varthabharthi


ವಿಶೇಷ-ವರದಿಗಳು

‘ಆಟಿ ಕಷಾಯ’ ಸೇವನೆಯ ಹಿಂದೆ...

ವಾರ್ತಾ ಭಾರತಿ : 1 Aug, 2019
ಡಾ. ಚೈತ್ರಾ ಎಸ್. ಹೆಬ್ಬಾರ್. ಮುಖ್ಯಸ್ಥರು, ಜಾನಪದ ವೈದ್ಯಕೀಯ ಸಂಶೋಧನಾ ಕೇಂದ್ರ, ಶ್ರೀ.ಧರ್ಮಸ್ಥಳ ಮಂಜನಾಥೇಶ್ವರ ಆಯುರ್ವೇದ ಕಾಲೇಜು, ಕುತ್ಪಾಡಿ, ಉಡುಪಿ

ಆಟಿ ಅಮಾವಾಸ್ಯೆ ಕಷಾಯ ಸೇವನೆಯ ಹಿನ್ನಲೆ: ತುಳುನಾಡಿನ ಅನೇಕ ಪುರಾತನ ಆಚರಣೆಗಳು ಜಗತ್ಪ್ರಸಿದ್ಧವಾಗಿವೆ. ಅದರಲ್ಲೂ ಆಷಾಢಮಾಸ ಅಥವಾ ಆಟಿಯಲ್ಲಿ ತಯಾರಿಸುವ ಬಗೆಬಗೆಯ ತಿಂಡಿ ತಿನಿಸುಗಳಿಗೆ ವಿವಿಧ ಸಾಂಸ್ಕೃತಿಕ ಹಿನ್ನೆಲೆ ಇದ್ದು ಆಟಿ ಅಮಾವಾಸ್ಯೆಯಂದು (ಈ ವರ್ಷ ಆಗಸ್ಟ್ 1) ತುಳುವರು ಸೇವಿಸಲಿಚ್ಛಿಸುವ ಆಟಿ ಕಷಾಯಕ್ಕೆ ಔಷಧಿ ಗುಣವಿರುವ ವಿಚಾರವೂ ಸೇರಿದೆ. ನಿರ್ದಿಷ್ಟವಾಗಿ ಇದೇ ಕಾಲಾವಧಿಯಲ್ಲಿ ಈ ಪದ್ಧತಿ ಆರಂಭಗೊಂಡಿದೆ ಎಂದು ಹೇಳಲು ಪುರಾವೆ ಇಲ್ಲದಿದ್ದರೂ, ತಮ್ಮ ಮನೆಯ ಹಿರಿಯರನ್ನು ಗೌರವಪೂರ್ವಕವಾಗಿ ನಡೆಸಿಕೊಳ್ಳುವ ತುಳುವರು, ಹಳೆಯ ತಲೆಮಾರಿನವರು ನಡೆಸಲು ಹೇಳಿದ ಅನೇಕ ವಿಧಿಗಳಲ್ಲಿ ಇದನ್ನೂ ಶ್ರದ್ಧೆಯಿಂದ ಪ್ರತೀ ವರ್ಷವೂ ಅನುಸರಿಸುತ್ತಾರೆ.

ಕಷಾಯದ ಮೂಲಿಕೆಯ ಪರಿಚಯ:

ಈ ಕಷಾಯವನ್ನು ತುಳುಬಾಷೆಯಲ್ಲಿ ಪಾಲೆ ಅಥವಾ ಪಾಲೆಂಬು ಎಂಬ ಈ ಸುಂದರ ಮರದ ಚಕ್ಕೆಯಿಂದ ಶ್ರದ್ಧಾಭಕ್ತಿಯಿಂದ ತಯಾರಿಸುತ್ತಾರೆ.ಈ ಮರಕ್ಕೆ ಹಾಲೆ, ಏಳೆಲೆ ಬಾಳೆ, ಜಂತಲೆ, ಮದ್ದಾಲೆ, ಕೋಡಾಲೆ ಎಂದೂ ಹೆಸರಿದೆ. ವೈಜ್ಞಾನಿಕವಾಗಿ ಇದನ್ನು Alstonia scholaris R.Br.(Apocynaceae) ಎನ್ನುತ್ತಾರೆ. ಇದು ಮಧ್ಯಮಗಾತ್ರದ ಮರವಾಗಿದ್ದು, ಮರದ ಟೊಂಗೆಗಳಲ್ಲಿ ಸುಂದರವಾಗಿ 4-7 ಎಲೆಗಳು ಸಂಯೋಗವಲಯದಲ್ಲಿ ಪೋಣಿಸಲ್ಪಟ್ಟಿವೆ. ಹಾಗಾಗಿ ಸಂಸ್ಕೃತದಲ್ಲಿ ಸಪ್ತಪರ್ಣ ಎಂದು ಕರೆಯಲ್ಪಟ್ಟಿದೆ. ಇದರ ಹಲಗೆಯನ್ನು ಬರಹ-ಹಲಗೆಯಾಗಿ ಒಂದಾನೊಂದು ಕಾಲದಲ್ಲಿ ಬಳಸಲಾಗುತ್ತಿತ್ತು. ಹಾಗಾಗಿ ಸ್ಕೊಲಾರಿಸ್ Blackboard tree ಮತ್ತು ಅದಕ್ಕೆ ಅನ್ವರ್ಥನಾಮ. ರವೀಂದ್ರನಾಥಟಾಗೋರರ ಶಾಂತಿನಿಕೇತನದಲ್ಲಿ ಈಗಲೂ ಅದರ ಕಡ್ಡಿಗಳನ್ನು ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗೆ ಸ್ನಾತಕ ಪದವಿಯನ್ನು ಗಳಿಸಿದ ಗೌರವದ ಸೂಚಕವಾಗಿ ನೀಡಲಾಗುತ್ತದೆ.

ಕಷಾಯ ತಯಾರಿಸುವ ಬಗೆ:

ಹಿಂದಿನ ದಿನ ಮರದ ಇರುವಿಕೆಯ ಜಾಗವನ್ನು ಗುರುತಿಸಿ ಅಮಾವಾಸ್ಯೆ ದಿನ ಮುಂಜಾನೆ ಇದರ ತೊಗಟೆಯನ್ನು ಕಲ್ಲಿನಲ್ಲಿ ಕೆತ್ತಿ ಸಂಪಾದಿಸುತ್ತಾರೆ. ಅರ್ಧಂಬರ್ಧ ಸಸ್ಯ ಜ್ಞಾನವಿರುವ ಜನರು ವಿಷಕಾರಿ ಕಾಸರಕವನ್ನು ಸಾಮ್ಯತೆಯಿಂದಾಗಿ ಹಾಲೆಯೆಂದು ಕೊಂಡು ಅದರ ಚಕ್ಕೆಯ ಕಷಾಯ ಸೇವಿಸಿ ಮನೆಮಂದಿಯೆಲ್ಲಾ ಸತ್ತಿರುವ ಘಟನೆಗಳೂ ನಡೆದಿವೆ. ಹಾಗಾಗಿ ಎಚ್ಚರಿಕೆಯಿಂದ ಮರವನ್ನು ಗುರುತಿಸಬೇಕು. ಮೃದುವಿರುವ ಕಾರಣ ತೊಗಟೆ ಸುಲಭವಾಗಿ ಕಿತ್ತು ಬರುತ್ತದೆ. ಕಬ್ಬಿಣದ ಉಪಕರಣಗಳು ತಾಗಿಸಿದರೆ ಮರದ ಒಳಭಾಗಕ್ಕೆ ಪೆಟ್ಟಾಗಿ ಮರದ ಬೆಳವಣಿಗೆಗೆ ಮತ್ತು ಅದರ ಜೀವಕ್ಕೆ ಅಪಾಯವಾಗಬಹುದು ಎಂಬ ಆಲೋಚನೆಯೂ ಇದ್ದು ಕಲ್ಲನ್ನು ಬಳಸುವ ವಿಧಾನವನ್ನು ಅನುಸರಿಸಿರಬಹುದು ಎನ್ನುವುದು ಒಂದು ಅಭಿಮತ. ಕಬ್ಬಿಣದಿಂದ ತೊಗಟೆ ತೆಗೆದರೆ ಅದರ ರಾಸಾಯನಿಕ ಅಂಶಗಳು ನಾಶವಾಗಬಹುದೇನೋ ಎಂಬ ಇನ್ನೊಂದು ಅಭಿಪ್ರಾಯವೂ ಇದೆ. ಇದಕ್ಕೆಲ್ಲಾ ಸಂಶೋಧನೆಯೇ ಉತ್ತರ ಕೊಡಬಹುದು. ತೊಗಟೆಯನ್ನು ಶ್ರದ್ಧೆಯಿಂದ ಮನೆಗೆ ತಂದು ಅದನ್ನು ನೀರಿನೊಂದಿಗೆ ಬೆರೆಸಿ ಜಜ್ಜಿ ರಸ ತೆಗೆದು 20 ಮಿ.ಲಿ. ಯಿಂದ 40 ಮಿ.ಲಿ.ರಷ್ಟು ವಯಸ್ಸಿಗನುಗುಣವಾಗಿ ಮನೆಯವರೆಲ್ಲ ಕುಡಿಯುತ್ತಾರೆ. ಕೆಲವರು ರಸಕ್ಕೆ ಜೀರಿಗೆ, ಬೆಳ್ಳುಳ್ಳಿ, ಅರಿಶಿನ, ಒಣಮೆಣಸು ಸೇರಿಸಿ ಅದರ ರುಚಿ ಮತ್ತು ಜೀರ್ಣ ಶಕ್ತಿಯನ್ನು ವರ್ಧಿಸುತ್ತಾರೆ.

ಕಷಾಯದ ಔಷಧಿ ಸ್ವರೂಪ:

ಇದರ ಚಕ್ಕೆ ಹಾಗೂ ಅದರಿಂದ ಒಸರುವ ಹಾಲನ್ನು ವಿಶೇಷವಾಗಿ ಆಯುರ್ವೇದದಲ್ಲಿ ಅಜೀರ್ಣರೋಗ, ಅತಿಸಾರ, ಆಮಶಂಕೆ, ಕ್ರಿಮಿರೋಗ, ಕಾಮಾಲೆ, ಶ್ವಾಸರೋಗ, ಅಪಸ್ಮಾರ, ಜ್ವರ, ಪ್ರಮೇಹ, ಚರ್ಮರೋಗಕ್ಕೆ ಬಳಸುತ್ತಾರೆ. ಜಾನಪದ ವಿಷವೈದ್ಯರು ಸರ್ಪಕಡಿತಕ್ಕೂ ಅದನ್ನು ಬಳಸುವರೆಂದು, ಚಕ್ಕೆಯನ್ನು ಅರೆದು ಕುರಕ್ಕೆ ಲೇಪಿಸುವ ಬಾಹ್ಯ ಉಪಯೋಗವೂ ಪರಿಣಾಮಕಾರಿ ಎಂದು ಉಡುಪಿ ಕುತ್ಪಾಡಿಯ ಶ್ರೀ ಧ.ಮ. ಕಾಲೇಜಿನ ಜಾನಪದ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ದಾಖಲಾಗಿದೆ. ಜ್ವರದಲ್ಲಿ ವಿಶೇಷವಾಗಿ ಮಲೇರಿಯಾ ಜ್ವರಪೀಡಿತರಿಗೆ ಅನುಕೂಲ ಔಷಧಿಯೆಂದು ಸಂಶೋಧನೆಗಳಿಂದಲೂ ದೃಢೀಕರಿಸಲ್ಪಟ್ಟಿದೆ.

ಮೂಲಿಕಾಗುಣ/ರೋಗನಿವಾರಕ ಶಕ್ತಿಯ ಆಯುರ್ವೇದ ಪರಿಜ್ಞಾನ:

ಕಹಿರಸದ ಪ್ರಾಧಾನ್ಯವುಳ್ಳ, ಉಷ್ಣ ವೀರ್ಯವುಳ್ಳ, ಸಪ್ತಪರ್ಣದ ಕಾರ್ಯವೈಖರಿಯನ್ನು ವಿಶ್ಲೇಷಿಸಿದರೆ ಪಿತ್ತದೋಷದ ಮತ್ತು ರಕ್ತಧಾತುವಿನ ವೈಪರೀತ್ಯಗಳಿಂದಾದ ರೋಗಗಳಲ್ಲಿ ಪರಿಣಾಮಕಾರಿಯಾಗಿ ಕಾಣುವುದು. ಆಟಿ ತಿಂಗಳಿನ ಸಮಯದಲ್ಲಿ ಮಳೆಯ ಆರ್ಭಟವೂ ಜಾಸ್ತಿ. ಹವಾಮಾನದಿಂದಾಗಿ ಪಿತ್ತಸಂಚಯವಾಗಿ, ಜಾಠರಾಗ್ನಿಯೂ ಕುಂದಿ ಅನೇಕ ರೀತಿಯ ಅಲರ್ಜಿ ಮುಂತಾದ ಪಿತ್ತ ಉಪದ್ರವಗಳು ಕಾಣಿಸಿಕೊಳ್ಳುತ್ತವೆ. ಪ್ರಕೃತಿಯಲ್ಲೂ ಹುಳ-ಹುಪ್ಪಟೆಗಳೂ-ಹಾವುಗಳೂ ಜಾಸ್ತಿ. ಹಾಗಾಗಿ ಶರೀರವನ್ನು ಕವಚದಂತೆ ರಕ್ಷಿಸುವ ಸಪ್ತಪರ್ಣದಂತಹ ಮೂಲಿಕೆಗಳಿಗೆ ವಿಶೇಷ ಸ್ಥಾನಮಾನ ಈ ತಿಂಗಳಿನಲ್ಲಿ ಬಂದಿರಬಹುದು.

ಜಾನಪದ ವೈದ್ಯಕೀಯ ಸಂಶೋಧನಾ ಕೇಂದ್ರದ ಸಂಶೋಧನೆ:

ಜಾನಪದ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ನಡೆದ ಸಂಶೋಧನೆಯಲ್ಲಿ ಫ್ಲಾವನಾಯ್ಡಸ್ ಎಂಬ ಅಂಶವು ಆಟಿ ಅಮಾವಾಸ್ಯೆಯ ದಿನ ಶೇಖರಿಸಿದ ಪಾಲೆರಸದಲ್ಲಿ ಪ್ರಾಧಾನ್ಯದಲ್ಲಿದ್ದು ಅಮಾವಾಸ್ಯೆಯ ಹಿಂದಿನ ನಾಲ್ಕು ದಿನಗಳಲ್ಲಿ ಹಾಗೂ ಮುಂದಿನ ನಾಲ್ಕು ದಿನಗಳಲ್ಲಿ ಆ ಅಂಶಗಳು ಕಡಿಮೆ ಅಥವಾ ಪತ್ತೆಯಾಗದೇ ಇರುವುದು ಸೋಜಿಗವೆನಿಸಿದೆ. ಈ ಅಂಶಗಳು ಅಲರ್ಜಿಯನ್ನು, ಸೋಂಕು, ಊತಗಳನ್ನು ನಿವಾರಿಸುವ ಶಕ್ತಿಯನ್ನು ಶರೀರಕ್ಕೆ ಒದಗಿಸುತ್ತದೆ. ಅದೇ ರೀತಿ, ಶೇಖರಿಸಿದ ರಸದಲ್ಲಿ ನೈಸರ್ಗಿಕ ಸ್ಟಿರೋಡ್ಸ್ ಮತ್ತು ಟರ್ಪಿನೊಯ್ಡ್ಸ್ ಅಮಾವಾಸ್ಯೆಯ ಮುಂಚಿನ ದಿನಗಳಲ್ಲಿ ಇರದೆ, ಅಮಾವಾಸ್ಯೆ ದಿನವೂ, ಅದರ ಮುಂದಿನ ದಿನಗಳಲ್ಲೂ ಪತ್ತೆಯಾಗಿದ್ದು ಶರೀರದಲ್ಲಿ ಸೋಂಕಿನ ಕಾರಣವಾದ ಕ್ರಿಮಿಗಳ ನಾಶಕವಾಗಿಯೂ ರೋಗನಿರೋಧಕ ಶಕ್ತಿಯ ಹಿಂದಿನ ರಹಸ್ಯವೂ ಹೌದು.

ಸಪ್ತಪರ್ಣ ಒಂದು ಪ್ರತಿನಿಧಿ ಮಾತ್ರ. ಈ ಆಚರಣೆ ಸಪ್ತಪರ್ಣಕ್ಕೊಂದೇ ಸೀಮಿತವಲ್ಲ. ನಮ್ಮನ್ನು ಭಯಂಕರ ರೋಗಗಳಿಂದ ರಕ್ಷಿಸಬಹುದಾದ ಅಂತಹ ನೂರಾರು ಮೂಲಿಕೆಗಳು ನಮ್ಮ ಸುತ್ತಲೂ ಇದೆ. ಅದರ ಬಗ್ಗೆ ತಿಳಿಯಲು ಈಗಿನ ಜನಾಂಗ ಸ್ವಲ್ಪ ಶ್ರಮವಹಿಸಿದರೆ, ಬೆಳೆದ ಮರ ಗಿಡಗಳನ್ನು ರಕ್ಷಿಸಿ, ಸಸಿಗಳನ್ನು ಪೋಷಿಸಿದರೆ ಆಟಿ ಕಷಾಯ ಸೇವನೆಯಂತಹ ಹಲವು ಆಚರಣೆಗಳು ಮುಖ್ಯವಾಹಿನಿಗೆ ಬರಬಹುದು. ಆದರೆ ಪ್ರದೇಶಕ್ಕನುಸಾರವಾಗಿ ನಮ್ಮ ತುಳುನಾಡಿನ ವಾತಾವರಣ, ಇಲ್ಲಿ ಬರುವ ರೋಗಗಳನ್ನು ನಿಯಂತ್ರಣ ಮಾಡಲು ಸಪ್ತಪರ್ಣವನ್ನು ಆರಿಸಿದ್ದಾರೆ. ಆನಂತರ ಸಾಲು ಸಾಲಾಗಿ ಬರುವ ಹಬ್ಬಗಳಲ್ಲಿ ನಾವು ಸೇವಿಸುವ ಸಿಹಿ ಭಕ್ಷ್ಯಗಳಿಂದ ಬರಬಹುದಾದ ರೋಗಗಳನ್ನು ತಡೆಯುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉಪಾಯವೂ ನಮ್ಮ ಪೂರ್ವಜರದ್ದಾಗಿರಬಹುದು. ಹಾಗಾಗಿ ವರ್ಷಕ್ಕೊಮ್ಮೆ ಕಹಿ ಕುಡಿಯಲು ಪಾಲೆಯಂತಹ ಔಷಧೀಯ ಮರಗಳನ್ನು ಆರಿಸಿರಬಹುದು. ಅಂತೂ ಈ ತರದ ಆಚರಣೆಗಳೂ ಸಮಾಜದ ಆರೋಗ್ಯ ರಕ್ಷೆಯೂ ಹೌದು. ನಮ್ಮ ಹಿರಿಯರ ಜಾಣ್ಮೆಗೆ ಕನ್ನಡಿಯೂ ಹೌದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)