varthabharthi

ನಿಮ್ಮ ಅಂಕಣ

ರಾಯಚೂರಿನಲ್ಲಿ ಪ್ರವಾಹ ಭೀತಿ

ವಾರ್ತಾ ಭಾರತಿ : 1 Aug, 2019
ವಿಜಯಕುಮಾರ್ ಎಚ್.ಕೆ., ರಾಯಚೂರು

ಮಾನ್ಯರೇ,

ದಕ್ಷಿಣ ಮಹಾರಾಷ್ಟ್ರದ ಹಲವು ಜಲಾನಯನ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕೃಷ್ಣ ಮತ್ತು ಅದರ ಉಪನದಿಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಈ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮವಾಗಿ ಆಲಮಟ್ಟಿ ಜಲಾಶಯದ ಹೊರಹರಿವು 2.2 ಲಕ್ಷ ಕ್ಯೂಸೆಕ್ಸ್‌ಗೆ ಹೆಚ್ಚುಮಾಡಲಾಗಿದೆ. ಇದರ ಪರಿಣಾಮವಾಗಿ ರಾಯಚೂರಿನ ನಾರಾಯಣಪುರ ಅಣೆಕಟ್ಟಿನಿಂದ ಕೃಷ್ಣ ನದಿಗೆ ಹೊರ ಹರಿವು 1.84 ಲಕ್ಷ ಕ್ಯೂಸೆಕ್ಸ್‌ಗೆ ಹೆಚ್ಚಾಗಿದೆ. ಇದರಿಂದಾಗಿ ದೇವದುರ್ಗ ಮತ್ತು ಲಿಂಗಸಗೂರಿನ ಹಲವು ರಸ್ತೆ ಸಂಪರ್ಕ, ಸೇತುವೆಗಳು ಮುಳುಗಡೆಯಾಗಿವೆ. ದೇವದುರ್ಗ ತಾಲೂಕಿನ ಹುಡೀನಹೆಡಗಿಯ ಸಮೀಪದ ಸೇತುವೆ ಮುಳುಗುವ ಭೀತಿಯಿಂದ ಸಂಚಾರ ಸ್ಥಗಿತಗೊಳಿಸಲಾಗಿದೆ. ಹಾಗೆಯೇ ಲಿಂಗಸಗೂರಿನ ಶೀಲಾಹಳ್ಳಿ ಸೇತುವೆ ಈಗಾಗಲೇ ಮುಳುಗಿದೆ. ಕಲಬುಗಿ ಮತ್ತು ರಾಯಚೂರಿನ ಪ್ರಮುಖ ಸಂಪರ್ಕದ ತಿಂಥಣಿ ಬ್ರಿಡ್ಜ್ ಮುಳುಗುವ ಭೀತಿ ಎದುರಾಗಿದೆ. ರಾಯಚೂರು ಮತ್ತು ಹೈದರಾಬಾದ್ ರಸ್ತೆಯ ಸಂಪರ್ಕ ಮಹತ್ವ ಹೊಂದಿದ ಶಕ್ತಿನಗರದ ಕೃಷ್ಣ ಬ್ರಿಡ್ಜ್ ಸಹ ಮುಳುಗುವ ಭೀತಿ ಎದುರಾಗಿದ್ದು, ಆಲಮಟ್ಟಿ ಮತ್ತು ನಾರಾಯಣಪುರದಿಂದ ಹೊರಹರಿವು ಇನ್ನೂ ಹೆಚ್ಚಿಸಿದರೆ ಪ್ರವಾಹದ ದುರಂತ ರಾಯಚೂರು ಜಿಲ್ಲೆ ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ತಡಮಾಡದೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಲ್ಲಿ ಜಿಲ್ಲೆಯ ಜನತೆ ನಿಟ್ಟುಸಿರು ಬಿಡುವಂತಾಗುತ್ತದೆ. ಇಲ್ಲವಾದಲ್ಲಿ ಪ್ರತಿಕೂಲ ಪ್ರಭಾವಕ್ಕೆ ಬಲಿಯಾಗುವ ಪರಿಸ್ಥಿತಿ ಬರಬಹುದು.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)