಪೇಕ್ಷೆ ತಾಳಿದೆ. ಗೋವಾದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಬಿಜೆಪಿಗೆ ಹೋದ ಹತ್ತು ಕಾಂಗ್ರೆಸ್ ಶಾಸಕರು ಬಿಜೆಪಿಯನ್ನು ವಿರೋಧಿಸಬೇಕು ಎಂಬ ಕಾರಣಕ್ಕಾಗಿ ಚುನಾಯಿತರಾದವರು. ಆದರೆ ಅವರಲ್ಲಿ ಮೂರು ಮಂದಿ ಈಗ ಬಿಜೆಪಿ ಸರಕಾರದ ಸದಸ್ಯರಾಗಿದ್ದಾರೆ. ಅವರಲ್ಲೊಬ್ಬರು ಉಪಮುಖ್ಯಮಂತ್ರಿಯಾಗಿದ್ದಾರೆ. ಕೇವಲ ಎರಡು ತಿಂಗಳ ಹಿಂದೆ ಅವರು ಹಿಂದುತ್ವದ ವಿರೋಧಿಗಳಾಗಿದ್ದರು, ಎದುರಾಳಿಗಳಾಗಿದ್ದರು. ಇವತ್ತು ಅವರು ಹಿಂದುತ್ವದ ಚಾಂಪಿಯನ್‌ಗಳಾಗಿದ್ದಾರೆ. ನಿಸ್ಸಂದೇಹವಾಗಿಯೂ ಇದು ಅವರ ಬಗ್ಗೆ ಬಹಳಷ್ಟನ್ನು ಹೇಳುತ್ತದೆ, ಆದರೆ ಇದು ಬಿಜೆಪಿಯ ಹಿಂದುತ್ವ ಸಂದೇಶದ ಬಗ್ಗೆ ಕೂಡ ಹಲವು ಸಂಪುಟಗಳಷ್ಟು ಹೇಳುತ್ತದೆ.

ಪಕ್ಷಾಂತರಿಗಳನ್ನು ಆಲಿಂಗಿಸಿಕೊಳ್ಳುವುದು:

ನಾನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗುತ್ತೇನೆ. 2016ರಲ್ಲಿ ಅಪ್ರಾಪ್ತ ವಯಸ್ಕಳೊಬ್ಬಳ ಮೇಲೆ ನಡೆಸಿದ ಅತ್ಯಾಚಾರವೂ ಸೇರಿದಂತೆ ಅಟನಾಸಿಯೋ ‘ಬಾಬುಷ್’ ಮೊನ್ಸರೇಟ್ ಅನೇಕ ಗಂಭೀರ ಸ್ವರೂಪದ ಕ್ರಿಮಿನಲ್ ಆಪಾದನೆಗಳನ್ನು ಎದುರಿಸುತ್ತಿದ್ದಾರೆ. ಕೇವಲ ಎರಡು ತಿಂಗಳುಗಳ ಹಿಂದೆ ನಡೆದ ಪಣಜಿ ಉಪಚುನಾವಣೆಯಲ್ಲಿ ಬಿಜೆಪಿ ಈ ವಿಷಯವನ್ನು ಭಾರೀ ದೊಡ್ಡ ಸ್ವರದಲ್ಲಿ ಎತ್ತಿತ್ತು. ಆಗ ‘ಗೋವಾವನ್ನು ಬಾಬುಷ್‌ರಿಂದ ಉಳಿಸಿ’ ಎಂಬುದು ಬಿಜೆಪಿಯ ಚುನಾವಣಾ ಘೋಷಣೆಯಾಗಿತ್ತು. ಆದರೆ ಚುನಾವಣೆಯಲ್ಲಿ ಬಾಬುಷ್‌ರವರು ಗೆದ್ದು ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದರು. ಇವತ್ತು ಬಿಜೆಪಿ ತನ್ನ ತೋಳುಗಳನ್ನು ಚಾಚಿ ಅವರನ್ನು ಆಲಿಂಗಿಸಿಕೊಂಡಿದೆ. ಅವರ ಪತ್ನಿ ಜೆನ್ನಿಪರ್ ಈಗ ಸರಕಾರದಲ್ಲಿ ಸಚಿವೆಯಾಗಿದ್ದಾರೆ. ಅವರು ಎದುರಿಸುತ್ತಿರುವ ಆಪಾದನೆಗಳನ್ನು ಮರೆತುಬಿಡಲಾಗಿದೆ ಮತ್ತು ಕ್ಷಮಿಸಲಾಗಿದೆ.

ಭಾರತದ ರಾಜಕಾರಣದ ಮೇಲೆ ಪ್ರಾಬಲ್ಯ ಸ್ಥಾಪಿಸಬೇಕೆಂಬ ತನ್ನ ತಡೆರಹಿತ ನಾಗಾಲೋಟದಲ್ಲಿ ಬಿಜೆಪಿ ತನ್ನದೇ ಆದ ನೈತಿಕ ತತ್ವಗಳನ್ನು ಹಾಗೂ ವೌಲ್ಯಗಳನ್ನು ತುಳಿದು ಮುಂದೆ ಸಾಗುತ್ತಿರುವಂತೆ ಕಾಣುತ್ತಿದೆ. ಯಾವುದೇ ಬೆಲೆತೆತ್ತಾದರೂ ಸರಿ, ಅದು ಕರ್ನಾಟಕದಲ್ಲಿ ಒಂದು ಸರಕಾರ ರಚಿಸಲು ಅಥವಾ ಶಾಸಕಾಂಗ ಶಕ್ತಿ ಗಳಿಸಲು ಬಯಸಿದೆ. ಅದಕ್ಕೆ ಗುರಿ ಮುಖ್ಯವೇ ಹೊರತು ಗುರಿ ಸಾಧಿಸಲು ಸಾಗುವ ಮಾರ್ಗ ಮುಖ್ಯವಲ್ಲ. ಅದಕ್ಕೆ ಯಶಸ್ಸೇ ಯಶಸ್ಸಿಗೆ ಸಮರ್ಥನೆಯಾಗಿದೆ.

ಆದ್ದರಿಂದ ಬಿಜೆಪಿ ಕೊಚ್ಚಿಕೊಳ್ಳುವ ತಾನು ‘‘ಇತರ ಪಕ್ಷಗ ಳಿಗಿಂತ ಭಿನ್ನ, ತಾನು ಅವುಗಳ ಹಾಗೆ ಅಲ್ಲ’’ ಎಂಬ ಹೆಗ್ಗಳಿಕೆ ಎಲ್ಲಿ ಉಳಿಯಿತು? ಸತ್ಯ ವಿಷಯ ಏನೆಂದರೆನರೇಂದ್ರ ಮೋದಿ ಮತ್ತು ಅಮಿತ್ ಶಾ ರವರ ಕೈಕೆಳಗೆ ಬಿಜೆಪಿ ಇತರ ಯಾವುದೇ ರಾಜಕೀಯ ಪಕ್ಷದ ಹಾಗೆಯೇ ಒಂದು ಪಕ್ಷವಾಗಿಬಿಟ್ಟಿದೆ. 1980ರಲ್ಲಿ ಭಜನ್‌ಲಾಲ್‌ರ ನೇತೃತ್ವದಲ್ಲಿ ಹರ್ಯಾಣ ಜನತಾ ಪಕ್ಷದ ಸದಸ್ಯರು ಸಾಮೂಹಿಕವಾಗಿ ಇಂದಿರಾ ಗಾಂಧಿಯವರ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದಾಗ, ಅಡ್ವಾಣಿಯವರು ಅದನ್ನು ‘‘ಭಾರತೀಯ ರಾಜಕಾರಣದ ಕಾಂಗ್ರೆಸೀಕರಣದ ಅತ್ಯಂತ ಕೆಟ್ಟ ಉದಾಹರಣೆ’’ ಎಂದು ಕರೆಯುತ್ತಿದ್ದರೋ ಇವತ್ತು ನಾವು ‘ಬಿಜೆಪಿಯ ಕಾಂಗ್ರೇಸಿಕರಣ’ ವನ್ನು ನೋಡುತ್ತಿದ್ದೇವೆ.

ಆದರೆ ಇಲ್ಲಿ ಇದಕ್ಕಿಂತಲೂ ಆಳವಾದ ಒಂದು ವ್ಯಂಗ್ಯವಿದೆ. ಕಳೆದ ಆ ಮೂರು ದಶಕಗಳಲ್ಲಿ (1984-2004) ‘ಭಿನ್ನವಾದ ಒಂದು ಪಕ್ಷ’ ಕೇವಲ ಅರ್ಥಪೂರ್ಣವಷ್ಟೇ ಆಗಿರಲಿಲ್ಲ; ಬದಲಾಗಿ ಹಲವರಿಗೆ ಅದೊಂದು ನಂಬಿಕೆಯ, ವಿಶ್ವಾಸದ ತತ್ವವಾಗಿತ್ತು. ಕೇವಲ ಒಂದೂವರೆ ದಶಕದ ಬಳಿಕ ಮೋದಿ ಮತ್ತು ಶಾರವರು ಬಿಜೆಪಿಯನ್ನು ಪೂರ್ಣವಾಗಿ ಇನ್ನೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಈ ಪ್ರಕ್ರಿಯೆಯಲ್ಲಿ ತಾನು ‘ಇತರ ಪಕ್ಷಗಳ ಹಾಗಲ್ಲ’ ಎಂಬ ಹೆಗ್ಗಳಿಕೆಯನ್ನು ಅಳಿಸಿಹಾಕಲಾಗಿದೆ. ಇವತ್ತು ಆ ಹೆಗ್ಗಳಿಕೆ ಅಡ್ವಾಣಿಯವರ ತಲೆಮಾರಿಗೆ ಒಂದು ನೆನಪು ಮಾತ್ರ. ಆಧುನಿಕ ಬಿಜೆಪಿಗೆ ಹಾಗೆಂದರೇನೆಂದು ಕೂಡ ಗೊತ್ತಿಲ್ಲ, ಅಥವಾ ಗೊತ್ತಿದ್ದರೂ ಅದು ಅದನ್ನೊಂದು ಮೂರ್ಖತನದ ಬದ್ಧತೆ ಎಂದು ಪರಿಗಣಿಸುತ್ತದೆಂದು ನಾನು ಪಣಕಟ್ಟಿ ಹೇಳುತ್ತೇನೆ.

(ಕರಣ್ ಥಾಪರ್ ಓರ್ವ ಬ್ರಾಡ್‌ಕಾಸ್ಟ್ ಪತ್ರಕರ್ತರು)

 ಕೃಪೆ: ದಿ ಹಿಂದು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)