varthabharthi


ವಿಶೇಷ-ವರದಿಗಳು

"ಉತ್ತರ ಪ್ರದೇಶದಂತಹ ಕೊಳಕು ರಾಜ್ಯ ಬೇರೊಂದಿಲ್ಲ"

2017ರಲ್ಲಿ ಆರಂಭಗೊಂಡು ಇಂದು ಬೆಂಗಳೂರು ತಲುಪಿದ ನಾಗರಾಜ್ ರ 'ಏಕತೆಗಾಗಿ ಸೈಕಲ್ ಯಾತ್ರೆ'

ವಾರ್ತಾ ಭಾರತಿ : 1 Aug, 2019
ಬಾಬು ರೆಡ್ಡಿ

13 ರಾಜ್ಯಗಳಲ್ಲಿ ಸಂಚಾರ ಪೂರ್ಣ  ಲಕ್ಷಾಂತರ ಜನರಿಗೆ ಜಾಗೃತಿ ಸಂದೇಶ  ಹಾಲಿ-ಮಾಜಿ ಸಿಎಂಗಳ ಭೇಟಿ

ಬೆಂಗಳೂರು, ಆ.1: ಪರಿಸರ ಸಂರಕ್ಷಣೆ, ಹಸಿರೀಕರಣ, ನೀರು ಉಳಿಸುವುದು, ದೇಶ ಭಕ್ತಿ, ರಾಷ್ಟ್ರೀಯ ಹಿತ, ಸರ್ವ ಧರ್ಮ ಸಮಾನತೆ, ವಿಶ್ವ ಶಾಂತಿ ಸೇರಿದಂತೆ ಹಲವಾರು ಸದುದ್ದೇಶಗಳೊಂದಿಗೆ ಹಾಸನ ಮೂಲದ ಮಲ್ಲೆಗೌಡ ನಾಗರಾಜ್ ಹಮ್ಮಿಕೊಂಡಿದ್ದ ರಾಮ್ ಭರೋಸಾ ಸೈಕಲ್ ಯಾತ್ರೆ ಇಂದು ಬೆಂಗಳೂರು ತಲುಪಿದೆ.

2017ರ ಡಿ. 3 ರಂದು ಮುಂಬೈನ ಅಂಧೇರಿಯಿಂದ ಆರಂಭವಾಗಿರುವ ರಾಮ್ ಭರೋಸಾ ಸೈಕಲ್ ಯಾತ್ರೆಯು ಗುಜರಾತ್, ರಾಜಸ್ಥಾನ, ಹರಿಯಾಣಾ, ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡ್, ದಿಲ್ಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ತೆಲಂಗಾಣ, ಆಂಧ್ರಪ್ರದೇಶದಿಂದ ಚಿಕ್ಕಬಳ್ಳಾಪುರದ ಮೂಲಕ ಕರ್ನಾಟಕ ಪ್ರವೇಶಿಸಿದ್ದಾರೆ.

ನಿತ್ಯವೂ 80 ರಿಂದ 100 ಕಿಮೀ ಸೈಕಲ್ ತುಳಿಯುವ ನಾಗರಾಜಗೌಡ ಆರೋಗ್ಯವಂತರಾಗಿ, ಗಟ್ಟಿ ಮುಟ್ಟಾಗಿದ್ದಾರೆ. 13 ರಾಜ್ಯಗಳಲ್ಲಿ ಸಂಚಾರ ಮಾಡಿರುವ ಅವರು, ರಾಷ್ಟ್ರದ ಏಕತೆ, ಗೋರಕ್ಷಣೆ, ಸರ್ವ ಧರ್ಮ ಸಮಾನತೆ, ವಿಶ್ವ ಶಾಂತಿ ಸೇರಿದಂತೆ ಹಲವಾರು ವಿಷಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

ಮುಂಬೈನಲ್ಲಿ ಸಿನಿಮಾಗಳಲ್ಲಿ ಪಾರ್ಟ್ ಟೈಂ ಆಗಿ ಕೆಲಸ ಮಾಡಿಕೊಂಡಿರುವ ಹಾಸನ ನಗರದ ನಿವಾಸಿ ನಾಗರಾಜ್ ದೇಶದ ಹಿತಕ್ಕಾಗಿ ಸೈಕಲ್ ಯಾತ್ರೆ ಶುರು ಮಾಡಿದ್ದಾರೆ. ಭಾರತೀಯರು ನಾವೆಲ್ಲ ಒಂದೇ. ಎಲ್ಲರೂ ಅಣ್ಣ ತಮ್ಮಂದಿರಂತೆ ಇರಬೇಕು. ಪರಸ್ಪರ ಸಹಾಯ, ಸಹಕಾರ ಮನೋಭಾವದಿಂದ ಬಾಳಬೇಕು. ದೇಶದ ಹಿತಕ್ಕಾಗಿ ನಾವೆಲ್ಲರೂ ಬದ್ಧರಾಗಿರಬೇಕು. ಕುಡಿಯುವ ನೀರು ಉಳಿಸಬೇಕು. ಗಿಡ ಮರಗಳನ್ನು ಬೆಳೆಸಬೇಕು. ಪರಿಸರ ಕಲುಷಿತ ಮಾಡಬಾರದು ಎಂಬ ಸಂದೇಶವನ್ನು ಅವರು ಸಾರುತ್ತಿದ್ದಾರೆ. ಯಾತ್ರೆಯುದ್ದಕ್ಕೂ ಜನರು ನೀಡುವ ದಾನವೇ ಅವರ ಹೊಟ್ಟೆ ತುಂಬಿಸುತ್ತಿದೆ. ಆಯಾ ನಗರ, ಪಟ್ಟಣಗಳಲ್ಲಿನ ಮಂದಿರ, ಆಶ್ರಮ, ಗುರುದ್ವಾರಾ, ಗಾಂಧಿ ಆಶ್ರಮ, ಇಸ್ಕಾನ್ ಸೇರಿದಂತೆ ವಿವಿಧೆಡೆ ಉಳಿದುಕೊಳ್ಳುತ್ತಿದ್ದಾರೆ. ಹೊಟ್ಟೆಗೆ ಊಟ, ವಿಶ್ರಾಂತಿಗೆ ಸ್ಥಳ ಸಿಕ್ಕರೆ ಸಾಕು ಅಲ್ಲಿ ರಾತ್ರಿ ಕಳೆದು ಮರುದಿನ ಮತ್ತೆ ಸೈಕಲ್ ಪ್ರಯಾಣ ಶುರು ಮಾಡುತ್ತಾರೆ. ಎಲ್ಲ ಧರ್ಮಗಳು ಶಾಂತಿ, ಸಹೋದರತೆಯನ್ನೆ ಸಾರುತ್ತವೆ. ಎಲ್ಲರೂ ಆಯಾ ಧರ್ಮಗಳಲ್ಲಿದ್ದರೂ ಅಣ್ಣ ತಮ್ಮಂದಿರಂತೆ ಬಾಳಬೇಕು ಎಂದು ಅವರು ಪ್ರತಿಪಾದಿಸುತ್ತಿದ್ದಾರೆ.

ಸೈಕಲ್ ಮೂಲಕ ಅರಿವು: ಆಯಾ ನಗರ, ಪಟ್ಟಣಗಳಿಗೆ ತೆರಳಿದಾಗ ಅಲ್ಲಿನ ಜನವಿರುವ ಪ್ರದೇಶಗಳಲ್ಲಿ ಸೈಕಲ್ ಮೇಲೆ ಸಂಚರಿಸುವ ಇವರು, ತಮ್ಮ ಯಾತ್ರೆಯ ಸದುದ್ದೇಶವನ್ನು ತಿಳಿಸುತ್ತಾರೆ. ಅಲ್ಲಿಂದ ಮತ್ತೆ ಮುಂದೆ ಸಾಗುತ್ತಾರೆ. ದೇಶದಲ್ಲಿ ಆತಂಕವಾದ, ಭ್ರಷ್ಟಾಚಾರ, ಜಗಳಗಳು ಮಿತಿ ಮೀರುತ್ತಿವೆ. ಇವೆಲ್ಲ ಒಳ್ಳೆಯ ಬೆಳವಣಿಗೆಗಳಲ್ಲ. ನಾವೆಲ್ಲ ಒಂದಾಗಿರಬೇಕು ಎಂದು ತಿಳಿ ಹೇಳುತ್ತಿದ್ದಾರೆ.

ದಿಲ್ಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಧ್ಯಪ್ರದೇಶ ಸಿಎಂ ಕಮಲನಾಥ್, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್, ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಸೇರಿದಂತೆ ಹಲವು ಜನಪ್ರತಿನಿಧಿಗಳನ್ನು ಖುದ್ದಾಗಿ ಭೇಟಿ ಮಾಡಿ ಏಕತಾ ಯಾತ್ರೆಯ ಉದ್ದೇಶವನ್ನು ತಿಳಿಸಿದ್ದಾರೆ.

ಭಿನ್ನವಾದ ನೆಲೆ: ದೇಶದ 13 ರಾಜ್ಯಗಳಲ್ಲಿ ಸಂಚಾರ ಮಾಡಿದ್ದೇನೆ. ಪ್ರತಿಯೊಂದು ರಾಜ್ಯದಲ್ಲಿಯೂ ಭಿನ್ನವಾದ ಆಚಾರ-ವಿಚಾರ, ಕಲೆ-ಸಂಸ್ಕೃತಿಗಳನ್ನು ಒಳಗೊಂಡಿದೆ. ಅಲ್ಲದೆ, ಅಲ್ಲಿನ ವಾತಾವರಣವೂ ಬೇರೆಯಾಗಿದೆ. ಕೆಲವು ಕಡೆಗಳಲ್ಲಿ ಮನುಷ್ಯಸಹಜ ಸ್ಪಂದಿಸುವ ಗುಣವಿದ್ದರೆ, ಹಲವು ರಾಜ್ಯಗಳಲ್ಲಿ ನಗರ ಪ್ರದೇಶಗಳು ಕೊಂಚ ನೋಡುವಂತಿದ್ದರೆ, ಗ್ರಾಮೀಣ ಭಾಗ ಹೇಳತೀರದಾಗಿದೆ. ಉತ್ತರ ಭಾರತದ ರಾಜ್ಯಗಳಿಗೂ ದಕ್ಷಿಣ ಭಾರತದ ರಾಜ್ಯಗಳಿಗೂ ಅಜಗಜಾಂತರ ವ್ಯತ್ಯಾಸ ಕಾಣುತ್ತೇವೆ ಎಂದು ಮಲ್ಲೆಗೌಡ ನಾಗರಾಜ್ ಅಭಿಪ್ರಾಯಪಟ್ಟರು.

'ಕೊಳಕು ರಾಜ್ಯ ಉತ್ತರ ಪ್ರದೇಶ'
ನಾನು 13 ರಾಜ್ಯಗಳಲ್ಲಿ ಸೈಕಲ್ ಯಾತ್ರೆ ಮುಗಿಸಿಕೊಂಡು ಕರ್ನಾಟಕಕ್ಕೆ ಪ್ರವೇಶಿಸಿದ್ದೇನೆ. ಸುಮಾರು ಒಂದು ವರ್ಷ ಎಂಟು ತಿಂಗಳುಗಳ ಕಾಲ ಎಲ್ಲೆಡೆ ಸಂಚಾರ ಮಾಡಿದ್ದೇನೆ. ಈ ಎಲ್ಲ ರಾಜ್ಯಗಳಲ್ಲಿಯೂ ನಮ್ಮಂತೆಯೇ ಇದ್ದರೂ, ಉತ್ತರ ಪ್ರದೇಶದಂತಹ ಕೊಳಕು ರಾಜ್ಯ ಬೇರೆ ಯಾವುದೂ ಇಲ್ಲ. ಅಲ್ಲಿನ ಆರು ನಗರಗಳಲ್ಲಿ 15ಕ್ಕೂ ಅಧಿಕ ದಿನಗಳ ಕಳೆದಿದ್ದೇನೆ, ಅಲ್ಲಿ ಅತ್ಯಂತ ಕೆಟ್ಟ ಸ್ಥಿತಿಯಿದೆ.
-ಮಲ್ಲೆಗೌಡ ನಾಗರಾಜ್, ರಾಮ್ ಭರೋಸಾ ಸೈಕಲ್ ಯಾತ್ರಿ

ದಕ್ಷಿಣ ಭಾರತ ರಾಜ್ಯಗಳಾದ ತಮಿಳುನಾಡು, ಕೇರಳದ ಮೂಲಕ ಉತ್ತರ ಭಾರತ ರಾಜ್ಯಗಳಾದ ಒರಿಸ್ಸಾ, ಪಶ್ಚಿಮ ಬಂಗಾಳ, ಅಸ್ಸಾಂ ಸೇರಿದಂತೆ ಈಶಾನ್ಯ ಭಾರತದ ಕಡೆಗೆ ಯಾತ್ರೆ ಮಾಡಲಿದ್ದೇನೆ ಎಂದು ನಾಗರಾಜ್ ವಾರ್ತಾಭಾರತಿಗೆ ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)